ವಿಮರ್ಶಕರ ಪ್ರಕಾರ ಉಪ್ಪಿಟ್ಟು ರುಚಿ ಹೇಗಿದೆ?
ರಾಜ್ಯದಾದ್ಯಂತ 'ಉಪ್ಪಿ-2' ಹವಾ ಜೋರಾಗಿದೆ. 'ನಾನು-ನೀನು' ಅಂತ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಕನ್ಫ್ಯೂಷನ್ ಇದ್ದರೂ, ಪ್ರೇಕ್ಷಕರು ಮಾತ್ರ ಉಪ್ಪಿಟ್ಟು ತಿನ್ನೋಕೆ ಥಿಯೇಟರ್ ಗಳತ್ತ ಧಾವಿಸುತ್ತಿದ್ದಾರೆ.
ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದ 'ಉಪ್ಪಿ-2' ಅಭಿಮಾನಿಗಳಿಗೆ ರುಚಿಸಿರಬಹುದು. ಆದ್ರೆ, ವಿಮರ್ಶಕರಿಗೆ ಒಗ್ಗರಣೆ ಸ್ವಲ್ಪ ಜಾಸ್ತಿ ಆಯ್ತು ಅನಿಸ್ತಾ? ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಫಿಲಾಸಫಿ ಬಗ್ಗೆ ವಿಮರ್ಶಕರು ಏನು ಹೇಳ್ತಾರೆ ಗೊತ್ತಾ? [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]
ಕನ್ನಡದ ಜನಪ್ರಿಯ ಪತ್ರಿಕೆಗಳು 'ಉಪ್ಪಿ-2' ಕುರಿತು ಪ್ರಕಟಿಸಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. 'ಉಪ್ಪಿ-2' ಬಗ್ಗೆ ಯಾರ್ಯಾರು ಏನು ಹೇಳಿದ್ದಾರೆ ಅಂತ ನೀವೇ ಓದಿ....
ಕಲಸುಮೇಲೋಗರದಲ್ಲಿ ಅರ್ಥದ ಹುಡುಕಾಟ - ಪ್ರಜಾವಾಣಿ
ಕಳೆದು ಹೋದುದರ ಬಗ್ಗೆಯೇ ಯೋಚಿಸುತ್ತ ಕೂರುವವನು ಕೊರಗುತ್ತಾನೆ, ಮುಂದೆ ಆಗುವುದರ ಬಗ್ಗೆ ಈಗಲೇ ಯೋಚಿಸುವವನು ತಲೆ ಕೆಡಿಸಿಕೊಳ್ಳುತ್ತಾನೆ, ಅವನಿಂದ ಏನು ಮಾಡಲೂ ಸಾಧ್ಯವಿಲ್ಲ. ಕಳೆದಿದ್ದರಿಂದ ಕಲಿತು, ಬರುವುದನ್ನು ಎದುರಿಸುವ ವಾಸ್ತವ ಪ್ರಜ್ಞೆಯ ತಣ್ಣನೆ ಮಿದುಳು ಇರುವವ ಯಾವತ್ತಿಗೂ ಸಂತೋಷವಾಗಿರುತ್ತಾನೆ. ಇದು ‘ಉಪ್ಪಿ-2' ಚಿತ್ರದಲ್ಲಿ ಉಪೇಂದ್ರ ಹೇಳಹೊರಟಿರುವ ಸತ್ಯ. - ಗಣೇಶ್ ವೈದ್ಯ
ಉಪ್ಪಿಟ್ಟು: ಫುಡ್ ಫಾರ್ ತಾಟು ಮತ್ತು ಥಾಟು - ಉದಯವಾಣಿ
ಉಪ್ಪಿಟ್ಟಿಗೆ ಗ್ಲಾಮರ್ ಟಚ್ಚಾ ಉಂಟು. ತುಂಡುಲಂಗ ಹಾಕಿಕೊಂಡವರೂ ಉಪ್ಪಿಟ್ಟು ಮಾಡಬಹುದು. ತಲೆಕೆಳಗಾಗಿ ನಿಂತು ಪ್ರಾಸಬದ್ಧ ಶೈಲಿಯ ಸಂಭಾಷಣೆ ಹೇಳುತ್ತಾ ಹಳೆಯ ನೆನಪುಗಳನ್ನು ಮರುಕಳಿಸಲು ಯತ್ನಿಸಬಹುದು. ಬದುಕಲ್ಲಿ ಯಾವುದೂ ಶಾಶ್ವತವಲ್ಲ, ಯಾವುದೂ ಅಶಾಶ್ವತ ಅಲ್ಲ, ಉಪ್ಪಿಟ್ಟು ತಿನ್ನುವುದನ್ನು ಬಿಟ್ಟು ನಿನ್ನೆ ನಾಳೆಯ ಬಗ್ಗೆ ಯೋಚಿಸಬೇಕಾ? ಉಪ್ಪಿಟ್ಟಿನ ಖುಷಿಯನ್ನು ಕಳೆದುಕೊಳ್ಳಬೇಕಾ? ಉಪ್ಪಿಟ್ಟು ಹೇಗೆ ತಿನ್ನುವುದು ಅನ್ನುವ ಸಂದೇಹ ಬೇಕಾ? ವೇರ್ ದೇರ್ ಈಸ್ ಎ ವಿಲ್, ದೇರ್ ಈಸ್ ಎ ವೇ. ಒಗ್ಗಟ್ಟಿನಲ್ಲಿ ಬಲವಿದೆ, ಉಪ್ಪಿಟ್ಟಿನಲ್ಲಿ ಒಲವಿದೆ. ಖುಷಿ ಬಂದರೆ ಲಕ್ಷ್ಮಿಯೂ ಬರುತ್ತಾಳೆ. ಲಕ್ಷ್ಮಿ ಬಂದರೆ ಖುಷಿಯೂ ಇರುತ್ತಾಳೆ. ಲಕ್ಷ್ಮಿಗೋಸ್ಕರ ಖುಷಿಯೋ ಖುಷಿಗೋಸ್ಕರ ಲಕ್ಷ್ಮಿಯೋ ಎಂದು ಯೋಚಿಸದೇ ಉಪ್ಪಿಟ್ಟು ಸವಿಯಬೇಕು. - ಜೋಗಿ
ಉಪ್ಪಿ-2: ಅಂತ್ಯಕಾಣದ ಉಪ್ಪಿ ಫಿಲಾಸಫಿ - ವಿಜಯ ಕರ್ನಾಟಕ
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಉಪ್ಪಿ 2' ಪ್ರೇಕ್ಷಕರ ತಲೆಗೆ ಹುಳ ಬಿಡುವಂತಹ ಸಿನಿಮಾ. ಉಪ್ಪಿಯ ಈ ಹಿಂದಿನ ಚಿತ್ರಗಳಂತೆ ಇದು ಸಹ ಟಿಫಿಕಲ್ ಫಿಲಾಸಫಿಕಲ್ ಥ್ರಿಲ್ಲರ್ ಶೈಲಿಯಲ್ಲಿದೆ. ಹಿತವಾದ ಪೂರ್ವಾರ್ಧ, ಗೊಂದಲದ ಉತ್ತರಾರ್ಧ ಹೊಂದಿರುವ ಚಿತ್ರಕ್ಕೆ ಸರಿಯಾದ ಅಂತ್ಯವೇ ಇಲ್ಲ. ಕ್ಲೈಮ್ಯಾಕ್ಸ್ 'ಉಪ್ಪಿ 3'ಯಲ್ಲಿ ಇರಬಹುದೇನೋ?! ಒಂದಿಷ್ಟು ಗೊಂದಲಗಳ ಹೊರತಾಗಿಯೂ ಉಪ್ಪಿ ಅಭಿಮಾನಿಗಳಿಗೆ ಹೊಟ್ಟೆ ತುಂಬುವಷ್ಟು ಮನರಂಜನೆ ಮತ್ತು ಬೋಧನೆ ಚಿತ್ರದಲ್ಲಿದೆ. - ಪ್ರವೀಣ್ ಚಂದ್ರ
'ನಾನ್'ಬಿಟ್ 'ನೀನ್'ಬಿಟ್ ತಲೆಗೆ ಹೇನ್ ಬಿಟ್ ಉಪ್ಪಿ-2 - ಕನ್ನಡ ಪ್ರಭ
'ನೀನು' (ಉಪೇಂದ್ರ) ಎಂಬುವ, ವರ್ತಮಾನದಲ್ಲಷ್ಟೇ ನಂಬಿಕೆಯಿಡಬೇಕು, ಭೂತ ಭವಿಷ್ಯವನ್ನು ಚಿಂತಿಸಬಾರದು ಎಂದು ಸದಾ ಎಲ್ಲರಿಗೂ ಭೋದಿಸುವ, ಶ್ರಮದಲ್ಲಿ ನಂಬಿಕೆಯಿಟ್ಟು ಬದುಕುವ ಮಧ್ಯವಯಸ್ಕನನ್ನು ಅರಸಿ 'ಖುಷಿ' (ಕ್ರಿಶ್ಚಿನ ಅಖೀವಾ) ಎಂಬ ಹುಡುಗಿ ಉಪೇಂದ್ರ ಸಿನೆಮಾದಲ್ಲಿ ದಾಮಿನಿ 'ನಾನು' ನನ್ನು ಹುಡುಕಿ ಬರುವಂತೆಯೇ ಅರಸಿ ಬರುತ್ತಾಳೆ. ಆದರೆ ಭೂತದಲ್ಲಿ ಬದುಕುವ ಕೆಲವು ಭೂಗತ ರೌಡಿಗಳು (ಉಪೇಂದ್ರ ಸಿನೆಮಾದ ಖಳನಟನನ್ನೂ ಒಳಗೊಂಡಂತೆ) ಹಾಗೂ ಭವಿಷ್ಯವನ್ನೇ ಚಿಂತಿಸುವ ಕೆಲವು ಪೊಲೀಸ್ ಅಧಿಕಾರಿಗಳು ಖುಷಿಗೆ ದಾರಿ ತಪ್ಪಿಸುತ್ತಾರೆ ಜೊತೆಗೆ ಪ್ರೇಕ್ಷಕರ ದಾರಿಯನ್ನೂ! ಈ ಗೊಂದಲಗಳ ಮಧ್ಯೆ ಖುಷಿಗೆ 'ನೀನು' ಸಿಗುವನೇ? - ಗುರುಪ್ರಸಾದ್


Click it and Unblock the Notifications











