»   » 'ಉಪೇಂದ್ರ ಮತ್ತೆ ಬಾ' ವಿಮರ್ಶೆ: ರಸಿಕರ 'ರಾಜು' ಫ್ಯಾಮಿಲಿ ಕಥೆ

'ಉಪೇಂದ್ರ ಮತ್ತೆ ಬಾ' ವಿಮರ್ಶೆ: ರಸಿಕರ 'ರಾಜು' ಫ್ಯಾಮಿಲಿ ಕಥೆ

Posted By:
Subscribe to Filmibeat Kannada
upendra matte baa movie review | ಉಪೇಂದ್ರ ಮತ್ತೆ ಬಾ' ಚಿತ್ರ ವಿಮರ್ಶೆ | Filmibeat Kannada

'ಉಪೇಂದ್ರ ಮತ್ತೆ ಬಾ' ತೆಲುಗಿನ 'ಸೊಗ್ಗಾಡಿ ಚಿನ್ನಿನಾಯನ' ಚಿತ್ರದ ರಿಮೇಕ್. ತೆಲುಗಿನಲ್ಲಿ ಈ ಚಿತ್ರ ನೋಡಿದ್ದರೂ, ಚಿತ್ರದ ಕಥೆ ಗೊತ್ತಿದ್ದರೂ, ಈ ಚಿತ್ರವನ್ನ ಮತ್ತೆ ನೋಡಬೇಕು ಎನಿಸುವುದಕ್ಕೆ ಕಾರಣ ಒನ್ ಅಂಡ್ ಒನ್ಲಿ ಉಪೇಂದ್ರ. 'ಉಪೇಂದ್ರ ಮತ್ತೆ ಬಾ' ಮಜವಾದ ಫ್ಯಾಮಿಲಿ ಸಿನಿಮಾ.

Rating:
3.0/5

ಸಿನಿಮಾ : ಉಪೇಂದ್ರ ಮತ್ತೆ ಬಾ

ನಿರ್ಮಾಣ: ಹಯಗ್ರೀವ ಎಂಟರ್ ಪ್ರೈಸಸ್

ನಿರ್ದೇಶನ: ಎನ್.ಅರುಣ್ ಲೋಕನಾಥ್

ಸಂಗೀತ: ವಿ.ಶ್ರೀಧರ್ ಸಂಭ್ರಮ್

ಸಂಕಲನ: ಜೋನಿ ಹರ್ಷ

ಛಾಯಾಗ್ರಹಣ : ಸ್ವಾಮಿ.ಜಿ

ತಾರಾಗಣ: ಉಪೇಂದ್ರ, ಪ್ರೇಮಾ, ಶೃತಿ ಹರಿಹರನ್, ಸಾಧು ಕೋಕಿಲ, ಅವಿನಾಶ್, ವಸಿಷ್ಟ, ಚಾಂದಿನಿ ಮತ್ತಿತರರು.

ಬಿಡುಗಡೆ: ನವೆಂಬರ್ 17, 2017

ಉಪೇಂದ್ರ 'ರಾಜು' ಕುಟುಂಬದ ಕಥೆ

'ಉಪೇಂದ್ರ ಮತ್ತೆ ಬಾ' ಸಿನಿಮಾ... ಉಪೇಂದ್ರ ರಾಜು(ಉಪೇಂದ್ರ) ಕುಟುಂಬದ ಕಥೆ. ಶಿವಪುರ ಎನ್ನುವ ಊರಿನ ದೇವಸ್ಥಾನ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಉಪೇಂದ್ರ ರಾಜು ಕುಟುಂಬ, ಊರಿನ ದೊಡ್ಡ ಕುಟುಂಬ. ಆತನ ಮಗ ರಾಮು(ಉಪೇಂದ್ರ). ಮಗ ಹುಟ್ಟುವುದಕ್ಕೂ ಮುನ್ನವೇ ತಂದೆ ಅಪಘಾತದಲ್ಲಿ ನಿಧನರಾಗಿರುತ್ತಾನೆ. ವಿದೇಶದಲ್ಲಿ ಬೆಳೆದ ರಾಮು ಮತ್ತೆ ಆತನ ಪತ್ನಿ ಸೀತಾ (ಶೃತಿ ಹರಿಹರನ್) ವಿಚ್ಛೇದನಕ್ಕಾಗಿ ತಮ್ಮ ಹಳ್ಳಿಗೆ ಬರುತ್ತಾರೆ. ಆ ನಂತರ ಅಪ್ಪ ಉಪೇಂದ್ರ ರಾಜು ಆತ್ಮವಾಗಿ ಆಗಾಗ ರಾಮು ಮೇಲೆ ಬಂದು ಆತನ ಕುಟುಂಬವನ್ನು ಒಂದು ಮಾಡುವುದಕ್ಕೆ ಪ್ರಯತ್ನ ಮಾಡುತ್ತಾನೆ. ಮಗನ ಜೀವನವನ್ನು ಮಾತ್ರವಲ್ಲದೆ ಕೊನೆಗೆ ಆತನ ಜೀವವನ್ನು ಸಹ ಉಪೇಂದ್ರ ರಾಜು ಕಾಪಾಡುತ್ತಾನೆ. ಇದು ಚಿತ್ರದ ಕಥೆ.

ಕುತೂಹಲಕಾರಿ ಅಂಶಗಳು

ಸಿನಿಮಾದ ಕಥೆ ಹೀಗಿದ್ದರೂ ಕೂಡ ಉಪೇಂದ್ರ ರಾಜು ಸಾವಿಗೆ ಕಾರಣ ಏನು..?. ಮಗ ರಾಮು ಪ್ರಾಣಕ್ಕೆ ಯಾಕೆ ಅಪಾಯ ಆಗುತ್ತದೆ..? ಜೊತೆಗೆ ಬಹು ಮುಖ್ಯವಾಗಿ ಶಿವಪುರದ ಆ ದೇವಸ್ಥಾನ ಚಿತ್ರದಲ್ಲಿ ಪ್ರಮುಖವಾಗಿದೆ. ಇಡೀ ಚಿತ್ರದ ಕಥೆಯ ಸತ್ವ ಈ ಅಂಶಗಳಲ್ಲಿ ಅಡಗಿದೆ. ಹೀಗಾಗಿ, ಅದನ್ನು ತೆರೆ ಮೇಲೆ ನೋಡಬೇಕು.

ಮಜಾ ನೀಡುವ ಉಪೇಂದ್ರ ರಾಜು

'ಉಪೇಂದ್ರ ಮತ್ತೆ ಬಾ' ಒಂದು ಫ್ಯಾಮಿಲಿ ಸಿನಿಮಾ. ಹಾಗಂತ ಇಲ್ಲಿ ಹೆಚ್ಚು ಸೆಂಟಿಮೆಂಟ್ ಇಲ್ಲ. ಗಂಡ ಹೆಂಡತಿಯ ಕಥೆ ಇದೆ, ಅಪ್ಪ ಮಗನ ಕಥೆ ಇದೆ. ಆದರೆ ಇವೆಲ್ಲ ರೆಗ್ಯೂಲರ್ ಸಿನಿಮಾ ಶೈಲಿಗಳಲ್ಲಿ ಇಲ್ಲ. ಇಲ್ಲಿ ಆತ್ಮವೂ ಇದೆ. ಆದರೆ ಹಾರರ್ ಸಿನಿಮಾ ಇಲ್ಲ. ಚಿತ್ರದಲ್ಲಿ ರಸಿಕರರಾಜನಾಗಿರುವ ಉಪೇಂದ್ರ ರಾಜು ನೋಡುಗರಿಗೆ ಸಿಕ್ಕಾಪಟ್ಟೆ ಮಜಾ ನೀಡುತ್ತಾನೆ.

ಅಭಿನಯ

ರೀಮೇಕ್ ಆದರೂ ಈ ಸಿನಿಮಾ ನೋಡಬೇಕು ಎನಿಸುವುದಕ್ಕೆ ಮೊದಲ ಮತ್ತು ಕೊನೆಯ ಕಾರಣ ಉಪೇಂದ್ರ. ಉಪೇಂದ್ರ ಅತ್ತ ಅಪ್ಪನಾಗಿ ಇತ್ತ ಮಗನಾಗಿ ಎರಡು ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಇನ್ನು ಉಪ್ಪಿ - ಪ್ರೇಮಾ ಕಾಂಬಿನೇಶನ್ ಚಿತ್ರದ ಹೈಲೈಟ್ ಗಳಲ್ಲಿ ಒಂದು. ಶೃತಿ ಹರಿಹರನ್ ತಮ್ಮ ರೂಪ, ಅಭಿನಯ ಎರಡರಲ್ಲಿಯೂ ಇಷ್ಟ ಆಗುತ್ತಾರೆ. ನಟಿಯರಾದ ಶೃತಿ, ಹರ್ಷಿಕಾ ಪೂಣಚ್ಚ, ಚಾಂದಿನಿ, ದೀಪಿಕಾ ಕಾಪ್ಸೆ ಹಾಗೆ ಬಂದು ಹೀಗೆ ಹೋಗುತ್ತಾರೆ. ಉಳಿದಂತೆ ಅವಿನಾಶ್, ವಸಿಷ್ಟ, ಟೆನಿಸ್ ಕೃಷ್ಣ, ಸಾಧು ಕೋಕಿಲ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನೂ ಏನೋ ಬೇಕಿತ್ತು

ಸಿನಿಮಾ ನೋಡಿದಾಗ ಎಲ್ಲರಿಗೂ 'ಇನ್ನೂ ಏನೋ ಬೇಕಿತ್ತು' ಎನ್ನುವ ಭಾವ ಹುಟ್ಟುತ್ತದೆ. ದೊಡ್ಡ ನಿರೀಕ್ಷೆ ಇಟ್ಟು ಹೋದರೆ ಸ್ವಲ್ಪ ನಿರಾಸೆ ಆಗುತ್ತದೆ. ಉಪೇಂದ್ರ ಅವರ ಪರಮ ಅಭಿಮಾನಿಗಳ ಮನ ತಣಿಸುವ ಡೈಲಾಗ್, ವಿಭಿನ್ನತೆ, ವೇಗ ಚಿತ್ರದಲ್ಲಿ ಇಲ್ಲ. ಚಿತ್ರಕಥೆಯಲ್ಲಿ ನಿರ್ದೇಶಕರು ಇನ್ನಷ್ಟು ಹೊಸತನ ತರಬೇಕಿತ್ತು.

ಮಲಗಿಸುವ ಮ್ಯೂಸಿಕ್

ಸಿನಿಮಾದ ಮೊದಲ ಹಾಡು ಬಿಟ್ಟರೆ, ಇನ್ಯಾವ ಹಾಡುಗಳು ಕೇಳಬೇಕು ಎನಿಸುವುದಿಲ್ಲ. ಚಿತ್ರ ನೋಡುತ್ತಿದ್ದಾಗ ಹಾಡು ಬಂದರೆ, ಯಾವಾಗ ಮುಗಿಯುತ್ತದೆಯೋ ಎಂದು ಪ್ರೇಕ್ಷಕ ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತಾರೆ. ವಿ.ಶ್ರೀಧರ್ ಸಂಭ್ರಮ್ ಮ್ಯೂಸಿಕ್ ನಲ್ಲಿ ಅಷ್ಟೊಂದು ಶಕ್ತಿ ಇಲ್ಲ. ಇದ್ದಿದ್ದರೆ ಚಿತ್ರ ಇನ್ನಷ್ಟು ಹತ್ತಿರ ಆಗುತ್ತಿತ್ತು.

ಉಪ್ಪಿಗಾಗಿ ನೋಡಬಹುದು

'ಉಪೇಂದ್ರ ಮತ್ತೆ ಬಾ' ಚಿತ್ರವನ್ನು ಒಮ್ಮೆ ಆರಾಮಾಗಿ ನೋಡಬಹುದು. ಜಾಸ್ತಿ ತಲೆಕೆಡಿಸಿಕೊಳ್ಳದೆ ಉಪೇಂದ್ರ ರಾಜು ಕುಟುಂಬದ ಕಥೆಯನ್ನು ನೋಡಿ ಬರಬಹುದು.

English summary
Read Kannada Movie 'Upendra matte baa' review. 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾದ ವಿಮರ್ಶೆ ಓದಿರಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada