ವಿಮರ್ಶೆ: ಶಿವಾಜಿನಗರ ಪಕ್ಕಾ ಗಾಂಧಿನಗರ ಸಿನಿಮಾ
"ನಾನು ಕೊಡೋ ಒದೆಗೂ ನನ್ನ ಹೈಟ್ ಗೂ ಸಂಬಂಧನೇ ಇರಲ್ಲ" ಎಂದು ಚಿತ್ರದ ನಾಯಕ ನಟ ದುನಿಯಾ ವಿಜಯ್ ಪ್ರತಿ ಫೈಟ್ ಸೀಕ್ವೆನ್ಸ್ ನಲ್ಲೂ ಡೈಲಾಗ್ ಹೊಡೆಯುತ್ತಾರೆ. ಇದೇ ಡೈಲಾಗನ್ನು ಸ್ವಲ್ಪ ಬದಲಾಯಿಸಿಕೊಂಡರೆ ಹೀಗೂ ಹೇಳಬಹುದು...ಶಿವಾಜಿನಗರದ ಚಿಕನ್ ಗೂ ಗಾಂಧಿನಗರ ಮಸಾಲೆಗೂ ಸಂಬಂಧವೇ ಇರಲ್ಲ.
ಚಿತ್ರದಲ್ಲಿ ದುನಿಯಾ ವಿಜಯ್ ರಕ್ತದೋಕುಳಿಯಾಡುತ್ತಾರೆ. ಅಡ್ಡಬಂದವರನ್ನು ಅಡ್ಡಡ್ಡ ಸೀಳುತ್ತಾರೆ. ನಡುರಸ್ತೆಯಲ್ಲೇ ಡಾನ್ ಒಬ್ಬನ ಕತ್ತು ಸೀಳುತ್ತಾರೆ. ನಡುವೆ ನಡುವೆ "ಅಲ್ಲಾ ಕಿ ದುವಾ ಕರ್ನಾ, ಧಮ್ ಕಿ ಮತ್ ದೇನಾ, ದುನಿಯಾ ಮೇರಾ ಹೈ" ಎಂದು ಉರ್ದು ಡೈಲಾಗ್ ಗಳು ಉದುರುತ್ತವೆ.
ಟಿವಿ ಲೈವ್ ಕಾರ್ಯಕ್ರಮದಲ್ಲೇ ಮರ್ಡರ್ ಆಗುತ್ತದೆ. ರೌಡಿಯೊಬ್ಬ ಐಪಿಎಸ್ ಆಫೀಸರ್ ನನ್ನು ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಲ್ಲಿ ತಲೆಗೆ ಗುಂಡಿಟ್ಟು ಸಾಯಿಸುತ್ತಾನೆ. ಏಕೆಂದರೆ ಇದು ಬಸವನಗುಡಿಯಲ್ಲ ಶಿವಾಜಿನಗರ.
ಚಿತ್ರ: ಶಿವಾಜಿನಗರ
ನಿರ್ಮಾಣ: ರಾಮು ಫಿಲಂಸ್
ಕಥೆ, ಚಿತ್ರಕಥೆ, ನಿರ್ದೇಶನ: ಪಿ.ಎನ್.ಸತ್ಯ
ಸಂಗೀತ: ಜೆಸ್ಸಿ ಗಿಫ್ಟ್
ಹಿನ್ನೆಲೆ ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಸೆಲ್ವಂ
ಸಂಭಾಷಣೆ: ರವಿ ಶ್ರೀವತ್ಸ
ಸಾಹಸ ಸಂಯೋಜನೆ: ರಾಮ್ ಲಕ್ಷ್ಮಣ್, ರವಿ ವರ್ಮ, ಗಣೇಶ್ ಹಾಗೂ ಫಳಣಿ ರಾಜ್
ಪಾತ್ರವರ್ಗ: ದುನಿಯಾ ವಿಜಯ್, ಪರೂಲ್ ಯಾದವ್, ಪ್ರದೀಪ್ ರಾವತ್, ಅಭಿಮನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಷ್, ಸತ್ಯಜಿತ್, ಹುಳಿವಾನ್ ಗಂಗಾಧರ, ಶ್ರೀ ನಿವಾಸ್ ಪ್ರಭು, ಮೈಸೂರು ಮಲ್ಲೇಶ್, ಅಡಿಗ, ಅಶೋಕ್ ರಾವ್.
ಮಾಸ್ ಎಲಿಮೆಂಟ್ಸ್ ನಿಂದ ತುಂಬಿ ತುಳುಕಾಡುವ ಚಿತ್ರ
ಒಂದು ಮಾಸ್ ಚಿತ್ರಕ್ಕೆ ಏನೆಲ್ಲಾ ಬೇಕೋ ಅಷ್ಟೂ ಎಲಿಮೆಂಟ್ಸ್ ಚಿತ್ರದಲ್ಲಿವೆ. ಭರ್ಜರಿ ಫೈಟ್ಸ್ ಇವೆ, ಫ್ಯಾಮಿಲಿ ಸೆಂಟಿಮೆಂಟು, ಐಟಂ ಹಾಡು, ರೌಡಿ ಜಗತ್ತಿನ ಸಂಭಾಷಣೆ (ರವಿ ಶ್ರೀವತ್ಸ) ಹೀಗೆ ಏನು ಬೇಕೋ ಅಷ್ಟೂ ಮಸಾಲೆಗಳನ್ನು ಚೆನ್ನಾಗಿ ಅರೆದು ಕೊಟ್ಟಿದ್ದಾರೆ ನಿರ್ದೇಶಕ ಪಿ.ಎನ್.ಸತ್ಯ. ಆದರೆ ರುಚಿ ಮಾತ್ರ ಬದಲಾಗಿಲ್ಲ. ಅದೇ ಗಾಂಧಿನಗರದ ಹಳೆ ರುಚಿ.
ಶಿವಾಜಿನಗರದ ನಡುರಸ್ತೆಯಲ್ಲೇ ಫಯಾಜ್ ಫಿನಿಶ್
ಶಿವಾಜಿನಗರದಲ್ಲಿ ಸಭ್ಯವಾಗಿ ವಾಸವಾಗಿರುವ ಒಂದು ಕುಟುಂಬದ ಕಥೆ ಇದು. ಈ ಸುಂದರ ಸಂಸಾರದಲ್ಲಿ ಶಿವಾಜಿನಗರ ಡಾನ್ ಫಯಾಜ್ (ಆಶಿಶ್ ವಿದ್ಯಾರ್ಥಿ) ಎಂಟ್ರಿ ಕೊಡುವ ಮೂಲಕ ಏನೆಲ್ಲಾ ಅನಾಹುತಗಳಾಗುತ್ತದೆ? ಆ ಮನೆಯ ಖತರ್ನಾಕ್ ಹುಡುಗ ರಾಮ್ (ದುನಿಯಾ ವಿಜಯ್) ಅವನನ್ನು ಯಾಕೆ ಶಿವಾಜಿನಗರ ನಡುರಸ್ತೆಯಲ್ಲೇ ಎತ್ತುತ್ತಾನೆ ಎಂಬುದೇ ಚಿತ್ರದ ಕಥಾಹಂದರ.
ಆಶಿಶ್ ವಿದ್ಯಾರ್ಥಿ ಎಂದಿನಂತೆ ಅಭಿನಯ
ಡಾನ್ ಫಯಾಜ್ ಪಾತ್ರದಲ್ಲಿ ಆಶಿಶ್ ವಿದ್ಯಾರ್ಥಿ ಎಂದಿನ ಅಭಿನಯ ನೀಡಿದ್ದಾರೆ. ಒಬ್ಬ ರೌಡಿ ಎಂದರೆ ಹೀಗೆ ಇರುತ್ತಾನೆ, ಅವನು ಬದಲಾಗಲ್ಲ. ಕಡೆಗೆ ಹೀರೋ ಕೈಯಲ್ಲಿ ಸಾಯುತ್ತಾನೆ ಎಂಬ ನಿಯಮ ಯಾರು ಬರೆದುಕೊಟ್ಟರೋ ಏನೋ. ಈ ಪಾತ್ರವೂ ಅದೇ ರೀತಿ ಇದೆ.
ಸ್ಟುಡೆಂಟ್ ಪಾತ್ರದಲ್ಲಿ ದುನಿಯಾ ವಿಜಯ್
ಇನ್ನು ಚಿತ್ರದ ನಾಯಕ ನಟ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ. ಫೈನಲ್ ಸೆಮಿಸ್ಟರ್ ಸ್ಟುಡೆಂಡ್ ಎಂಬುದಷ್ಟೇ ಗೊತ್ತು. ಯಾವ ಕೋರ್ಸ್ ಮಾಡುತ್ತಿರುತ್ತಾನೆ ಎಂಬ ಬಗ್ಗೆ ಚಿತ್ರದಲ್ಲಿ ವಿವರ ಸಿಗಲ್ಲ. ಏಕೆಂದರೆ ಇದು ಸ್ಟುಡೆಂಟ್ ಸಿನಿಮಾ ಅಲ್ಲ.
ಹೀರೋಗೆ ಫಿದಾ ಆಗುವ ಹೀರೋಯಿನ್
ರಾಮ್ ನ ಡ್ಯಾಶ್ ಅಂಡ್ ಡೇರಿಂಗ್ ವ್ಯಕ್ತಿತ್ವಕ್ಕೆ ಪವಿತ್ರಾ (ಪರುಲ್ ಯಾದವ್) ಫಿದಾ ಆಗುತ್ತಾಳೆ. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿ ನಾಯಕ ಹುಡುಗಿ ಹಿಂದೆ ಬಿದ್ದರೆ ಇಲ್ಲಿ ನಾಯಕಿ ಹೀರೋ ಹಿಂದೆ ಬೀಳುತ್ತಾಳೆ. ಪರುಲ್ ಯಾದವ್ ಅಭಿನಯ ದುನಿಯಾ ವಿಜಯ್ ಮಾಸ್ ಅಭಿನಯದ ಮುಂದೆ ಮಂಕಾಗಿದೆ.
ಅವಿನಾಶ್ ಅವರದು ಸ್ವಲ್ಪ ಭಿನ್ನ ಪಾತ್ರ
ಇನ್ನು ದುನಿಯಾ ವಿಜಯ್ ಅವರ ತಂದೆಯಾಗಿ ಅವಿನಾಶ್ ಅವರದು ಸ್ವಲ್ಪ ಭಿನ್ನವಾದ ಪಾತ್ರ. ಎರಡು ಮದುವೆಯಾಗಿ ಅವರು ಪಡುವ ಪಾಡು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಆದರೆ ನೇಣು ಹಾಕಿಕೊಂಡ ಸೀನು ನೋಡಿದಾಗ ಅಷ್ಟು ದೊಡ್ಡ ಮರ ಹೇಗೆ ಹತ್ತಿದರೋ ಎಂಬ ಅನುಮಾನ ಪ್ರೇಕ್ಷಕರಿಗೆ ಅಚ್ಚರಿಯಾಗಿಯೇ ಉಳಿಯುತ್ತದೆ!
ತಾಯಿಯಾಗಿ ಗಮನಸೆಳೆಯುವ ತ್ರಿವೇಣಿ
ಸರಿಸುಮಾರು ಇಪ್ಪತ್ತು ವರ್ಷಗಳ ಬಳಿಕ ಬಣ್ಣ ಹಚ್ಚಿರುವ ತ್ರಿವೇಣಿ ಅವರದು ತಾಯಿಯ ಪಾತ್ರ. ವರನಟ ಡಾ.ರಾಜ್ ಕುಮಾರ್ ಅವರ ಜೊತೆಗೆ 'ಜೀವನ ಚೈತ್ರ' ಚಿತ್ರವೇ ಅವರು ಅಭಿನಯಿಸಿದ್ದ ಕೊನೆಯ ಚಿತ್ರ. ಇದೀಗ ದುನಿಯಾ ವಿಜಯ್ ಅವರ ತಾಯಿಯಾಗಿ ಎಂಟ್ರಿಕೊಟ್ಟು ಗಮನಸೆಳೆದಿದ್ದಾರೆ.
ಚಿತ್ರದ ಸಂಗೀತ, ಛಾಯಾಗ್ರಹಣ ಓಕೆ
ಜೆಸ್ಸಿ ಗಿಫ್ಟ್ ಅವರ ಸಂಗೀತದ ಒಂದೆರಡು ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ. ಅರ್ಜುನ್ ಜನ್ಯಾ ಅವರ ಹಿನ್ನೆಲೆ ಸಂಗೀತ ಓಕೆ. ಸೆಲ್ವಂ ಅವರ ಛಾಯಾಗ್ರಹಣದಲ್ಲಿ ಹೊಸತನವಿಲ್ಲದಿದ್ದರೂ ಕಥೆಗೆ ನ್ಯಾಯ ಒದಗಿಸಿದೆ.
ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ
ಈ ಚಿತ್ರಕ್ಕೆ ಮೂವರು ನಾಲ್ಕು ಮಂದಿ ಸಾಹಸ ನಿರ್ದೇಶಕರು. ಅಲ್ಲಿಗೆ ಯಾವುದಕ್ಕೆ ಪ್ರಾಮುಖ್ಯತೆ ಹೆಚ್ಚು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ದುನಿಯಾ ವಿಜಯ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಶಿವಾಜಿನಗರ ಎಂದರೆ ಬಹುತೇಕ ಮುಸ್ಲಿಂ ಸಮುದಾಯವೇ ಇರುವ ಪ್ರದೇಶ. ಹಿಂದೂ-ಮುಸ್ಲಿಂ ಸಂಬಂಧಗಳಿಗೆ ಧಕ್ಕೆ ಬಾರದಂತೆ ಚಿತ್ರವನ್ನು ಜಾಗ್ರತೆಯಾಗಿ ಹ್ಯಾಂಡಲ್ ಮಾಡಿದ್ದಾರೆ ನಿರ್ದೇಶ ಪಿ.ಎನ್.ಸತ್ಯ. ಅಷ್ಟರ ಮಟ್ಟಿಗೆ ಅವರು ಗೆದ್ದಿದ್ದಾರೆ ಎಂದು ಹೇಳಬಹುದು.


Click it and Unblock the Notifications











