twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಕ್ಷಕನ ವಿಮರ್ಶೆ: ತಲೆ ತಗ್ಗಿಸುವಂತೆ ಮಾಡುವ 'ಅಮರಾವತಿ'

    By ಭಾಸ್ಕರ ಬಂಗೇರ
    |

    'ಜಟ್ಟ', 'ಮೈತ್ರಿ' ಅಂತಹ ಸಿನಿಮಾಗಳು ನಂತರ ಬಿ.ಎಂ.ಗಿರಿರಾಜ್ ನಿರ್ದೇಶನ ಮಾಡಿರುವ 'ಅಮರಾವತಿ' ಚಿತ್ರಕ್ಕೆ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದಾರೆ. ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಕಳೆದ ಶುಕ್ರವಾರ ತೆರೆಕಂಡ ಈ ಚಿತ್ರ ಈಗ ಟಾಕ್ ಆಫ್ ದಿ ಟೌನ್.

    'ಅಮರಾವತಿ' ಚಿತ್ರವನ್ನ ನೋಡಿ ಬಂದ - ಭಾಸ್ಕರ ಬಂಗೇರ ಎಂಬ ಪ್ರೇಕ್ಷಕರೊಬ್ಬರು, ಪ್ರಸ್ತುತ ಸಮಾಜಕ್ಕೆ 'ಅಮರಾವತಿ' ಹೇಗೆ ಸಂಬಂಧಪಟ್ಟಿದೆ ಎಂಬುದನ್ನ ಕೆಲವೊಂದು ಸೂಕ್ಷ್ಮ ವಿಚಾರಗಳೊಂದಿಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಅದನ್ನ ಅವರ ಮಾತಿನಲ್ಲೆ ಓದಿ....

    'ಅಮರಾವತಿ' ನೋಡಿದ ಮೇಲೆ ತಲೆ ತಗ್ಗಿಸಲೇಬೇಕು

    'ಅಮರಾವತಿ' ನೋಡಿದ ಮೇಲೆ ತಲೆ ತಗ್ಗಿಸಲೇಬೇಕು

    "ಅಮರಾವತಿ" ಸಿನಿಮಾ ಆಧುನಿಕತೆಯ ಹೆಗಲೇರಿ ಬಂದ ಅಭಿವೃದ್ದಿಯ ವ್ಯಾಪ್ತಿ ಎಷ್ಟು ಹಾಗು ಅದರ ನಿಜವಾದ ಪಾಲುದಾರರು ಯಾರು ಎನ್ನುವ ಪ್ರಶ್ನೆಗಳಿಗೆ ನಿರ್ಭಿಡೆಯಿಂದ ಉತ್ತರಿಸುತ್ತೆ, ನಾಗರೀಕ ಸಮಾಜ ಎನ್ನುವ ಭ್ರಮೆಯ ಒಳಗಡೆ ಬದುಕುತ್ತಿರುವ ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡುತ್ತದೆ. ಸಿನೆಮಾ ಎತ್ತುವ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.

    ಈ ದಾರುಣ ಸ್ಥಿತಿಗೆ ನಾವೇ ಕಾರಣ

    ಈ ದಾರುಣ ಸ್ಥಿತಿಗೆ ನಾವೇ ಕಾರಣ

    ಯಾಕೆಂದರೆ ಈ ಕೊಳಕಿನ ಹಿಂದೆ ಮತ್ತದೇ ನಾವಿದ್ದೇವೆ. ತುಂಬಿ ತುಳುಕುವ ಕಸದ ತೊಟ್ಟಿ ಹಾಗು ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು ನಗರೀಕರಣದ ಪಾಪದ ಕೂಸುಗಳು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಭಾರತದ ಸಿಲಿಕಾನ್ ವ್ಯಾಲಿ ತನ್ನ ಗರ್ಭದ ಒಳಗಡೆ ತುಂಬಿಕೊಂಡಿರುವ ಕೊಳಕುಗಳಿಗೆ ಈ ವ್ಯವಸ್ಥೆಯ ಭಾಗವಾಗಿರುವ ನಾವೆಲ್ಲರೂ ಉತ್ತರದಾಯಿಗಳು ಎನ್ನುವುದನ್ನು ಸಿನೆಮಾ ಕೂಗಿ ಕೂಗಿ ಹೇಳುತ್ತದೆ.

    ಇದ್ದಿದ್ದನ್ನ ಇದ್ಹಾಗೆ ತೋರಿಸಿದ್ದಾರೆ

    ಇದ್ದಿದ್ದನ್ನ ಇದ್ಹಾಗೆ ತೋರಿಸಿದ್ದಾರೆ

    ನಿರ್ದೇಶಕರು ಇಲ್ಲಿ ಅನಗತ್ಯವಾಗಿ ಯಾರನ್ನು ಸಹ ಕೆಟ್ಟವರು ಅಥವಾ ಒಳ್ಳೆಯವರನ್ನಾಗಿ ತೋರಿಸುವ ಗೋಜಿಗೆ ಹೋಗುವುದಿಲ್ಲ. ಇದ್ದಿದ್ದನ್ನು ಇದ್ದ ಹಾಗೆಯೇ ಚಿತ್ರಿಸುತ್ತ ಈ ವ್ಯವಸ್ಥೆಯ ಕ್ರೂರ ಮುಖಗಳ ಅನಾವರಣವನ್ನು ಮಾಡಿಸುತ್ತಾರೆ. ಹಾಡು, ಕುಣಿತ, ಹಾಸ್ಯ, ಪಾತ್ರ ವೈಭವೀಕರಣ ಹಾಗು ದ್ವಂದ್ವಾರ್ಥಗಳಿರುವ ಸಿನೆಮಾಗಳಿಗಷ್ಟೇ ಮಾರುಕಟ್ಟೆ ಎನ್ನುವ ಪರಿಸ್ಥಿತಿಯಿರುವಾಗ ಈ ರೀತಿಯ ಸಿನೆಮಾಗಳನ್ನು ಬೆಳ್ಳಿತೆರೆಯ ಮೇಲೆ ತರಲು ಗುಂಡಿಗೆ ಗಟ್ಟಿಯಿರಬೇಕು. ನಿರ್ದೇಶಕ ಬಿ. ಎಂ. ಗಿರಿರಾಜ್ "ನವಿಲಾದರು" ಎನ್ನುವ ಕಿರುಚಿತ್ರದಲ್ಲೇ ತಾನು ಭಿನ್ನವಾಗಿ ಯೋಚಿಸುವ ವ್ಯಕ್ತಿ ಎನ್ನುವುದನ್ನು ಋಜುವಾತು ಮಾಡಿದವರು. ಅದು ಜಟ್ಟ ಹಾಗು ಮೈತ್ರಿ ಸಿನೆಮಾಗಳಲ್ಲೂ ಕೂಡ ಮುಂದುವರಿಯಿತು. ಅದಕ್ಕೆ ಮತ್ತೊಂದು ಹೆಮ್ಮೆಯ ಸೇರ್ಪಡೆ "ಅಮರಾವತಿ" ಸಿನೆಮಾ.

    ತೆರೆಮೇಲೆ ಸಮಾಜದ ವಾಸ್ತವ

    ತೆರೆಮೇಲೆ ಸಮಾಜದ ವಾಸ್ತವ

    ಚಂದ್ರನ ಎದೆಯ ಮೇಲೆ ಇಳಿಸಲು ನೌಕೆ ಕಂಡು ಹಿಡಿದಿದ್ದೇವೆ. ಆದರ ಮನೆಯ ಬಚ್ಚಲು ನೀರು ಕಟ್ಟಿಕೊಂಡರೆ ನಮ್ಮ ದೈನಂದಿನ ಬದುಕಿನ ಭಾಗವಾಗಿಸಿಕೊಳ್ಳಲು ಇಚ್ಚಿಸದ ಮನುಷ್ಯರು ಆ ಕೆಲಸವನ್ನು ಮಾಡಬೇಕು. ವಿಜ್ಞಾನ ಎಲ್ಲಿ ಮುಂದುವರಿಯಬೇಕಿತ್ತೋ ಅಲ್ಲಿ ಮುಂದುವರಿಯಲೇ ಇಲ್ಲ. ಬ್ರಿಟಿಷರ ದಬ್ಬಾಳಿಕೆ ನಿಂತಿತು, ಸಿರಿವಂತರ ಜೀತದಿಂದಲೂ ತಕ್ಕಮಟ್ಟಿಗೆ ಮುಕ್ತಿ ಸಿಕ್ಕಿತು. ಆದರೆ ಮೂಲವಾಸಿಗಳನ್ನು ಪಟ್ಟಣದಿಂದ ಆಚೇಗೆ ಹೋಗುವಂತಹ ಸನ್ನಿವೇಶ ಸೃಷ್ಟಿಸಿ ನಾವು ಕಟ್ಟಿಕೊಂಡ ಮಹಾನಗರಿಯ ಮಲದ ಗುಂಡಿಯಲ್ಲಿ ನಮ್ಮದೇ ಕೊಳಕು ಸರಾಗವಾಗಿ ಹರಿಯದೆ ನಿಂತರೆ ಅದರ ಒಳಗಡೆ ಇಳಿದು ಸರಿಪಡಿಸಲು ನಮ್ಮಂತೆಯೇ ಇರುವ ಮನುಷ್ಯರು ಬೇಕು. ಸಿನೆಮಾದ ಉದ್ದಕ್ಕೂ ಈ ರೀತಿಯ ಆಧುನಿಕತೆಯ ಹಳವಂಡಗಳು ಒಂದೊಂದಾಗಿ ನಮ್ಮನ್ನು ಚುಚ್ಚುತ್ತಲೇ ಇರುತ್ತವೆ.

    ಕಲಾವಿದರ ನಟನೆ ಕಾಡುತ್ತೆ

    ಕಲಾವಿದರ ನಟನೆ ಕಾಡುತ್ತೆ

    ಸಿನಮಾದಲ್ಲಿ ನಾಯಕ, ನಾಯಕಿ, ಹಾಸ್ಯ ಪಾತ್ರ, ಕಳನಾಯಕರು ಎನ್ನುವ ವರ್ಗವಿಲ್ಲ. ಇಲ್ಲಿ ಎಲ್ಲರೂ ಮುಖ್ಯ ಪಾತ್ರಗಳು. ಪ್ರಮುಖವಾಗಿ ಪೌರಕಾರ್ಮಿಕ ಶಿವಪ್ಪ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟನೆ ಅತಿಯಾಗಿ ಕಾಡುತ್ತದೆ. ನಾಯಿಯ ಜೊತೆ ಮಾತನಾಡುತ್ತ "ನೀನು ಜಾತಿ ನಾಯಿ, ನಾನು ನಾಯಿ ಜಾತಿ" ಎನ್ನುವಾಗ ಕುಳಿತಲ್ಲೇ ತಲೆ ತಗ್ಗಿಸುವಂತಾಗುತ್ತದೆ. ಪೌಲ್ ನಾಗರಾಜ್ ಪಾತ್ರದಲ್ಲಿ ಕಿರಣ್ ಕುಮಾರ್ ಹಾಗು ಚನ್ನಬಸವನ ಪಾತ್ರದಲ್ಲಿ ಹೇಮಂತ್ ಸುಶೀಲ್ ಕೂಡ ಅದ್ಭುತವಾಗಿ ನಟಿಸಿದ್ದಾರೆ.

    ನೋಡಲೇಬೇಕಾದ 'ಅಮರಾವತಿ'

    ನೋಡಲೇಬೇಕಾದ 'ಅಮರಾವತಿ'

    ಕೆಲವೊಂದು ಕಡೆ ಪಾತ್ರಗಳ ನಡುವಿನ ಮಾತುಕತೆ ಸಂಭಾಷಣೆಯ ಶೈಲಿಯಲ್ಲಿ ಇಲ್ಲ ಅನಿಸುತ್ತದೆ. ಕೆಲವೊಮ್ಮೆ ಸಿನೆಮಾದ ಒಂದಷ್ಟು ಭಾಗ ಕತೆಗೆ ಸಂಬಂಧಪಡದ ಬಿಡಿ ದೃಶ್ಯಗಳ ಜೋಡಣೆ ಅನಿಸಿದರು ಅವುಗಳು ಸಿನೆಮಾದ ಮೂಲ ಉದ್ದೇಶಕ್ಕೆ ನ್ಯಾಯ ಒದಗಿಸುತ್ತವೆ. ಮಗುವಿನ ಕೊಲೆಯನ್ನು ಅರಗಿಸಿಕೊಳ್ಳುವುದು ಕೂಡ ಒಂದಷ್ಟು ಕಷ್ಟವಾಗುತ್ತದೆ.

    ಸಾಮಾಜಿಕ ಕಾಳಜಿಯ ಚಿತ್ರ

    ಸಾಮಾಜಿಕ ಕಾಳಜಿಯ ಚಿತ್ರ

    ಮಾಡಿದ ಸಿನೆಮಾವನ್ನು ಬಿಡುಗಡೆ ಮಾಡಿ ಪ್ರತಿಕ್ರಿಯೆಗಾಗಿ ಸಾಮಾನ್ಯ ಜನರ ಮುಂದೆ ಬಾರದೆ ಕೇವಲ ಪ್ರಶಸ್ತಿಗಾಗಿ ಸಿನೆಮಾ ಮಾಡುವವರ ನಡುವೆ ಸಿದ್ಧಸೂತ್ರಗಳನ್ನು ಬಿಟ್ಟು ತಾನು ನಿರ್ದೇಶಿಸಿದ ಸಿನೆಮಾವನ್ನು ಎಲ್ಲರೂ ನೋಡಬೇಕೆನ್ನುವ ಬಿ. ಎಂ. ಗಿರಿರಾಜ್ ಹಾಗು ಅವರ ತಂಡದ ಕಾಳಜಿಯನ್ನು ಜೀವಂತವಾಗಿರಿಸುವ ಉದ್ದೇಶಕ್ಕಾದರು ನಾವೆಲ್ಲರೂ 'ಅಮರಾವತಿ'ಯನ್ನು ಚಿತ್ರಮಂದಿರದಲ್ಲಿ ನೋಡಿ ಬೆಂಬಲಿಸಬೇಕಿದೆ. - ಭಾಸ್ಕರ ಬಂಗೇರ

    ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಮರಾವತಿ

    ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಮರಾವತಿ

    ಬಿ.ಎಂ.ಗಿರಿರಾಜ್ ನಿರ್ದೇಶನ ಮಾಡಿದ್ದು, ಸುಷ್ಮಾ ಮತ್ತು ಮಾಧವ ರೆಡ್ಡಿಒ ಎಂಬುವವರು ನಿರ್ಮಾಣ ಮಾಡಿದ್ದಾರೆ. ಅಚ್ಯುತ್ ಕುಮಾರ್, ವಿದ್ಯಾ, ವೆಂಕಟ್ ರಾಮ್, ಹೇಮಂತ್, ವೈಶಾಲಿ ದೀಪಕ್, ನೀನಾಸಂ ಆಶ್ವತ್ ಸೇರಿದಂತೆ ಮೊದಲಾದವರು ಚಿತ್ರದ ಮುಖ್ಯ ತಾರಬಳಗದಲ್ಲಿದ್ದಾರೆ. ಕಳೆದ ಶುಕ್ರವಾರ ಅಮರಾವತಿ ಸಿನಿಮಾ ಬಿಡುಗಡೆಯಾಗಿತ್ತು.

    English summary
    Audience Review of 'Amaravathi' Movie. Kannada Actor Achut Kumar Starrer 'Amaravathi' Movie is Released On Friday (February 10th). The Movie is Directed by MB Giriraj Fame of Mytri.
    Monday, February 13, 2017, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X