»   » ಚಾರ್ಲಿಚಾಪ್ಲಿನ್‌ ಹಾಸ್ಯದಲ್ಲಿರುವ ವಿಷಾದವಾಗಲಿ, ಲಾರೆಲ್‌ ಹಾರ್ಡಿ ಚಿತ್ರದಲ್ಲಿರುವ ವ್ಯಂಗ್ಯವಾಗಲಿ ಕೋತಿಗಳು ಸಾರ್‌ ಕೋತಿಗಳು ಚಿತ್ರಲ್ಲಿಲ್ಲ. ಸುಮ್ಮನೇ ನಗಬೇಕು ಅಷ್ಟೇ.

ಚಾರ್ಲಿಚಾಪ್ಲಿನ್‌ ಹಾಸ್ಯದಲ್ಲಿರುವ ವಿಷಾದವಾಗಲಿ, ಲಾರೆಲ್‌ ಹಾರ್ಡಿ ಚಿತ್ರದಲ್ಲಿರುವ ವ್ಯಂಗ್ಯವಾಗಲಿ ಕೋತಿಗಳು ಸಾರ್‌ ಕೋತಿಗಳು ಚಿತ್ರಲ್ಲಿಲ್ಲ. ಸುಮ್ಮನೇ ನಗಬೇಕು ಅಷ್ಟೇ.

Subscribe to Filmibeat Kannada


ಮೂರು ನಾಯಕರ ಸುತ್ತ ಆರು ನಾಯಕಿಯರು ...

ಹೆಂಡತಿಯೆಂದರೆ ಹೌಹಾರುವ ಮೂರು ಗಂಡಂದಿರಿಗೆ ಮೂರು ಫಾರಿನ್‌ ರಿಟರ್ನ್ಡ್‌ ಲೇಡಿಗಳು ಗಂಟುಬೀಳುತ್ತಾರೆ. ಅವರನ್ನು ಪ್ರೀತಿಸುವ ನಾಟಕ ಆಡುವಂತೆ ಅವರ ಅಪ್ಪ ಕಂ ನಾಯಕರ ಬಾಸ್‌ ಅಪ್ಪಣೆ ಮಾಡುತ್ತಾನೆ. ಮೊದಲು ಪ್ರೀತಿ ಮಾಡಬೇಕು. ಆಮೇಲೆ ಕೈ ಕೊಡಬೇಕು. ಭಗ್ನ ಪ್ರೇಮಿಗಳಾಗುವ ಮಕ್ಕಳು ತಾನು ಹೇಳಿದ ಗಂಡುಗಳಿಗೆ ತಾಳಿ ಕಟ್ಟುತ್ತಾರೆ ಅನ್ನೋದು ಬಾಸ್‌ ಚಿಂತನೆ. ಅನಾಯಾಸವಾಗಿ ಬಂದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂರು ಕೋತಿಗಳು, ನಾಟಕವನ್ನೇ ನಿಜವಾಗಿಸುವ ಹಂತ ತಲುಪುತ್ತಾರೆ. ಆಗ ಅವರ ಪತ್ನಿಯಂದಿರಿಗೆ ಸಕಲ ಸಂಗತಿಗಳೂ ಗೊತ್ತಾಗಿ ಯುದ್ಧ ಶುರುವಾಗುತ್ತದೆ.

ಚಿತ್ರದಲ್ಲಿ ಮೂರು ನಾಯಕರು, ಆರು ನಾಯಕಿಯರು, ಹೀಗೆ ಒಂಬತ್ತು ಪಾತ್ರಗಳು. ಇವುಗಳನ್ನು ಪೋಷಿಸುವುದಕ್ಕೆ ಒಬ್ಬ ಬಾಸ್‌ ಮತ್ತು ಮನೆ ಕೆಲಸದವಳು. ಹೀಗೆ ಹನ್ನೊಂದು ಪಾತ್ರಗಳನ್ನು ತೆರೆಯ ಮೇಲೆ ತುಂಬುವ ಬಾಬು, ಚಿತ್ರಕ್ಕೊಂದು ಜಾತ್ರೆಯ ಟಚ್‌ ಕೊಟ್ಟಿದ್ದಾರೆ. ನಗೆ ಚಿತ್ರವಾಗಿರುವುದರಿಂದ ದೃಶ್ಯವೈಭವಕ್ಕಾಗಲಿ, ತಾಂತ್ರಿಕ ಸರ್ಕಸ್‌ಗಾಗಲಿ ಇಲ್ಲಿ ಸ್ಕೋಪ್‌ ಇಲ್ಲ. ಎಲ್ಲಾ ಪಾತ್ರಗಳಿಗೂ ಸಮಾನ ಅವಕಾಶವಿದೆ. ಕಲಾವಿದರಿಗೆ ಡೈಲಾಗ್‌ ಷೀಟ್‌ ಕೊಟ್ಟು ಅವರಿಷ್ಟ ಬಂದಂತೆ ನಟಿಸಲು ಅನುಮತಿ ನೀಡಿದ್ದಾರೆಯೋ ಎಂದು ಗುಮಾನಿ ಮೂಡಿಸುವ ದೃಶ್ಯಗಳೂ ಇವೆ. ಆದರೆ ಎಲ್ಲೂ ಈ ಸ್ವಾತಂತ್ರ್ಯದ ದುರುಪಯೋಗ ಆಗಿಲ್ಲ. ನಟನಟಿಯರಾದರೂ ಸ್ಕಿೃಪ್ಟ್‌ನಿಂದಾಚೆ ಜಿಗಿದಿಲ್ಲ. ಅದಕ್ಕೆ ಬದಲಾಗಿ ನಟನೆಯಲ್ಲಿ ಪೈಪೋಟಿ ನಡೆಸಿದ್ದಾರೆ. ಇದರಲ್ಲಿ ಗೆಲ್ಲುವುದು ಉಮಾಶ್ರಿ ಮತ್ತು ಊರ್ವಶಿ.

‘ಬಾರೇ ರಾಜಕುಮಾರಿ...’

ಅಸಲಿ ನಟ ಅಥವಾ ನಟಿಯ ರೇಂಜ್‌ ಗೊತ್ತಾಗುವುದೂ ಇಂಥಾ ಚಿತ್ರಗಳಲ್ಲೇ. ರಮೇಶ್‌, ಮೋಹನ್‌, ಎಸ್‌. ನಾರಾಯಣ್‌ - ಈ ಮೂರು ನಟರೂ ಹಾಸ್ಯ ಪಾತ್ರಗಳಲ್ಲಿ ಪಳಗಿದವರಾದರೂ ಮೂವರ ಶೈಲಿ ಬೇರೆಬೇರೆ. ಪ್ರೇಮಾ ಮತ್ತು ತಾರಾ ತಮ್ಮ ಪಾತ್ರಗಳಿಗೆ ನ್ಯಾಯ ಸಂದಾಯ ಮಾಡಲು ಒದ್ದಾಡುವ ದೃಶ್ಯವೇ ನಗೆ ಉಕ್ಕಿಸುತ್ತದೆ !

ಮೊದಲ ಬಾರಿಗೆ ಕನ್ನಡದ ಕವಿಗಳನ್ನು ಸಿನಿಮಾದಲ್ಲಿ ಇನ್‌ವಾಲ್ವ್‌ ಮಾಡುವ ಬಾಬು ಪ್ರಯತ್ನ ಯಶಸ್ಸು ಕಂಡಿದೆ. ಬಿ. ಆರ್‌. ಲಕ್ಷ್ಮಣ್‌ ರಾವ್‌ ಅವರ ‘ಬಾರೇ ರಾಜಕುಮಾರಿ..’ ಕವನ, ಡುಂಡಿರಾಜರ ನಾಲ್ಕೈದು ಹನಿಕವನಗಳು ಚಿತ್ರದ ಓಟಕ್ಕೆ ನೆರವಾಗುತ್ತವೆ. ಇದರ ಜೊತೆಗೆ ರಂಗಭೂಮಿಯಿಂದ ಎರವಲು ಪಡೆದುಕೊಂಡ ಮೈಮ್‌ಗಳೂ ಚಿತ್ರದಲ್ಲಿವೆ. ಸಿನಿಮಾ ನೋಡುವವರಿಗೆ ಇವೆಲ್ಲವೂ ಹೊಸದು.

ರಮೇಶ್‌ ಚಿರತೆ ಜೊತೆ ಮಾತನಾಡುವುದು, ಮೋಹನ್‌ ಕಾಲುಮುರಿದಂತೆ ನಟಿಸಿ ಸರ್ವರ ಸಿಂಪತಿಗೆ ಈಡಾಗುವುದು, ನಾರಾಯಣ್‌ ಬ್ಯಾಟ್‌ಮನ್‌ ಥರ ಕಟ್ಟಡದ ಗೋಡೆಯೇರುವುದು, ಉಮಾಶ್ರೀ ಮೋಹಿನಿ ಪಿಶಾಚಿ ಥರ ಕುಂಟುತ್ತಾ ಗೋಡೆ ಮೇಲೆ ವಾಕ್‌ ಮಾಡುವುದು, ಊರ್ವಶಿ ಮಾತಿಗೆ ಮುಂಚೆ ಮಂತ್ರಕ್ಕೆ ಶರಣಾಗುವುದು - ಹೀಗೆ ಚಿತ್ರದುದ್ದಕ್ಕೂ ಹತ್ತಾರು ನಗೆ ಐಟಂಗಳಿವೆ. ಹಂಸಲೇಖಾ ರಾಗಸಂಯೋಜನೆ ಮತ್ತು ರಿರೆಕಾರ್ಡಿಂಗ್‌ ಕೋತಿಗಳನ್ನು ಸಿಂಗರಿಸಿದೆ. ಮೂರು ಹೊಸ ಹುಡುಗಿಯರು ಲವಲವಿಕೆಯಿಂದ ಓಡಾಡುತ್ತಾರೆ.

ಕಳೆದ ವರ್ಷದುದ್ದಕ್ಕೂ ರೀಮೇಕು ಕಾಯಿಲೆಯಿಂದ ನರಳಿದ ಕನ್ನಡ ಚಿತ್ರರಂಗಕ್ಕೆ, ವರ್ಷಾಂತ್ಯದಲ್ಲಿ ಬಾಬು ಸ್ವಮೇಕು ಚಿತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ನೋಡಿ ನೀವು ನಗಬಹುದು. ಇದು ಒರಿಜಿನಲ್‌ ನಗು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada