For Quick Alerts
  ALLOW NOTIFICATIONS  
  For Daily Alerts

  Karnan movie review: ರೂಪಕಗಳ ಚೌಕಟ್ಟಿನೊಳಗೆ ಹೋರಾಟದ ಕಥನ

  |

  ಸಮುದಾಯದತಮಿಳಿನ 'ಕರ್ಣನ್' ಸಿನಿಮಾ ಹಲವು ಕೋನಗಳಲ್ಲಿ ಸುಂದರ ಕೃತಿ. ಜಾತಿ ಪದ್ಧತಿಯ ಬಗ್ಗೆ ಚರ್ಚಿಸುವ 'ಪರಿಯೇರುಮ್ ಪೆರುಮಾಳ್' ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಮಾರಿ ಸೆಲ್ವರಾಜ್ ಮತ್ತೊಮ್ಮೆ ಅದೇ ವಿಷಯ ಇಟ್ಟುಕೊಂಡು ಸುಂದರ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

  ತೆರೆಯ ಮೇಲೆ ಕಾಣುತ್ತಿರುವ ಕತೆ ಒಂದಾದರೆ ಆ ಕತೆ ಹೇಳುತ್ತಿರುವ ಕತೆಗಳು ಹಲವು. ಇದು 'ಕರ್ಣನ್' ಸಿನಿಮದ ವಿಶೇಷ. ನೊಂದವರ ಕತೆ, ಥುಳಿಕ್ಕೊಳಪಟ್ಟವರ ಕತೆ, ಥುಳಿದವರ ಕತೆ, ಗುರುತು ಹುಡುಕಿಕೊಳ್ಳಲು ಹೋರಾಡುತ್ತಿರುವವರ ಕತೆ, ಮಹಾಭಾರತದ ಕತೆ, ಇತಿಹಾಸ ಮಾಡಿರುವ ಅನ್ಯಾಯದ ಹೀಗೆ ಹಲವು ಕತೆಗಳನ್ನು ಒಂದು ಸಣ್ಣ ಹಳ್ಳಿಯ ಜನರ ಕತೆಯಲ್ಲಿ ಹುದುಗಿಸಿ 'ಕರ್ಣನ್' ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಸೆಲ್ವರಾಜ್.

  ಒಂದು ಸಮುದಾಯದ ಜನ ವಾಸಿಸುವ ಸಣ್ಣ ಹಳ್ಳಿ ಕರ್ಣನದ್ದು. ಆ ಊರಿಗೆ ಬಸ್‌ ನಿಲ್ದಾಣ ಇಲ್ಲ. ಯಾವ ಬಸ್ಸೂ ಆ ಊರಿನಲ್ಲಿ ನಿಲ್ಲಿಸುವುದಿಲ್ಲ. ಊರ ಜನರೆಲ್ಲ ಬೇರೆಡೆ ಹೋಗಲು ಪಕ್ಕದ ಊರಿನ ಬಸ್‌ ನಿಲ್ದಾಣಕ್ಕೆ ಹೋಗಬೇಕು. ಆದರೆ ಅಲ್ಲಿನ ಜನ ಸದಾ ಕರ್ಣನ ಊರಿನ ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಕರ್ಣನ ಊರಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗುವುದು ಅವರಿಗೆ ಇಷ್ಟವಿಲ್ಲ. ಕರ್ಣ ತಮ್ಮ ಜನಗಳ ಪರವಾಗಿ ನಿಂತು ಹೋರಾಡುತ್ತಾನೆ. ಇದು ಸಿನಿಮಾದ ಒನ್‌ಲೈನರ್ ಕತೆ. ಆದರೆ ಈ ಸಿನಿಮಾದ ಸುಂದರತೆ ಅಡಗಿರುವುದು ರೂಪಕಗಳನ್ನು ಬಳಸಿಕೊಂಡು ಪ್ರೆಸೆಂಟ್ ಮಾಡಿ ಕತೆಗೆ ವಿಶಾಲ ಅರ್ಥ ನೀಡಿರುವ ರೀತಿಯಲ್ಲಿ.

  Rating:
  4.0/5

  ಮುಖವಾಡ ಧರಿಸಿದ ಆ ಹುಡುಗಿ

  ಮುಖವಾಡ ಧರಿಸಿದ ಆ ಹುಡುಗಿ

  ಸಿನಿಮಾದ ಆರಂಭದಲ್ಲಿಯೇ ಸಣ್ಣ ಹುಡುಗಿಯೊಬ್ಬಳು ರಸ್ತೆಯ ಮಧ್ಯೆ ನರಳಿ ಪ್ರಾಣ ಬಿಡುತ್ತಾಳೆ. ಆಕೆಯ ಅಕ್ಕ-ಪಕ್ಕ ಹಲವು ಬಸ್ಸುಗಳು ಹಾದುಹೋಗುತ್ತವೆ ಆದರೆ ಯಾವುದೂ ನಿಲ್ಲುವುದಿಲ್ಲ. ಆಕೆ ಕರ್ಣನ ಸಹೋದರಿ. ಆ ಹುಡುಗಿ ಸಿನಿಮಾದ ಉದ್ದಕ್ಕೂ ಮುಖವಾಡ ಧರಿಸಿ ಹಲವು ಬಾರಿ ಕಾಣಿಸಿಕೊಳ್ಳುತ್ತಾಳೆ. ಜಾಗೃತಿಯ, ಬದಲಾವಣೆಯ ಭಾವ ಕತೆಯೊಳಗಿನ ಪಾತ್ರಗಳಿಗೆ ಮೂಡಿದಾಗಲೆಲ್ಲಾ ಆ ಹುಡುಗಿ ಮುಖವಾಡದೊಂದಿಗೆ ಕಾಣಿಸಿಕೊಳ್ಳುತ್ತಾಳೆ.

  ಮುಂಗಾಲು ಕಟ್ಟಿದ ಕತ್ತೆ

  ಮುಂಗಾಲು ಕಟ್ಟಿದ ಕತ್ತೆ

  ಸಿನಿಮಾದಲ್ಲಿ ಸಾಲು-ಸಾಲು ರೂಪಕಗಳು ಇವೆ. ಕೋಳಿ ಮರಿ ಹೊತ್ತೊಯ್ಯುವ ಹದ್ದು. ಹದ್ದಿಗೆ ಬೈಯ್ಯುವ ಅಮ್ಮ, ಕರ್ಣ ಮೀನನ್ನು ಎರಡು ಭಾಗ ಮಾಡಿ ಗೆಲ್ಲುವ ಕತ್ತಿ. ಆ ಕತ್ತಿಯ ಮೂಲಕವೇ ಊರ ಜನರ ಕಾಪಾಡಲು ನಿಲ್ಲುವುದು. ಹಳ್ಳಿಗರು ತಲೆ ಇಲ್ಲದ ದೇವರನ್ನು ಪೂಜೆ ಮಾಡುವುದು. ತಲೆ ಇಲ್ಲದ ಬುದ್ಧನ ಮೂರ್ತಿಯ ತಲೆಯ ಭಾಗದಲ್ಲಿ ಸೂರ್ಯ ಮೂಡುವುದು ಹೀಗೆ ಹಲವು ರೂಪಗಳು ಸಿನಿಮಾಗಳಲ್ಲಿವೆ. ಮುಂಗಾಲು ಕಟ್ಟಿದ ಕತ್ತೆಯ ರೂಪಕವಂತೂ ಸಿನಿಮಾದ ಅತ್ಯುತ್ತಮ ಅಂಶಗಳಲ್ಲಿ ಒಂದು. ಕತ್ತೆಯ ಮುಂಗಾಲಿಗೆ ಕಟ್ಟಿದ ಹಗ್ಗ ಕತ್ತರಿಸುವ ಕರ್ಣ, ತಾನೂ ಸಹ ತನಗೆ ವಿಧಿಸಿದ್ದ ಮಿತಿಯನ್ನು ಮೀರಿ ಹೋರಾಟಕ್ಕೆ ಇಳಿಯುತ್ತಾನೆ. ಅಲ್ಲಿಯವರೆಗೆ ಸಾಮಾನ್ಯ ಹಳ್ಳಿಗನಾಗಿದ್ದ ಕರ್ಣ ಅಲ್ಲಿಂದ 'ನಾಯಕ'ನಾಗುತ್ತಾನೆ.

  ಮಹಾಭಾರತದ ರೆಫರೆನ್ಸು

  ಮಹಾಭಾರತದ ರೆಫರೆನ್ಸು

  ಮಹಾಭಾರತದ ಕರ್ಣ, ಸೂರ್ಯದೇವ ಹಾಗೂ ಕುಂತಿಯ ಪುತ್ರ. ಸ್ವತಃ ದೇವಮಾನವ. ಆದರೆ ತಾಯಿಯಿಂದ ನಿರಾಕರಣೆಗೊಳಗಾಗಿ ಬುಡಕಟ್ಟು ಜನರ ಕೈಯಲ್ಲಿ ಬೆಳೆದು ಸ್ವಪ್ರಯತ್ನದಿಂದ ದೊಡ್ಡ ಮಟ್ಟಕ್ಕೆ ಮುಟ್ಟುತ್ತಾನೆ. ತನ್ನ ಜೀವನವನ್ನೆಲ್ಲ, ತನ್ನನ್ನು ನಂಬಿದವರಿಗಾಗಿ ಮುಡಿಪಾಗಿಡುವ ಕರ್ಣ ಬಯಸಿದ್ದೊಂದೂ ಸಹ ಸಿಗುವುದಿಲ್ಲ. ದ್ರೌಪದಿಯೂ ಸೇರಿದಂತೆ.

  ಮಹಾಭಾರತದ ಪಾತ್ರಗಳ ಹೆಸರಿಟ್ಟಿರುವ ನಿರ್ದೇಶಕ

  ಮಹಾಭಾರತದ ಪಾತ್ರಗಳ ಹೆಸರಿಟ್ಟಿರುವ ನಿರ್ದೇಶಕ

  ಮಹಾಭಾರತದ ಕರ್ಣನಿಗೆ 'ನ್ಯಾಯ' ಒದಗಿಸುವ ಉದ್ದೇಶದಿಂದಲೇನೋ ಎಂಬಂತೆ 'ಕರ್ಣನ್' ಸಿನಿಮಾದಲ್ಲಿ ನಾಯಕನಿಗೆ ಕರ್ಣ ಎಂದು ಹೆಸರು ಇಡಲಾಗಿದೆ. ಸಿನಿಮಾದ ನಾಯಕಿಯ ಹೆಸರು ದ್ರೌಪದಿ! ಸಿನಿಮಾದಲ್ಲಿ ಕರ್ಣನಿಗೆ ವಿಲನ್‌ ಆಗುವುದು ಕನ್ನಾಭಿರಾಮನ್ ಎಂಬ ಪೊಲೀಸ್ ಅಧಿಕಾರಿ. ಶ್ರೀಕೃಷ್ಣನ ಮತ್ತೊಂದು ಹೆಸರು ಕನ್ನಾಭಿರಾಮನ್. ಊರ ಮುಖ್ಯಸ್ಥ, ತಲೆಗೆ ಮೂಂಡಾಸು ಕಟ್ಟಿಕೊಂಡು ತನ್ನೆದುರು ನಿಂತು ಮಾತನಾಡಿ ಅಗೌರವ ತೋರಿದ ಎಂದು ಊರ ಮೇಲೆ ಯುದ್ಧ ಸಾರುತ್ತಾನೆ ಕನ್ನಾಭಿರಾಮನ್. ಊರ ಮುಖ್ಯಸ್ಥನ ಹೆಸರು ಧುರ್ಯೋಧನ. ಇಂಥಹಾ ಹಲವು 'ಒಪ್ಪಿತ ವಿಷಯಗಳನ್ನು ಪ್ರಶ್ನಿಸುವ' ದೃಶ್ಯಗಳು ಸಿನಿಮಾದಲ್ಲಿವೆ.

  ಮತ್ತೊಮ್ಮೆ ಗೆದ್ದ ಮಾರಿ ಸೆಲ್ವರಾಜ್

  ಮತ್ತೊಮ್ಮೆ ಗೆದ್ದ ಮಾರಿ ಸೆಲ್ವರಾಜ್

  ಕಲೆಯ ಉದ್ದೇಶ ಜಾಗೃತಿ ಮೂಡಿಸುವುದು, ಎಚ್ಚರಿಸುವುದು, ದನಿ ಇಲ್ಲದವರಿಗೆ ದನಿಯಾಗುವುದು ಎಂಬುದನ್ನು ಅಕ್ಷರಶಃ ನಂಬಿ ಸಿನಿಮಾ ಕಲೆಯಲ್ಲಿ ತೊಡಗಿಕೊಂಡಿರುವವರು ನಿರ್ದೇಶಕ ಮಾರಿ ಸೆಲ್ವರಾಜ್. ಧನುಷ್ ಅಂಥಹಾ 'ನಾಯಕ' ಇಮೇಜಿನ ನಟನನ್ನು ಇಟ್ಟುಕೊಂಡು ಸಾಮಾನ್ಯರ ಕತೆಯನ್ನು ಅಸಮಾಮಾನ್ಯ ರೀತಿಯಲ್ಲಿ ಹೇಳಿದ್ದಾರೆ. ಸಾಮಾನ್ಯ ಹಳ್ಳಿಯ ಕತೆಯನ್ನು ಥುಳಿತಕ್ಕೊಳಗಾದವರ ಕತೆಯನ್ನಾಗಿ ಮಾಡುವಲ್ಲಿ ಅವರ ಸೃಜನಶೀಲತೆ ಕಣ್ಣಿಗೆ ರಾಚುತ್ತದೆ. ಅವರು ಬಳಸಿರುವ ರೂಪಕಗಳಂತೂ ಸೂಕ್ಷ್ಮ ಮನಸ್ಸಿನ ಪ್ರೇಕ್ಷಕನನ್ನು ಬಹುವಾಗಿ ಕಾಡುತ್ತವೆ.

  Bigg Boss ಮನೆಯಿಂದ ಬಂದ ತಕ್ಷಣ Shubha Poonja ಮಾಡ್ತಿರೋ ಕೆಲಸ ನೋಡಿ | Filmibeat Kannada
  ಧನುಷ್ ನಟನೆ ಸಿನಿಮಾದ ಜೀವಾಳ

  ಧನುಷ್ ನಟನೆ ಸಿನಿಮಾದ ಜೀವಾಳ

  ಧನುಷ್‌ ನಟನೆ ಸಿನಿಮಾದ ಜೀವಾಳ. ಧನುಷ್, ಹುಡುಗಿಯ ಕೈಯಲ್ಲಿ ಕಪಾಳಕ್ಕೆ ಹೊಡೆತ ತಿನ್ನುತ್ತಾರೆ. ಊರ ಜನರಿಂದ ಬೈಸಿಕೊಳ್ಳುತ್ತಾರೆ. ಪೊಲೀಸರ ಕೈಲಿ ಏಟು ತಿನ್ನುತ್ತಾರೆ. ಅಕ್ಕನಿಂದ ಏಟು ತಿನ್ನುತ್ತಾರೆ ಹೀಗೆ ತಮ್ಮ 'ಮಾಸ್' ಇಮೇಜನ್ನು ಬದಿಗಿಟ್ಟು ಸಾಮಾನ್ಯ ಹಳ್ಳಿಗನಾಗಿ ಕತೆಗೆ ಅವಶ್ಯಕತೆಗೆ ತಕ್ಕಂತೆ ನಟಿಸಿದ್ದಾರೆ. ಧನುಷ್ ಮಾತ್ರವಲ್ಲ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಎಲ್ಲರ ನಟನೆಯೂ ಅದ್ಭುತವಾಗಿದೆ. ನಾಯಕಿ ರಾಜಿಶಾ ವಿಜಯನ್, ಧನುಷ್‌ನ ಹಿರಿಯ ಗೆಳೆಯನ ಪಾತ್ರ ಮಾಡಿರುವ ಖ್ಯಾತ ನಟ ಲಾಲ್, ಹಾಸ್ಯ ಪಾತ್ರದ ಬದಲಾಗಿ ಗಂಭೀರ ಪಾತ್ರ ಮಾಡಿರುವ ಯೋಗಿಬಾಬು, ವಿಲನ್ ಪಾತ್ರಧಾರಿ ನಟರಾಜನ್ ಸುಬ್ರಹ್ಮಣ್ಯನ್, ಧನುಷ್ ಅಕ್ಕನ ಪಾತ್ರಧಾರಿ ಗೌರಿ ಲಕ್ಷ್ಮಿ ಚಂದ್ರಮೌಳಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ.

  English summary
  Dhanush starer Karnan Tamil movie review in Kannada. Movie directed by Mari Selvaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X