ಹಿಂದಿ ಹೇರಿಕೆ, ಮದುವೆ ಪಜೀತಿ; ಓಟಿಟಿಗೆ ಬಂದಿರುವ 'ರಘುತಾತ' ಕಂಪ್ಲೀಟ್ ರಿವ್ಯೂ

Rating:
2.5/5
Star Cast: ಕೀರ್ತಿ ಸುರೇಶ್, ಎಂ. ಎಸ್ ಭಾಸ್ಕರ್, ರವೀಂದ್ರ ವಿಜಯ್ ಮುಂತಾದವರು.
Director: ಸುಮನ್ ಕುಮಾರ್

ಹೊಂಬಾಳೆ ಸಂಸ್ಥೆ ನಿರ್ಮಾಣದ 'ರಘುತಾತ' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಆಗಸ್ಟ್ 15ಕ್ಕೆ ತಮಿಳು ವರ್ಷನ್ ಮಾತ್ರ ತೆರೆಗೆ ಬಂದಿತ್ತು. ಇದೀಗ ಕನ್ನಡ ಸೇರಿ 34 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬಂದಿದೆ.

ಕೀರ್ತಿ ಸುರೇಶ್, ಎಂ. ಎಸ್ ಭಾಸ್ಕರ್, ರವೀಂದ್ರ ವಿಜಯ್, ರಾಜೀವ್ ರವೀಂದ್ರನಾಥ್ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಒಂದು ವಿಭಿನ್ನ ಸಿನಿಮಾ ಎನ್ನುವ ಕಾರಣಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

Keerthy Suresh starrer Raghu Thatha movie review and Rating in kannada

'ರಘುತಾತ' ಸಿನಿಮಾ ಕಥೆ

ವಳ್ಳುವನ್‌ಪೇಟೆ ಎನ್ನುವ ಊರು. ಅಲ್ಲಿ ಕಯಲ್ವಿಳಿ (ಕೀರ್ತಿ ಸುರೇಶ್) ಮದ್ರಾಸ್ ಸೆಂಟ್ರಲ್ ಬ್ಯಾಂಕ್‌ ಉದ್ಯೋಗಿ. ಬೇರೆ ಹೆಸರಿನಲ್ಲಿ ಮ್ಯಾಗಜೀನ್‌ಗಳಲ್ಲಿ ಕಥೆಗಳನ್ನೂ ಬರೆಯುತ್ತಿರುತ್ತಾಳೆ. ಅದರಲ್ಲೂ ಮಾತೃಭಾಷಾ ಪ್ರೇಮಿ. ಹಿಂದಿ ಹೇರಿಕೆ ವಿರೋಧಿಸಿ ಹೋರಾಟ ಮಾಡುವ ಗತ್ತಿಗಿಟ್ಟಿ. ಮದುವೆ ಬೇಡ, ಸ್ವತಂತ್ರವಾಗಿ ಬದುಕಬೇಕು ಎನ್ನುವ ಯುವತಿ. ಆದರೆ ಆಕೆಯ ಅಜ್ಜ ರಘೋತ್ತಮ ಕ್ಯಾನ್ಸರ್‌ಗೆ ತುತ್ತಾಗುತ್ತಾನೆ. ಮೊಮ್ಮಗಳ ಮದುವೆ ನೋಡುವುದು ನನ್ನ ಕೊನೆ ಆಸೆ ಎನ್ನುತ್ತಾನೆ. ತಾತನಿಗೆ ಕೊಟ್ಟ ಮಾತು ಈಡೇರಿಸಲು ಇಂಜಿನಿಯರ್ ಸೆಲ್ವನ್ (ರವೀಂದ್ರ ವಿಜಯ್) ನನ್ನು ಮದುವೆಯಾಗಲು ಕಯಳ್ ಒಪ್ಪುತ್ತಾಳೆ.

ಮದುವೆ ನಿಶ್ಚಿತಾರ್ಥದ ನಂತರ ಸೆಲ್ವನ್ ವ್ಯಕ್ತಿತ್ವದ ಬಗ್ಗೆ ಕಯಳ್‌ಗೆ ಶಾಕಿಂಗ್ ಸಂಗತಿಗಳು ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಆಕೆಯ ಬರವಣಿಗೆಯ ಅಭಿಮಾನಿಯಂತೆ ಬಿಂಬಿಸಿಕೊಳ್ಳುವ ಆತನ ನಿಜ ಬಣ್ಣ ಬೇರೆಯೇ ಇರುತ್ತದೆ. ಹಾಗಾಗಿ ಮದುವೆ ನಿಲ್ಲಿಸಲು ಕಯಳ್ ಮುಂದಾಗುತ್ತಾಳೆ. ಅದಕ್ಕಾಗಿ ಹಿಂದಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಾಳೆ. ಹಿಂದಿ ಪರೀಕ್ಷೆಗೂ ಕಯಲ್ ಮದುವೆಗೂ ಏನು ಸಂಬಂಧ? ಮದುವೆ ನಿಲ್ಲಿಸಲು ಆಕೆಯ ಪ್ಲ್ಯಾನ್ ಏನು? ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸೆಲ್ವನ್ ಏನು ಮಾಡ್ತಾನೆ? ಹಸೆಮಣೆವರೆಗೂ ಹೋಗುವ ಮದುವೆ ನಡೆಯುತ್ತಾ? ಇಲ್ವಾ? ಅದಕ್ಕೆಲ್ಲಾ ಉತ್ತರ ಬೇಕು ಅಂದ್ರೆ ಸಿನಿಮಾ ನೋಡಬೇಕು.

Keerthy Suresh starrer Raghu Thatha movie review and Rating in kannada

ಸಿನಿಮಾ ಹೇಗಿದೆ?

ಇದೊಂದು ಪೊಲಿಟಿಕಲ್, ಫ್ಯಾಮಿಲಿ ಡ್ರಾಮಾ. ಹಾಸ್ಯದ ಲೇಪನದೊಂದಿಗೆ ಒಂದು ವಿಭಿನ್ನ ಕತೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಸ್ತ್ರೀವಾದ ಮತ್ತು ಹಿಂದಿ ಹೇರಿಕೆ ವಿರುದ್ಧ ಹೋರಾಟದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಹಿಂದಿ ಹೇರಿಕೆ ವಿರುದ್ಧದ ಹೋರಾಟ, ನಾಯಕಿ ಕಯಳ್‌ವಿಳಿ ಪಾತ್ರದ ಪರಿಚಯದೊಂದಿಗೆ ಸಿನಿಮಾ ಶುರುವಾಗುತ್ತದೆ. ಇದು ತಮಿಳು ಸಿನಿಮಾ ಆಗಿದ್ದರೂ ಮಲಯಾಳಂ ಸಿನಿಮಾಗಳ ಛಾಯೆ ಎದ್ದು ಕಾಣುತ್ತದೆ.

ಮದುವೆ ನಿಲ್ಲಿಸಲು ಹಿಂದಿ ಪರೀಕ್ಷೆ ಬರೆಯಲು ಕಯಳ್ ಮಾಡುವ ಸರ್ಕಸ್ ಮಜಾ ಕೊಡುತ್ತದೆ. ಆರಂಭದಲ್ಲಿ ಹಿಂದೆ ಹೇರಿಕೆಯನ್ನು ವಿರೋಧಿಸುವ ಆಕೆ ಬಳಿಕ ಹಿಂದಿ ಪರೀಕ್ಷೆ ಬರೆಯುವುದು ಯಾಕೆ? ಎನ್ನುವುದು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. 70ರ ದಶಕದ ಕಾಲಘಟ್ಟವನ್ನು ಬಹಳ ಸೊಗಸಾಗಿ ತೋರಿಸಲಾಗಿದೆ. ಅದಕ್ಕಾಗಿ ಚಿತ್ರತಂಡದ ಶ್ರಮ ಎದ್ದು ಕಾಣುತ್ತದೆ. ಆರಂಭದಲ್ಲಿ ಕಥೆ ಇಷ್ಟೇನಾ? ಎಂದು ಕೊಂಚ ಬೇಸರವಾಗುತ್ತದೆ. ಆದರೆ ಬಳಿಕ ನಿಧಾನವಾಗಿ ಕಥೆ ನೋಡುಗರನ್ನು ಆವರಿಸಿಕೊಳ್ಳುತ್ತದೆ.

ದ್ವಿತಿಯಾರ್ಧ 'ರಘುತಾತ' ಚಿತ್ರಕ್ಕೆ ಪ್ಲಸ್ ಆಗಿದೆ. ಪರೀಕ್ಷೆಯಲ್ಲಿ ಕಯಳ್ ಕಾಪಿ ಮಾಡುವ ದೃಶ್ಯ, ನಕಲು ಮಾಡುವ ದೃಶ್ಯ ಹಾಗೂ ಲೇಖನಿಯ ಕುರಿತಾದ ಚರ್ಚೆ ಚೆನ್ನಾಗಿರುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟ ಮತ್ತು ಸಮಾಜದಲ್ಲಿ ಮಹಿಳೆಯರ ಬಗೆಗಿನ ತಾರತಮ್ಯದಂತಹ ವಿಚಾರಗಳನ್ನು ತೋರಿಸಲಾಗಿದೆ. ತಮಾಷೆಯಾಗಿಯೇ ಒಂದೊಳ್ಳೆ ಸಂದೇಶವನ್ನು ನಿರ್ದೇಶಕರು ದಾಟಿಸುವ ಪ್ರಯತ್ನ ಮಾಡಿದ್ದಾರೆ.

ಕಲಾವಿದರ ಅಭಿನಯ

ನಟನೆಯ ವಿಚಾರಕ್ಕೆ ಬಂದರೆ ಕೀರ್ತಿ ಸುರೇಶ್ ಮೋಡಿ ಮಾಡಿದ್ದಾರೆ. ಏಕಾಂಗಿಯಾಗಿ ಇಡೀ ಕಥೆಯನ್ನು ಹೊತ್ತು ಸಾಗಿದ್ದಾರೆ. 50 ವರ್ಷಗಳ ಹಿಂದೆ ಆಧುನಿಕ ಮತ್ತು ಸ್ವತಂತ್ರ ಮನೋಭಾವದ ಯುವತಿಯಾಗಿ ಗಮನ ಸೆಳೆಯುತ್ತಾರೆ. ಕಯಳ್ ಜೋಡಿಯಾಗಿ ರವೀಂದ್ರ ವಿಜಯ್‌ ಸೂಟ್ ಆಗಲ್ಲ ಎಂದು ಆರಂಭದಲ್ಲಿ ಅನಿಸುತ್ತದೆ. ಆದರೆ ಬಳಿಕ ಆ ಪಾತ್ರಕ್ಕೆ ಆತನೇ ಸೂಕ್ತ ಎನಿಸಿಬಿಡುವಂತೆ ನಟಿಸಿದ್ದಾರೆ. ಟೈಟಲ್ ರೋಲ್‌ನಲ್ಲಿ ಎಂ.ಎಸ್ ಭಾಸ್ಕರ್ ನಟನೆ ಇಷ್ಟವಾಗುತ್ತದೆ.

ತಾಂತ್ರಿಕವಾಗಿ ಸಿನಿಮಾ

ಮಹಿಳಾ ತಂತ್ರಜ್ಞರು ಈ ಚಿತ್ರಕ್ಕೆ ಹೆಚ್ಚು ಕೆಲಸ ಮಾಡಿದ್ದಾರೆ. ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಸೀನ್ ರೋಲ್ಡಮ್ ಸಂಗೀತ ಇಷ್ಟವಾಗುತ್ತದೆ. ಮುಖ್ಯವಾಗಿ ಆ ಕಾಲಘಟ್ಟವನ್ನು ಕಟ್ಟಿಕೊಡಲು ಬೇಕಾದ ಎಲ್ಲವನ್ನು ಹೊಂಬಾಳೆ ಸಂಸ್ಥೆ ಒದಗಿಸಿದೆ.

ಕೊನೆ ಮಾತು

ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ 'ರಘುತಾತ' ಭಿನ್ನವಾದ ಸಿನಿಮಾ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಸುಮನ್ ಕುಮಾರ್ ಗೆದ್ದಿದ್ದಾರೆ. ಸಿನಿಮಾ ಅಲ್ಲಲ್ಲಿ ಕೊಂಚ ಸ್ಲೋ ಎನಿಸಬಹುದು. ಆದರೆ ಯಾವುದೇ ಅಶ್ಲೀಲ ಸನ್ನಿವೇಶಗಳಿಲ್ಲದ ಸದಭಿರುಚಿ ಸಿನಿಮಾ. ಫ್ಯಾಮಿಲಿ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಕೆಲವೊಮ್ಮೆ ಆರ್ಟ್ ಸಿನಿಮಾ ಎನಿಸಿದರೂ ಅಚ್ಚರಿಯಿಲ್ಲ. ಯಾವುದೇ ನಿರೀಕ್ಷೆಯಿಲ್ಲದೇ ಕೊಂಚ ತಾಳ್ಮೆಯಿಂದ ನೋಡಿದರೆ ಸಿನಿಮಾ ಇಷ್ಟವಾಗುತ್ತದೆ.

More from Filmibeat

English summary
Raghu Thatha in OTT: Keerthy Suresh's political comedy film review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X