ಧನಂಜಯ್ 'ಗುರುದೇವ್ ಹೊಯ್ಸಳ' ನೋಡಿದ ಮೊದಲ ಪ್ರೇಕ್ಷಕ ಹೇಳಿದ್ದೇನು? ಚಿತ್ರ ಹಿಟ್ಟಾ, ಫ್ಲಾಪಾ?
ಕಳೆದ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿಸ ನಿರೀಕ್ಷಿಸಿದ್ದ ಯಶಸ್ಸು ಸಿಗದೇ ಕೈಸುಟ್ಟುಕೊಂಡಿದ್ದ ಡಾಲಿ ಧನಂಜಯ್ ಈ ವರ್ಷ ಆ ಪಾಲಿಸಿಯಿಂದ ಹೊರಬಂದು ಚಿತ್ರಗಳ ಆಯ್ಕೆಯಲ್ಲಿ ಜಾಗರೂಕತೆ ವಹಿಸಿದಂತಿದೆ. ಹೌದು, ಈ ವರ್ಷದ ಮೊದಲೆರಡು ತಿಂಗಳುಗಳಲ್ಲಿ ಧನಂಜಯ್ ಅವರ ಯಾವ ಚಿತ್ರವೂ ಸಹ ಬಿಡುಗಡೆಗೊಂಡಿಲ್ಲ. ಆದರೆ ಮೂರನೇ ತಿಂಗಳು ಅಂದರೆ ಮಾರ್ಚ್ ತಿಂಗಳ 30ರಂದು ಧನಂಜಯ್ ನಟನೆಯ ಗುರುದೇವ್ ಹೊಯ್ಸಳ ಚಿತ್ರ ತೆರೆಗೆ ಬರುತ್ತಿದೆ.
ಈ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ಮೊದಲಿಗೆ ಹೊಯ್ಸಳ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದ ಈ ಚಿತ್ರಕ್ಕೆ ಫಿಲ್ಮ್ ಚೇಂಬರ್ ಕಡೆಯಿಂದ ಟೈಟಲ್ ಸಿಗದ ಕಾರಣ ಗುರುದೇವ್ ಹೊಯ್ಸಳ ಎಂಬ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದೆ ಚಿತ್ರತಂಡ.

ಇನ್ನು ಈ ಚಿತ್ರ ತೆರೆಗೆ ಬರುವ ಮುನ್ನವೇ ವಿಶೇಷ ಪ್ರೇಕ್ಷಕರೋರ್ವರು ಚಿತ್ರವನ್ನು ವೀಕ್ಷಿಸಿ ಚಿತ್ರ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ. ಹೌದು, ಗುರುದೇವ್ ಹೊಯ್ಸಳ ಚಿತ್ರವನ್ನು ಬಿಡುಗಡೆಗೂ ಮುನ್ನ ಕನ್ನಡ ಚಲನಚಿತ್ರರಂಗದ ಬಾಕ್ಸ್ ಆಫೀಸ್ ಬಾದ್‌ಷಾ ಎಂದೇ ಖ್ಯಾತಿಯನ್ನು ಪಡೆದಿರುವ ನಟ ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ.
ಚಿತ್ರ ನೋಡಿದ ಬಳಿಕ ಕಿಚ್ಚ ಸುದೀಪ್ 'ಗುರುದೇವ್ ಹೊಯ್ಸಳ ಸರ್ಟಿಫೈಡ್ ಹಿಟ್' ಎಂಬ ಬೋರ್ಡ್ ಹಿಡಿದು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಜತೆಗೆ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ, ನಾಯಕ ಡಾಲಿ ಧನಂಜಯ್, ನಾಯಕಿ ಅಮೃತಾ ಅಯ್ಯಂಗಾರ್ ಹಾಗೂ ಖಳ ನಾಯಕ ನವೀನ್ ಶಂಕರ್ ಸಹ ಚಿತ್ರವನ್ನು ವೀಕ್ಷಿಸಿದ್ದಾರೆ.
ಈ ಫೋಟೊವನ್ನು ಕೆ ಆರ್ ಜಿ ಕನೆಕ್ಟ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು 'ಬಾದ್‌ಷಾ ಕಿಚ್ಚ ಸುದೀಪ್ ಗುರುದೇವ್ ಹೊಯ್ಸಳ ಚಿತ್ರದ ಮೊದಲ ಪ್ರೇಕ್ಷಕರಾಗಿದ್ದು, ಚಿತ್ರವನ್ನು ವೀಕ್ಷಿಸಿದ ಬಳಿಕ ಹಿಟ್ ಸರ್ಟಿಫಿಕೇಟ್ ನೀಡಿದ್ದಾರೆ. ಧನ್ಯವಾದಗಳು ಸರ್. ಚಿತ್ರ ನಾಳೆ ಬಿಡುಗಡೆಯಾಗಲಿದೆ' ಎಂದು ಬರೆದುಕೊಂಡಿದೆ.

ಈ ಮೂಲಕ ಕಿಚ್ಚ ಸುದೀಪ್ ಗುರುದೇವ್ ಹೊಯ್ಸಳ ಚಿತ್ರವನ್ನು ಮೊದಲು ವೀಕ್ಷಿಸಿ ಮೆಚ್ಚಿಕೊಂಡಿರುವುದು ಚಿತ್ರಕ್ಕೆ ಮೊದಲ ಜಯವನ್ನು ತಂದುಕೊಟ್ಟಿದ್ದು, ಪ್ರೇಕ್ಷಕ ಮಹಾಪ್ರಭು ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಕಾದು ನೋಡಬೇಕಿದೆ.
ಇನ್ನು ಕಿಚ್ಚ ಸುದೀಪ್ ಈ ಚಿತ್ರಕ್ಕೆ ಆರಂಭದಿಂದಲೂ ಸಹ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವುದರಿಂದ ಹಿಡಿದು ಟ್ರೈಲರ್ ರಿಲೀಸ್ ಮಾಡುವವರೆಗೂ ಸಹ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು ಚಿತ್ರದ ಟ್ರೈಲರ್ ಅನ್ನ ಮೆಚ್ಚಿಕೊಂಡಿದ್ದ ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕವೂ ಸಹ ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗುರುದೇವ್ ಹೊಯ್ಸಳ ಚಿತ್ರದ ಟ್ರೈಲರ್ ಇಷ್ಟವಾಗಿದೆ. ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಧನಂಜಯ್ ಪೊಲೀಸ್ ಪಾತ್ರದಲ್ಲಿ ಖಡಕ್ ಅಗಿ ಕಾಣಿಸಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್ ಮುದ್ದಾಗಿ ಕಾಣಿಸಿಕೊಂಡಿದ್ದು, ಅಜನೀಶ್ ಲೋಕನಾಥ್ ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಖತ್ತಾಗಿದೆ, ಮತ್ತೊಮ್ಮೆ ಗೆದ್ದಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದರು.
ಚಿತ್ರ ನಾಳೆ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಸೇರಿದಂತೆ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಇದರ ಜತೆಗೆ ಯುಎಇ, ಕೆನಡಾ ಹಾಗೂ ಯುಎಸ್ಎಯಲ್ಲಿಯೂ ಬಿಡುಗಡೆಯಾಗುತ್ತಿದೆ.


Click it and Unblock the Notifications











