»   » ಒಂಥರಾ ಮನರಂಜನೆ.. ಪ್ರೇಮ್ ಸೂಪರ್ ಆಕ್ಟಿಂಗ್

ಒಂಥರಾ ಮನರಂಜನೆ.. ಪ್ರೇಮ್ ಸೂಪರ್ ಆಕ್ಟಿಂಗ್

By: ವಿನಾಯಕರಾಮ್ ಕಲಗಾರು
Subscribe to Filmibeat Kannada
Rating:
3.0/5
ಒಬ್ಬ ರಾಗಿಮುದ್ದೆಗೆ ಮೇಕಪ್ ಮಾಡಿದಂತಿದ್ದರೆ, ಇನ್ನೊಬ್ಬ ಬೆಂಕಿ ಕಡ್ಡಿಗೆ ಲುಂಗಿ, ಅಂಗಿ ಸುತ್ತಿದ ಹಾಗಿರುತ್ತಾನೆ. ಮತ್ತೊಬ್ಬ ಮೋಟು ಬೀಡಿಗೆ ಬಣ್ಣ ಬಳಿದಂತಿರುತ್ತಾನೆ. ಮತ್ತೊಬ್ಬ ಅಕ್ಕಿ ಮೂಟೆಗೆ ಗಡ್ಡ ಬಂದ ಹಾಗೆ ಇರುತ್ತಾನೆ.

ಇವರೆಲ್ಲರೂ ಅಡ್ಡಾ ಬಾಯ್ಸ್... ಅಪ್ಪ ಅಮ್ಮ ಬಾಯಿ ಬಾಯಿ ಬಡಿದುಕೊಂಡರೂ ಇವರು ಉದ್ದಾರ ಆಗೋ ಜಾತಿಯಲ್ಲ. ಎಲ್ಲ ಸೇರಿ ಬೀದಿಗೆ ಬಿದ್ದವರು. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುವವರು.. ಆದರೆ ಇವರ್ಯಾರೂ ಕೆಟ್ಟವರಲ್ಲ. ಒಳ್ಳೆಯವರೂ ಅಲ್ಲ. ಕೆಟ್ಟವರಿಗೆ ಕೆಟ್ಟವರು. ಒಳ್ಳೆಯವರಿಗೆ ಒಳ್ಳೆಯವರು...

ಆ ಕಥೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ

ನಿರ್ದೇಶಕ ಮಹೇಶ್ ಬಾಬು ಇಲ್ಲಿ ಯಥಾವತ್ ತಮಿಳಿನ 'ಸುಬ್ರಹ್ಮಣ್ಯಪುರಂ' ಕಥೆಯನ್ನೇ ಕನ್ನಡೀಕರಿಸಿದ್ದಾರೆ. ಆ ಕಥೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ನಿರ್ದೇಶಕರು ಕಥೆಯನ್ನಷ್ಟೇ ರೀಮೇಕ್ ಮಾಡಿದ್ದಾರೇ ಹೊರತು, ಅದರೊಳಗಿನ ಸಾರವನ್ನಲ್ಲ. ಬದಲಾಗಿ ಮಹೇಶ್ ಬಾಬು ಅದನ್ನು ನಮ್ಮ ತನಕ್ಕೆ ಬದಲಾಯಿಸಿದ್ದಾರೆ. ಲೊಕೇಶನ್ ಗಳಿಂದ ಹಿಡಿದು ಎಲ್ಲವೂ ಪಕ್ಕಾ ಮಂಡ್ಯದ ಮೂಲೆಯೊಂದರ ಹಳ್ಳಿಯನ್ನೇ ನೆನಪಿಸುತ್ತದೆ.

ಅಚ್ಚರಿಮೂಡಿಸಿ ಗಮನಸೆಳೆಯುವ ಪ್ರೇಮ್

ಇನ್ನು ಜೋಗಿ ಪ್ರೇಮ್. ಈತ ಡೈರೆಕ್ಟರ್ ಆಗಿ ಹೆಸರು ಮಾಡಿದಷ್ಟು ಆಕ್ಟರ್ ಆಗಿ ಮಾಡಿರಲಿಲ್ಲ. 'ಪ್ರೀತಿ ಏಕೆ ಭೂಮಿ ಮೇಲಿದೆ' ಎಂಬ ಚಿತ್ರ ನೋಡಿ ಹೊರಬಂದವರು ಕಿವಿಯೊಳಗೆ ಬೆರಳಾಡಿಸಿಕೊಂಡು ನಕ್ಕಿದ್ದರು. ಈ ವಯ್ಯ ಒಳ್ಳೇ ಟ್ಯಾಲೆಂಟ್ ಇರೋ ಡೈರೆಕ್ಟ್ರು. ಸುಮ್ಕೇ ಹೀರೋ ಆಯ್ತೀನಿ ಅಂತಾ ಜೀರೋ ಆಗೋದಾ ಎಂದಿದ್ದರು. ಇಂದು ಅದೇ ಪ್ರೇಮ್, ಅಡ್ಡ ಚಿತ್ರದಲ್ಲಿ ಅಚ್ಚರಿ ಮೂಡಿಸುವ ಮಟ್ಟಕ್ಕೆ ಗಮನ ಸೆಳೆಯುತ್ತಾರೆ. ಆ ಪಾತ್ರವೇ ಒಂಥರಾ ಯಪರ ತಪರಾಗಿ ಇರುವುದರಿಂದಲೋ, ಅಥವಾ ಪ್ರೇಮ್‍ಗೂ ಆ ಕಥೆ-ಪಾತ್ರಕ್ಕೂ ಹೊಂದಾಣಿಕೆ ಆಗುವುದರಿಂದಲೋ ಗೊತ್ತಿಲ್ಲ. ಇಡೀ ಚಿತ್ರದಲ್ಲಿ ಪ್ರೇಮ್ ಸ್ಕೋರ್ ಮಾಡುತ್ತಾರೆ. ಮಾಡುತ್ತಲೇ ಹೋಗುತ್ತಾರೆ!

ಕೆನ್ನೆಯಲ್ಲಷ್ಟೇ ನಗುವ, ಕಣ್ಣಲ್ಲಷ್ಟೇ ಕೊಲ್ಲುವ ಕೃತಿ

ನಾಯಕಿ ಕೃತಿ ಖರಬಂದಾ ಅಲ್ಲಲ್ಲಿ ಬಂದಾಪುಟ್ಟಾ ಹೋದಾಪುಟ್ಟಾ ಆದರೂ ಎಲ್ಲೋ ಒಂದು ಹಂತದಲ್ಲಿ ಇಷ್ಟವಾಗಿಬಿಡುತ್ತಾಳೆ. ಪ್ರೇಕ್ಷಕರನ್ನು 'ಪ್ರೇಮ್ ಟು ಫ್ರೇಮ್' ಇಕ್ಕಟ್ಟಿಗೆ ಸಿಕ್ಕಿಸಿಬಿಡುತ್ತಾಳೆ. ಕೆನ್ನೆಯಲ್ಲಷ್ಟೇ ನಗುತ್ತಾಳೆ. ಕಣ್ಣಲ್ಲಷ್ಟೇ ಕೊಲ್ಲುತ್ತಾಳೆ. ಆಕೆಯ ಮೇಲೇಯೇ "ಕಳ್ಳಿಯಿವಳು..." ಸಾಂಗ್ ಬರೆದಂತಿದೆ ಎಂದರೆ ನಮ್ಮ ಕನ್ನಡ ನಾಯಕ ನಟಿಯರು ಬೇಜಾರು ಮಾಡ್ಕೋಬಾರ್ದು ಕಣ್ರಪ್ಪಾ.

ಹರಿಕೃಷ್ಣ ಹಾಡುಗಳಂತೂ ಅಬ್ಬಬ್ಬಾ ಹಬ್ಬ

ನಿರ್ಮಾಪಕ ಮೇಕಾ ಮುರುಳಿಕೃಷ್ಣ ಚಿತ್ರದಲ್ಲಿ ಎರಡನೇ ನಾಯಕ. ಮೊದಮೊದಲು ಆತನ ಪಾತ್ರವನ್ನು ಸಹಿಸಿಕೊಂಡು ಹೋದರೆ, ಕೊನೆಯಲ್ಲಿ ಆತ ಇಷ್ಟವಾಗುತ್ತಾನೆ. ನಿರ್ಮಾಪಕರಿಗೆ ಮತ್ತೊಮ್ಮೆ ಜಯವಾಗಲಿ. ಹರಿಕೃಷ್ಣ ರೀರೆಕಾರ್ಡಿಂಗ್‍ನಲ್ಲೂ ಗಮನ ಸೆಳೆಯುತ್ತಾರೆ. ಹಾಡುಗಳಲ್ಲಂತೂ ಹಬ್ಬವನ್ನೇ ಮಾಡುತ್ತಾರೆ. ಮಹೇಶ್ ಬಾಬು ಪ್ಲಸ್ ಪ್ರೇಮ್ ಸೇರಿಕೊಂಡು, ಹಾಡುಗಳನ್ನು ಮೊದಲೇ ಹಿಟ್ ಮಾಡಿಸಿದ್ದರ ಅಡ್ಡ-ಪರಿಣಾಮವೇ ಸಿನಿಮಾಗೆ ಸಿಕ್ಕಿರುವ ಅದ್ಭುತ ಓಪನಿಂಗ್!

ತೊಂಬತ್ತು ಭಾಗ ಅಚ್ಚುಕಟ್ಟುತನ ಮೆರೆದಿದ್ದಾರೆ

ಒಂದು ಸಿನಿಮಾ ಎಂದಮೇಲೆ ಅಲ್ಲಿ ಕಾಮೆಂಟ್ ಮಾಡಲು ಕೇಜಿಗಟ್ಟಲೇ ಸಿಗುತ್ತದೆ. ಆದರೆ ಒಬ್ಬ ಮಾಮೂಲೀ ಪ್ರೇಕ್ಷಕನಾಗಿ, ತಾನು ವಿಮರ್ಶಕ, ತನಗೆ ಒಂದಷ್ಟು ಗೊತ್ತು ಎಂದು ಪೆನ್ನು ಹಿಡಿದುಕೊಂಡು ಸಿನಿಮಾ ನೋಡಲು ಹೋದರೆ, ಅಲ್ಲಿ ತೆಪ್ಪಗಟ್ಟಲೇ ತಪ್ಪು ಸಿಗುತ್ತದೆ. ಮೂವತ್ತು ವರ್ಷದ ಹಿಂದಿನ ಕಥೆ ಹೇಳುತ್ತೇವೆ ಎಂದಾಗ ಎಲ್ಲಾ ವಿಷಯದಲ್ಲೂ ಕೇರ್‍ಫುಲ್ ಆಗಿ ಇರಬೇಕು. ಹಿಂದಿನ ಕಾಲದಲ್ಲಿ ವಸ್ತುಗಳು ಹೇಗಿದ್ದವು? ಆಗ ಏನೆಲ್ಲಾ ವಸ್ತುಗಳನ್ನು ಬಳಸಲಾಗಿತ್ತು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆ ಮಟ್ಟಿಗೆ ತೊಂಬತ್ತು ಭಾಗ ಮಹೇಶ್ ಬಾಬು ಅಚ್ಚುಕಟ್ಟುತನ ಮೆರೆದಿದ್ದಾರೆ.

ನಿರ್ದೇಶಕ ಬಾಬೂ ಅವರೇ ಅದು 'ಪೋಲಿ'ಸ್ ಅಲ್ಲ

ಎಲ್ಲೋ ಒಂದಿಷ್ಟು ಕಡೆ-ಆಟೋ ತೋರಿಸುವಾಗ ಹೊಸಾ ಮೀಟರ್ ಆಟೋ ಬಂದುಹೋಗುತ್ತದೆ. ಮೂವತ್ತು ವರ್ಷದ ಹಿಂದಿನ ಕಥೆಯಲ್ಲಿ ಮೂರು ದಿನದ ಹಿಂದಿನ ಕನ್ನಡ ದಿನಪತ್ರಿಕೆ ಓದುತ್ತಿರುವುದು ಗೋಚರವಾಗುತ್ತದೆ. ಇನ್ನೊಂದು ವಿಚಾರ-ನಾಯಕ ಮತ್ತು ಆತನ ತಂಡವನ್ನು ಪೊಲೀಸರು ಅರೆಸ್ಟ್ ಮಾಡುವಾಗ ಬಳಸಲಾದ ಪೊಲೀಸ್ ವ್ಯಾನ್‍ನ ಹೊರಗಡೆ- ‘ಪೋಲಿಸ್' ಎಂದು ಬರೆಯಲಾಗಿದೆ. ನಿರ್ದೇಶಕ ಬಾಬೂ ಅವರೇ ಅದು ಪೋಲಿಸ್ ಅಲ್ಲ. ಹಾಗೆಂದರೆ ಅಪಾಪೋಲಿಗಳು ಎಂದರ್ಥ. ಅದು ಪೊಲೀಸ್ ಆಗಬೇಕು. ಕಾಗುಣಿತದ ಬಗ್ಗೆ ತಾವು ತುಂಬಾ ಗಮನ ಹರಿಸಬೇಕು!!!

ಕೊಟ್ಟ ಕಾಸಿಗೆ ಕೈ ಲಾಸ್ ಇಲ್ಲದ ಚಿತ್ರ

ಇನ್ನು ಚಿತ್ರದಲ್ಲಿ ಕೊಂಚ ಅತಿಯಾದ ಕ್ರೌರ್ಯವಿದೆ. ಅಲ್ಲಲ್ಲಿ ಸಿಗರೇಟು ಸೇದುವವರ ಸಂಖ್ಯೆ ತುಂಬಾ ಇದೆ. ಕೊಲೆಗಳಿಗೆ-ಮಚ್ಚು ಲಾಂಗುಗಳಿಗೆ ಲೆಕ್ಕವಿಲ್ಲ. ಇಷ್ಟಿದ್ದೂ ಅವೆಲ್ಲವನ್ನೂ ಬಳಸಲೇಬೇಕು. ಕಾರಣ-ತಮಿಳಿನ ಒರಿಜಿನಲ್ ಕಥೆ ಅವೆಲ್ಲವನ್ನೂ ಡಿಮ್ಯಾಂಡ್ ಮಾಡುತ್ತದೆ!ಪ್ರೇಮ್ ಬದಲಾದ ನಟನೆಯನ್ನು, ನಿರ್ದೇಶಕರು ಅಲ್ಲಲ್ಲಿ ತೋರಿರುವ ಜಾಣ್ಮೆಯನ್ನು ನೋಡಬೇಕಾ? ಅಡ್ಡಾದಿಡ್ಡಿ ಯೋಚಿಸದೇ ಅಡ್ಡಾ ಸಿನಿಮಾಗೆ ಹೋದರೆ ಕೊಟ್ಟ ಕಾಸಿಗೆ ಕೈ ಲಾಸ್ ಇಲ್ಲ. ನಿರ್ದೇಶಕ ಮಹೇಶ್ ಬಾಬು ರೀಮೇಕ್ ಮಾಡಿದರೂ ಅದನ್ನು ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಆ ಭಗವಂತ ಸ್ವಮೇಕ್ ಮಾಡುವ ಶಕ್ತಿ ಮತ್ತು ಬುದ್ಧಿ ಕೊಡಲಿ ಎಂದು ಆ ಮೇಲುಕೋಟೆ ಚೆಲುವರಾಯ ಸ್ವಾಮಿಯಲ್ಲಿ ಬೇಡಿಕೊಳ್ಳುತ್ತಾ...


ಪಕ್ಕಾ ಮಂಡ್ಯ ಭಾಷೆ. ಮೂವತ್ತು ವರ್ಷದ ಹಿಂದಿನ ವ್ಯಕ್ತಿತ್ವದವರು-ವ್ಯಕ್ತಿಗಳು. ಇವರೆಲ್ಲರೂ ಸೇರಿ ಒಂದು ಕೊಲೆ ಮಾಡುತ್ತಾರೆ. ಕಾರಣ-ಯಾರದ್ದೋ ಮೇಲಿನ ಅಭಿಮಾನ. ಅವರ ಮೇಲಿನ ಪ್ರೀತಿಗೆ ಎಲ್ಲರೂ ಸೇರಿ ಮರ್ಡರ್ ಮಾಡುತ್ತಾರೆ. ಅಲ್ಲಿಗೆ ಮೊದಲಾರ್ಧ ಮುಗಿದೇ ಹೋಯಿತಾ?!

ಅನುಮಾನದ ಹುತ್ತಕ್ಕೆ ಹತ್ತು ಹಲವು ಕಾರಣ-ಮೆಗಾಹಿಟ್ ಆಗಿರುವ ಹಾಡುಗಳು. ಏಳುಕೋಟೆ ಹುಡ್ಗೀ ಒಬ್ಳು, ಮೈ ನೇಮು ಬಸಂತೀ.... ಒಂದಾದರ ಮೇಲೊಂದು ಮಸ್ತ್ ಮಜಾಕಾ. ಹೊಕ್ಕಳು ತೋರುತ ಬರುವ ಐಂದ್ರಿತಾ ಹಾಡಿಗೆ ಥಿಯೇಟರ್‍ಗೆ ಥಿಯೇಟರ್ ಹುಚ್ಚೆದ್ದು ಹಾರುತ್ತದೆ. ಮೇಲುಕೋಟೆಯ ಮಳ್ಳಿ ಹುಡುಗಿ ಹಾಡಿಗೆ ಕುರ್ಚಿಯೇ ಎದ್ದು ಕುಣಿಯುತ್ತದೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಎಲ್ಲವನ್ನೂ ಪಟಪಟನೆ ಹೇಳಿ ಮುಗಿಸಿಬಿಡುತ್ತದೆ. ಚಿತ್ರಕಥೆ ಅತಿವೇಗದಲ್ಲಿ ಸಾಗುತ್ತದೆ.

English summary
Kannada film Prem Adda review. The film is a treat to the mass. As far as roles are concerned, it is a tailor-made role for Prem and he looks apt in almost every frame. Prem Adda is a must for action lovers.
Please Wait while comments are loading...