twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಸೀಟಿನ ಕೊನೆಗೆ ಕೂರಿಸುವ 'ಹಗ್ಗದ ಕೊನೆ'

    |

    ಗಲ್ಲುಶಿಕ್ಷೆ ಬೇಕೆ, ಬೇಡವೆ ಎಂಬ ಬಗ್ಗೆ ಶತಮಾನಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಇಂಗ್ಲಿಷ್ ನಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಮರದಂಡನೆ ಎಂದರೆ ಅದೊಂದು ರೀತಿ ವ್ಯವಸ್ಥಿತ ಕೊಲೆ. ಕೊಲೆ ಮಾಡಿರುವ ಅಪರಾಧಿಗೂ ನೇಣುಗಂಬಕ್ಕೆ ದೂಡುತ್ತಿರುವವರಿಗೂ ಏನು ವ್ಯತ್ಯಾಸ? ಎಂಬ ಜಿಜ್ಞಾಸೆಯಲ್ಲಿ ಕಥೆ ಸಾಗುತ್ತದೆ.

    ಚೆನ್ನ ಯಾನೆ ಚೆನ್ನಕೇಶವ (ನವೀನ್ ಕೃಷ್ಣ) ನಾಳಿನ ಸೂರ್ಯೋದಯ ನೋಡಲಾರ. ಏಕೆಂದರೆ ಅವನಿಗೆ ಈಗಾಗಲೆ ಗಲ್ಲುಶಿಕ್ಷೆ ಜಾರಿಯಾಗಿದೆ. ರಾಷ್ಟ್ರಪತಿಗೆ ಬರೆದಿದ್ದ ಕ್ಷಮಾದಾನ ಪತ್ರವೂ ತಿರಸ್ಕೃತವಾಗಿದೆ. ಎಂಟು ದಿನಗಳ ಹಿಂದೆಯೇ ಗಲ್ಲುಶಿಕ್ಷೆಯ ಷರಾ ಬರೆದಾಗಿದೆ. [ನವೀನ್ ಕೃಷ್ಣ ಸಂದರ್ಶನ]

    Haggada Kone1

    ಬೆಳಕರಿಯುವುದಕ್ಕೂ ಮುನ್ನ ಅವನನ್ನು ಗಲ್ಲಿಗೇರಿಸಲಾಗುತ್ತದೆ. ಆ ರಾತ್ರಿ ಅವನ ಮನಸ್ಥಿತಿ ಹೇಗಿದೆ ಎಂಬ ಚಿತ್ರಣವನ್ನು ತಮ್ಮ ಪಾತ್ರದ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ ನವೀನ್ ಕೃಷ್ಣ. ಚೆನ್ನನ ಪಾತ್ರಕ್ಕೆ ಅವರು ಹಂಡ್ರಡ್ ಪರ್ಸೆಂಟ್ ಜೀವ ತುಂಬಿದ್ದಾರೆ. ತನ್ನ ಈ ಸ್ಥಿತಿಗೆ ಕಾರಣರಾದವರನ್ನು ಕನಸಿನಲ್ಲಿ ಕರೆದು ಪ್ರಶ್ನಿಸುವ ಮೂಲಕ ಚಿತ್ರ ಆರಂಭವಾಗುತ್ತದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    ಮರದಂಡನೆಗೆ ಒಳಗಾದವನ ಒಂದು ದಿನಕ್ಕೂ ಮುಂಚಿನ ತುಮುಲಗಳು, ಪ್ರಶ್ನೆಗಳು, ಭಾವನೆಗಳು, ಮನೋವೇದನೆಗಳು ಪ್ರೇಕ್ಷಕರನ್ನು ಸೀಟಿಗೆ ಆರಾಮವಾಗಿ ಒರಗಿಕೊಂಡು ಚಿಂತನೆಗೆ ಹಚ್ಚುತ್ತವೆ. ಅಷ್ಟರ ಮಟ್ಟಿಗೆ ದಯಾಳ್ ಪದ್ಮನಾಭನ್ ಅವರು ಕೀರ್ತಿಶೇಷರಾದ ಪರ್ವತವಾಣಿಯವರ ಅದೇ ಹೆಸರಿನ ನಾಟಕವನ್ನು ಯಶಸ್ವಿಯಾಗಿ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

    Rating:
    4.0/5
    Star Cast: ನವೀನ ಕೃಷ್ಣ, ಸುಚೇಂದ್ರ ಪ್ರಸಾದ್, ದತ್ತಣ್ಣ
    Director: ದಯಾಳ್ ಪದ್ಮನಾಭನ್

    ಈ ಚಿತ್ರದ ಹೆಗ್ಗಳಿಕೆ ಎಂದರೆ ತೀವ್ರ ಚಿಂತನೆಗೆ ಹಚ್ಚುವ ಸಂಭಾಷಣೆಗಳು. ಜೊತೆಗೆ ಗೌತಮ್ ಶ್ರೀವತ್ಸ ಅವರ ಹಿನ್ನೆಲೆ ಸಂಗೀತವೂ ಪ್ರಖರವಾಗಿ ಮೂಡಿಬಂದಿದ್ದು ಚಿತ್ರದ ಕಥೆಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಅವರ ಹಿನ್ನೆಲೆ ಸಂಗೀತ ಕಥೆಗೆ ಹೊಸ ಸ್ಪರ್ಶ ನೀಡಿದೆ ಎಂದರೆ ತಪ್ಪಾಗಲಾರದು.

    Haggada Kone2

    ಇದೇ ಮೊದಲ ಬಾರಿಗೆ ಕ್ಯಾಮೆರಾ ಹಿಡಿರುವ ಪಾಂಡಿಕುಮಾರ್ ಎಸ್ ಅವರ ಛಾಯಾಗ್ರಹಣವೂ ಅಷ್ಟೇ ಸೊಗಸಾಗಿದೆ. ಕಣ್ಣಿಗೆ ಹಿತಮಿತವಾಗಿದ್ದು ಜೈಲಿನ ಒಳಾಂಗಣ ಚಿತ್ರೀಕರಣ ಗಮನಾರ್ಹವಾಗಿ ಮೂಡಿಬಂದಿದೆ.

    ಸಂಕೀರ್ಣವಾದ ಕಥೆಗೆ ಅಷ್ಟೇ ಚಾಕಚಕತ್ಯೆಯಿಂದ ಕತ್ತರಿ ಪ್ರಯೋಗಿಸಿದ್ದಾರೆ ರಘುನಾಥ್ ಅವರು. "ನನ್ನ ಹಣೆಬರಹ - ನಾನೇ ಬರೆದುಕೊಂಡದ್ದು" ಎಂಬ ಕೃತಿಯನ್ನೂ ಚೆನ್ನ ಜೈಲಿನಲ್ಲಿ ಬರೆಯುತ್ತಾನೆ. ಈ ಕೃತಿಯಿಂದ ಬರುವ ದುಡ್ಡನ್ನು ತನ್ನ ತಾಯಿಗೆ ಕೊಡಿ ಎಂದೂ ಜೈಲರ್ (ಸುಚೇಂದ್ರಪ್ರಸಾದ್) ಬಳಿ ವಿನಂತಿಸಿಕೊಳ್ಳುತ್ತಾನೆ.

    ಇನ್ನು ಚೆನ್ನನ ತಾಯಿಯಾಗಿ ಸಿಹಿಕಹಿ ಗೀತಾ ಅವರದು ಹೃದಯಸ್ಪರ್ಶಿ ಪಾತ್ರ. ಅವರ ಪಾತ್ರದ ಸಮಯ ಕಿರಿದಾಗಿದ್ದರೂ ತನ್ನ ಮಗನನ್ನು ಕಳೆದುಕೊಳ್ಳುವ ತಾಯಿಯ ಅಂತಃಕರಣವನ್ನು ಕಾಣಬಹುದು. ಇನ್ನು ಜೈಲರ್ ಆಗಿ ಸುಚೇಂದ್ರಪ್ರಸಾದ್ ಅವರದು ಚೆನ್ನನ ವಾದವನ್ನು ಒಪ್ಪಿಕೊಳ್ಳಲಾರದ, ಬಿಡಲಾಗದ ಸಂಕ್ಲಿಷ್ಟ ಪಾತ್ರ.

    Haggada Kone3

    ಚೆನ್ನ ಕೊಲೆ ಮಾಡಿರುವ ವ್ಯಕ್ತಿ ಯಾರು, ಯಾಕೆ ಮಾಡಿದ ಎಂಬ ಕುತೂಹಲಕ್ಕೂ ಚಿತ್ರ ಕೊನೆಯಲ್ಲಿ ಸ್ಥಳಾವಕಾಶ ಸಿಕ್ಕಿದೆ. ಕೊಲೆಯಾದವನ ಪಾತ್ರದಲ್ಲಿ ಸರಿಗಮ ವಿಜಿ ಅವರು ಗಮನಸೆಳೆಯುತ್ತಾರೆ. ಕೆಡುಕನಾಗಿ ಅವರ ಪಾತ್ರ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇದು ಪ್ರೇಕ್ಷಕರ ಮನಸ್ಸಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

    ಗಲ್ಲಿಗೆ ಹೊರಡುವುದಕ್ಕೂ ಮುನ್ನ ಚೆನ್ನನಿಗೆ ಸ್ನಾನ ಮಾಡಿಕೊಳ್ಳಲು ಹೇಳಲಾಗುತ್ತದೆ. ಆಗ ಅವರ ಬೆತ್ತಲೆ ಹಿಂಬದಿಯನ್ನು ಮಸುಕು ಮಸುಕಾಗಿ ತೋರಿಸಲಾಗಿದೆ. ಬಟ್ಟೆ ಕೊಡಲು ಬಂದ ಪೊಲೀಸ್ ಪೇದೆ ಆಕಡೆಗೆ ನೋಡಲಾಗದೆ ತಿರುಗಿಕೊಳ್ಳುತ್ತಾನೆ. "ನೀವ್ಯಾಕೆ ಮುಜುಗರ ಪಟ್ಟುಕೊಳ್ತೀರಾ, ಮುಜುಗರಪಡಬೇಕಾದದ್ದು ನಾನು" ಎನ್ನುತ್ತಾನೆ ಚೆನ್ನ. ಅಷ್ಟೇ ಹೊರತು ಇಲ್ಲಿ ಯಾವುದೇ ರೀತಿಯ ಅಶ್ಲೀಲ, ಅಸಭ್ಯತೆಯ ಚಿತ್ರಣ ಇಣುಕಿಲ್ಲ.

    ಹಗ್ಗದ ಕೊನೆ ಬಗ್ಗೆ ಕೊನೆ ಮಾತು: ನವೀನ್ ಕೃಷ್ಣ ಅವರ ಪ್ರಯತ್ನ, ದಯಾಳ್ ಪದ್ಮನಾಭನ್ ಅವರ ನಿರ್ದೇಶನಕ್ಕೆ ಖಂಡಿತ ನೀವು ಮಾರುಹೋಗುತ್ತೀರಿ. ಇದು ಸಂಪೂರ್ಣ ಕಲಾತ್ಮಕ ಚಿತ್ರ ಅಲ್ಲದಿರುವ ಕಾರಣ ಅಲ್ಲಲ್ಲಿ ಸಣ್ಣಪುಟ್ಟ ತಪ್ಪುಗಳು ಇಣುಕಿವೆ. ಕಥೆಯ ಓಟದಲ್ಲಿ ಅವು ಅಷ್ಟಾಗಿ ಗಮನಕ್ಕೆ ಬರಲ್ಲ ಎಂಬುದು ಬೇರೆ ವಿಚಾರ. ಒಟ್ಟಾರೆಯಾಗಿ ಇದೊಂದು ಚಿಂತನೆಗೆ ಹಚ್ಚುವ ಚಿತ್ರ.

    Haggada Kone4

    English summary
    Kannada movie 'Haggada Kone' review. The innovative script, well-etched characters and the commendable performances, strengthened by a brilliant technical team and perfect execution, overall it's a must watch.
    Thursday, September 27, 2018, 13:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X