»   » ವೀಕ್ಷಕರ ವಿಮರ್ಶೆ: ನಾ ಹೋದ ...ಅಲ್ಲಲ್ಲ ನೋಡಿದ ಸುಂದರ ಕಿರಿಕ್ ಪಾರ್ಟಿ !

ವೀಕ್ಷಕರ ವಿಮರ್ಶೆ: ನಾ ಹೋದ ...ಅಲ್ಲಲ್ಲ ನೋಡಿದ ಸುಂದರ ಕಿರಿಕ್ ಪಾರ್ಟಿ !

Posted By: ನಾಗರಾಜ.ಎಂ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  "ಅಪ್ಪಾ...ಎಲ್ಲಿಗೆ ಹೋಗ್ತಾ ಇದ್ದೀಯ?" ಅಂತಾ ಮಗ ಕೇಳಿದ್ದ ನೋಡಿ ..."ಬಹಳ ದಿನ ಆದ್ಮೇಲೆ ಕನ್ನಡ ಮೂವಿ ಬಂದಿದೆ ...ನೋಡಲಿಕ್ಕೆ ಹೊಂಟೀನಿ ಕಣೋ ..." ಅಂತಾ ನಾ ಹೇಳಿದ್ದ ಕೇಳಿ ....Can i come with you ? ಅಂತಾ ಅವಾ ಕೇಳಿದಾಗ...ನೀನು ಇನ್ನೂ ಚಿಕ್ಕವ...ಕಾಲೇಜು ಸ್ಟೋರಿ ಎಲ್ಲ ದೊಡ್ಡವನಾದ ಮೇಲೆ ನೋಡುವೆಯಂತೆ ...ನಿಂಗೇ ಕಾಲೇಜಿಗೆ ಹೋದಾಗ ಅನುಭವ ಆಗ್ತದೆ ಬಿಡು" ಅಂತಾ ಹೇಳಿ ಹೊರಟಿದ್ದೆ...![ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

  ಸಿನಿಮಾ ಹಾಲ್ ಒಳಗಡೆ ಹೋದಾಗ ...ಆಗಲೇ ಹೆಸರುಗಳು ಬರ್ತಾ ಇದ್ದವು. ಕತ್ತಲಲ್ಲೇ ನನ್ನ ಸೀಟ್ ನಂಬರ್ ಹುಡುಕಿಕೊಂಡು ...ಯಾರದೋ ಕಾಲು ತುಳಿದು ಬೈಸಿಕೊಂಡು ಹೋಗಿ ಕೂತ್ಕೊಂಡು ನೋಡ್ತಾ ಇದ್ದೆ ..!


  ಕಾಲೇಜು ದಿನಗಳತ್ತ ನನ್ನ ಚಿತ್ತ ಓಡಿತ್ತು.!

  ಕಾಲೇಜು ಹುಡುಗರ ಗುಂಪು, ಹಾಸ್ಟೆಲ್ ಜೀವನ, ಸೀನಿಯರ್ ಸ್ಟೂಡೆಂಟ್ಸ್ ಅಹಂ, ರಾಗಿಂಗ್ ...ಆ ಕರ್ಣ ಬಿಟ್ಟ ಪೇಪರ್ ರಾಕೆಟ್....ಹಾಗೆ ಆ ಕಾಲೇಜು ದಿನಗಳತ್ತ, ನನ್ನ ಚಿತ್ತ ಓಡಿತ್ತು.!['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]


  ಹೇ.. ಯು...

  "ಹೇ ..ಯು ...2nd ಬೆಂಚ್ ಫ್ರಮ್ ಲಾಸ್ಟ್ ರೋ " ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಪಾಠ ಮಾಡ್ತಿದ್ದ ಲೆಕ್ಚರ್ ಇದ್ದಕ್ಕಿದ್ದಂತೆ ಒರಟಾದ ಧ್ವನಿಯಲ್ಲಿ ಕರೆದಿದ್ದ ನೋಡಿ ...ನೋಟ್ಸ್ ಬರ್ಕೊತಾ ಕೂತಿದ್ದ ನಾನು ತಲೆ ಎತ್ತಿ ನೋಡಿದ್ದೆ. ಹ್ಮ್ಮ್....ನಾನಾ ಸರ್? ಅಂತಾ ಪಕ್ಕದಲ್ಲಿ ಕೂತಿದ್ದ ಕೀರ್ತಿ ರೆಡ್ಡಿ ತಡವರಿಸುತ್ತಾ ನಿಧಾನವಾಗಿ ಎದ್ದಾಗ ..."ನೋ ನಾಟ್ you...the one sitting next to you" ....ಅಂದಾಗ ದಡಿಯ ರೆಡ್ಡಿ ಬದುಕಿದೆಯಾ ಬಡಜೀವವೇ ಅಂತಾ ಉಸ್ಸಪ್ಪ ಅಂತಾ ಕುಳಿತು ..."ಹೇ ಮ್ಯಾನ್ ...he is ಕಾಲಿಂಗ್ ಯು" ಅಂತಾ ಕೈಯಲ್ಲೇ ನನ್ನ ಭುಜ ತಟ್ಟಿದಾಗ, ನನ್ನ ಚಸ್ಮಾ ಸರಿಮಾಡಿಕೊಂಡು "ಯಸ್ ಸರ್..." ಅಂತಾ ಅಂದು ...ಏನಕ್ಕೆ ಕರೀತಿದಾರೆ ಅಂತ ಅರಿವಾಗದೇ ಎದ್ದು ನಿಂತಿದ್ದೆ!


  ನಾನೇನು ಮಾಡ್ಲಿಲ್ಲ

  ಏನು ನಿನ್ನ ಹೆಸರು ? ಒರಟಾದ ಧ್ವನಿಯಲ್ಲೇ ಕೇಳಿದ ಅವರಿಗೆ .."ನಾಗರಾಜ ಸರ್" ಅಂತಾ ನಿಧಾನವಾಗೇ ಹೇಳಿದ್ದೆ. ನೋಡಕೆ ನಾಕಡಿ ಇಲ್ಲ ...ಮಾಡೋ ಚೇಷ್ಟೆಗೆ ಏನು ಕಮ್ಮಿ ಇಲ್ಲಾ ಅಲ್ವಾ? ಅಂತಾ ಅಚ್ಚ ಕನ್ನಡದಲ್ಲೇ ಅವರು ಕೇಳಿದ್ದ ನೋಡಿ ...ಹುಬ್ಬೇರಿಸಿ ...ತಡವರಿಸುತ್ತಾ ನಾ ಕೇಳಿದ್ದೆ ..."ಯಾಕೆ ಸಾರ್ ..ನಾನೇನು ಮಾಡಿದೆ?"


  ತಲೆ ತಗ್ಗಿಸಿ ನಿಂತಿದ್ದೆ

  "ನಂಗೆ ಎದುರು ಉತ್ತರ ಕೊಡ್ತೀಯಾ? ನೋಡು ಇದನ್ನ...ಈ ಪೇಪರ್ ರಾಕೆಟ್ ನಾ ಮತ್ತಾರು ತೂರಿದ್ದು ನನ್ನ ಕಡೆ? ಅಲ್ಲಿಂದಲ್ಲೇ ಅದು ಹಾರಿ ಬಂದಿದ್ದು ...ನಂಗೆ ಎಲ್ಲ ಕಡೆ ಕಣ್ಣು ಇದಾವೆ" ಅಂತಾ ಸಿಟ್ಟಿನಿಂದ ಅವರಂದಾಗ, "ಸಾರ್ ಖಂಡಿತಾ ನಾನಲ್ಲ ಸರ್ ...ನಾನು ಸುಮ್ನೆ ನಿಮ್ಮ ನೋಟ್ಸ್ ಬರ್ಕೊತಾ ಇದ್ದೆ ...ಖಂಡಿತಾ ನಾನಲ್ಲ ಸರ್ " ಅಂತಾ ನಾ ಹೇಳುವಾಗ ನನ್ನ ಹಿಂದೇನೆ ಕೂತಿದ್ದ ಎರಡು ವರ್ಷದಿಂದ ಇದೆ ಕ್ಲಾಸ್ಸಲ್ಲಿ ಕೂತಿರುವ ಗಿರೀಶ ಕಿಸಕ್ಕಂತ ನಕ್ಕಿದ್ದ ನೋಡಿ ...ಎಲ್ಲ ಇವನದೇ ಕಿತಾಪತಿ ಇದು ....ಲೆಕ್ಚರ್ ತಪ್ಪಾಗಿ ನನ್ನ ಹಿಡಿದಿದ್ದಾರೆ .......ಅವನ ಮೇಲೆ ಹೇಳೋಣಾಂದ್ರೆ ...ಮೊದಲೇ ಅವನು ರೌಡಿ..ಹೊರಗಡೆ ಹೋದಮೇಲೆ ಮತ್ತೇನರ ಮಾಡಿಬಿಟ್ರೆ ನಂಗೆ ? ಅಂತಾ ಯೋಚಿಸಿ ತಲೆ ತಗ್ಗಿಸಿ ನಿಂತಿದ್ದೆ ...


  ಸ್ಟ್ರಾಂಗ್ ಕಾಫಿ ಕುಡಿದಾಗ...

  ನಾನು ಎಷ್ಟೇ ಸಮಜಾಯಿಸಿ ಹೇಳಿದರೂ ಕೇಳದೆ , "ಯು ಸ್ಟುಪಿಡ್..ಗೆಟ್ ಔಟ್ ಫ್ರಮ್ ಮೈ ಕ್ಲಾಸ್...this is ಮೈ ಫಸ್ಟ್ ಅಂಡ್ ಲಾಸ್ಟ್ ವಾರ್ನಿಂಗ್ ಫಾರ್ ಯು " ಅಂತಾ ಲೆಕ್ಚರ್ ಏರು ಧ್ವನಿಯಲ್ಲಿ ಹೇಳಿದಾಗ ...ಮರು ಮಾತಿಲ್ಲದೆ "ಬೆಳಿಗ್ಗೆ ಯಾರು ಮುಖ ನೋಡಿ ಬಂದಿದ್ದೇನೋ ? ಏನೋ ? " ಅಂತಾ ನನ್ನೇ ನಾ ಬೈಕೊಂತಾ ಹೊರಗಡೆ ಬರುವಾಗ ಆಕಡೆ ಬೆಂಚಲ್ಲಿ ಕೂತಿದ್ದ ಎಲ್ಲ ಹುಡುಗಿಯರು ನನ್ನನ್ನೇ ನೋಡ್ತಿದ್ದನ್ನು ನೋಡಿ ..ಇನ್ನೂ ಹೆಚ್ಚಿಗೆ ಅವಮಾನವಾದಂತಾಗಿ ಹೊರಗೆ ಓಡಿ ಬಂದು ಅಲ್ಲೇ ಇದ್ದ ಕಾಲೇಜು ಕ್ಯಾಂಟೀನ್ ನಲ್ಲಿ "ಸ್ಟ್ರಾಂಗ್ ಕಾಫಿ ಕೊಡಿ ಭಟ್ರೇ " ಅಂತಾ ಹೇಳಿ ...ಕಾಫೀ ಕುಡಿತಾ ಬುಕ್ ನೋಡ್ತಾ ಯೋಚನೆ ಮಾಡ್ತಾ ಕೂತಿದ್ದೆ.


  ರಮ್ಯಾ ಬಂದ್ಲು

  "ಲೇ ನಾಗಿ...ಯಾಕೋ ರಾಕೆಟ್ ಬಿಡೋಕೋಗಿದ್ದೆ?...ಸುಮ್ನೆ ನಮ್ಮ ಟೀಮ್ ಸೇರುಕೊಂಡು ಬಿಡಮ್ಮ...ಮಜಾ ಮಾಡಬಹುದು...ಓದೋದು - ಬರಿಯೋದು ಇದ್ದದ್ದೇ " ."ಭಟ್ರೇ ...ಒಂದು ಬಿಸಿ ಬಿಸಿ ಪಲಾವ್" ಅಂತಾ ಹೇಳಿ ನಗ್ತಾ ಆ ರೌಡಿ ಗಿರೀಶ ನನ್ನೆಡೆ ನೋಡಿ ಕಣ್ಣಾರಿಸಿ...ತನ್ನ ಪಟಾಲಂ ಜೊತೆ ಹೋಗಿದ್ದ ನೋಡಿ ...ಛೇ ಅಂತಾ ಮನದಲ್ಲೇ ಅಂದುಕೊಂಡು ಮತ್ತೆ ನೆಕ್ಸ್ಟ್ ಪಿರಿಯಡ್ ಯಾವ್ದು ? ಅಂತಾ ನೋಡುವಾಗ ...." ಹಾಯ್ , Can i sit here ? " ಮೆಲುವಾದ ಧ್ವನಿ ಕೇಳಿ ಯಾರಪ್ಪ ಅಂತ ತಲೆ ಎತ್ತಿ ನೋಡಿದರೆ ..ನಮ್ಮ ಸೆಕ್ಷನ್ಗೆ ಹೊಸದಾಗಿ ಸೇರಿದ್ದ ಬೆಂಗಳೂರು ಹುಡುಗಿ ರಮ್ಯ ! ...."ಹಾಯ್ ...sure , ಕುಳಿತುಕೊಳ್ಳಿ" ನಾ ಹಚ್ಚ ಕನ್ನಡದಲ್ಲೇ ಹೇಳಿದಾಗ ...ಎದುರಿಗೆ ಕೂತ ರಮ್ಯ "ನೀವು ಯಾಕೆ ನಿಜ ಹೇಳಲಿಲ್ಲ ..ಗಿರೀಶ ರಾಕೆಟ್ ಬಿಟ್ಟಿದ್ದು ಅಂತಾ ? ನೀವು ಮಾಡಿದ್ದಲ್ಲ ಅಂತ ನನಗೆ ಗೊತ್ತು ..." ಮಧುರವಾದ ಧ್ವನಿಯಲ್ಲಿ ಅವಳೆಂದಾಗ ...ಆ ಘಟನೆಯೆಲ್ಲಾ ಒಂದು ಕ್ಷಣ ಮರೆತಂತಾಗಿ ನನ್ನ ನಾನೇ ಮರೆತಿದ್ದೆ. ಸ್ವಲ್ಪ ಸಾವರಿಸಿಕೊಂಡು ..."ಓಹ್ ಇರ್ಲಿ ಬಿಡಿ ...ನಡೆಯುತ್ತೆ ...ನೆಕ್ಸ್ಟ್ ಟೈಮ್ ನಾನೇ ಸ್ವಲ್ಪ ಅವನಿಂದ ದೂರದ ಬೆಂಚಲ್ಲಿ ಕೂತ್ರೆ ಆಯ್ತು ಅಷ್ಟೇ...ಸರಿ..ಕಾಫಿ or ಟೀ or ಹಾರ್ಲಿಕ್ಸ್ ( ಬೆಂಗಳೂರು ಹುಡುಗಿ ಅಂತಾ ನೆನಪಾಗಿ) ಕೇಳಿದ್ದೆ ...!


  ಹೊಟ್ಟೆ ಉರಿಸಿದ್ದೆ

  "ಕಾಫಿ ಈಸ್ ಫೈನ್" ಅವಳೇಳಿದ್ದ ಕೇಳಿ ..ಒಂದೇ ನೆಗೆತಕ್ಕೆ ಭಟ್ರ ಬಳಿ ಹೋಗಿ ..."ಬೈ ಟೂ ಕಾಫಿ....ಅಲ್ಲಲ್ಲಾ ..ಎರಡು ಕಾಫಿ" ಅಂತಾ ಹೇಳುವಾಗ...ಅಲ್ಲೇ ಫಲಾವ್ ಗೆ ಕಾಯ್ತಾ ನಿಂತಿದ್ದ ಗಿರೀಶ..."ತಗಳಮ್ಮಾ...ಇದುವರೆಗೂ ಯಾರ ಜೊತೆಗೆ ಮಾತಾಡದ ಅವಳು ...ನಮ್ಮ ನಾಗಿ ಹತ್ರ ಬಂದು ಕೂತು ಮಾತಾಡ್ತಿದಾಳೆ...ಏನು ಗುರು..ಎಂತಾ ಪುಂಗಿ ಊದಿದೆಮ್ಮಾ...? ಅಂತಾ ವ್ಯಂಗ್ಯವಾಗಿ ಕೇಳಿದ್ದ ನೋಡಿ ...ಕಾಫಿ ತಗಂಡು ಈ ಬಾರಿ ನಾ ಅವನಿಗೆ ಕಣ್ಣು ಹೊಡೆದು "ಗಿರೀಶ ನೀ ರಾಕೆಟ್ ಬಿಟ್ಟು ..ಲೆಕ್ಚರ್ ಹತ್ರ ಬೈಸಿದ್ದಕ್ಕೆ ಥ್ಯಾಂಕ್ಸ್ ಕಣೋ....ರಮ್ಯನ ಹತ್ರ ಮಾತಾಡೋ ಚಾನ್ಸ್ ಸಿಗ್ತು" ನಾ ಹೇಳಿ ನಗ್ತಾ ಹೋಗಿದ್ದ ನೋಡಿ ಗಿರೀಶ ಹೊಟ್ಟೆ ಉರಿಸಿಕೊಂಡಿದ್ದ !


  ಸಾಥ್ ಕೊಡ್ಬೇಕು.!

  "ಬೆಳಗೆದ್ದು ಯಾರ ಮುಖವ ನಾನು ನೋಡಿದೇ ?
  ಅಂದಾನೋ, ಅದೃಷ್ಟಾನೋ ಮುಂದೆ ಕೂತಿದೆ ...!
  ನಿನ್ನೆ ಕಂಡ ಕನಸು ..ಬ್ಲಾಕ್ ಅಂಡ್ ವೈಟ್
  ಇಂದು ಬಣ್ಣವಾಗಿದೆ ...ನಿನ್ನ ಮೇಲೆ ಕವನ
  ಬರೆಯೋ ಗಮನ ಈಗ ತಾನೇ ಮೂಡಿದೆ !"


  ಕಾಮನ್ ಸಬ್ಜೆಕ್ಟ್ ಆಗಿದ್ದ ಮೆಕ್ಯಾನಿಕಲ್ ವರ್ಕ್ ಶಾಪ್ನಲ್ಲಿ ಕಷ್ಟ ಪಡುವಾಗ ...ಅಲ್ಲಿದ್ದ ಅಟೆಂಡರ್ "ಸರಿಯಾಗಿ ಕೆಲಸ ಮಾಡ್ಬೇಕು ಅಂದ್ರೆ..ಈ ಲೇತ್ ಮಷೀನ್ ನಮಗೆ ಸ್ವಲ್ಪ ಸಾಥ್ ಕೊಡ್ಬೇಕಮ್ಮ " ಅಂತಾ ಅವಾ ಹತ್ತಿರ ಬಂದು ಪಿಸುಗುಟ್ಟಿದಾಗ ...ಅರ್ಥ ಮಾಡಿಕೊಂಡು ...ಅಂದು ಸಂಜೆನೇ ಅವನಿಗೆ ಗಿಫ್ಟ್ ಕೊಡಿಸಿ ...ಊರ ಹೊರಗಡೆ ಇದ್ದ ಢಾಬಾದಲ್ಲಿ ಚೆನ್ನಾಗಿ ತಿನಿಸಿ ಕುಡಿಸಿ ಪಾರ್ಟಿ ಕೊಟ್ಟಿದ್ದಕ್ಕೆ ...ಪ್ರಾಕ್ಟಿಕಲ್ exams ಸೂಪರ್ ಆಗಿತ್ತು" ..ಅವನ ಸಾಥ್ ನಿಂದ ನನ್ನ ಜೊತೆ ರಮ್ಯನದು ಸಹಾ...!


  ಕಾಲೇಜು ಲವ್ ಸ್ಟೋರಿ

  ವರ್ಕ್ ಶಾಪ್ನಲ್ಲಿ ನಾ ಕೊಟ್ಟಿದ್ದಕ್ಕೆ ಪಾಸಾಗಲು ಅವಳಿಗೆ ಸಾಥ್
  exam ಮುಗಿಸಿ ನಡೆವಾಗ ಹಿಡಿದಿದ್ದಳು ನನ್ನ ಹಾತ್ !
  ನಾ ಅವಳೆಡೆ ಹಾಗೆ ನೋಡಿದಾಗ ..ಅವಳ ಕಣ್ಣುಗಳು ಈ ಕವನದ ಸಾಲುಗಳ ನುಡಿದ ಹಾಗಿತ್ತು...


  "ನೀನಿರೆ ಸನಿಹ ನೀನಿರೆ...
  ಹೇಳದ ಮಾತು ನೂರಿದೆ...
  ಮುಗಿಲೇರಿ ನಿಂತ ಸೂರ್ಯ...
  ಕಂಡರೆ ಸುಡುವಂತ ಭಾವ...
  ಮಳೆಬಿಲ್ಲಿಗೆ ರಂಗನು ಮೂಡಿಸಿಲ್ಲವೇ ?"


  ಅಷ್ಟರಲ್ಲೇ ಇಂಟರ್ ವಲ್

  "ಲೇ...ನಾಗೇಶ ..ಇಂಟರ್ವಲ್ ಕಣೋ ..ನಡಿ ಹೊರಗೆ ಹೋಗಿ ಪಾಪ್ ಕಾರ್ನ್ , ಇಲ್ಲ ಒಂದು ಧಮ್ ಒಂದ್ಕೊಂಡು ಬರೋಣಾ?" ಅಂತಾ ಪಕ್ಕದಲ್ಲಿದ್ದ ಫ್ರೆಂಡ್ ತಿವಿದು ಕರೆದಾಗ ...ಮೈಮರೆತಿದ್ದ ನಾನು ..." ಹಾ ...ಇಂಟರ್ವಲ್ ಏನೋ already ?...ಗೊತ್ತೇ ಆಗ್ಲಿಲ್ಲ ...?" ಅಂತಾ ತಲೆಕೊಡವಿಕೊಂಡು ಎದ್ದು ಹೊರಗಡೆ ಬಂದಿದ್ದೆ.


  ಹೊಗೆ ಬಿಡುವಾಗ...

  ಫ್ರೆಂಡ್ "ಉಫ್" ಅಂತಾ ಹೊಗೆ ಬಿಡ್ತಿದ್ದ ನೋಡಿ...
  "ಲೇ ನಾಗಿ ..ನೀನು ಏನಮ್ಮ...ಒಂದು ಧಮ್ಮು ಹೊಡಿಯಲ್ಲ ಅಂತೀಯ, ಒಂದು XX ಮೂವಿಗೆ ಬರೋಲ್ಲ ಅಂತೀಯಾ ... ? ಇಂಜಿನಿಯರಿಂಗ್ ಓದಕ್ಕೆ ನೀನು ನಾಲಯಕ್ಕಮ್ಮ ..." ಅಂತಾ ಫ್ರೆಂಡ್ಸ್ ಚುಡಾಯಿಸಿ ಬಲವಂತವಾಗಿ ಬಾಯಿಗೆ ಸಿಗರೇಟು ಇಟ್ಟು ಒಮ್ಮೆ ಧಮ್ ಎಳೆಯೋ ಹಾಗೇ ಮಾಡಿದ್ದು, ಬೇಡ ಅಂದ್ರು ಬಿಡದೆ ಮಲ್ಲು ಮೂವಿಗೆ ಕರೆದುಕೊಂಡು ಹೋಗಿದ್ದು ....ಯಾರಾದ್ರೂ ನೋಡಿಯಾರು ಅಂತಾ ಅಂದುಕೊಳ್ಳುವಾಗಲೇ ...ಎದುರಿಗೆ ನನ್ನ ಅಣ್ಣನ ಫ್ರೆಂಡ್ ಸಿಕ್ಕಿ ಜೀವನೇ ಹೋದಂತಾಗಿದ್ದು....ಮರುದಿನ ಅಪ್ಪನ ಜೋಬಿನಿಂದ ಒಂದು ಬ್ರಿಸ್ಟಾಲ್ ಸಿಗರೇಟು ಕದ್ದು ಸೇದಿದ್ದು...ಅದರ ಮರುದಿನ ರಮ್ಯಳ ಜೊತೆ ಮಾತಾಡುವಾಗ ನಾ ಕೆಮ್ಮಿ ...ನಾ ಸಿಗರೇಟು ಸೇದಿದ್ದ ವಿಷಯ ಅವಳಿಗೆ ಹೇಳಿ ..ಅವಳಿಂದ ಬಯ್ಯಿಸಿಕೊಂಡು ಅಂದೇ ಅದಕ್ಕೆ ತಿಲಾಂಜಲಿ ಕೊಟ್ಟಿದ್ದು ..." ಹಾಗೇ ಮತ್ತೆ ನೆನಪಿನ ಸುರುಳಿ ಆ ಸಿಗರೇಟ್ ಹೊಗೆಯ ಸುರಳಿಯಂತೆ ಸುತ್ತುತ್ತಾ ಹಿಂದಕ್ಕೆ ಓಡಿತ್ತು ...!


  ಮತ್ತೆ ನೆನಪಾದ ರಮ್ಯಾ

  ಮತ್ತೆ ಮೂವಿ ಶುರುವಾಗಿದ್ದ ಶಬ್ದ ಕೇಳಿ ಓಡಿದ್ದೆ ಒಳಕ್ಕೆ ...
  "ಕರ್ಣ...ನಿನ್ನ ಇನ್ನೊಂದು ಜೀವನದ ಮುಖವನ್ನು ತೆರೆದುಕೊ..." ಅಂತಾ ಆ ಸುಂದರ ಸಾನ್ವಿ ಹೇಳಿದ್ದ ಕೇಳಿ ...ಮತ್ತೆ ನನ್ನ ರಮ್ಯಳ ಮಾತುಗಳು ನೆನಪಾಗಿದ್ದವು ..."ನಾಗ್ ...ಜೀವನ ಮೂರು ದಿನ...ಅದರಲ್ಲಿ ಕಾಲೇಜು ಜೀವನ ಮೂರು ಕ್ಷಣ ...ಆ ಮೂರು ಕ್ಷಣಗಳನ್ನು ಸವಿಯೋಣಾ ಬಾ " ಅಂತಾ ಅವಳು ಕರೆದಿದ್ದಕ್ಕೆ , ಎಂದೂ ಕ್ಲಾಸ್ ಬಂಕ್ ಮಾಡದವ ...ಅಂದಿನಿಂದ ಒಮ್ಮೊಮ್ಮೆ ಬಂಕ್ ಮಾಡಿ ...ಸಿನೆಮಾ...ಪಾರ್ಕ್ , ಐಸ್ ಕ್ರೀಮ್ ಶಾಪ್ ಅಂತಾ ಓಡಾಡಿದ್ದು ...ಒಮ್ಮೆಯೂ ನನ್ನ ಮೇಲೆ ಕಂಪ್ಲೇಂಟ್ ಕೇಳದ ಅಪ್ಪ-ಅಮ್ಮ ...ಮನೆಗೆ ಕಾಲೇಜಿನಿಂದ ರಿಪೋರ್ಟ್ ಬಂದಾಗ ಅದನ್ನು ನೋಡಿ ಕೆಂಡಾಮಂಡಲವಾಗಿ ಉಗಿದಿದ್ದು...!


  ಬ್ರೇಕ್ ಬಿದ್ದಿದ್ದು...

  ಇನ್ನೇನು ಹ್ಯಾಪಿ ಎಂಡಿಂಗ್ ಅನ್ನೋವಾಗ್ಲೇ ...ಆ ಸಾನ್ವಿ ..ಕುಡಿತಾ ಕುಣಿತಾ ಕೆಳಗೆ ಬಿದ್ದು ಸತ್ತು ಹೋದಾಗ...ಓಡುತ್ತಿದ್ದ ನನ್ನ ಮನಸಿಗೆ ಒಮ್ಮೆಲೇ ಬ್ರೇಕ್ ಹಾಕಿತ್ತು ...!


  ಅಂದು ನಡೆದಿದ್ದು....

  3rd year ಶುರುವಾಗಿತ್ತು ...ಯಾಕೆ ಇನ್ನೂ ರಮ್ಯ ಬಂದಿಲ್ಲ ಅಂತಾ ಲೈಬ್ರರಿ ನಲ್ಲಿ ಕಾಯ್ತಾ ಕೂತಿರುವಾಗ, ನಿಧಾನವಾಗಿ ಬಂದಿದ್ದಳು ಅವಳು...ಯಾಕೋ ಮುದುಡಿದ ಮೊಗ ...ಬತ್ತಿದ ಕಣ್ಣುಗಳು ..."ಯಾಕೆ ಏನಾಯ್ತು ?" ಅಂತಾ ಜೋರಾಗಿ ಕೇಳಿದಾಗ...ಲೈಬ್ರರಿಯಲ್ಲಿ ಅಕ್ಕ ಪಕ್ಕ ಕೂತಿದ್ದವರೆಲ್ಲಾ ನಮ್ಮನ್ನೇ ನೋಡಿದ್ದ ನೋಡಿ ..ಹುಸ್ ಅಂತಾ ಹೇಳಿ ...ಕೈಗೆ ಒಂದು ಲೆಟರ್ ಕೊಟ್ಟಿದ್ದಳು ...!


  ಅಲ್ಲೇ ಕುಸಿದಿದ್ದೆ

  ಯಾಕೋ ಒಂಥರಾ ನಡುಕ ಕೈಬೆರಳುಗಳಿಗೆ ...ಅದರಲ್ಲೇ ಅವಳು ಕೊಟ್ಟಾ ಲೆಟರ್ ಓದಿ ..."ರಮ್ಯಳ ಅಪ್ಪನಿಗೆ ಬೇರೆ ಸ್ಟೇಟ್ಗೆ ಜಾಬ್ ಟ್ರಾನ್ಸ್ ಫರ್ ಆಗಿದ್ದು ...ನಾಳೇನೇ ಅವರೆಲ್ಲರೂ ಹೋಗಬೇಕಾಗಿದ್ದುದ ಕೇಳಿ ..." ಏನು ಮಾಡಬೇಕು ಅಂತಾ ತಿಳಿಯದೆ ತಲೆ ಮೇಲೆ ಕೈಹಿಟ್ಟು ಕೂತಿದ್ದೆ ! ಸಾರೀ ಕಣೋ...ದೂರ ಹೋದ್ರು ಸಹ...ನಾ ಪತ್ರ ಬರಿತಿರ್ತೀನಿ ...ನೀನು ಸಹಾ ಬರಿತಿರು (ಈಗಿನ ಹಾಗೇ ಅವಾಗ ಸೆಲ್ ಫೋನ್ , ಫೇಸ್ಬುಕ್ , ವಾಟ್ಸ್ ಆಪ್ ಇರ್ಲಿಲ್ಲವಲ್ಲಾ ?) ...ಚೆನ್ನಾಗಿ ಓದಿ ಪಾಸ್ ಮಾಡ್ಕೊಂಡು ಒಳ್ಳೆ ಕೆಲಸ ಸೇರು ..ಮತ್ತೆ ಜೊತೆಯಾಗುವಾ" ಅಂತಾ ಒಲ್ಲದಾ ಮನಸಲ್ಲೇ ಅವಳು ಹೊರಟು ಹೋದಾಗ ...ಅಲ್ಲೇ ಕುಸಿದಿದ್ದೆ ...!


  ಕಾಗದದ ದೋಣಿಯಲ್ಲಿ...

  "ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ ?
  ಕಾಣಿಸಿದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ ?
  ಹಗುರಾಗಿತೇನು ನನ್ನೆದೆಯ ಭಾರ ?
  ಕಂಡಿತೇನೋ ತಂಪಾದ ತೀರಾ ..?
  ಸಿಕ್ಕಿತೇ ಮುಂದಿನ ದಾರಿ ..?
  ನನ್ನೆಲ್ಲ ಕಲ್ಪನೆ ಮೀರಿ ...ಇನ್ನೊಂದೇ ವಿಸ್ಮಯ ದಾರಿ ?"


  ಅಮೇರಿಕಾಗೆ ಓಡಿ ಬಂದೆ....

  ಅಂತೂ ಇಂತೂ ಅವಳ ನೆನಪಲಿ ....ಇಂಜಿನಿಯರಿಂಗ್ ಡಿಗ್ರಿ ಮುಗಿಸಿ ...ಹೇಗೋ ಒಂದು ಕೆಲಸ ಸಂಪಾದಿಸಿ ...
  ಎಷ್ಟು ಹುಡುಕಿದರೂ ಅವಳು ಸಿಗದೇ ...
  ಅಲ್ಲಿದ್ದರೆ ಮತ್ತೆ ಅವಳ ನೆನಪು ಕಾಡುವುದೆಂದು
  ಸಾವಿರಾರು ಮೈಲಿ ದೂರದ ಈ ಅಮೇರಿಕಾಕ್ಕೆ ಓಡಿ ಬಂದೆ , ನಾ ಅಂದು ...!
  ಹೆಕ್ಕಿ ತೆಗೆದು ಬಿಟ್ಟೆಯಲ್ಲ
  ಮತ್ತೆ ಆ ಕಾಲೇಜು ದಿನಗಳ
  ನೆನಪಿನ ಪುಟ್ಟ ಜೋಳಿಗೆ ...
  ಯಾಕೆ ನೋವ ಮಾಡಿದೆ , ನನ್ನೀ ಮನಕೆ? ಶೆಟ್ರೇ ...ನೀವಿಂದು !


  'ಕಿರಿಕ್ ಪಾರ್ಟಿ' ನೋಡಿದ ಮೇಲೆ

  ಏನೇ ಆಗಲಿ ...ರಕ್ಷಿತ್ ಶೆಟ್ಟಿ ...ತುಂಬಾ ಮೆಚ್ಚುಗೆಯಾಯ್ತು ನಿಮ್ಮ ಕಿರಿಕ್ ಪಾರ್ಟಿ ...ಕಥೆ , ಸಂಭಾಷಣೆ , ನಿಮ್ಮೆಲ್ಲರ ಮನೋಜ್ಞ ಅಭಿನಯ , ಅಬ್ಬರವಿಲ್ಲದ ಹೀರೋಯಿಸಂ , ಸುಂದರ ಮಲ್ನಾಡ್ ಕಾಲೇಜು ಪರಿಸರ , ಇಂಪಾದ ಹಾಡುಗಳು-ಸಂಗೀತ , ರಿಷಬ್ ಶೆಟ್ಟಿ ಅವರ ನಿರ್ದೇಶನ ...Two Thumbs Up.....ಮುಂದೆಯೂ ಹೀಗೆಯೇ ನಿಮ್ಮಿಂದ ಒಳ್ಳೊಳ್ಳೆ ಕನ್ನಡ ಸಿನೆಮಾಗಳು ಮೂಡಿ ಬರಲಿ ...ಎಲ್ಲೆಡೆ ಕನ್ನಡದ ಕಂಪು ಹೆಚ್ಚಲಿ ಅಂತಾ ಬಯಸುತ್ತಾ ಮನೆಕಡೆಗೆ ಹೊರಟಿರುವ ...


  ಕನ್ನಡಿಗ ...
  ನಾಗರಾಜ್.ಎಂ
  NC USA


  "ತಿರಬೋಕಿ ಜೀವನ ಸಾಕಾಗಿದೆ...
  ಈ IT ಕೆಲಸ ಬೋರಾಗಿದೆ ...
  ಕಿರಿಕ್ ಪಾರ್ಟಿಗೆ ಹೋಗಿ
  ಮತ್ತೆ ರಮ್ಯಳ ನೆನಪು ಕಾಡಿದೆ...
  ಜೊತೆಗೆ ಮನಕ್ಕೆ ಸ್ವಲ್ಪ ಕಿರಿಕ್ ಸಹಾ ಆಗಿದೆ..." ):


  English summary
  Kannada Actor Rakshit Shetty starrer Kannada Movie 'Kirik Party'review by Oneindia Kannada/Filmibeat Kannada Reader, NRI Nagaraja.M

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more