Kaatera Review: ಕುಲುಮೆಯಲ್ಲಿ ನೊಂದು ಬೆಂದ 'ಕಾಟೇರ'ನ ಕಥೆಯೇನು? ಇಲ್ಲಿದೆ ಕಂಪ್ಲೀಟ್ ರಿವ್ಯೂ
ದಾಸ ದರ್ಶನ್ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ತೆರೆಮೇಲೆ 'ಕಾಟೇರ'ನ ದರ್ಶನವಾಗಿದೆ. ಸಾಂಗ್ಸ್, ಟ್ರೈಲರ್ ಅಂತೆಲ್ಲಾ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಅಂತೂ ಇಂತೂ ರಾಜ್ಯಾದ್ಯಂತ ತೆರೆಗಪ್ಪಳಿಸಿದೆ. ತರುಣ್ ಸುಧೀರ್ ನಿರ್ದೇಶನದ ಈ ಹಳ್ಳಿ ಸೊಗಡಿನ ಸಿನಿಮಾ ಭಾರೀ ಕುತೂಹಲ ಮೂಡಿಸಿದ್ದು ಸುಳ್ಳಲ್ಲ.
ನೈಜ ಘಟನೆಗಳನ್ನು ಆಧರಿಸಿದ್ದ ಸಿನಿಮಾ ಎಂದು ಮೊದಲಿನಿಂದಲೂ ಚಿತ್ರತಂಡ ಹೇಳಿಕೊಂಡು ಬಂದಿತ್ತು. ಹಾಗಾಗಿ ಸಹಜವಾಗಿಯೇ 'ಕಾಟೇರ' ನಿರೀಕ್ಷೆ ಮೂಡಿಸಿತ್ತು. ಇನ್ನು ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರತಂಡವನ್ನು ಸೇರಿಕೊಂಡು ಶಕ್ತಿ ತುಂಬಿದ್ದರು. ರಾಕ್‌ಲೈನ್ ವೆಂಕಟೇಶ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಮಧ್ಯರಾತ್ರಿ 12 ಗಂಟೆಗೆ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಪ್ರಾರಂಭವಾಯಿತು. ಬಳಿಕ ಬೆಳಗಿನ ಜಾವ 3 ಗಂಟೆ, 5 ಗಂಟೆಗೂ ಶೋಗಳನ್ನು ಏರ್ಪಡಿಸಲಾಗಿತ್ತು. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ದರ್ಶನ್ ಅಭಿಮಾನಿಗಳಂತೂ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಆರ್ಭಟಕ್ಕೆ ಶಿಳ್ಳೆ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಇತ್ತೀಚೆಗೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ಅಂಬಾರಿ ಆನೆ ಅರ್ಜುನನಿಗೆ 'ಕಾಟೇರ' ಚಿತ್ರವನ್ನು ಚಿತ್ರತಂಡ ಅರ್ಪಿಸಿದೆ. ಅಷ್ಟಕ್ಕೂ ಸಿನಿಮಾ ಹೇಗಿದೆ? ಕಥೆ ಏನು? ಮುಂದೆ ಓದಿ..
'ಕಾಟೇರ' ಕಥೆ?
1989ರ ಸಮಯ. ಭೀಮನಹಳ್ಳಿ, ಮಲ್ಲನಹಳ್ಳಿ ಜನ ಊರ ಜಾತ್ರೆಗೆ ಸಿದ್ಧತೆ ನಡೆಸಿರುತ್ತಾರೆ. ತನ್ನ ಊರಿಗಾಗಿ ಹೋರಾಡಿ ಜೈಲು ಸೇರಿದ ಕಾಟೇರನಿಗೆ ಇಡೀ ಊರು ಕಾಯುತ್ತಿರುತ್ತದೆ. 10 ದಿನಗಳ ಕಾಲ ಪೆರೋಲ್ ಮೇಲೆ ಹೊರ ಬರುವ ಆತ ಊರಿನ ಹಾದಿ ಹಿಡಿಯುತ್ತಾನೆ. ಮತ್ತೊಂದು ಕಡೆ ನಾಲೆ ಅಗೆಯುವ ವೇಳೆ ಒಂದೇ ಜಾಗದಲ್ಲಿ 107ರ ಜನರ ಅಸ್ತಿಪಂಜರ ಸಿಕ್ಕಿರುತ್ತದೆ. ಅದು ಯಾರ ಅಸ್ಥಿಪಂಜರ? ಒಮ್ಮೆಲೆ ಅಷ್ಟು ಜನ ಸತ್ತು ಮಣ್ಣಾಗಿದ್ದೇಗೆ? ಅವರಿಗೂ ಕಾಟೇರನಿಗೂ ಏನು ಸಂಬಂಧ? 70ರ ದಶಕದಲ್ಲಿ ಆ ಎರಡೂ ಊರುಗಳಲ್ಲಿ ನಡೆದ ಘಟನೆಗಳೇನು? 'ಕಾಟೇರ' ಜೈಲು ಸೇರಿದ್ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ನೀವು ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
'ಕಾಟೇರ' ಸಿನಿಮಾ 70 ಹಾಗೂ 80ರ ದಶಕದಲ್ಲಿ ನಡೆಯುವ ಕಥೆ. ಅದನ್ನು ಸೊಗಸಾಗಿ ಕಟ್ಟಿಕೊಡುವಲ್ಲಿ ಚಿತ್ರತಂಡ ಬಹುತೇಕ ಸಕ್ಸಸ್ ಕಂಡಿದೆ. ದರ್ಶನ್ ಅಭಿಮಾನಿಗಳು ಕೇಳುವ ಮಾಸ್ ಅಂಶಗಳನ್ನು ಬೆರಸಿ ಒಂದು ಹಳ್ಳಿ ಕಥೆಯನ್ನು ತರುಣ್ ಸುಧೀರ್ ಕಟ್ಟಿಕೊಟ್ಟಿದ್ದಾರೆ.
ಎರಡು ಕಾಲಘಟ್ಟದಲ್ಲಿ ಸಿನಿಮಾ ಕಥೆ ಸಾಗುತ್ತದೆ. ಫ್ಯಾಶ್‌ಬ್ಯಾಕ್ ತಂತ್ರ ಬಳಸಿ ತರುಣ್ ಕಥೆ ಹೇಳುತ್ತಾ ಸಾಗುತ್ತಾರೆ. ದೇವರಾಯ, ಕಾಳೇಗೌಡ ಜೊತೆ ಸೇರಿ ಮತ್ತಷ್ಟು ಜಮೀನ್ದಾರರು ಭೂಮಿಯನ್ನು ರೈತರಿಗೆ ಗೇಣಿಗೆ ನೀಡಿ ಹೆಚ್ಚಿನ ಪಾಲನ್ನು ಪಡೆಯುತ್ತಿರುತ್ತಾರೆ. ಧಣಿಗಳು ಹೇಳಿದನ್ನು ಕೇಳಬೇಕು, ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ ಎಂದು ಊರಿನ ಜನ ಬದುಕುತ್ತಿರುತ್ತಾರೆ. 'ಕಾಟೇರ' ಕೂಡ ಗುಂಪಿನವನೇ. ಆದರೆ ತನ್ನವರಿಗೆ ನೋವಾದರೆ ಮಾತ್ರ ಸಹಿಸುವವನಲ್ಲ.
'ಕಾಟೇರ' ತನ್ನವರಿಗೆ ಹುಲಿ ಆಗೋಕು ಸಿದ್ಧ, ಬಲಿ ಆಗೋಕು ಸಿದ್ಧ ಎನ್ನುವ ಜಾಯಮಾನದವನು. ಶಾನುಭೋಗರ ಮಗಳು ಪ್ರಭಾವತಿ ಕೂಡ ಆತನ ಬೆನ್ನಿಗೆ ನಿಲ್ಲುತ್ತಾಳೆ. ಟ್ರೈಲರ್ ಕೊನೆಯಲ್ಲಿ ದರ್ಶನ್ ವಯಸ್ಸಾದ ವ್ಯಕ್ತಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಲುಕ್‌ನಲ್ಲಿ ತೆರೆಮೇಲೆ ಎಂಟ್ರಿ ಕೊಡುತ್ತಾರೆ. ಇನ್ನು ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಭೇದ ಭಾವ ಆ ಕಾಲದಲ್ಲಿ ಎಷ್ಟರಮಟ್ಟಿಗಿತ್ತು ಎನ್ನುವುದನ್ನು ತೋರಿಸಲಾಗಿದೆ. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ದೇಶದಲ್ಲಿ ಎಂಥಹ ಬದಲಾವಣೆ ತಂದಿತ್ತು. ತಮ್ಮ ಕಾಲಡಿ ಇರುವವರು ಈ ಕಾಯ್ದೆಯಿಂದ ಎದ್ದು ನಿಲ್ತಾರೆ ಎಂದಾಗ ಅದನ್ನು ಸಹಿಸದವರು ಏನೆಲ್ಲಾ ಮಾಡಿರಬಹುದು? ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ.
ಕಲಾವಿದರ ಅಭಿನಯ
ಚಿತ್ರದಲ್ಲಿ 'ಕಾಟೇರ'ನಾಗಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಮಾತ್ರವಲ್ಲದೇ ಭಾವನಾತ್ಮಕ ಸನ್ನಿವೇಶಗಳಲ್ಲೂ ಇಷ್ಟವಾಗುತ್ತಾರೆ. ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಸುಲಭವಾಗಿ ಗುರುತು ಸಿಗದಷ್ಟು ಚೆನ್ನಾಗಿ ಮೇಕಪ್ ಮಾಡಲಾಗಿದೆ. ಕುಲುಮೆಯಲ್ಲಿ ಮಚ್ಚು ತಟ್ಟುವುದು ಮಾತ್ರವಲ್ಲ, ತಪ್ಪು ಮಾಡಿದವರನ್ನು ತಟ್ಟುತ್ತಿರುತ್ತಾರೆ. ನಾಯಕಿ ಪ್ರಭಾವತಿಯಾಗಿ ಆರಾಧನಾ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಪಾತ್ರಕ್ಕೆ ಆಕೆಯ ತಯಾರಿ ಗೊತ್ತಾಗುತ್ತದೆ.
ಇನ್ನು ದುಷ್ಟ ದೇವರಾಯನಾಗಿ ಜಗಪತಿ ಬಾಬು, ಕಟುಕ ಗೌಡ ಕಾಳೇಗೌಡನಾಗಿ ವಿನೋದ್ ಆಳ್ವ, 'ಕಾಟೇರ'ನ ಅಕ್ಕ, ಭಾವ ಆಗಿ ಶ್ರುತಿ ಹಾಗೂ ಕುಮಾರ್ ಗೋವಿಂದ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪೊಲೀಸ್ ದಪೇದಾರ್ ಆಗಿ ಅಚ್ಯುತ್ ಕುಮಾರ್, ಶಾನುಭೋಗರಾಗಿ ಅವಿನಾಶ್ ಗಮನ ಸೆಳೆಯುತ್ತಾರೆ.
ತಾಂತ್ರಿಕವಾಗಿ ಚಿತ್ರ ಹೇಗಿದೆ?
50 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಶ್ರಮಿಸಿರುವುದು ಗೊತ್ತಾಗುತ್ತದೆ. ಕಥೆ ಸೂಕ್ತವಾಗುವ ಸೆಟ್‌ಗಳನ್ನು ಹಾಕಿ, ಲೋಕೇಶನ್‌ಗಳನ್ನು ಹುಡುಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸುಧಾಕರ್ ಕ್ಯಾಮರಾ ವರ್ಕ್ ಚೆನ್ನಾಗಿದೆ. ಮಾಸ್ತಿ ಸಂಭಾಷಣೆ ಅರಿತವಾಗಿದೆ. ಹರಿಕೃಷ್ಣ ಎರಡು ಹಾಡುಗಳು ಇಷ್ಟವಾದರೆ ಮತ್ತೆರಡು ಕೈ ಕೊಟ್ಟಿವ. ಆದರೆ ತಮ್ಮ ಬಿಜಿಎಂನಿಂದ ಚಿತ್ರವನ್ನು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲೇ ಕಮರ್ಷಿಯಲ್ ಸಿನಿಮಾ ಟೆಂಪ್‌ಲೆಟ್‌ನಲ್ಲೇ ತರುಣ್ ಸುಧೀರ್ ಆಟವಾಡುತ್ತಾ ಹೋಗಿದ್ದಾರೆ.

ಚಿತ್ರದ ಮೈನಸ್
ಸಣ್ಣ ಪುಟ್ಟ ತಪ್ಪುಗಳನ್ನು ಹೊರತುಪಡಿಸಿ 'ಕಾಟೇರ' ಸಿನಿಮಾ ಉತ್ತಮ ಅನುಭವ ನೀಡುತ್ತದೆ. ಕೆಲವೆಡೆ ಕಂಟೀನ್ಯುಟಿ ಮಿಸ್ ಆಗಿದೆ. ಕೆಲವೊಮ್ಮೆ ಸಿನಿಮಾ ಕಾಲಾವಧಿ ಕೊಂಚ ಜಾಸ್ತಿ ಎನಿಸುತ್ತದೆ. ಇದೇ ಕಾರಣಕ್ಕೋ ಏನೋ ಸೆಕೆಂಡ್ ಹಾಫ್ ಕೊಂಚ ನಿಧಾನ ಎನಿಸುತ್ತದೆ. ಒಂದಷ್ಟು ಸನ್ನಿವೇಶಗಳನ್ನೋ ಅಥವಾ ಹಾಡನ್ನೋ ಕತ್ತರಿಸಿದ್ದರೆ ಸಿನಿಮಾ ಮತ್ತಷ್ಟು ಇಂಟ್ರೆಸ್ಟಿಂಗ್ ಎನಿಸುತ್ತಿತ್ತು.
ಕೊನೆ ಮಾತು
'ಕಾಟೇರ' ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ. ವ್ಯವಸ್ಥೆ ಬದಲಾಗಬೇಕು ಎಂದರೆ ಹೋರಾಟ ನಡೆಯಲೇಬೇಕು. ಕಸುಬನ್ನು ಗುರ್ತಿಸಿಸಲು ಹುಟ್ಟಿಕೊಂಡ ಜಾತಿ ವ್ಯವಸ್ಥೆ ಕೆಲವರ ಕೈಗೆ ಸಿಕ್ಕಿ ಕ್ರಮೇಣ ಶೋಷಣೆಯ ಅಸ್ತ್ರವಾಗಿಬಿಡ್ತು. ಅದು ಇಂದಿಗೂ ಹೋಗಿಲ್ಲ. ಮನುಷತ್ವಕ್ಕಿಂತ ದೊಡ್ಡದು ಏನು ಇಲ್ಲ ಎನ್ನುವ ಸಂದೇಶ ಹೊತ್ತುಬಂದಿರುವ ಸಿನಿಮಾ. ದರ್ಶನ್ ಅಭಿಮಾನಿಗಳ ಜೊತೆ ಫ್ಯಾಮಿಲಿ ಆಡಿಯನ್ಸ್‌ಗೂ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಒಮ್ಮೆ ನೋಡಿ ಎಂಜಾಯ್ ಮಾಡುವ ಅಭಿಮಾನಿಗಳು ಮತ್ತೊಮ್ಮೆ ಫ್ಯಾಮಿಲಿ ಸಮೇತ ಥಿಯೇಟರ್‌ಗೆ ಹೋಗಬಹುದು. ಕಾಟೇರನ ಕಥೆಯನ್ನು ತಮ್ಮದಾಗಿಸಿಕೊಂಡವರಿಗೆ ಬಹಳ ಇಷ್ಟವಾಗುತ್ತದೆ. ಒಟ್ನಲ್ಲಿ 'ಕಾಟೇರ' ದರ್ಶನ್ ಕರಿಯರ್‌ನಲ್ಲಿ ಸಿನಿಮಾ ವಿಶೇಷವಾಗಿ ನಿಲ್ಲುತ್ತದೆ.


Click it and Unblock the Notifications











