»   » ಎಲ್ಲರೂ ಮೆಚ್ಚಬಹುದಾದ ಈ ಚಿತ್ರ ಯಾರ ಮೆಚ್ಚುಗೆಗೂ ಪಾತ್ರವಾಗೋದಿಲ್ಲ ಅನ್ನೋದೇ ಇದರ ಸ್ಪೆಷಾಲಿಟಿ. ಬಂದು ಹೋದ ಅಸಂಖ್ಯ ರವಿಚಂದ್ರನ್‌ ಚಿತ್ರಗಳಂತೆ ಇದೂ ಕೂಡ ಹತ್ತರಲ್ಲಿ ಹನ್ನೊಂದು.

ಎಲ್ಲರೂ ಮೆಚ್ಚಬಹುದಾದ ಈ ಚಿತ್ರ ಯಾರ ಮೆಚ್ಚುಗೆಗೂ ಪಾತ್ರವಾಗೋದಿಲ್ಲ ಅನ್ನೋದೇ ಇದರ ಸ್ಪೆಷಾಲಿಟಿ. ಬಂದು ಹೋದ ಅಸಂಖ್ಯ ರವಿಚಂದ್ರನ್‌ ಚಿತ್ರಗಳಂತೆ ಇದೂ ಕೂಡ ಹತ್ತರಲ್ಲಿ ಹನ್ನೊಂದು.

Posted By:
Subscribe to Filmibeat Kannada

ನಾಯಕ ರವಿಚಂದ್ರನ್‌ ಒಬ್ಬ ಪುಡಿಗಳ್ಳ. ಅವನ ಮಿತ್ರ ಮಂಡ್ಯ ರಮೇಶ. ಇಬ್ಬರೂ ಕದಿಯುತ್ತಾ ಕದಿಯುತ್ತಾ ಒಂದು ದೇವಸ್ಥಾನದ ಗಣೇಶ ವಿಗ್ರಹ ಕದಿಯುತ್ತಾರೆ. ಕದ್ದು ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯಾಂದರೊಳಗೆ ಕಾಲಿಡುತ್ತಾರೆ. ಅದು ನಾಯಕಿಯ ಮನೆ. ಆಕೆ ಅವರನ್ನು ಅಡುಗೆ ಮನೆಯಾಳಗೆ ಕೂಡಿಹಾಕುತ್ತಾಳೆ. ಅವರು ಒಂದು ವಾರ ಕಾಲ ಅಡುಗೆ ಮನೆಯಲ್ಲೇ ಇದ್ದುಕೊಂಡು ನಾಯಕಿ ಹಾಗೂ ಮನೆಯಲ್ಲಿರುವ ಮೂರು ಚೋಟಾ ಚೇತನ್‌ಗಳಿಗೆ ಊಟ, ಕಾಫಿ, ತಿಂಡಿ ಮಾಡಿಕೊಡುವ ಆಧುನಿಕ ನಳರಾಗುತ್ತಾರೆ. ಅವರನ್ನು ಹೊರಗೆ ಬಿಡುವ ಹೊತ್ತಿಗೆ ನಾಯಕಿ ಆತನಿಗೆ ರಾಮಾಯಣ ಪುಸ್ತಕ ಕೊಟ್ಟು ಕಳ್ಳ , ವಾಲ್ಮೀಕಿಯಾದ ಕತೆ ಹೇಳುತ್ತಾಳೆ.

ಮುಂದೆ ನಾಯಕಿಯೇ ಮನೆಯಿಂದ ಅಪವಾದ ಹೊತ್ತು ತನ್ನ ಮನೆಯಿಂದ ಹೊರಬೀಳುತ್ತಾಳೆ. ಆಕೆ ಮನೆ ಮಗಳಲ್ಲ, ಕೆಲಸದಾಕೆ ಎಂದೂ ನಾಯಕನಿಗೆ ಗೊತ್ತಾಗುತ್ತದೆ. ನಾಯಕ ಆಕೆಗೆ ಆಶ್ರಯ ಕೊಡುತ್ತಾನೆ. ಆಕೆಯ ಕಂಠ ಸಿರಿಗೆ ಮೆಚ್ಚಿ ಸಂಗೀತಗಾತಿಯಾಗುವ ಅವಕಾಶ ಕೊಡಿಸುತ್ತಾನೆ. ಆಕೆ ಶ್ರೇಷ್ಠ ಗಾಯಕಿಯಾಗುತ್ತಿದ್ದಂತೆ ಆಕೆಯ ಸಂಬಂಧಿಯಾಬ್ಬ ವಿದೇಶದಿಂದ ಬಂದು ಆಕೆಯನ್ನು ಮದುವೆಯಾಗುವ ನಿರ್ಧಾರ ಪ್ರಕಟಿಸುತ್ತಾನೆ.

ಅಲ್ಲಿಂದ ಆಕೆಗೆ ನೆರವಾಗಿ ನಿಂತ ರವಿಯ ಕಷ್ಟ ಶುರುವಾಗುತ್ತದೆ. ಆತ ಅವಮಾನಿತನಾಗುತ್ತಾನೆ, ಅಪವಾದ ಹೊರುತ್ತಾನೆ. ಏನೇನೋ ಆಗುತ್ತಾನೆ. ಕೊನೆಗೆ ಆಕೆಯಿಂದ ದೂರ ಹೊರಟುಹೋಗುತ್ತಾನೆ.

ಕೊನೆಗೆ ಆಕೆಗೆ ಆತ ಸಿಗುತ್ತಾನಾ ?

ಇದು ಯಥಾ ಪ್ರಕಾರ ಮಿಲಿಯನ್‌ ಡಾಲರ್‌ ಪ್ರಶ್ನೆ. ಇದಕ್ಕೆ ಉತ್ತರ ಸುಲಭವಾಗಿ ಸಿಗುವುದಿಲ್ಲ. ನೀವು ಸಿನಿಮಾ ನೋಡಿ ಅನುಭವಿಸಬೇಕು.

ಈ ಕತೆಯನ್ನು ಎರಡೂವರೆ ತಾಸು ಎಳೆದಿದ್ದಾರೆ. ನಾಲ್ಕೈದು ಹಾಡುಗಳು ನಿಮ್ಮನ್ನು ರಂಜಿಸಲು ಯತ್ನಿಸುತ್ತವೆ. ಒಂದು ಹಾಡಿನಲ್ಲಿ ಅನು ಪ್ರಭಾಕರ್‌ ಎಂಬಾಕೆ ಬಂದು ಹೋಗುತ್ತಾಳೆ. ಸಾಕಷ್ಟು ಮಾದಕವಾಗಿ ಕುಣಿಯಲು ಯತ್ನಿಸಿದ್ದಾಳೆ ಅನ್ನುವುದನ್ನು ಬಿಟ್ಟರೆ ಅದರಲ್ಲಿ ವಿಶೇಷವೇನಿಲ್ಲ.

ಪ್ರೇಮಾ ಪಾಲಿಗಿದು ಪ್ರಾಮಿಸಿಂಗ್‌ ಪಾತ್ರವಲ್ಲ. ರವಿಚಂದ್ರನ್‌ ಪಾಲಿಗೆ ವಿಶೇಷ ಪಾತ್ರವೂ ಅಲ್ಲ. ಆದರೂ ಇಬ್ಬರೂ ತಮ್ಮ ತಮ್ಮ ಪಾತ್ರವನ್ನು ಶ್ರದ್ಧೆಯಿಂದ ಮಾಡೋದಕ್ಕೆ ಯತ್ನಿಸಿದ್ದಾರೆ. ದೊಡ್ಡಣ್ಣ, ಟೆನಿಸ್‌ ಕೃಷ್ಣ ಮುಂತಾದ ಪಾತ್ರಗಳೂ ಅಷ್ಟೇ, ತಮ್ಮ ಕೈಲಾದಷ್ಟು ನಿಷ್ಠೆಯಿಂದ ನಟಿಸಿವೆ.

ತೀರ ಸರಳವಾದ ಎಲ್ಲರೂ ಮೆಚ್ಚಬಹುದಾದ ಈ ಚಿತ್ರ ಕೊನೆಗೂ ಯಾರ ಮೆಚ್ಚುಗೆಗೂ ಪಾತ್ರವಾಗೋದಿಲ್ಲ ಅನ್ನೋದೇ ಇದರ ಸ್ಪೆಷಾಲಿಟಿ. ಕಾರಣವೇನೆಂದರೆ ಕಳೆದ ವರ್ಷ ಬಂದು ಹೋದ ಅಸಂಖ್ಯಾತ ರವಿಚಂದ್ರನ್‌ ಚಿತ್ರಗಳಂತೆ ಇದೂ ಕೂಡ ಹತ್ತರಲ್ಲಿ ಹನ್ನೊಂದು.

ವಿಕ್ರಮನ್‌ ಎಂಬ ಬಿರುದಂತೆಂಬರ ಗಂಡ ಬರೆದ ಕತೆ ಇದು. ಸಾಕಷ್ಟು ಯಡವಟ್ಟುಗಳೂ ಲ್ಯಾಪ್ಸುಗಳೂ ಕತೆಯಲ್ಲಿವೆ. ಅದಕ್ಕೆ ಕಾರಣ ಚಿತ್ರಕತೆಯೋ ಕರಣ್‌ ಎಂಬ ನಿರ್ದೇಶಕನ ಕರುಣಾಜನಕ ಸ್ಥಿತಿಯೋ ಗೊತ್ತಿಲ್ಲ. ಅನೇಕ ತಪ್ಪುಗಳು ಚಿತ್ರದಲ್ಲಿವೆ. ಸಂಕಲನವೇ ಹತ್ತು ತಪ್ಪುಗಳನ್ನು ತೋರಿಸುತ್ತವೆ. ಹಾಸ್ಯ ಸನ್ನಿವೇಶಗಳು ಕಣ್ಣೀರು ತರಿಸುವಷ್ಟು ಭಾವುಕವಾಗಿವೆ. ಭಾವುಕ ಸನ್ನಿವೇಶಗಳು ನಗೆ ತರಿಸುತ್ತವೆ.

ಕಲರ್‌ ಕನಸುಗಳನ್ನು ಬಾಡಿಗೆಗೆ ತರಬಾರದು. ತಂದಾಗ ಅವು ಹೀಗೆ ಬ್ಲಾಕ್‌ ಆ್ಯಂಡ್‌ ವೈಟ್‌ ಆಗುತ್ತವೆ. ಅದಕ್ಕೆ ಸಾ.ರಾ. ಗೋವಿಂದು ಎಂಬ ಕನ್ನಡ ಹೋರಾಟಗಾರ ನಿರ್ಮಿಸಿದ, ಕರಣ್‌ ಎಂಬ ತಮಿಳು ನಿರ್ದೇಶಕ ನಿರ್ದೇಶಿಸಿದ ಮೂಲರಾಗಗಳನ್ನು ಉಳಿಸಿಕೊಂಡ, ತಮಿಳಿನ ‘ಉನ್ನೆಡತ್ತಿಲ್‌ ಎನ್ನೈ ಕೊಡುತ್ತೇನೆ’ ಎಂಬ ಚಿತ್ರದ ರಿಮೇಕ್‌ ಆದ ಕನಸುಗಾರನೇ ಸಾಕ್ಷಿ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada