Don't Miss!
- Sports
IND vs NZ 1st T20: ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯಲು ಇವರ ಮಧ್ಯೆ ಪೈಪೋಟಿ
- News
ಗಣರಾಜ್ಯೋತ್ಸವ 2023: ಧ್ವಜಾರೋಹಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
- Finance
ಕಾಲ್ಸೆಂಟರ್ನಲ್ಲಿ 8,000 ಪಡೆಯುತ್ತಿದ್ದ ವ್ಯಕ್ತಿ ಈಗ 2,094 ಕೋಟಿ ರೂ ಒಡೆಯ!
- Technology
ಗ್ರಾಹಕರೇ ಈ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೂ, ಉಚಿತ ಡೇಟಾ ಲಭ್ಯ!
- Automobiles
ವಿದೇಶದಲ್ಲಿ 20 ಲಕ್ಷವಿದ್ದ ಕಾರು ಭಾರತಕ್ಕೆ ಬಂದರೆ 50 ಲಕ್ಷ ರೂ. ದುಬಾರಿಯಾಗಲು ಕಾರಣವೇನು..?
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
KGF Chapter 2 Review: 'ಕೆಜಿಎಫ್ 2' ಸಿನಿಮಾದಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ವಿಮರ್ಶೆ
ಸರಳವಾಗಿ ಹೇಳಬೇಕೆಂದರೆ, 'ಕೆಜಿಎಫ್ 1' ನಲ್ಲಿ ಏನೆಲ್ಲ ನೋಡಲು, ಅನುಭವಿಸಲು, ಖುಷಿಪಡಲು ಸಿಕ್ಕಿತ್ತೊ ಅದೆಲ್ಲ ದುಪ್ಪಟ್ಟಾದರೆ ಅದುವೇ 'ಕೆಜಿಎಫ್ 2'.
Recommended Video

ನರಾಚಿಯೆಂಬ ಚಿನ್ನವೇ ತುಂಬಿರುವ ನರಕ ಸೃಷ್ಟಿಸಿ, ರಾಕಿಭಾಯ್ ಅನ್ನು ಅದರ ಒಡೆಯನನ್ನಾಗಿ ಮಾಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ರಾಕಿಭಾಯ್‌ನ ಮಹಾತ್ವಾಂಕ್ಷೆ, ನರಾಚಿಯ ಚಿನ್ನದ ರಾಶಿಯನ್ನು ಮೀರಿದ್ದು ಎಂದು 'ಕೆಜಿಎಫ್ 2'ನಲ್ಲಿ ಹೇಳಿದ್ದಾರೆ.
'ಕೆಜಿಎಫ್; ಚಾಪ್ಟರ್ 1'ನಲ್ಲಿ ರಾಕಿಭಾಯ್‌ಗೆ ಗರುಡನನ್ನು ಹೊಡೆಯಬೇಕೆನ್ನುವ ಸ್ಪಷ್ಟ ಗುರಿ ಇದೆ, ಅಲ್ಲಿ ರಾಕಿಭಾಯ್‌ಗೆ ಗರುಡನೊಬ್ಬನೇ ಎದುರಾಳಿ. ಆದರೆ ಒಮ್ಮೆ ಗರಡುನನ್ನು ಹೊಡೆದು ಕೆಜಿಎಫ್‌ನ ಚಿನ್ನದ ಭೂಮಿಯ ಒಡೆಯನಾದ ಮೇಲೆ ದುಶ್ಮನ್‌ಗಳ ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬ ಕ್ರೂರಿ, ಒಬ್ಬ ಚಾಣಾಕ್ಷ, ಅಸೂಯೆ ತುಂಬಿದ ಹಳೆ ಗೆಳೆಯನೊಬ್ಬ, ಜೊತೆಗೆ ಇದ್ದು ರಾಕಿಭಾಯ್ ಪತನ ಬಯಸುವವನೊಬ್ಬ, ಒಬ್ಬಾಕೆ ಹಠವಾದಿ ಹೀಗೆ ಒಂದೊಂದು ಬಗೆಯ ವೈರಿಗಳು ರಾಕಿಭಾಯ್ ಮೇಲೆ ಒಬ್ಬೊಬ್ಬರಾಗಿ ಮುಗಿಬೀಳುತ್ತಾರೆ. ಆದರೆ ರಾಕಿಭಾಯ್ ಗಟ್ಟಿಗ ಜೊತೆಗೆ ಚಾಣಾಕ್ಷ ಸಹ. ಎಲ್ಲರನ್ನೂ ಎದುರಿಸುತ್ತಾನೆ, ವೈರಿಗಳ ವಿರುದ್ಧ ಗೆದ್ದು, ಸ್ವ ಇಚ್ಚೆಯಿಂದ ಸೋಲುತ್ತಾನೆ!
KGF 2 First Half Review: ರಾಕಿ ಭಾಯ್-ಅಧೀರನ ಕಾದಾಟ, ತಾಯಿ ಸೆಂಟಿಮೆಂಟ್ ಮೊದಲಾರ್ಧ
ಮೊದಲ ಚಾಪ್ಟರ್‌ಗೂ ಎರಡನೇ ಚಾಪ್ಟರ್‌ಗೂ ರಾಕಿ ಭಾಯ್ ತುಸು ಬದಲಾಗಿದ್ದಾನೆ. ಮೊದಲ ಚಾಪ್ಟರ್‌ನಲ್ಲಿ ದುನಿಯಾ ಕೇಳಿದ್ದ ರಾಕಿ ಭಾಯ್‌ಗೆ ಈಗ ನರಾಚಿಯೆಂಬ ಹಣದ ಸುಪ್ಪತಿಗೆಯೇ ಸಿಕ್ಕಿದೆ. ಯಾವ ಮಟ್ಟಿಗೆಂದರೆ ಅವನೇ ಹೇಳುತ್ತಾನೆ, ''ನಾನು ದೇಶದ ಒಟ್ಟು ಸಾಲವನ್ನು ತೀರಿಸಬಲ್ಲೆ'' ಎಂದು. ಆದರೂ ಆವನ ಆಸೆ ತೀರಿಲ್ಲ. ಗರುಡನ ಗುಲಾಮರಾಗಿದ್ದವರ ಸಂಕೋಲೆಗಳನ್ನು ಒಡೆದು ಹಾಕಿದ ರಾಕಿಭಾಯ್ ಈಗ ಅವರನ್ನು ತನ್ನ ಗುಲಾಮರನ್ನಾಗಿಸಿಕೊಂಡಿದ್ದಾನೆ! ಸಿನಿಮಾದಲ್ಲಿ ಬರುವ ಪಾತ್ರವೊಂದೊ ರಾಕಿಯನ್ನು ಪ್ರಶ್ನೆ ಮಾಡಿಯೇ ಬಿಡುತ್ತದೆ, 'ನಿನಗೂ ಗರುಡನಿಗೂ ಏನಿದೆ ವ್ಯತ್ಯಾಸ?' ಎಂದು. ಆಗ, ತನ್ನ ಹಣದ, ಪವರ್‌ನ ಲೋಭಕ್ಕೆ ರಾಕಿಭಾಯ್ ನೀಡುವ ಕಾರಣ ಮನಸ್ಸು ಕರಗಿಸುತ್ತದೆ.

ತಾಂತ್ರಿಕವಾಗಿ ಅದ್ಭುತವಾದ ಸಿನಿಮಾ
'ಕೆಜಿಎಫ್ 2' ಸಿನಿಮಾ ಕನ್ನಡಿಗರು ಹೆಮ್ಮೆಪಡುವಷ್ಟು ರಿಚ್ ಆಗಿ, ತಾಂತ್ರಿಕವಾಗಿ ಅದ್ಭುತವಾಗಿ ಮೂಡಿಬಂದಿದೆ. ಈ ಸಿನಿಮಾದ ಎಡಿಟಿಂಗ್ ಇತರೆ ಸಿನಿಮಾ ನಿರ್ದೇಶಕರು, ಸಂಕಲನಕಾರರು ಪಾಠವಾಗಿ ತೆಗೆದುಕೊಳ್ಳಬೇಕಿದೆ. ಸಿನಿಮಾದ ಕ್ಯಾಮೆರಾ ಕೆಲಸವೂ ಅತ್ಯದ್ಭುತವಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಅಂತೂ ಕ್ಯಾಮೆರಾಮನ್ ಹಾಗೂ ಆಕ್ಷನ್ ದೃಶ್ಯ ನಿರ್ದೇಶಕನ ಶ್ರಮ ಎದ್ದು ಕಾಣುತ್ತದೆ. ಹಿನ್ನೆಲೆ ಸಂಗೀತ ತೆರೆ ಮೇಲೆ ರಾಕಿಭಾಯ್‌ನ ಖದರ್ರನ್ನು ಇನ್ನಷ್ಟು ಹೆಚ್ಚಿಸಿದೆ. ಅಬ್ಬರ ಎನಿಸಿದರೂ, ರಾಕಿಭಾಯ್ ಅಂಥಹಾ ರಗಡ್ ಪಾತ್ರಕ್ಕೆ ಸೂಕ್ತವಾದ ಸಂಗೀತವೇ ಇದು ಎನಿಸುತ್ತದೆ. ಹಾಡುಗಳು ಸಹ ಚೆನ್ನಾಗಿವೆ.

ಸಿನಿಮಾದ ಸಂಭಾಷಣೆ ಚೆನ್ನಾಗಿದೆ
ಸಿನಿಮಾದ ಸಂಭಾಷಣೆ ಮತ್ತೊಂದು ಧನಾತ್ಮಕ ಅಂಶ. ರಾಕಿಭಾಯ್‌ನ ಒನ್‌ಲೈನರ್‌ಗಳು ಚಾಪ್ಟರ್ 1 ನಲ್ಲಿಯೂ ಗಮನ ಸೆಳೆದಿದ್ದವು. ಸಂಭಾಷಣೆಯಲ್ಲಿ ಅದೇ ಮೊನಚನ್ನು ಪ್ರಶಾಂತ್ ನೀಲ್ ಉಳಿಸಿಕೊಂಡಿದ್ದಾರೆ. ರಾಕಿಭಾಯ್ ಉದುರಿಸುವ ಒನ್‌ಲೈನರ್‌ಗಳು ನಗು ಉಕ್ಕಿಸಿದರೆ ಒಮ್ಮೆ ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. ಸಂಭಾಷಣೆಗೆ ವಿಶೇಷ ಅಂಕವನ್ನು ನೀಡಲೇ ಬೇಕಾಗುತ್ತದೆ.

ಸಂಜಯ್ ದತ್ ಪಾತ್ರ ಹೇಗಿದೆ?
ನಟ ಯಶ್‌ಗೆ ರಾಕಿಭಾಯ್ ಪಾತ್ರ ಟೇಲರ್ ಮೇಡ್. ಆಕ್ಷನ್, ಸೆಂಟಿಮೆಂಟ್, ಹಾಸ್ಯ, ಗಂಭೀರ ಎಲ್ಲ ಭಾವಗಳಲ್ಲಿಯೂ ಅವರು ರಾಕಿಂಗ್. ಸಂಜಯ್ ದತ್ ಸಹ ಕ್ರೂರವಾಗಿ ಕಾಣಿಸಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ರಾಕಿ ಭಾಯ್‌ಗೆ ಸಖತ್ ಠಕ್ಕರ್ ನೀಡುವ ಅಧೀರ ದ್ವಿತೀಯಾರ್ಧ ಪ್ರಾರಂಭವಾಗುತ್ತಿದ್ದಂತೆ ಕಣ್ಮರೆ ಆಗಿಬಿಡುತ್ತಾರೆ. ಮತ್ತೆ ಅವರು ಕಾಣಿಸಿಕೊಳ್ಳುವುದು ಅಂತ್ಯದಲ್ಲಿಯೇ, ಅಲ್ಲದೆ ದೂರದಿಂದ ಬಂದೂಕಿನಲ್ಲಿ ಶೂಟ್ ಮಾಡಲು ಅಧೀರನಾಗಿ ಸಂಜಯ್ ದತ್ತೇ ಬೇಕೆಂದೇನೂ ಇರಲಿಲ್ಲ, ಆ ಕೆಲಸವನ್ನು ಯಾವುದೇ ಸಣ್ಣ ವಿಲನ್‌ನಿಂದಲೂ ಮಾಡಿಸಬಹುದಿತ್ತು. ಅಧೀರನ ಪಾತ್ರಪೋಷಣೆ ಇನ್ನಷ್ಟು ಚೆನ್ನಾಗಿರಬಹುದಿತ್ತು ಎನಿಸುವುದು ಸುಳ್ಳಲ್ಲ. ಅಧೀರನ ಪಾತ್ರಕ್ಕೆ ಹೋಲಿಸಿದರೆ ಅಚ್ಯುತ್ ಕುಮಾರ್ ನಿರ್ವಹಿಸಿರುವ ವಿಲನ್ ಪಾತ್ರವೇ ಹೆಚ್ಚು ಶಕ್ತವಾಗಿದೆ. ಅಧೀರನ ಬದಲು ಆ ಪಾತ್ರಕ್ಕೆ ನಿರ್ದೇಶಕರು ಇನ್ನಷ್ಟು ಗಮನಕೊಡಬಹುದಿತ್ತೇನೋ.

ಯಾರ ನಟನೆ ಹೇಗಿದೆ?
ರವೀನಾ ಟಂಡನ್ ಪಾತ್ರ ಸಹ ಗಟ್ಟಿಯಾಗಿದೆ. ಇಂಟರ್ವೆಲ್ ಆದ ಬಳಿಕ ತಡವಾಗಿಯೇ ಪಾತ್ರ ಎಂಟ್ರಿಯಾಗುತ್ತದೆಯಾದರೂ ಪಾತ್ರ ಗಟ್ಟಿತನದಿಂದ ಕೂಡಿದೆ ಹಾಗೂ ಕತೆಯ ಮೇಲೆ ಪ್ರಭಾವ ಬೀರುತ್ತದೆ. ರವೀನಾ ನಟನೆಯೂ ಅದ್ಭುತವಾಗಿದೆ. ಪ್ರಕಾಶ್ ರೈ, ಅನಂತ್ ನಾಗ್ ಪಾತ್ರದ ಬದಲಾಗಿ ಬಂದರು, ತಮ್ಮದೇ ಆದ ಗುರುತನ್ನು ಪಾತ್ರಕ್ಕೆ ನೀಡಿದ್ದಾರೆ. ಅಚ್ಯುತ್ ಕುಮಾರ್ ನಟನೆಯೂ ಚೆನ್ನಾಗಿದೆ. ಮೊದಲ ಪಾರ್ಟ್‌ನಲ್ಲಿ ಜಂಭದ ಕೋಳಿಯ ಪಾತ್ರದಲ್ಲಿ ನಟಿಸಿದ್ದ ನಾಯಕಿ ಶ್ರೀನಿಧಿ ಶೆಟ್ಟಿ ಪಾತ್ರ ಈ ಸಿನಿಮಾದಲ್ಲಿ ಪತಿಯ ಕ್ಷೇಮ ಬಯಸುವ ಗೃಹಸ್ತೆಯಾಗಿ, ಪ್ರೇಯಸಿಯಾಗಿ ಬದಲಾಗಿದ್ದಾರೆ. ಶ್ರೀನಿಧಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲ ಭಾಗದಲ್ಲಿ ರಾಕಿಭಾಯ್ ತಾಯಿಯ ಪಾತ್ರದಲ್ಲಿ ಗಮನ ಸೆಳೆದಿದ್ದ ಅರ್ಚನಾ ಜೋಯಿಸ್ ಈ ಸಿನಿಮಾದಲ್ಲಿಯೂ ತಮ್ಮ ಅದ್ಭುತ ನಟನೆ ಮುಂದುವರೆಸಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನ ಹೇಗಿದೆ?
ನಿರ್ದೇಶನದ ವಿಷಯಕ್ಕೆ ಬಂದರೆ, ಫ್ಲ್ಯಾಶ್‌ಬ್ಯಾಕ್‌ಗಳನ್ನು ಪ್ರಶಾಂತ್ ನೀಲ್ ಅಷ್ಟು ಚೆನ್ನಾಗಿ ಬಳಸಿಕೊಳ್ಳುವ ಮತ್ತೊಬ್ಬ ನಿರ್ದೇಶಕ ಇಲ್ಲ. ಒಂದೇ ಬಾರಿಗೆ ಮೂರು ಕಾಲಘಟ್ಟದ ದೃಶ್ಯಗಳನ್ನು ಪ್ರೇಕ್ಷಕನಿಗೆ ಗೊಂದಲವಾಗದಂತೆ ಒಂದಕ್ಕೊಂದು ಬೆಸೆದುಕೊಳ್ಳುವಂತೆ ತೋರಿಸುವ ಕಲೆ ಅವರಿಗೆ ಸಿದ್ಧಿಸಿದೆ. ಹಸುಗೂಸಿನೊಂದಿಗೆ ಮಾತನಾಡುತ್ತಿರುವ ತಾಯಿ, ತಾಯಿಯ ಸಮಾಧಿ ಮುಂದೆ ಅಳುತ್ತಿರುವ ಬಾಲಕ ರಾಕಿಭಾಯ್, ಅರಮನೆಯಂತಾ ಮನೆಯ ತಾರಸಿ ಮೇಲೆ ನಿಂತು ಅನಂತದತ್ತ ನೋಡುತ್ತಿರುವ ರಾಕಿಭಾಯ್ ಈ ಮೂರು ದೃಶ್ಯಗಳನ್ನು ಒಟ್ಟಿಗೆ ತೋರಿಸಿ ಆ ಮೂಲಕ ಹೊಸ ಅರ್ಥವೊಂದು ಹೊಳೆಯುವಂತೆ ಮಾಡುತ್ತಾರೆ ಪ್ರಶಾಂತ್ ನೀಲ್. ಕೆಜಿಎಫ್ ಚಾಪ್ಟರ್ 1' ಅಚಾನಕ್ಕಾಗಿ ಹಿಟ್ ಆದದ್ದಲ್ಲ ತಮ್ಮ ಪ್ರತಿಭೆಯಿಂದ ಆದದ್ದು ಎಂಬುದನ್ನು ಪ್ರಶಾಂತ್ ನೀಲ್ 'ಕೆಜಿಎಫ್ 2'ನಲ್ಲಿ ಸಾಬೀತುಪಡಿಸಿದ್ದಾರೆ.

ಅಧೀರನ ಪಾತ್ರಕ್ಕೆ ಇನ್ನಷ್ಟು ಆದ್ಯತೆ ನೀಡಬಹುದಿತ್ತು
ಸಿನಿಮಾದಲ್ಲಿ ಕೆಲವು ಸಣ್ಣ-ಪುಟ್ಟ ಕೊರತೆಗಳೂ ಇವೆ, ಅಧೀರ ಪಾತ್ರದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು ಆದರೆ ಆ ಪಾತ್ರದ ಪೋಷಣೆ ತುಸು ಪೇಲವ ಎನಿಸುತ್ತದೆ. ಜೊತೆಗೆ ನಾಯಕನನ್ನು ಅತಿಯಾಗಿ ಲಾರ್ಜರ್ ದ್ಯಾನ್ ಲೈಫ್ ಮಾಡಿಬಿಡಲಾಗಿದೆ. ಇದೇ ಕಾರಣದಿಂದ ಎಲ್ಲ ವಿಲನ್‌ಗಳು ನಾಯಕನ ಮುಂದೆ ಮಂಕೆನಿಸುತ್ತಾರೆ. ನಾಯಕ ನಟರನ್ನು ಸರ್ವಶಕ್ತರನ್ನಾಗಿಸುವ ದೊಡ್ಡ ಅಪಾಯ ಇದು. ಆದರೆ ಮೊದಲ ಭಾಗದಲ್ಲಿ ಹೀಗಿರಲಿಲ್ಲ, ರಾಕಿಭಾಯ್ ಗರುಡನ ಮನೆಗೆ ನುಗ್ಗಿ ಆತನನ್ನು ಹೊಡೆಯಲಿಲ್ಲ, ಯೋಜನೆ ರೂಪಿಸಿದ, ಜನರನ್ನು ತನ್ನತ್ತ ಸೆಳೆದುಕೊಂಡು ನಾಯಕನಾದ, ಅವಕಾಶಕ್ಕಾಗಿ ಕಾದ ನಂತರ ಕಾರ್ಯಸಾಧಿಸಿದ. 'ಕೆಜಿಎಫ್ 2'ನಲ್ಲಿ ರಾಕಿಭಾಯ್ ಪಾತ್ರ ಅದ್ಯಾವ ಮಟ್ಟಿಗೆ 'ಶಕ್ತಿವಂತ' ಎಂದರೆ ಗನ್ ಹಿಡಿದು ಪಾರ್ಲಿಮೆಂಟ್‌ಗೆ ನುಗ್ಗಿ ಪ್ರಧಾನಿ ಎದುರು ಕೊಲೆ ಮಾಡುವಷ್ಟು! ಇದೆಲ್ಲ ತುಸು ಅತಿ ಎನಿಸದೇ ಇರದು.

ಒಟ್ಟಾರೆ ಸಿನಿಮಾ ಹೇಗಿದೆ?
ಇದರ ಜೊತೆಗೆ ತುಸು ಲಾಜಿಕಲ್ ಪ್ರಶ್ನೆಗಳೂ ಇವೆ. ಅಪ್ಪನನ್ನು 25 ವರ್ಷಗಳ ನಂತರ ನೋಡುತ್ತಿರುವ ಪಿತೃದ್ವೇಷಿ ಮಗನಿಗೆ ಅಪ್ಪ ಬರೆದಿರುವ ಪುಸ್ತಕದ ಕತೆ ಬಾಯಿಪಾಠ ಆಗಿದ್ದು ಹೇಗೆ? ನೆಲದಲ್ಲಿ ಹುದುಗಿಸಿಟ್ಟ ರಾಕಿಭಾಯ್‌ನ ವಿಗ್ರಹ ಎತ್ತಿದವರ ಕತೆ ಏನಾಯ್ತು. ಆ ವಿಗ್ರಹ ಏನಾಯ್ತು? ಜನ ಅವರನ್ನು ಏನು ಮಾಡಿದರು? ರಾಕಿಭಾಯ್ ಗ್ಯಾಂಗ್ ಅನ್ನು ಶೆಟ್ಟಿ, ಇನಾಯತ್ ಖಲೀಲ್ ಇತರರು ಸೇರಿ ಕೊಂದ ಬಳಿಕ ಮತ್ತೆ ರಾಕಿಭಾಯ್ ಪರವಾಗಿ ಗನ್ ಹಿಡಿದು ಶೆಟ್ಟಿ ಗ್ಯಾಂಗ್, ಇನಾಯತ್ ಗ್ಯಾಂಗ್ ಸದಸ್ಯರನ್ನು ಕೊಂದ ಹುಡುಗರು ಯಾರು? ಅವರನ್ನು ರಾಕಿಭಾಯ್ ಎಲ್ಲಿಂದ ಕರೆತಂದ? ಇಂಥಹಾ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬಹುದು. ಆದರೆ ಕಮರ್ಶಿಯಲ್ ಸಿನಿಮಾದಲ್ಲಿ ಇಂಥಹಾ ಸಣ್ಣ ಪುಟ್ಟ ಓರೆಕೋರೆಗಳಿಗೆ ಕ್ಷಮೆ ಇದ್ದೇ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ 'ಕೆಜಿಎಫ್ 2' ಪಕ್ಕಾ ಮನೊರಂಜನಾತ್ಮಕ ಸಿನಿಮಾ. ಜೊತೆಗೆ ಕನ್ನಡಿಗರು ಹೆಮ್ಮೆ ಪಡಬಹುದಾದಷ್ಟು ತಾಂತ್ರಿಕವಾಗಿ ರಿಚ್ ಆಗಿರುವ ಸಿನಿಮಾ.