Killer Soup review: ಮನೋಜ್ ಬಾಜಪೇಯಿ, ಕೊಂಕಣ ಸೇನ್ ಮಾಡಿದ ಈ 'ಕಿಲ್ಲರ್ ಸೂಪ್' ಒಮ್ಮೆ ಟ್ರೈ ಮಾಡಿ!
ವೆಬ್ ಸೀರಿಸ್: ಕಿಲ್ಲರ್ ಸೂಪ್
ನಿರ್ದೇಶಕ: ಅಭಿಷೇಕ್ ಚೌಬೆ
ತಾರಾಗಣ: ಮನೋಜ್ ಬಾಜಪೇಯಿ, ಕೊಂಕಣ ಸೇನ್ ಶರ್ಮಾ, ನಾಸರ್, ಅನುಲಾ ನವ್ಲೇಕರ್, ಕನಿ ಕುಸೃತಿ,
ಪ್ಲಾಟ್‌ಫಾರಂ: ನೆಟ್‌ಫ್ಲಿಕ್ಸ್
ಮೊದಲಿನಂತೆ ಈಗ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಬೇಕು ಎಂಬುದಿಲ್ಲ. ಸಿನಿಮಾಗಳ ಜೊತೆ ಜೊತೆಗೆ ವೆಬ್ ಸೀರಿಸ್‌ಗಳು, ಡಾಕ್ಯುಮೆಂಟರಿಗಳು ಈಗ ಓಟಿಟಿ ಪ್ಲಾಟ್‌ಫಾರಂ ಮೂಲಕ ಮನೆ ಮನೆಗಳನ್ನು, ಮೊಬೈಲ್ ಫೋನ್‌ಗಳನ್ನು ತಲುಪುತ್ತಿವೆ. ನೆಟ್‌ಫ್ಲಿಕ್ಸ್ ತನ್ನದೆ ಒರಿಜಿನಲ್ ವೆಬ್ ಸೀರಿಸ್, ಸಿನಿಮಾಗಳ ಮೂಲಕ ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ.
ಈಗ ಇದರ ಸಾಲಿಗೆ ಮತ್ತೊಂದು ವೆಬ್ ಸೀರಿಸ್ ಸೇರಿಕೊಂಡಿದೆ. 2024 ರ ಮೊದಲ ಭಾರತೀಯ ವೆಬ್ ಸೀರಿಸ್ ಆಗಿ 'ಕಿಲ್ಲರ್ ಸೂಪ್' ಜನವರಿ 11 ರಂದು ಬಿಡುಗಡೆಯಾಗಿದೆ. ಅಭಿಷೇಕ್ ಚೌಬೆ ನಿರ್ದೇಶನದ ನಟ ಮನೋಜ್ ಬಾಜ್‌ಪೇಯಿ ಮತ್ತು ಕೊಂಕಣ ಸೆನ್‌ಶರ್ಮಾ ನಟನೆಯ ಈ ಡಾರ್ಕ್ ಕಾಮಿಡಿ ಸಿರೀಸ್ ಹೇಗಿದೆ...ಕಥೆಯೇನು ಎಂಬ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.

'ಕಿಲ್ಲರ್ ಸೂಪ್' ಕತೆಯೇನು?
ಅಭಿಷೇಕ್ ಚೌಬೆ ನಿರ್ದೇಶನದ ಕಿಲ್ಲರ್ ಸೋಪ್ ಹೆಸರಿನಂತೆಯೇ ಸೂಪ್ ಎಂಬ ರೂಪಕವನ್ನಿಟ್ಟುಕೊಂಡು ಹೆಣೆಯಲಾಗಿರುವ ಕತೆ. ರುಚಿಯಾದ ಸೂಪ್‌ಗೆ ಏನೇನು ಬೇಕು... ಸೂಪ್ ಮಾಡಲು ಬೇಕಾಗುವ ಅನುಭವ, ಸ್ವಾದ, ಹದ, ಸಮತೋಲ, ಸಿಕ್ರೇಟ್ ಎಲ್ಲವನ್ನು ಹೆಣ್ಣಿನ ಮನಸ್ಸಿನ ಜೊತೆಗೆ ಹೊಂದಿಸುವಂತೆ ಮಾಡಲಾಗಿದೆ.
'ಕಿಲ್ಲರ್ ಸೂಪ್'ನಲ್ಲಿ ಸ್ವಾತಿ (ಕೊಂಕ ಸೇನ್) ಗೃಹಿಣಿಯಾಗಿದ್ದು, ಅಡುಗೆ ಬರದಿದ್ದರೂ ಕೂಡ ಒಬ್ಬ ಶೇಫ್ ಆಗಲು ಮತ್ತು ತನ್ನದೇ ಆದ ರೆಸ್ಟಾರೆಂಟ್ ತೆರೆಯಬೇಕು ಎಂಬ ಆಕಾಂಕ್ಷೆ ಹೊಂದಿರುತ್ತಾರೆ. ಆಕೆಯ ಪತಿ ಪ್ರಭಾಕರ್ (ಮನೋಜ್ ಬಾಜಪೇಯಿ) ಮತ್ತು ಬಾವ ಅರವಿಂದ್ (ಸಯಾಜಿ ಶಿಂಧೆ) ಆಕೆಯ ಕನಸುಗಳಿಗೆ ಬೆಂಬಲ ನೀಡುವುದಿಲ್ಲ. ಜೀವನದಲ್ಲಿ ಯಾರಿಂದಲೂ ಪ್ರೀತಿ, ಗೌರವ ಸಿಗದ ಆಕೆ ತನ್ನ ರಹಸ್ಯ ಪ್ರೇಮಿ ಉಮೇಶ್ (ಮನೋಜ್ ಬಾಜಪೇಯಿ ಡಬ್ಬಲ್ ಆಕ್ಟಿಂಗ್) ಕಡೆಗೆ ತಿರುಗುತ್ತಾಳೆ.
ಈ ಪ್ರೇಮಿಗಳು ಗಂಡನ ಕೈಲಿ ಸಿಲುಕಿಕೊಂಡು ಆತನನ್ನು ಆಕಸ್ಮಿಕವಾಗಿ ಕೊಲೆ ಮಾಡಿಬಿಡುತ್ತಾರೆ. ಇದಾದ ನಂತರ ಶುರುವಾಗುತ್ತದೆ ಕಥೆ. ಸತ್ತ ಗಂಡನನ್ನು ಬದುಕಿದ್ದಾನೆ ಎಂದು ತೋರಿಸಿ ತನ್ನ ಕನಸುಗಳನ್ನು ಸಕಾರ ಮಾಡಿಕೊಳ್ಳಲು ಪ್ರಯತ್ನಿಸುವ ಸ್ವಾತಿ, ತನ್ನ ರೆಸ್ಟೋರೆಂಟ್ ತೆಗೆಯುತ್ತಾಳಾ...? ಬರೀ ಪ್ರೀತಿಯನ್ನೇ ಬಯಸಿದ್ದ ಉಮೇಶ್, ಸ್ವಾತಿ ಜೊತೆಗೆ ಸೇರಿ ತನ್ನತನವನ್ನೇ ಕಳೆದುಕೊಂಡು ಹೇಗಿರುತ್ತಾನೆ..? ಇದೆ ಜೊತೆಗೆ ತಳುಕು ಹಾಕಿಕೊಂಡ ಹಣ ವಂಚನೆ.. ಪೊಲೀಸ್ ಅಧಿಕಾರಿ (ನಾಸರ್)ಯಿಂದ ತಪ್ಪಿಸಿಕೊಳ್ಳಲು ಸ್ವಾತಿ ಮಾಡುವ ಉಪಾಯಗಳು...ಎಲ್ಲದರ ಮಿಶ್ರಣವೇ ಕಿಲ್ಲರ್ ಸೂಪ್.

ಕಿಲ್ಲರ್ ಸೂಪ್ ಹೇಗಿದೆ..?
ಹೆಸರಿಗೆ ತಕ್ಕಂತೆ ಕಿಲ್ಲರ್ ಸೂಪ್ ಚಿಲ್ ಫೀಲಿಂಗ್ ಕೊಡುತ್ತದೆ. ಕಾಮಿಡಿ, ರಹಸ್ಯ, ಭಯ, ಆತಂಕ, ಆಸೆ ಎಲ್ಲವನ್ನೂ ನಿಮ್ಮ ಮುಂದಿಡುತ್ತದೆ. ನಟ ಮನೋಜ್ ಭಾಜಪೇಯಿ ಎರಡು ಪಾತ್ರಗಳಲ್ಲಿಯೂ ಜೀವಿಸಿದ್ದಾರೆ. ಉಮೇಶ್ ಆಗಿ ಅವರ ನಟನೆ ಮನದಲ್ಲಿ ಉಳಿಯಲಿದೆ. ಕೊಂಕಣ್ ಸೇನ್ ಶರ್ಮಾ ಕಣ್ಣು ಮತ್ತು ಮುಖಭಾವ ಸಿರೀಸ್ ಮುಗಿದರು ನಿಮ್ಮ ಕಣ್ಣಲ್ಲಿ ಕಾಣಿಸುತ್ತಲೇ ಇರುತ್ತದೆ. ನಾಸರ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ.
ಒಂದು ಮರ್ಡರ್ ಮಿಸ್ಟ್ರಿ ಕಥೆಯನ್ನು ಅಚ್ಚುಕಟ್ಟಾಗಿ ಜನರ ಮುಂದಿಡಲಾಗಿದೆ. ಕೆಲವೊಮ್ಮೆ ಪಾತ್ರಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ನೋಡುಗರಿಗೆ ಅದೆಲ್ಲವೂ ಬಹಳ ತಮಾಷೆಯಾಗಿ ಕಾಣುತ್ತದೆ. ಸಿನಿಮಾ ಹಿಮದಿಯದ್ದೇ ಆಗಿದ್ದರೂ ಕೂಡ ತಮಿಳುನಾಡಿನ ಕತೆ ಎಂದೂ ಹಿಂದಿ ಮತ್ತು ತಮಿಳು ಸಂಭಾಷಣೆಯನ್ನು ಬೆರೆಸಿ ಇಡಲಾಗಿದೆ.
ಮನೋಜ್ ಬಾಜಪೇಯಿ ಅವರು ತಮ್ಮ ವಿಭಿನ್ನ ಬ್ರಾಂಡ್ ಕಾಮಿಡಿಯೊಂದಿಗೆ ಮತ್ತೆ ಒಟಿಟಿಗೆ ಮರಳಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಮತ್ತು ಗ್ಯಾಂಗ್ಸ್ ಆಫ್ ವಾಸ್ಸೆಪುರ್ ಬಳಿಕ ಮತ್ತೆ ನಿಮ್ಮನ್ನು ಈ ವೆಬ್ ಸಿರೀಸ್‌ನಲ್ಲಿ ಕಾಡಲಿದ್ದಾರೆ. ಪ್ರಭಾಕರ್ ಮತ್ತು ಉಮೇಶ್ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಸಲೀಸಾಗಿ ನಟಿಸಿದ್ದಾರೆ. ನಟಿ ಕೊಂಕಣ್ ಸೇನ್ ಶರ್ಮಾ ಪಾತ್ರ ಅಸಹಾಯಕ ಹೆಣ್ಣು ಮಗಳೊಬ್ಬಳು ತನ್ನ ಹಕ್ಕಿಗಾಗಿ ತನ್ನ ಖುಷಿಗಾಗಿ ಬದುಕಿದರೇ ಏನು ಬೇಕಾದರು ಎದುರಿಸಬಲ್ಲಳು ಎಂಬುದನ್ನು ತೋರಿಸಿದೆ.
ಮನೋಜ್ ಬಾಜಪೇಯಿ ಮತ್ತು ಕೊಂಕಣ್ ಸೇನ್ ಶರ್ಮಾ ಬಿಟ್ಟು ನಾಸರ್ ಮತ್ತು ಸಯಾಜಿ ಶಿಂಧೆ ತಮ್ಮ ನಟನೆ ಮತ್ತು ಹಾಸ್ಯದ ಮೂಲಕ 'ಕಿಲ್ಲರ್ ಸೂಪ್'ಗೆ ಮತ್ತಷ್ಟು ರುಚಿ ನೀಡಿದ್ದಾರೆ. ಇನ್ನು, ಅಲ್ಲಲ್ಲಿ ಲಾಜಿಕ್ ಇಲ್ಲ ಮಾತುಗಳು, ಕೊಂಚ ಎಳೆದಂತೆ ಅನ್ನಿಸುವ ದೃಶ್ಯಗಳಿವೆ. ಇವುಗಳ ನಡುವೆಯೂ ಕಿಲ್ಲರ್ ಸೂಪ್ ರುಚಿ ಕೆಡಿಸಿಕೊಂಡಿಲ್ಲ.


Click it and Unblock the Notifications









