Leo Review: ಹಿಮಾಲಯದಷ್ಟು ನಿರೀಕ್ಷೆಯ ಭಾರ ಹೊತ್ತು ಎಡವಿದ್ರಾ ಲೋಕೇಶ್ ಕನಕರಾಜ್ ?
ದಳಪತಿ ವಿಜಯ್ ಹಾಗೂ ಲೋಕೇಶ್ ಕನಕರಾಜ್ ಜೋಡಿಯ 'ಲಿಯೋ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಕರ್ನಾಟಕದಲ್ಲೂ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಬೆಳ್ಳಂಬೆಳಗ್ಗೆ 4 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ದಳಪತಿ ಅಭಿಮಾನಿಗಳು ಸಿನಿಮಾ ಫಿದಾ ಆಗಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಲಿಯೋ' ಸಿನಿಮಾ ತೆರೆಗಪ್ಪಳಿಸಿದೆ. ಸಿನಿಮಾ ಹೇಗಿರುತ್ತೆ? 'ಲಿಯೋ' ಕೂಡ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್ ಭಾಗವಾಗುತ್ತಾ? ವಿಜಯ್-ಲೋಕೇಶ್ ಕಾಂಬೋ ಮತ್ತೆ ವರ್ಕ್ ಆಗುತ್ತಾ? ಇದು ಹಾಲಿವುಡ್‌ನ 'ಹಿಸ್ಟರಿ ಆಫ್ ವೈಲೆನ್ಸ್' ಸಿನಿಮಾ ರೀಮೆಕಾ? ಹೀಗೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು. ಆ ಎಲ್ಲಾ ಪ್ರಶ್ನೆಗಳಿಗೆ ಈಗ ಬ್ರೇಕ್ ಬಿದ್ದಿದೆ.

ಟ್ರೈಲರ್, ಸಾಂಗ್ಸ್‌ನಿಂದ 'ಲಿಯೋ' ಸಿನಿಮಾ ಒಂದು ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿತ್ತು. ಕತೆ ಹಳೆಯದ್ದೇ ಅನ್ನಿಸಿದರೂ ಲೋಕೇಶ್ ಕನಕರಾಜ್ ಟ್ರೀಟ್‌ಮೆಂಟ್ ಹೊಸದಾಗಿದೆ. 'ಲಿಯೋ' ಸಿನಿಮಾ ಹೇಗಿದೆ? ಕಂಪ್ಲೀಟ್ ರಿವ್ಯೂ ಮುಂದೆ ಓದಿ..
'ಲಿಯೋ' ಕತೆ ಏನು?
ಪಾರ್ಥಿ ಅಲಿಯಾಸ್ ಪಾರ್ಥಿಬನ್ (ವಿಜಯ್) ಹಿಮಾಚಲ ಪ್ರದೇಶದಲ್ಲಿ ಕಾಫಿ ಶಾಪ್ ನಡೆಸುತ್ತಿರುತ್ತಾನೆ. ಮಡದಿ ಸತ್ಯ(ತ್ರಿಶಾ) ಹಾಗೂ ಇಬ್ಬರು ಮಕ್ಕಳ ಸುಖೀ ಸಂಸಾರ. ಒಂದು ದಿನ ಪಾರ್ಥಿನ ಕ್ರೂರಿ ಗ್ಯಾಂಗ್‌ಸ್ಟರ್‌ಗಳಾದ ಆಂಟೋನಿ ದಾಸ್ (ಸಂಜಯ್ ದತ್) ಮತ್ತು ಹೆರಾಲ್ಡ್ ದಾಸ್ (ಅರ್ಜುನ್ ಸರ್ಜಾ) ಅಟ್ಯಾಕ್ ಮಾಡ್ತಾರೆ. ಆಂಟೋನಿ ಮಗ ಲಿಯೋ ದಾಸ್ ಎಂದು ಭಾವಿಸಿ ಈ ದಾಳಿ ಮಾಡುತ್ತಾರೆ. ಅಲ್ಲಿಂದ ಮುಂದೆ ಏನಾಗುತ್ತದೆ? ಪಾರ್ಥಿ ಈ ಗಂಡಾಂತರದಿಂದ ಹೇಗೆ ಹೊರ ಬರುತ್ತಾನೆ? ಪಾರ್ಥಿಬನ್ ಹಾಗೂ ಲಿಯೋ ದಾಸ್ ಇಬ್ಬರೂ ಒಬ್ಬರೇನಾ? ಅಥವಾ ಇಬ್ಬರೂ ಬೇರೆ ಬೇರೆನಾ? ಎನ್ನುವ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ 'ಲಿಯೋ' ಸಿನಿಮಾ ನೋಡಬೇಕು.
ಸಿನಿಮಾ ಹೇಗಿದೆ?
'ಕೈದಿ', 'ವಿಕ್ರಮ್' ನಂತರ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ರೂಪುಗೊಂಡ ಮೂರನೇ ಸಿನಿಮಾ 'ಲಿಯೋ'. ಹಿಮಾಚಲ ಪ್ರದೇಶದಲ್ಲಿ ಕಾಂಟ್ರಾಕ್ಟ್ ಕಿಲ್ಲಿಂಗ್ ಎಪಿಸೋಡ್ ಮೂಲಕ 'ಲಿಯೋ' ಸಿನಿಮಾ ಕತೆ ಆರಂಭವಾಗುತ್ತದೆ. ಹೈನಾ ಜೊತೆಗಿನ ಫೈಟ್ ಎಪಿಸೋಡ್‌ನಿಂದ ವಿಜಯ್ ಇಂಟ್ರಡಕ್ಷನ್ ಗಮನ ಸೆಳೆಯುವಂತಿದೆ. ಸೀರಿಯಲ್ ಕಿಲ್ಲರ್ ಗ್ಯಾಂಗ್‌ಗೆ ಎದಿರುಬದಿರಾಗುವ ದೃಶ್ಯ ಹಾಗೂ ಇಂಟರ್‌ವೆಲ್ ಬ್ಲಾಕ್ ಚೆನ್ನಾಗಿದೆ. ಆದರೆ ಸಿನಿಮಾ ಅಲ್ಲಲ್ಲಿ ಕೊಂಚ ನಿಧಾನವಾಗಿ ಸಾಗುತ್ತದೆ. ಆದರೆ ಪ್ರೀ ಇಂಟರ್‌ವಲ್ ಸಿನಿಮಾ ಮಜಾ ಕೊಡುತ್ತದೆ.
ಆಂಟೊನಿ ದಾಸ್(ಸಂಜಯ್ ದತ್) ಹಾಗೂ ಸತ್ಯ (ತ್ರಿಶಾ) ಇಬ್ಬರೂ ಪಾರ್ಥಿಬನ್(ವಿಜಯ್) ಹಿನ್ನಲೆ ತಿಳಿಯುವ ಪ್ರಯತ್ನದ ದೃಶ್ಯಗಳೊಂದಿಗೆ ಸೆಕೆಂಡ್ ಹಾಫ್ ಆರಂಭವಾಗುತ್ತದೆ. ಆದರೆ ಫಸ್ಟ್ ಹಾಫ್‌ಗೆ ಹೋಲಿಸಿದರೆ ಸೆಕೆಂಡ್ ಹಾಫ್ ಡಲ್ ಎನಿಸುತ್ತದೆ. ಲೋಕೇಶ್ ಕನಕರಾಜ್ ಮ್ಯಾಜಿಕ್ ಕಾಣಿಸಲ್ಲ. ಸಂಜಯ್ ದತ್, ಅರ್ಜುನ್ ಸರ್ಜಾ ಪಾತ್ರಗಳು ಕೂಡ ಅಷ್ಟಾಗಿ ಸದ್ದು ಮಾಡಲ್ಲ. ಫ್ಲಾಶ್ ಬ್ಯಾಕ್ ಎಪಿಸೋಡ್ ನಿರೀಕ್ಷಿಸಿದ ಮಟ್ಟದಲ್ಲಿ ಇಲ್ಲ. ಆಕ್ಷನ್ ಸನ್ನಿವೇಶಗಳು ಹೆಚ್ಚಾಗಿವೆ. ಇನ್ನು ಲೋಕೇಶ್ ತಮ್ಮ ಸಿನಿಮಾಟಿಕ್ ಯೂನಿವರ್ಸ್‌ಗೆ ಲಿಂಕ್ ಮಾಡಲು ಹೆಣಗಿರುವುದು ಗೊತ್ತಾಗುತ್ತದೆ.
'ಲಿಯೋ' ಕಥೆಯಲ್ಲಿ ಹೊಸತನವಿಲ್ಲದಿದ್ದರೂ ತಮ್ಮದೇ ವಿಭಿನ್ನ ಶೈಲಿಯ ಸ್ಕ್ರೀನ್ ಪ್ಲೇ ಮೂಲಕ ಚಿತ್ರವನ್ನು ಕುತೂಹಲಭರಿತವಾಗಿ ಕಟ್ಟಿಕೊಡಲು ಲೋಕೇಶ್ ಪ್ರಯತ್ನಿಸಿದ್ದಾರೆ. ಆದರೆ ಹಾದಿಯಲ್ಲಿ ಸಂಪೂರ್ಣವಾಗಿ ಗೆದ್ದಿದ್ದಾರೆ ಎಂದು ಹೇಳುವುದು ಕಷ್ಟ. ಸೆಕೆಂಡ್ ಹಾಫ್‌ನಲ್ಲಿ ನಿರ್ದೇಶಕರು ಎಡವಿದ್ದಾರೆ. ಕೆಲ ಸನ್ನಿವೇಶಗಳಲ್ಲಿ ಲಾಜಿಕ್ ಮಿಸ್ ಆಗಿದ್ದು ಕತೆ ನಿಧಾನವಾಗಿ ಸಾಗಿದಂತೆ ಭಾಸವಾಗುತ್ತದೆ. ಟೆಕ್ನಿಕಲ್ ವಾಲ್ಯೂಸ್ ಮಾತ್ರ ಚೆನ್ನಾಗಿದೆ.
ಕಲಾವಿದರ ಅಭಿನಯ
ದಳಪತಿ ವಿಜಯ್ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಪಾರ್ಥಿ ಪಾತ್ರವನ್ನು ಲೋಕಿ ಚೆನ್ನಾಗಿ ಡಿಸೈನ್ ಮಾಡಿದ್ದು ಅದನ್ನು ಅಷ್ಟೇ ಚೆನ್ನಾಗಿ ವಿಜಯ್ ನಿಭಾಯಿಸಿದ್ದಾರೆ. ತಮ್ಮ ಓವರಾಲ್ ಪರ್ಫಾಮನ್ಸ್ ಮೂಲಕ 'ಲಿಯೋ' ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾರೆ. ಭಾವನಾತ್ಮಕ ಸನ್ನಿವೇಶಗಳಲ್ಲೂ ಇಷ್ಟವಾಗುತ್ತಾರೆ. ಸಂಜಯ್ ದತ್, ಅರ್ಜುನ್ ಸರ್ಜಾ ಪಾತ್ರಗಳು ಸ್ಯಾಂಪಲ್‌ಗಳಲ್ಲಿ ಕಿಕ್ ಕೊಟ್ಟಂತೆ ತೆರೆಮೇಲೆ ಮಜಾ ಕೊಡಲ್ಲ. ತ್ರಿಶಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದ್ದು ಅದನ್ನು ಅಷ್ಟೆ ಚೆನ್ನಾಗಿ ನಿಭಾಯಿಸಿದ್ದಾರೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
ಅನಿರುದ್ಧ್ ರವಿಚಂದರ್ ಕೆಲವೊಮ್ಮೆ ಕೈ ಕೊಡುತ್ತಾರೆ. 'ಜೈಲರ್' ಚಿತ್ರವನ್ನು ಬಿಜಿಎಂನಿಂದಲೇ ಗೆಲ್ಲಿಸಿದ್ದ ಅನಿ ಇಲ್ಲಿ ಕೊಂಚಮಟ್ಟಿಗೆ ನಿರಾಸೆ ಮೂಡಿಸಿದ್ದಾರೆ ಅಂದರೆ ತಪ್ಪಾಗಲ್ಲ. ಹಾಡುಗಳು ಅಷ್ಟಾಗಿ ಸದ್ದು ಮಾಡದಿದ್ದರೂ ಬಿಜಿಎಂ ಚಿತ್ರಕ್ಕೆ ಪೂರಕವಾಗಿದೆ ಎನ್ನಬಹುದು ಅಷ್ಟೆ. ಇನ್ನು ಲೋಕೇಶ್ ವಿಷನ್‌ನ ಸೊಗಸಾಗಿ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ಮನೋಜ್ ಪರಮಹಂಸ ಗೆದ್ದಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಮಾತನಾಡಲೇಬೇಕು. ಚಿತ್ರದಲ್ಲಿ ಆಕ್ಷನ್ ಕೊಂಚ ಹೆಚ್ಚಾಯಿತು ಅನ್ನಿಸದೇ ಇರದು. ಆದರೆ ಹಾಲಿವುಡ್ ಶೈಲಿಯಲ್ಲಿ ಆಕ್ಷನ್ ಸೀಕ್ವೆನ್ಸ್ ಡಿಸೈನ್ ಮಾಡಿದ್ದಾರೆ. ಅನ್ಬುಅರಿವ್ ಸಾಹಸ ಸಂಯೋಜನೆ ಚಿತ್ರದ ಹೈಲೆಟ್. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಹೈನಾ ಫೈಟ್ ಅಷ್ಟೇನು ಕಿಕ್ ಕೊಡಲ್ಲ. ಪಂಚ್ ಡೈಲಾಗ್ಸ್ ಕೂಡ ಮಿಸ್ ಆಗಿದೆ.
ಕೊನೆ ಮಾತು
ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಚಿತ್ರಮಂದಿರಕ್ಕೆ ಹೋದರೆ 'ಲಿಯೋ' ಸಿನಿಮಾ ಇಷ್ಟವಾಗಬಹುದು. 'ಕೈದಿ', 'ವಿಕ್ರಂ' ಸಿನಿಮಾಗಳಿಗೆ ಹೋಲಿಸಿದರೆ 'ಲಿಯೋ' ಸಪ್ಪೇ ಎನಿಸುತ್ತದೆ. ಆದರೆ ದಳಪತಿ ವಿಜಯ್ ಅಭಿಮಾನಿಗಳು ಎಂಜಾಯ್ ಮಾಡಬಹುದು. ಫಸ್ಟ್ ಹಾಫ್‌ನಲ್ಲಿ ಮಜಾ ಕೊಟ್ಟರೂ ಸೆಕೆಂಡ್ ಹಾಫ್ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ 'ಲಿಯೋ' ಆವರೇಜ್ ಸಿನಿಮಾ.


Click it and Unblock the Notifications











