Lal Salaam Review: ಕ್ರಿಕೆಟ್ಟು, ಧಾರ್ಮಿಕ ಸಾಮರಸ್ಯ; ರಜನಿಕಾಂತ್ 'ಲಾಲ್ ಸಲಾಂ' ಕಥೆಯೇನು?
ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತಮಿಳಿನ 'ಲಾಲ್ ಸಲಾಂ' ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಜೈಲರ್' ಬ್ಲಾಕ್‌ಬಸ್ಟರ್ ಬಳಿಕ ತಲೈವಾ ನಟಿಸಿರುವ ಸಿನಿಮಾ ಎನ್ನುವ ಕಾರಣಕ್ಕೆ ಈ ಸ್ಪೋರ್ಟ್ಸ್ ಡ್ರಾಮಾ ಕುತೂಹಲ ಕೆರಳಿಸಿದ್ದು ಸುಳ್ಳಲ್ಲ. ಚಿತ್ರವನ್ನು ರಜನಿಕಾಂತ್ ಮಗಳು ಐಶ್ವರ್ಯ ನಿರ್ದೇಶನ ಮಾಡಿರುವುದು ವಿಶೇಷ.
ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಲಾಲ್ ಸಲಾಂ' ಚಿತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗೆಯಾಗಿದ್ದ ಟ್ರೈಲರ್ ಕೊಂಚಮಟ್ಟಿಗೆ ಗಮನ ಸೆಳೆದಿತ್ತು. ಇನ್ನುಳಿದಂತೆ ಸಿನಿಮಾ ಅಷ್ಟೇನು ಕುತೂಹಲ ಮೂಡಿಸಿರಲಿಲ್ಲ. ಸಾಕಷ್ಟು ಜನರಿಗೆ ಸಿನಿಮಾ ರಿಲೀಸ್ ಆಗುತ್ತಿರುವುದು ಕೂಡ ಗೊತ್ತಿರಲಿಲ್ಲ.

ಮೇಲ್ನೋಟಕ್ಕೆ ಇದು ಕ್ರಿಕೆಟ್ ಸುತ್ತಾ ಸುತ್ತಾ ಸುತ್ತುವ ಸಿನಿಮಾ ಎನಿಸಿತ್ತು. ಆದರೆ ಚಿತ್ರದಲ್ಲಿ ಅದಕ್ಕಿಂತ ದೊಡ್ಡ ವಿಚಾರದ ಬಗ್ಗೆ ಚರ್ಚಿಸಲಾಗಿದೆ. ಇದೇ ವಿಷಯದ ಬಗ್ಗೆ ಪ್ರೇಕ್ಷಕರು ಈಗ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ 'ಲಾಲ್ ಸಲಾಂ' ಸಿನಿಮಾ ಕಥೆಯೇನು? ಸೂಪರ್ ಸ್ಟಾರ್ ಆರ್ಭಟ ಹೇಗಿದೆ? ಮುಂದೆ ಓದಿ.
'ಲಾಲ್ ಸಲಾಂ' ಕಥೆ
90ರ ದಶಕದ ಆರಂಭದಲ್ಲಿ ಮುರಾರಬಾದ್ ಎಂಬ ಹಳ್ಳಿಯಲ್ಲಿ ಕಥೆ ಶುರುವಾಗುತ್ತದೆ. ಹಳ್ಳಿಯ ಹಿಂದೂ-ಮುಸ್ಲಿಂ ಸಮುದಾಯದವರ ಜೀವನ ಸೌಹಾರ್ದತೆ, ಸಾಮರಸ್ಯ ಹಾಗೂ ಸಹಬಾಳ್ವೆಯಿಂದ ಕೂಡಿರುತ್ತದೆ. ಆದರೆ ತಿರು (ವಿಷ್ಣು ವಿಶಾಲ್) ಹಾಗೂ ಮೊಯ್ದೀನ್ ಭಾಯ್ (ರಜನಿಕಾಂತ್) ಮಗ ಶಂಸುದ್ದೀನ್ (ವಿಕ್ರಾಂತ್) ನಡುವೆ ಚಿಕ್ಕಂದಿನಿಂದಲೂ ಭಾರೀ ಪೈಪೋಟಿ ಇರುತ್ತದೆ. ಅದು ಊರಿನ ಕ್ರಿಕೆಟ್ ಮೈದಾನಕ್ಕೂ ಬಂದು ತಲುಪುತ್ತದೆ. ಒಂದೇ ತಂಡದಲ್ಲಿ ಇಬ್ಬರೂ ಆಡುತ್ತಿದ್ದರೂ ಒಂದು ಪಂದ್ಯ ಇಬ್ಬರ ನಡುವೆ ಕಿರಿಕ್‌ಗೆ ಕಾರಣವಾಗುತ್ತದೆ.

ರಾಜಕಾರಣಿಯೊಬ್ಬ ಕ್ರಿಕೆಟ್ ಮೈದಾನದ ಸಣ್ಣಪುಟ್ಟ ಮನಸ್ತಾಪ ತನ್ನ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಇದರಿಂದ ಎರಡು ಸಮುದಾಯಗಳ ನಡುವೆ ಧಾರ್ಮಿಕ ಗಲಭೆ ಎಬ್ಬಿಸುತ್ತಾನೆ. ಅತ್ತ ಮುಂಬೈನಲ್ಲಿ ನೆಲೆಸಿರುವ ಮೊಯ್ದೀನ್ ಭಾಯ್ ತನ್ನ ಮಗ ಮುಂದೊಂದು ದಿನ ಭಾರತ ಕ್ರಿಕೆಟ್ ತಂಡಕ್ಕಾಗಿ ಆಡುವುದನ್ನು ನೋಡುವ ಕನಸು ಕಾಣುತ್ತಿರುತ್ತಾನೆ. ಆದರೆ ಹಳ್ಳಿಯ ಅದೊಂದು ಕ್ರಿಕೆಟ್ ಪಂದ್ಯದಿಂದ ಸಂಪೂರ್ಣ ಚಿತ್ರಣ ಬದಲಾಗಿ ಹೋಗುತ್ತದೆ. ಹಾಗಾದರೆ ಮೊಯ್ದೀನ್ ಭಾಯ್ ಕನಸು ನನಸಾಗುತ್ತಾ? ತಿರು-ಶಂಸು ತಿಕ್ಕಾಟ ಕೊನೆಗೊಳ್ಳುತ್ತಾ? ಊರಿನಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಬ್ರೇಕ್ ಬೀಳುತ್ತಾ? ಎನ್ನುವುದಕ್ಕೆ ಉತ್ತರ 'ಲಾಲ್ ಸಲಾಂ'.
ಸಿನಿಮಾ ಹೇಗಿದೆ?
ಅಂದಹಾಗೆ ಇದು ಬರೀ ಕ್ರಿಕೆಟ್ ಕುರಿತಾದ ಕಥೆಯಲ್ಲ. ಧಾರ್ಮಿಕ ಸಾಮರಸ್ಯದ ಬಗ್ಗೆ ಮಾತನಾಡುವ ಸಿನಿಮಾ. ಇನ್ನು ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಇಡೀ ಕಥೆಯ ಕೇಂದ್ರಬಿಂದದುವೇ ಆಗಿಬಿಟ್ಟಿದ್ದಾರೆ. 'ಲಾಲ್ ಸಲಾಂ' ಚಿತ್ರದುದ್ದಕ್ಕೂ ಧಾರ್ಮಿಕ ಸೌಹಾರ್ದತೆಗೆ ಅಡ್ಡಿಯಾಗುವ ಸಂಗತಿಗಳು ಯಾವ್ದು? ಸರಿಯಾದ ರೀತಿಯಲ್ಲಿ ಚಿಂತಿಸಿ ಆ ಅಡೆತಡೆಗಳನ್ನು ನಿವಾರಿಸಿ ಎಲ್ಲಾ ಧರ್ಮಿಯರು (ಮುಖ್ಯವಾಗಿ ಹಿಂದೂ-ಮುಸ್ಲಿಮರು) ಧಾರ್ಮಿಕ ಸೌಹಾರ್ದತೆಯಿಂದ ಬದುಕುವುದು ಹೇಗೆ? ಎಂದು ಹೇಳಲಾಗಿದೆ.
ಸೂಕ್ಷ್ಮ ವಿಚಾರವನ್ನು ಕ್ರಿಕೆಟ್ ಹಿನ್ನೆಲೆಯಲ್ಲಿ ಐಶ್ವರ್ಯ ರಜನಿಕಾಂತ್ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಹಾದಿಯಲ್ಲಿ ಸಂಪೂರ್ಣವಾಗಿ ಗೆದ್ದಿದ್ದಾರೆ ಎಂದು ಹೇಳುವುದು ಕಷ್ಟ. ಕೆಲವು ಕಡೆ ಸಿನಿಮಾ ವೇಗ ಕಮ್ಮಿಯಾಗಿ ಡಾಕ್ಯುಮೆಂಟರಿ ಎನಿಸಿಬಿಡುತ್ತದೆ. ಇನ್ನುಳಿದಂತೆ ಇಡೀ ತಂಡದ ಶ್ರಮವನ್ನು ಮೆಚ್ಚಲೇಬೇಕು. ಚಿತ್ರದ ಕಾಲಾವಧಿ ಕೂಡ ಮೈನಸ್ ಎನಿಸುತ್ತದೆ. ಕೆಲ ಸನ್ನಿವೇಶಗಳನ್ನು ಮತ್ತಷ್ಟು ಟ್ರಿಮ್ ಮಾಡಿದ್ದರೆ ಚೆನ್ನಾಗಿತ್ತು.
ಇನ್ನು ರಜನಿಕಾಂತ್ ಪಾತ್ರ ಹೀಗೆ ಬಂದು ಹಾಗೆ ಹೋಗಲ್ಲ. ಅತಿಥಿ ಪಾತ್ರವೂ ಅಲ್ಲ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಮಾತ್ರವೂ ಕಾಣಿಸಲ್ಲ. ಆರಂಭದಿಂದಲೂ ಅಲ್ಲಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಾರೆ. ಆದರೆ ಸ್ಕ್ರೀನ್‌ಸ್ಪೇಸ್ ಮಾತ್ರ ವಿಶಾಲ್, ವಿಕ್ರಾಂತ್‌ಗಿಂತ ಕಮ್ಮಿ ಸಿಕ್ಕಿದೆ ಎನ್ನಬಹುದು.
ಕಲಾವಿದರ ಅಭಿನಯ
ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಚಿತ್ರದ ನಾಯಕರಾಗಿ ನಟಿಸಿದ್ದರೂ ರಜನಿಕಾಂತ್ ಇಬ್ಬರನ್ನು ಮರೆಸಿಬಿಡುತ್ತಾರೆ. ಮುಸ್ಲಿಂ ಸಮುದಾಯದ ನಾಯಕ ಮೊಯ್ದೀನ್ ಭಾಯ್ ಪಾತ್ರವನ್ನು ತೆರೆ ಮೇಲೆ ನೋಡೋದೆ ಚೆಂದ. ಇತ್ತೀಚೆಗೆ ರಜನಿಕಾಂತ್ ವೈಯಕ್ತಿಕ ನಂಬಿಕೆಗಳ ಬಗ್ಗೆ ಭಾರೀ ಚರ್ಚೆ ಆಗಿತ್ತು. ರಜನಿಕಾಂತ್ ಅವರನ್ನು ಸಂಘಿ ಎಂದು ಕರೆಯುತ್ತಾರೆ ಎನ್ನುವ ಬಗ್ಗೆ ಐಶ್ವರ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಅಪ್ಪ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಆಧ್ಯಾತ್ಮಿಕ ವ್ಯಕ್ತಿ ಎಂದಿದ್ದರು. ಅದನ್ನು ಪುಷ್ಠೀಕರಿಸುವಂತೆ ಒಂದಷ್ಟು ಅರ್ಥಪೂರ್ಣ ಡೈಲಾಗ್ಸ್ ಚಿತ್ರದಲ್ಲಿದೆ.
ಮುಸ್ಲಿಂ ಭಾಂದವನನ್ನು ಕುರಿತು ಮೊಯ್ದೀನ್ ಭಾಯ್ "ನೀನು ಎಲ್ಲೇ ಹೋದರೂ ಭಾರತೀಯ. ಭಾರತೀಯ ಎನ್ನುವುದೇ ನಿನ್ನ ಗುರುತು. ಧರ್ಮ-ನಂಬಿಕೆಯನ್ನು ಮನಸ್ಸಿನಲ್ಲಿ ಇಟ್ಟುಕೋ, ಮನುಷ್ಯತ್ವವನ್ನು ಅದರ ಮೇಲಿಡು, ಅದೇ ಈ ದೇಶದ ಹೆಗ್ಗುರುತು" ಡೈಲಾಗ್ ಅದಕ್ಕೆ ಉತ್ತಮ ಉದಾಹರಣೆ. ಮೊಯ್ದೀನ್ ಭಾಯ್ ಆಗಿ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ರಜನಿಕಾಂತ್ ಹೊತ್ತು ಸಾಗಲು ಪ್ರಯತ್ನಿಸಿರುವುದು ಸುಳ್ಳಲ್ಲ.
ವಿಶಾಲ್ ಪ್ರೇಯಸಿಯಾಗಿ ಅನಂತಿಕಾ ಕೆಲವೇ ದೃಶ್ಯಗಳಲ್ಲಿ ಮನಸೆಳೆಯುತ್ತಾರೆ. ಇನ್ನುಳಿದಂತೆ ವಿವೇಕ್ ಪ್ರಸನ್ನ, ಧನ್ಯಾ ಬಾಲಕೃಷ್ಣ, ವಿಘ್ನೇಶ್ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬಹಳ ವರ್ಷಗಳ ಬಳಿಕ ರಜನಿಕಾಂತ್ ಚಿತ್ರದಲ್ಲಿ ನಟಿಸಿರುವ ಹಾಸ್ಯ ನಟ ಸೆಂಥಿಲ್ ಗಮನ ಸೆಳೆಯುತ್ತಾರೆ.
ತಾಂತ್ರಿಕವಾಗಿ ಸಿನಿಮಾ
ಐಶ್ವರ್ಯ ರಜನಿಕಾಂತ್ ಕೇಳಿದ ಎಲ್ಲವನ್ನು ನೀಡಿ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರವನ್ನು ಸೊಗಸಾಗಿ ನಿರ್ಮಿಸಿದೆ. ಇನ್ನು 90ರ ದಶಕದ ಕಾಲಘಟ್ಟವನ್ನು ಕಟ್ಟಿಕೊಡುವಲ್ಲಿ ಚಿತ್ರತಂಡ ಬಹುತೇಕ ಗೆದ್ದಿದೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಹಾಗೂ ಎ. ಆರ್ ರೆಹಮಾನ್ ಬಿಜಿಎಂ ಕಥೆಗೆ ಪೂರಕವಾಗಿದೆ.
ಕೊನೆ ಮಾತು
'ಜೈಲರ್' ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಹೋದರೆ 'ಲಾಲ್ ಸಲಾಂ' ಇಷ್ಟವಾಗುವುದು ಕಷ್ಟ. ಸೂಕ್ಷ್ಮ ವಿಚಾರದ ಸುತ್ತ ಕಥೆ ಸುತ್ತುವುದರಿಂದ ಐಶ್ವರ್ಯ ಹೆಚ್ಚು ರಿಸ್ಕ್ ತೆಗೆದುಕೊಂಡಿಲ್ಲ. ಅದೇ ಕಾರಣಕ್ಕೆ ನಿಧಾನಗತಿಯ ಚಿತ್ರಕಥೆ ನಿರಾಸೆ ಮೂಡಿಸುತ್ತದೆ. ಆದರೆ ರಜನಿಕಾಂತ್ ಹಾಗೂ ಇತರೆ ಕಲಾವಿದರ ನಟನೆ ಪ್ಲಸ್ ಆಗಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗುವುದು ಉಚಿತ ಎನಿಸುತ್ತದೆ.


Click it and Unblock the Notifications











