Kaalapatthar Review: ಕಪ್ಪು ಪುತ್ಥಳಿಯ ಸುತ್ತ ಒಂದು ಭ್ರಮಯೆ ಲೋಕ; ಹೇಗಿದೆ 'ಕಾಲಾಪತ್ಥರ್'?
ದುನಿಯಾ ಸೂರಿ ನಿರ್ದೇಶಿಸಿದ 'ಕೆಂಡಸಂಪಿಗೆ' ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟಿದ್ದು ವಿಕ್ಕಿ ವರುಣ್. ಹೀರೋ ಆಗುವುದಕ್ಕೂ ಮುನ್ನ ಸುಕ್ಕಾ ಸೂರಿ ನಿರ್ದೇಶಿಸಿದ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿದೆ. ಹಾಗೇ 'ಕಾಲೇಜ್ ಕುಮಾರ' ಕೂಡ ವಿಕ್ಕಿಗೆ ಸಕ್ಸಸ್ ಕೊಟ್ಟಿತ್ತು. ಈ ಹಂತದಲ್ಲಿ ತಾನೇ ನಿರ್ದೇಶನಕ್ಕೆ ಇಳಿಯುವ ಮನಸ್ಸು ಮಾಡಿದ್ದರು. ಅದುವೇ 'ಕಾಲಾಪತ್ಥರ್'.
'ಕಾಲಾಪತ್ಥರ್' ಸಿನಿಮಾದ ಹೀರೋನೂ ವಿಕ್ಕಿನೇ. ನಿರ್ದೇಶಕನೂ ವಿಕ್ಕಿನೇ. ಹೀಗಾಗಿ ಡಬಲ್ ರೋಲ್ ಎನ್ನಬಹುದು. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವುದರಿಂದ ಆಕ್ಷನ್ ಕಟ್ ಹೇಳುವುದು ಕಷ್ಟ ಆಗಿರಲಿಕ್ಕಿಲ್ಲ. ಆದರೆ, ನಿರ್ದೇಶನಕ್ಕೂ ಕೈ ಹಾಕಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರಾ? ಅನ್ನೋದು ಪ್ರಶ್ನೆ.

ವಿಕ್ಕಿ ವರಣ್ ನಿರ್ದೇಶಿಸಿ ನಟಿಸಿದ ಈ ಸಿನಿಮಾದ ಕಥೆಯಂತೂ ವಿಭಿನ್ನವಾಗಿದೆ. ಇಲ್ಲಿ ಅಣ್ಣಾವ್ರ ಅಭಿಮಾನಿಯಾಗಿ ವಿಕ್ಕಿ ವರುಣ್ ಕಾಣಿಸಿಕೊಂಡಿದ್ದು, ದೊಡ್ಮನೆ ಅಭಿಮಾನಿಗಳಿಗೆ ಖುಷಿ ಕೊಡುತ್ತೆ. ಹಾಗಿದ್ರೆ, ಈ ಸಿನಿಮಾದ ಕಥೆಯೇನು? ವಿಕ್ಕಿ ವರುಣ್ ನಿರ್ದೇಶನ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಕಾಲಾಪತ್ಥರ್' ಕಥೆಯೇನು?
ಸಿನಿಮಾ ಹೀರೋ ಹೆಸರು ಶಂಕರ ( ವಿಕ್ಕಿ ವರುಣ್). ಭಾರತೀಯ ಸೇನೆಯಲ್ಲಿ ಸೈನಿಕ. ಹಾಗಂತ ಗಡಿ ಕಾಯುವ ಸೈನಿಕನಲ್ಲ. ಅವರಿಗೆ ಅಡುಗೆ ಮಾಡಿಕೊಡುವ ಬಾಣಸಿಗ. ಆದರೆ, ಆತನ ಊರಿನವರಿಗೆ ಶಂಕರ ಸೇನೆಯಲ್ಲಿರುವುದೇ ಹೆಮ್ಮೆ. ಹೀಗೊಮ್ಮೆ ಟೆರರಿಸ್ಟ್ ಕ್ಯಾಂಪ್ ಒಳಗೆ ನುಗ್ಗಿದಾಗ, ಬಾಣಸಿಗ ಶಂಕರ ಹೋರಾಡುತ್ತಾನೆ. ರಾತ್ರೋರಾತ್ರಿ ಹೀರೋ ಆಗುತ್ತಾನೆ. ಈ ವಿಷಯ ತಿಳಿದು ಊರಿನವರು ಶಂಕರನ ಪುತ್ಥಳಿ ಮಾಡಿ ಉದ್ಘಾಟನೆ ಮಾಡುತ್ತಾರೆ. ಈ ಪುತ್ಥಳಿ ಸ್ಥಾಪನೆ ಬಳಿಕ ನಾಯಕನಲ್ಲಾಗುವ ಬದಲಾವಣೆಗಳೇ ಸಿನಿಮಾದ ಅಸಲಿ ಕಥೆ.

ನಿರ್ದೇಶನಕ್ಕೆಷ್ಟು? ನಟನೆಗೆಷ್ಟು ಮಾರ್ಕ್ಸ್?
ವಿಕ್ಕಿ ವರುಣ್ ಹೀರೋ ಕಮ್ ನಿರ್ದೇಶಕ ಆಗಿರುವುದರಿಂದ ಎರಡೆರಡು ಜವಾಬ್ದಾರಿಗಳನ್ನು ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಇದೊಂದು ವಿಶಿಷ್ಟ ಕಥೆಯನ್ನು ಆಧರಿಸಿದ ಸಿನಿಮಾ ಅನ್ನೋದರಲ್ಲಿ ಸಂದೇಹವೇ ಇಲ್ಲ. 'ರಾಮಾ ರಾಮಾ ರೇ' ಅಂತಹ ಸಿನಿಮಾ ಕೊಟ್ಟಿರುವ ಸತ್ಯ ಪ್ರಕಾಶ್ ಅವರದ್ದೇ ಕಥೆ. ಇಂತಹ ವಿಶಿಷ್ಟಯನ್ನು ತೆರೆಮೇಲೆ ತರುವಾಗ ವಿಕ್ಕಿ ಇನ್ನೊಂದಿಷ್ಟು ಹೋಮ್‌ವರ್ಕ್ ಮಾಡಿದ್ದರೆ, ಅದ್ಭುತ ಸಿನಿಮಾ ಆಗುತ್ತಿತ್ತು. ಅಲ್ಲಲ್ಲಿ ಸಿನಿಮಾಗೆ ಇನ್ನಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿತ್ತು ಅನ್ನೋದು ಎದ್ದು ಕಾಣುತ್ತೆ. ಇನ್ನು ಸೈನಿಕನಾಗಿ ನಟನೆಯ ವಿಷಯದಲ್ಲಿ ಮಾತಾಡುವಂತೆ ಇಲ್ಲ.
ಉಳಿದ ಪಾತ್ರಗಳ ಕಥೆಯೇನು?
ವಿಕ್ಕಿ ವರುಣ್ ಜೊತೆ ನಾಯಕಿಯಾಗಿ ಧನ್ಯ ರಾಮ್ ಕುಮಾರ್ ನಟಿಸಿದ್ದಾರೆ. ಇವರಿಗೆ ಸಿಕ್ಕಷ್ಟು ಸ್ಕ್ರೀನ್ ಸ್ಪೇಸ್ ಅನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಟಿ.ಎಸ್.ನಾಗಾಭರಣ, ಸಂಪತ್, ರಾಜೇಶ್ ನಟರಂಗದಂತಹ ಕಲಾವಿದರು ಈ ಸಿನಿಮಾದಲ್ಲಿ ತಮ್ಮ ಸಹಜ ಅಭಿನಯದಿಂದ ಮಿಂಚಿದ್ದಾರೆ.
'ಕಾಲಾಪತ್ಥರ್' ಪ್ಲಸ್ ಏನು?
ಶಂಕರನ ಪಾತ್ರವನ್ನು ಪರಿಚಯಿಸುವ ಪರಿ ಸರಿಯಾಗಿದೆ ಅನಿಸುತ್ತೆ. ನಾಯಕ ಸೇನೆಯಲ್ಲಿ ಇದ್ದರೂ ಬಾಣಸಿಗ ಅನ್ನೋದು ಜನರಿಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಬಾಣಸಿಗ ಸೌಟು, ಬಾಂಡಲಿ ಹಿಡಿದು ಫೈಟ್ ಮಾಡುವ ದೃಶ್ಯವಿದೆ. ಹಾಗಂತ ಈ ಫೈಟ್‌ನಲ್ಲಿ ಲಾಜಿಕ್ ಇಲ್ಲ ಅನ್ನೋದು ಅಷ್ಟೇ ಸತ್ಯ. ಆದರೂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಇನ್ನೂ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಪೂರಕವಾಗಿದೆ. ಸೆಕೆಂಡ್ ಹಾಫ್‌ನಲ್ಲಿ ತಿರುವುಗಳನ್ನು ಕೊಟ್ಟಿದ್ದಾರೆ. ಸಿನಿಮಾದಲ್ಲಿ ಕೊಟ್ಟಿರುವ ಸಂದೇಶ ಇಷ್ಟ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಚಿಕ್ಕ ಸಿನಿಮಾ.
'ಕಾಲಾಪತ್ಥರ್' ಮೈನಸ್ ಏನು?
ಚಿತ್ರಕಥೆ ವಿಷಯದಲ್ಲಿ ಇನ್ನೂ ಸ್ವಲ್ಪ ಹೋಮ್‌ವರ್ಕ್ ಮಾಡಬೇಕಿತ್ತು. ಫಸ್ಟ್ ಹಾಫ್‌ನಲ್ಲಿ ಅಲ್ಲಲ್ಲಿ ಬೋರ್ ಅನಿಸುತ್ತೆ. ಇಂಟರ್‌ವಲ್‌ನಲ್ಲಿ ಸರಿಯಾಗಿ ಟ್ವಿಸ್ಟ್ ಕೊಟ್ಟಿದ್ದಾರೆ. ಅದನ್ನು ದ್ವಿತಿಯಾರ್ಧದಲ್ಲಿ ತೆಗೆದುಕೊಂಡು ಹೋಗಿಲ್ಲ. ಡೈರೆಕ್ಟರ್ ಹೊಸ ಕಥೆ ಹೇಳುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ಇನ್ನೂ ಚೆನ್ನಾಗಿ ಹೇಳಬಹುದಿತ್ತು. ಕಾಮಿಡಿ ಸನ್ನಿವೇಶಗಳು ಇದ್ದಿದ್ದರೆ, ಪ್ರೇಕ್ಷಕರಿಗೆ ಅತ್ಯುತ್ತಮವಾದ ಸಿನಿಮಾ ಸಿಗುತ್ತಿತ್ತು.
ಕೊನೆಯಲ್ಲಿ..
'ಕಾಲಾಪತ್ಥರ್' ಸಿನಿಮಾದ ಕಥೆ ಚೆನ್ನಾಗಿದೆ. ರೆಗ್ಯೂಲರ್ ಸಿನಿಮಾಗಿಂತ ಕೊಂಚ ಭಿನ್ನ. ಒಂದಿಷ್ಟು ಚಿಕ್ಕ ಪುಟ್ಟ ತಪ್ಪುಗಳನ್ನು ನುಂಗಿಕೊಂಡರೆ, ಒಮ್ಮೆ ಈ ಸಿನಿಮಾವನ್ನು ನೋಡಲು ಅಡ್ಡಿಯಿಲ್ಲ.


Click it and Unblock the Notifications











