twitter
    For Quick Alerts
    ALLOW NOTIFICATIONS  
    For Daily Alerts

    ಯಶ್ ಅಭಿನಯದ 'ರಾಜಾಹುಲಿ' ಚಿತ್ರ ವಿಮರ್ಶೆ

    By Rajendra
    |

    ನಾಡಹಬ್ಬ ಕನ್ನಡ ರಾಜ್ಯೋತ್ಸವಕ್ಕೆ ಒಂದು ಒಳ್ಳೆಯ ಕನ್ನಡ ಚಿತ್ರವನ್ನು ಕೊಟ್ಟಿದ್ದಾರೆ ನಿರ್ಮಾಪಕ ಕೆ.ಮಂಜು. 'ಗೂಗ್ಲಿ' ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಂಪೂರ್ಣ ಭಿನ್ನವಾದ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 'ರಾಜಾಹುಲಿ'ಯಾಗಿ ಇಷ್ಟವಾಗುತ್ತಾರೆ.

    ಇದು ತಮಿಳಿನ 'ಸುಂದರ ಪಾಂಡ್ಯನ್' ಚಿತ್ರದ ರೀಮೇಕ್ ಆದರೂ ಇಲ್ಲಿ ಮಂಡ್ಯದ ಸೊಗಡಿದೆ. ಹಂಸಲೇಖ ಸಂಗೀತ ಸಂಯೋಜನೆಯ ಅಷ್ಟೂ ಹಾಡುಗಳೂ ಸ್ವಮೇಕ್. ಯಶ್ ಇಲ್ಲಿ ಊರಿನ ಹುಡುಗರ ಪ್ರೀತಿ ಪಾತ್ರದ ರಾಜ.

    ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂಬ ಜಾಯಮಾನದವನು ರಾಜ. ಹಾಗಾಗಿ ಎಲ್ಲರೂ ಅವನನ್ನು ಪ್ರೀತಿಯಿಂದ ರಾಜಾಹುಲಿ ಎಂದು ಕರೆಯುತ್ತಿರುತ್ತಾರೆ. ಇದಕ್ಕೆ ತಕ್ಕಂತೆ ರಾಜ ಕೂಡ ಶರ್ಟಲ್ಲಿ ಎರಡು ಬಟನ್ ಹಾಕದೆ ಹುಲಿಯಂತೆ ಮೀಸೆ ತಿರುವುತ್ತಾ ಪೋಸು ಕೊಡುತ್ತಿರುತ್ತಾನೆ.

    ಮಂಡ್ಯದ ಎರಡು ಹಳ್ಳಿಗಳ ನಡುವಿನ ಕಥೆ ಇದೆ. ಒಂದು ಊರಿನ ಹುಡುಗ ಇನ್ನೊಂದು ಊರಿನ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಆ ಹುಡುಗಿಗೆ ಸೊಕ್ಕು ಜಾಸ್ತಿ. ಸಲೀಸಾಗಿ ಯಾವ ಹುಡುಗನಿಗೂ ಬಿದ್ದಿರಲ್ಲ. ಅವರಿಗೆ ಸಹಾಯ ಮಾಡುವ ಲವ್ ಗುರುವೇ ರಾಜಾಹುಲಿ.

    ಆದರೆ ಇಂಟರೆಸ್ಟಿಂಗ್ ಟ್ವಿಸ್ಟ್ ಏನೆಂದರೆ ಈ 'ರಾಜಾಹುಲಿ'ಯೂ ಒಂದು ಕಾಲದಲ್ಲಿ ಅದೇ ಹುಡುಗಿಗೆ ಲೈನ್ ಹೊಡೆದಿರುತ್ತಾನೆ. ಅವಳು ಆಗ ಇನ್ನೂ ಹೈಸ್ಕೂಲು ಹುಡುಗಿ. ಈಗ ಕಾಲೇಜು ಮೆಟ್ಟಿಲು ಹತ್ತಿರುತ್ತಾಳೆ. ಆಗಲೂ ಈಗಲೂ ಯಾರಿಗೂ ಕೇರ್ ಮಾಡದ ಜಂಬದ ಹುಡುಗಿ ಕಾವೇರಿ (ಮೇಘನಾ ರಾಜ್).

    ತನ್ನ ಗೆಳೆಯನ ಪ್ರೇಮ ನಿವೇದನೆಯನ್ನು ಕಾವೇರಿಗೆ ಬಳಿ ಹೇಳಲು ಹೋಗುತ್ತಾನೆ ರಾಜಾಹುಲಿ. ಆದರೆ ರಾಜಾಹುಲಿಯನ್ನೇ ಪ್ರೀತಿಸುತ್ತಿರುವುದಾಗಿ ಕಾವೇರಿ ಹೇಳುತ್ತಾಳೆ. ಅಲ್ಲಿಂದ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ. ತನ್ನ ಗೆಳೆಯರಿಗಾಗಿ ರಾಜಾಹುಲಿ ಏನು ಮಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ.

    ಚಿತ್ರ: ರಾಜಾಹುಲಿ
    ನಿರ್ಮಾಣ: ಕೆ ಮಂಜು ಸಿನಿಮಾಸ್
    ಚಿತ್ರಕಥೆ, ನಿರ್ದೇಶನ: ಗುರು ದೇಶಪಾಂಡೆ
    ಸಂಗೀತ: ಹಂಸಲೇಖ
    ಸಂಭಾಷಣೆ: ಮಂಜು ಮಾಂಡವ್ಯ
    ಕಥೆ: ಎಸ್.ಆರ್. ಪ್ರಭಾಕರನ್
    ಛಾಯಾಗ್ರಹಣ: ಕೆ.ಎಂ. ವಿಷ್ಣುವರ್ಧನ
    ಸಂಕಲನ: ಕೆ.ಎಂ. ಪ್ರಕಾಶ್
    ಸಾಹಸ: ಮಾಸ್ ಮಾದ, ರವಿವರ್ಮ
    ನೃತ್ಯ ನಿರ್ದೇಶನ: ಮುರಳಿ
    ಪಾತ್ರವರ್ಗ: ಯಶ್, ಮೇಘನಾ ರಾಜ್, ಚರಣ್ ರಾಜ್, ಎಂ.ಎನ್. ಲಕ್ಷ್ಮಿದೇವಿ, ಸುಧಾ ಬೆಳವಾಡಿ, ಹರ್ಷಾ, ಗಿರೀಶ್, ವಶಿಷ್ಠ, ಚಿಕ್ಕಣ್ಣ, ಅಶ್ವಿನಿ ಮುಂತಾದವರು.

    ರಾಜಾಹುಲಿಯಾಗಿ ಯಶ್ ಪಾತ್ರ ಹೇಗಿದೆ?

    ರಾಜಾಹುಲಿಯಾಗಿ ಯಶ್ ಪಾತ್ರ ಹೇಗಿದೆ?

    ಯಶ್ ಎಂದಿನಂತೆ ಸೊಗಸಾದ ಅಭಿನಯ ನೀಡಿದ್ದಾರೆ. ಆಕ್ಷನ್, ರೊಮ್ಯಾನ್ಸ್ ನಲ್ಲಿ ಅಷ್ಟೇ ಲೀಲಾಜಾಲವಾಗಿ ಕಾಣುತ್ತಾರೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅವರ ಅಭಿನಯದ ಗಮನಾರ್ಹ.

    ಕಾವೇರಿಯಾಗಿ ಮೇಘನಾ ರಾಜ್ ಹೇಗೆ?

    ಕಾವೇರಿಯಾಗಿ ಮೇಘನಾ ರಾಜ್ ಹೇಗೆ?

    ಪಕ್ಕಾ ಮಂಡ್ಯ ಹುಡುಗಿಯಂತೆ ಒಂಚೂರು ಕೋಪ, ಅಷ್ಟೇ ಪ್ರೀತಿ, ಸೊಕ್ಕು, ಜಂಬದ ಹುಡುಗಿ ಕಾವೇರಿಯಾಗಿ ಮೇಘನಾ ರಾಜ್ ಕಣ್ಣಲ್ಲೇ ಕಾಡಿಸುತ್ತಾರೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಅವರು ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

    ಪೋಷಕ ಪಾತ್ರಗಳು ಹೇಗಿವೆ?

    ಪೋಷಕ ಪಾತ್ರಗಳು ಹೇಗಿವೆ?

    ಸುದೀರ್ಘ ಸಮಯದ ಬಳಿಕ ಚರಣ್ ರಾಜ್ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಾಹುಲಿ ತಂದೆಯ ಪಾತ್ರ ಅವರದು. ಹಳ್ಳಿ ಗೆಟಪ್ ನಲ್ಲಿ ಅವರು ಮಿಂಚಿದ್ದಾರೆ. ಉಳಿದಂತೆ ಎಂ.ಎನ್. ಲಕ್ಷ್ಮಿದೇವಿ, ಸುಧಾ ಬೆಳವಾಡಿ, ಹರ್ಷಾ, ಗಿರೀಶ್, ವಶಿಷ್ಠ, ಚಿಕ್ಕಣ್ಣ, ಅಶ್ವಿನಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

    ಹದವಾಗಿ ಬೆರೆತಿರುವ ಹಾಸ್ಯರಸ

    ಹದವಾಗಿ ಬೆರೆತಿರುವ ಹಾಸ್ಯರಸ

    ರಾಜಾಹುಲಿ ಗೆಳೆಯನಾಗಿ ಚಿಕ್ಕಣ್ಣ ಅವರ ಹಾಸ್ಯ ಕಚಗುಳಿಯಿಡುತ್ತದೆ. ಮಂಡ್ಯ ಕಡೆಯ ಭಾಷೆಯಲ್ಲಿ ಹಳ್ಳಿ ಹುಡುಗನಂತೆಯೇ ಚಿಕ್ಕಣ್ಣ ಸಖತ್ ನಗಿಸುತ್ತಾರೆ. ಎಲ್ಲೂ ಹಾಸ್ಯ ಅತಿಯಾಗದೆ, ಇತಿಮಿತಿಯಲ್ಲೇ ಇದೆ.

    ಹಂಸಲೇಖ ಸಂಗೀತ ಮತ್ತೊಂದು ಹೈಲೈಟ್

    ಹಂಸಲೇಖ ಸಂಗೀತ ಮತ್ತೊಂದು ಹೈಲೈಟ್

    ಚಿತ್ರದ ಆರಂಭಿಕ ಗೀತೆ ಓಂ ಅಂದರೆ ಹಿಂದು ಗುರುತು...ಎಂಬ ಹಾಡಿನ ಮೇಕಿಂಗ್ ಚೆನ್ನಾಗಿದೆ. ಶಂಕರ್ ಮಹದೇವನ್ ಹಾಡಿರುವ ಈ ಹಾಡಿನ ಸಂಗೀತ ಹಾಗೂ ಮೇಕಿಂಗ್ ಎರಡೂ ಸೊಗಸಾಗಿವೆ. ಉಳಿದ ಹಾಡುಗಳೂ ಅಷ್ಟೇ ಸೊಗಸಾಗಿ ಮೂಡಿಬಂದಿವೆ.

    ಕಣ್ಣಿಗೆ ತಂಪೆರೆಯುವ ಛಾಯಾಗ್ರಹಣ

    ಕಣ್ಣಿಗೆ ತಂಪೆರೆಯುವ ಛಾಯಾಗ್ರಹಣ

    ಮಂಡ್ಯ, ಶ್ರೀರಂಗಪಟ್ಟಣ, ಚಾಮರಾಜನಗರದ ಹಳ್ಳಿಯ ಪರಿಸರವನ್ನು ಕೆ.ಎಂ.ವಿಷ್ಣುವರ್ಧನ್ ಅವರು ಸೊಗಸಾಗಿ ಸೆರೆಹಿಡಿದಿದ್ದಾರೆ. ಮಂಡ್ಯ ಕಡೆಯ ತೊಟ್ಟಿಮನೆಗಳು, ಕಬ್ಬಿನ ಬೆಳೆ, ಹಚ್ಚ ಹಸುರು ಪೈರು ಪಚ್ಚೆಗಳನ್ನು ಕಾಣಬಹುದು. ವಿದೇಶಿ ಚಿತ್ರೀಕರಣಕ್ಕಿಂತಲೂ ಸೊಗಸಾಗಿ ಮೂಡಿಬಂದಿದೆ.

    ಚಿತ್ರದ ನಿರ್ದೇಶನ ಹೇಗಿದೆ?

    ಚಿತ್ರದ ನಿರ್ದೇಶನ ಹೇಗಿದೆ?

    ಗುರು ದೇಶಪಾಂಡೆ ಅವರಿಗೆ ಇದು ಎರಡನೇ ಚಿತ್ರ. ಈ ಹಿಂದೆ ಅವರು ವಾರಸ್ದಾರ ಚಿತ್ರವನ್ನು ನಿರ್ದೇಶಿಸಿದ್ದರು. ರಾಜಾಹುಲಿ ಚಿತ್ರ ರೀಮೇಕ್ ಆದರೂ ಹಾಡುಗಳಲ್ಲಿ ಸ್ವಂತಿಕೆಯನ್ನು ತುಂಬಿದ್ದಾರೆ. ಕನ್ನಡದ ಪರಿಸರಕ್ಕೆ ತಕ್ಕಂತೆ ಚಿತ್ರವನ್ನು ತಂದು ತಮ್ಮ ಜಾಣ್ಮೆ ಮೆರೆದಿದ್ದಾರೆ.

    ಚಿತ್ರದಲ್ಲಿ ಮೈನಸ್ ಪಾಯಿಂಟ್ ಗಳೇ ಇಲ್ಲವೇ?

    ಚಿತ್ರದಲ್ಲಿ ಮೈನಸ್ ಪಾಯಿಂಟ್ ಗಳೇ ಇಲ್ಲವೇ?

    ಇವೆ. ಚಿತ್ರಕಥೆ ಸಾಕಷ್ಟು ಎಳೆದಂತೆ ಭಾಸವಾಗುತ್ತದೆ. ಆದರೆ ಮಂಜು ಮಾಂಡವ್ಯ ಅವರ ಸಂಭಾಷಣೆ ಅದನ್ನು ಮರೆಸುತ್ತದೆ. ಕಥೆ ಸುದೀರ್ಘ ಅನ್ನಿಸಿದರೂ ಎಲ್ಲೂ ಬೋರಾಗದಂತೆ ತೆರೆಗೆ ತಂದಿದ್ದಾರೆ. ಹಾಗಾಗಿ ಮೈನಸ್ ಪಾಯಿಂಟ್ ಗಳು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ.

    ಕೊನೆಯ ಮಾತು

    ಕೊನೆಯ ಮಾತು

    ಸ್ನೇಹ ಪ್ರೀತಿ, ಗೆಳೆತನದ ಮಹತ್ವದ ಚಿತ್ರಗಳನ್ನು ಬಯಸುವ ಪ್ರತಿಯೊಬ್ಬರಿಗೂ ಈ ಚಿತ್ರ ಇಷ್ಟವಾಗುತ್ತದೆ. ಹಾಗೆಯೇ ಯಶ್ ಅಭಿಮಾನಿಗಳಿಗೂ ಖಂಡಿತ ನಿರಾಸೆಪಡಿಸಲ್ಲ. ನೋಡಬಹುದಾದ ಚಿತ್ರ.

    English summary
    Rocking Star Yash and Meghana Raj lead Kannada film Raja Huli review. If you love the movies with friendship themes, then don't miss Raja Huli. It is a must watch for Yash's fans. And the message is applicable to the people, who betrays the friendship.
    Friday, November 1, 2013, 16:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X