ಹಳಸಲು ಹಾಸ್ಯದ ಕುರಿಗಳು ಸಾರ್ ಕುರಿಗಳು

ಚಿತ್ರ : ಕುರಿಗಳು ಸಾರ್ ಕುರಿಗಳು
ನಿರ್ದೇಶನ : ರಾಜೇಂದ್ರ ಸಿಂಗ್ ಬಾಬು
ಸಂಗೀತ : ಹಂಸಲೇಖ
ತಾರಾಗಣ : ರಮೇಶ್, ಎಸ್.ನಾರಾಯಣ್, ಮೋಹನ್, ಉಮಾಶ್ರೀ
*ವಿನೋದಿನಿ
ಕನ್ನಡದಲ್ಲಿ ಸ್ಲಾಪ್‌ಸ್ಟಿಕ್ ಕಾಮಿಡಿಗಳು ಗೆದ್ದ ಉದಾಹರಣೆ ಕಡಿಮೆ. ಇಲ್ಲಿ ಎಲ್ಲವೂ ಸ್ಪಷ್ಟವಾಗಿರಬೇಕು. ಅಲ್ಲದೇ, ಅಂಥ ತಮಾಷೆಯನ್ನು ಹ್ಯಾಂಡಲ್ ಮಾಡಬಲ್ಲ ನಿರ್ದೇಶಕರೂ ನಮ್ಮಲ್ಲಿ ಸಿಗುವುದಿಲ್ಲ. ಹೆಂಡತಿಯನ್ನು ಹಿಡಿದು ಜಗ್ಗಾಡುವ ದಿನೇಶ್ ಬಾಬು ( ಹೆಂಡ್ತಿಗ್ಹೇಳ್ತೀನಿ, ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ, ನಾನೇನೂ ಮಾಡ್ಲಿಲ್ಲ), ಇಂಪೋರ್ಟೆಡ್ ಜೋಕ್‌ಗಳನ್ನು ಕನ್ನಡಕ್ಕೆ ತಂದು ಸುಖಿಸುವ ಫಣಿ ರಾಮಚಂದ್ರ, ನಡುವೆ ಜೋಕ್ ಹೆಸರಲ್ಲಿ ಜೋಕರ್ ಆಗಿರುವ ಕೋಡ್ಲು ರಾಮಕೃಷ್ಣ ಮುಂತಾದವರನ್ನು ಬಿಟ್ಟರೆ ಅಪ್ಪಟ ಹಾಸ್ಯ ಚಿತ್ರಗಳನ್ನು ಕೊಟ್ಟವರು ಕಡಿಮೆ.
ಅಂಥ ಯತ್ನಕ್ಕೆ ರಾಜೇಂದ್ರ ಸಿಂಗ್ ಬಾಬು ಕೈ ಹಾಕಿದ್ದಾರೆ. ಅದ್ಕಾಕಾಗಿ ಅವರೇ ಪಶ್ಚಾತ್ತಾಪ ಪಡಬೇಕಾಗಿ ಬಂದರೂ ಆಶ್ಚರ್ಯವೇನಿಲ್ಲ. ಯಾಕೆಂದರೆ ಕುರಿಗಳು ಸಾರ್ ಕುರಿಗಳು, ಮಧ್ಯಂತರ ತನಕ ಹಾಸ್ಯ ಚಿತ್ರ, ನಂತರ ಹಾಸ್ಯಾಸ್ಪದ ! ಚಿತ್ರ ಕತೆ ತೀರಾ ಸರಳ.
ಮೂವರು ನಿರುದ್ಯೋಗಿಗಳು ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೆಲುವಾಸಿಗಳಾಗಿರುತ್ತಾರೆ. (ರಮೇಶ್, ಎಸ್. ನಾರಾಯಣ್, ಮೋಹನ್) ಅವರನ್ನು ಒಳ್ಳೆಯವರನ್ನಾಗಿಸಬೇಕೆಂದು ವಾರ್ಡನ್ ನೀಲಕಂಠ(ಶ್ರೀನಿವಾಸ ಮೂರ್ತಿ) ಪಣ ತೊಡುತ್ತಾನೆ. ಪರಿಣಾಮವಾಗಿ ಅವರು ಹೊರಗಿನ ಸಮಾಜಕ್ಕೆ ಕಾಲಿಡುತ್ತಾರೆ.
ಅಲ್ಲಿಂದ ಅವರ ಪರದಾಟ ಶುರುವಾಗುತ್ತದೆ. ಒಂದು ಮನೆಗೋಸ್ಕರ ನಾರಾಯಣ ಆಂಟಿಯಾಬ್ಬಳನ್ನು (ಉಮಾಶ್ರೀ) ಮದುವೆಯಾಗಬೇಕಾದ ಪ್ರಸಂಗ ಬರುತ್ತದೆ. ಈ ನಡುವೆ ರಮೇಶ್‌ಗೆ ಡಾಕ್ಟರ್ ಒಬ್ಬಾಕೆ ಜೊತೆಯಾಗುತ್ತಾಳೆ. ಮೋಹನ್ ದೋಬಿ ಹುಡುಗಿಗೆ ಮನ ಸೋಲುತ್ತಾನೆ.
ಆಂಟಿಯಿಂದ ಪಾರಾಗುವ ಯತ್ನದಲ್ಲಿದ್ದಾಗ, ಈ ಮೂವರು ಬ್ಯಾಂಕ್ ದರೋಡೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಲ್ಲಿಂದ ಅವರು ಹೇಗೆ ಪಾರಾಗುತ್ತಾರೆ ಮತ್ತು ತಮ್ಮ ತಮ್ಮ ಪ್ರೇಯಸಿಯರನ್ನು ಹೇಗೆ ಸೇರುತ್ತಾರೆ ಎನ್ನುವುದು ಕ್ಲೈಮ್ಯಾಕ್ಸ್. ಮಧ್ಯಂತರದ ನಂತರ ಚಿತ್ರ ಸೂತ್ರ ಹರಿದ ಗಾಳಿಪಟದಂತೆ ಜೋಲಿ ಹೊಡೆಯುತ್ತದೆ. ಬಾಬು ಚಿತ್ರದ ಮೇಲಿನ ಹತೋಟಿಯನ್ನು ಪೂರ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ಇದು ಅತ್ತ ಕಾಮಿಡಿಯೂ ಆಗದೆ ಇತ್ತ ಸೆಂಟಿಮೆಂಟು ಚಿತ್ರವೂ ಆಗದೆ, ನಿಮ್ಮನ್ನು ಎರಡೂವರೆ ಗಂಟೆಗಳ ಕಾಲ ಬೋರು ಹೊಡೆಸುವ ಸಿನಿಮಾ ಆಗುತ್ತದೆ.
ಏನೆಲ್ಲ ವಿಚಿತ್ರಗಳು ಇಲ್ಲಿ ಸಂಭವಿಸುತ್ತದೆ ಅಂತ ಹೇಳುವುದು ಕಷ್ಟ. ಯಾರು ಏನುಬೇಕಾದರೂ ಆಗಬಹುದು. ಎಲ್ಲಿ ಬೇಕಿದ್ರೂ ಕಾಣಿಸಿಕೊಳ್ಳಬಹುದು. ನಗಿಸುವುದೊಂದೇ ಮುಖ್ಯ ಎಂದು ಬಾಬು ಭಾವಿಸಿದ್ದಾರೆ. ಈ ಚಿತ್ರ ನೋಡಿ ನಗದ ಮೇಲೆ ಕನ್ನಡಿಗರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದು ಬಾಬು ಹೇಳಬಹುದು. ಆದರೆ ಬಾಬುಗೆ ಹಾಸ್ಯ ಪ್ರಜ್ಞೆ ಇಲ್ಲ ಎಂಬುದು ಮಾತ್ರ ನಿರ್ವಿವಾದವಾಗಿ ಸಾಬೀತಾಗಿದೆ.
ಕೊನೆಯ 20 ನಿಮಿಷ ಅನಂತ್ ಆಗಮನವಾಗುತ್ತದೆ. ಅನಂತ್ ಜೊತೆ ಮೂವರು ಹುಡುಗಿಯರು ತಾ ಮುಂದು ನಾ ಮುಂದು ಎಂದು ನರ್ತಿಸುತ್ತಾರೆ. ನಾಯಕಿಯರನ್ನು ಸಾಕಷ್ಟು ಗ್ಲಾಮರಸ್ ಆಗಿ ಬಳಸಿಕೊಳ್ಳುವ ಪ್ರಯತ್ನವನ್ನೂ ಬಾಬು ಮಾಡಿದ್ದಾರೆ.
ಚಿತ್ರ ನೋಡಿದ ನಂತರ ಮನಸ್ಸಿನಲ್ಲಿ ಉಳಿಯುವುದು ಉಮಾಶ್ರೀಯ ಅಭಿನಯ, ಗೌರಿಶಂಕರ್ ಛಾಯಾಗ್ರಹಣ, ಹಂಸಲೇಖಾ ಹಾಡುಗಳು ಮಾತ್ರ.
ರಮೇಶ್, ನಾರಾಯಣ್, ಮೋಹನ್, ಅನಂತ್‌ನಾಗ್, ರುಚಿತಾ, ಭಾವನಾ, ಉಮಾಶ್ರೀ, ಸುಂದರ್‌ರಾಜ್, ರಕ್ಷಾ, ಭವ್ಯಶ್ರೀ ರೈ, ಮುಂತಾದ ತಾರಾಗಣ ಇಟ್ಟುಕೊಂಡು ಬಾಬು ಸೋತದ್ದು ನೋಡಿದರೆ ಅವರು ನಿವೃತ್ತರಾಗುವುದು ಲೇಸು !


Click it and Unblock the Notifications











