ವಿಮರ್ಶೆ: ಇಷ್ಟ ಇದ್ರೆ ಒಮ್ಮೆ ಸೆಲ್ಫಿ ತೆಗೆದುಕೊಳ್ಳಬಹುದು
ದಿನನಿತ್ಯ ನಡೆಯುವ ಸುಂದರ ಸನ್ನಿವೇಶವನ್ನು ನಾವು ಸೆಲ್ಫಿಯಲ್ಲಿ ಸೆರೆ ಹಿಡಿಯುತ್ತೇವೆ. ಅದೇ ರೀತಿ ಜೀವನದ ಕೆಲವು ಅಮೂಲ್ಯ ಘಟನೆಗಳ ಜೋಡಣೆಯೇ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ. ಏನೇ ಕಷ್ಟ ಇದ್ದರೂ ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವ ಈ ಸಿನಿಮಾ ಸರಳ ಹಾಗೂ ಸ್ವಚ್ಛ ಚಿತ್ರ.
ಮೂರು ಗೆಳೆಯರು, ಮೂರು ಕಥೆಗಳು
'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾದಲ್ಲಿ ಒಂದಲ್ಲಾ ಎರಡಲ್ಲಾ ಮೂರು ಕಥೆಗಳು ಇವೆ. ನಕುಲ್ (ನೆನಪಿರಲಿ ಪ್ರೇಮ್), ರಶ್ಮಿ (ಹರಿಪ್ರಿಯಾ), ವಿರಾಟ್ (ಪ್ರಜ್ವಲ್ ದೇವರಾಜ್) ಮೂವರಿಗೂ ಜೀವನದಲ್ಲಿ ಒಂದೊಂದು ವೈಯಕ್ತಿಯ ಸಮಸ್ಯೆ ಇರುತ್ತದೆ. ನಿರ್ದೇಶಕನಾಗ ಬೇಕು ಎಂದುಕೊಂಡ ನುಕುಲ್, ನಿಶ್ಚಿತಾರ್ಥದ ನಂತರ ಬ್ರೇಕ್ ಅಪ್ ಆಗುವ ರಶ್ಮಿ ಹಾಗೂ ತಾಯಿಯ ಅಸ್ತಿತ್ವಕ್ಕಾಗಿ ಮನೆಯವರ ಜೊತೆಗೆ ಜಗಳ ಮಾಡಿಕೊಂಡ ವಿವೇಕ್ ಈ ಮೂವರು ತಮ್ಮ ನೆಮ್ಮದಿಗಾಗಿ ಗೋವಾಗೆ ಬರುತ್ತಾರೆ. ಇಡೀ ಕಥೆ ಗೋವಾದಲ್ಲಿಯೇ ನಡೆಯುತ್ತದೆ.
ನಾಲ್ಕನೇ ಕಥೆಯೇ ಚಿತ್ರದ ಉಸಿರು
ಸಿನಿಮಾ ನೋಡುವವರು ಇಲ್ಲಿ ಇರುವುದು ಮೂರು ಪ್ರಮುಖ ಪಾತ್ರಗಳ ಕಥೆ ಎಂದುಕೊಳ್ಳುವ ಹೊತ್ತಿಗೆ ಸರಿಯಾಗಿ ನಾಲ್ಕನೇ ಕಥೆ ಶುರು ಆಗುತ್ತದೆ. ಆ ನಾಲ್ಕನೇ ಕಥೆಯೇ ಸಿನಿಮಾದ ಉಸಿರು. ವಿವೇಕ್ ತಾಯಿ ತುಳಸಿ (ಸುಧಾರಾಣಿ) ಪಾತ್ರದ ಮೇಲೆ ಸಿನಿಮಾ ಸೆಕೆಂಡ್ ಹಾಫ್ ನಿಂತಿದೆ. ಆ ಪಾತ್ರ ಹಾಗೂ ಅದರ ಹಿನ್ನಲೆಯಲ್ಲಿ ಚಿತ್ರಮಂದಿರದಲ್ಲಿಯೇ ನೋಡಿ.
ಪ್ರೇಮವಿಲ್ಲ, ಸ್ನೇಹವೇ ಎಲ್ಲ
ಇಬ್ಬರು ಹೀರೋಗಳು ಹಾಗೂ ಅವರಿಗೆ ಒಬ್ಬ ಹೀರೋಯಿನ್ ಎಂದಾಗ ಇದೊಂದು ತ್ರಿಕೋನ ಪ್ರೇಮ ಕಥೆ ಎಂಬ ಭಾವನೆ ಎಲ್ಲರಲ್ಲಿ ಬರುತ್ತದೆ. ಆದರೆ, ಈ ಮೂವರ ನಡುವೆ ಸ್ನೇಹ ಬಿಟ್ಟರೆ ಬೇರೆ ಯಾವುದಕ್ಕೂ ಜಾಗ ಇಲ್ಲ. ಈ ವಿಷಯಕ್ಕೆ ಸಿನಿಮಾ ಕೊಂಚ ವಿಭಿನ್ನ ಎನ್ನಿಸುತ್ತದೆ. ಜೊತೆಗೆ ಇಲ್ಲಿ ತಾಯಿಯ ಪ್ರೀತಿ ತುಂಬ ಚೆನ್ನಾಗಿದೆ.
ಎಲ್ಲರ ನಟನೆ ಸಿನಿಮಾಗೆ ಪ್ಲಸ್
ಸಿನಿಮಾಗಳಲ್ಲಿ ನಾಲ್ಕು ಪ್ರಮುಖ ಪಾತ್ರಗಳು ಬರುತ್ತದೆ. ನಕುಲ್ ಪಾತ್ರದಲ್ಲಿ ಪ್ರೇಮ್ ಹಾಗೂ ವಿರಾಟ್ ಪಾತ್ರದಲ್ಲಿ ಪ್ರಜ್ವಲ್ ತುಂಬ ಚೆನ್ನಾಗಿ ನಟಿಸಿದ್ದಾರೆ. ರಶ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯಾ ಸಖತ್ ಇಷ್ಟ ಆಗುತ್ತಾರೆ. ಆ ಪಾತ್ರ ತುಂಬ ಮುದ್ಧಾಗಿದ್ದು, ಅವರೇ ಹೆಚ್ಚು ನಗಿಸುತ್ತಾರೆ. ಉಳಿದಂತೆ, ತಾಯಿ ಪಾತ್ರದಲ್ಲಿ ಸುಧಾರಾಣಿ ಅವರ ಪ್ರಬುದ್ಧವಾಗಿ ನಟಿಸಿದ್ದಾರೆ. ಅವರ ಪಾತ್ರ ಸಿನಿಮಾಗೆ ಶಕ್ತಿ ತುಂಬಿದೆ.
ಹಾಗೆ ಬಂದು ಹೀಗೆ ಹೋಗ್ತಾರೆ ರವಿಚಂದ್ರನ್, ಧನಂಜಯ್
ಎಲ್ಲರಿಗೂ ತಿಳಿದಿರುವ ಹಾಗೆ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ನೆನಪಿರಲಿ ಪ್ರೇಮ್ ಈ ಮೂವರು ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಆದರೆ ಅವರ ಜೊತೆಗೆ ರವಿಚಂದ್ರನ್ ಮತ್ತು ಧನಂಜಯ್ ಕೂಡ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇನ್ನು ಅವರ ಪಾತ್ರ ಏನು ಎಂಬುದು ಸಸ್ಪೆನ್ಸ್ ಆಗಿಯೇ ಇರಲಿ.
ಕಥೆಯ ಎಳೆ ಚೆನ್ನಾಗಿದೆ ಆದ್ರೆ ನಿರೂಪಣೆ ಸಾಧಾರಣ
ಸಿನಿಮಾದ ಒನ್ ಲೈನ್ ಸ್ಟೋರಿ ತುಂಬ ಚೆನ್ನಾಗಿದೆ. ಮೂರು ಸ್ನೇಹಿತರ ಮೂರು ಕಥೆಗಳು ಇಷ್ಟ ಆಗುತ್ತದೆ. ಆದರೆ, ಅದನ್ನು ನಿರ್ದೇಶಕರು ಇನ್ನೂ ಪರಿಣಾಮಕಾರಿಯಾಗಿ ಹೇಳಬಹುದಿತ್ತು. ಭಾವನಾತ್ಮಕ ಹಾಗೂ ಕಾಮಿಡಿ ದೃಶ್ಯಗಳು ಪ್ರೇಕ್ಷಕರಿಗೆ ಇನ್ನು ಹತ್ತಿರ ಆಗುವಂತೆ ಚಿತ್ರೀಕರಿಸಬೇಕಿತ್ತು.
ಮನಸ್ಸಿಗೆ ತಲುಪದ ಹಾಡುಗಳು
ಚಿತ್ರದಲ್ಲಿ ಯಾವುದೇ ಹಾಡನ್ನು ಪದೇ ಪದೇ ಕೇಳಬೇಕು ಎನಿಸುವುದಿಲ್ಲ. ಇದೇ ಕಾರಣಕ್ಕೆ ಸಿನಿಮಾ ತಮ್ಮ ಸಾಮರ್ಥ್ಯ ಕಳೆದುಕೊಂಡಿದೆ. ಒಳ್ಳೆಯ ಹಾಡುಗಳು ಇದ್ದಿದ್ದರೆ ಸಿನಿಮಾ ನೋಡುಗರಿಗೆ ಇನ್ನಷ್ಟು ಆನಂದ ನೀಡುತಿತ್ತು. ವಿ.ಹರಿಕೃಷ್ಣ ಮ್ಯಾಜಿಕ್ ಯಾಕೋ ಇಲ್ಲಿ ವರ್ಕ್ ಆಗಿಲ್ಲ.
ನಿರೀಕ್ಷೆಯನ್ನು ಮುಟ್ಟಲಿಲ್ಲ ದಿನಕರ್
ಏಳು ವರ್ಷಗಳ ಬಳಿಕ ದಿನಕರ್ ತೂಗುದೀಪ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಾರಣದಿಂದ ಅವರ ಮೇಲೆ ಹೆಚ್ಚು ನಿರೀಕ್ಷೆ ಇತ್ತು. ಆದರೆ, ಈ ಸಿನಿಮಾ ಆ ನಿರೀಕ್ಷೆಗಳನ್ನು ತಲುಪಿವುದು ಅನುಮಾನ. ಪ್ರೇಕ್ಷಕರು ಚಿತ್ರಮಂದಿರದಿಂದ ಆನಂದವಾಗಿ ಆಚೆ ಬರಲಿ ಇನ್ನು ಏನೋ ಬೇಕಿತ್ತು.
ಒಮ್ಮೆ ನೋಡಬಹುದು
'ಲೈಫ್ ಜೊತೆ ಒಂದು ಸೆಲ್ಫಿ' ಯಾವುದೇ ಗಲಾಟೆ ಇಲ್ಲದ ಸುಂದರ ಹಾಗೂ ಸ್ವಚ್ಛ ಸಿನಿಮಾ. ಹೆಚ್ಚು ಕಿರಿಕಿರಿ ಇಲ್ಲದೆ ಆರಾಮಾಗಿ ಒಮ್ಮೆ ಸಿನಿಮಾವನ್ನು ನೋಡಬಹುದು.


Click it and Unblock the Notifications











