twitter
    For Quick Alerts
    ALLOW NOTIFICATIONS  
    For Daily Alerts

    Love Story Movie Review: ಖಳನಾಯಕನನ್ನು ಕೊಂದರೆ ಎಲ್ಲವೂ ಸರಿ ಹೋಗುತ್ತದೆಯೇ?

    |

    ಕೆಲವು ನಿರ್ದೇಶಕರು, ಸಿನಿಮಾಗಳ ಮೂಲಕ ಗಟ್ಟಿ ವಿಷಯವನ್ನು ಹೇಳಲು ಯತ್ನಿಸುತ್ತಾರೆ, ಸಮಾಜದ ಅನಿಷ್ಟಗಳ ಬಗ್ಗೆ ಚರ್ಚಿಸುತ್ತಾರೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಖಳನನ್ನು ಕೊಂದು ಹ್ಯಾಪಿ ಎಂಡಿಂಗ್ ಎಂದುಬಿಡುತ್ತಾರೆ. ಖಳನನ್ನು ಕೊಂದರೆ ಎಲ್ಲವೂ ಸರಿ ಹೋಗಿಬಿಡುತ್ತದೆಯೇ? ಇದು ಕಮರ್ಷಿಯಲ್ ಸಿನಿಮಾಗಳಿಗಿರುವ ಮಿತಿಯೋ? ಅಥವಾ ನಿರ್ದೇಶಕರ ಯೋಚನೆಗಳ ಮಿತಿಯೋ ಗೊತ್ತಿಲ್ಲ.

    ಶೇಖರ್ ಕಮ್ಮುಲ ನಿರ್ದೇಶನದ ತೆಲುಗು ಸಿನಿಮಾ 'ಲವ್‌ ಸ್ಟೋರಿ'ಯಲ್ಲಿಯೂ ಇದೇ ಆಗಿದೆ. ಇಲ್ಲಿ ಜಾತಿ ತಾರತಮ್ಯ, ಮೇಲು-ಕೀಳು, ಮಧ್ಯಮವರ್ಗದವರ ಕಷ್ಟಗಳು-ಕನಸುಗಳು, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸಮಾನತೆ ಹಲವು ಗಂಭೀರ ವಿಷಯಗಳನ್ನು ನಿರ್ದೇಶಕ ಪ್ರೇಕ್ಷಕರ ಎದುರಿಗೆ ಹಿಡಿದಿದ್ದಾರೆ. ಹಲವು ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ ಆದರೆ ಕೊನೆಯಲ್ಲಿ ಖಳನಾಯಕನನ್ನು ಕೊಂದು ಸಿನಿಮಾ ಮುಗಿಸಿ, ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಇರಲು ಬಿಟ್ಟಿದ್ದಾರೆ.

    ಶೇಖರ್ ಕಮ್ಮುಲರ ಹಿಂದಿನ ಸಿನಿಮಾಗಳನ್ನು ಗಮನಿಸಿದರೆ ಕೆತಗಳ ಮೂಲಕ ಮನಸ್ಸು ಮುಟ್ಟುವ ಪ್ರಯತ್ನಗಳನ್ನೇ ಅವರು ಮಾಡಿದ್ದಾರೆ, ಆದರೆ 'ಲವ್ ಸ್ಟೋರಿ' ಸಿನಿಮಾದಲ್ಲಿ ತುಸು ಗಟ್ಟಿಯಾದ ವಿಷಯವನ್ನು ಆರಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ಕೆಲವು ಸಂಭಾಷಣೆಗಳಂತೂ ತುಳಿತಕ್ಕೊಳಗಾದವರ ಎದೆಯಲ್ಲಿ ಕೆಚ್ಚು ಮೂಡುವಂತೆಯೂ, ಅಸ್ಪೃಶ್ಯತೆ ಆಚರಿಸುವವರ ಎದೆಗೆ ಮುಳ್ಳು ಚುಚ್ಚುವಂತೆಯೂ ಇವೆ. ''ದೇವಸ್ಥಾನ ಅವರದ್ದು, ಊರು ಅವರದ್ದು, ಕೊನೆಗೆ ಸ್ಮಶಾನವೂ ಅವರದ್ದು, ಬದುಕಿದ್ದಾಗ ನಾವು ಎಲ್ಲಿರಬೇಕು, ಹೇಗಿರಬೇಕು ಎಂದು ಅವರು ಹೇಳುತ್ತಾರೆ ಸತ್ತಮೇಲೆ ನಾವು ಎಲ್ಲಿರಬೇಕೆಂದೂ ಅವರೇ ನಿರ್ಧರಿಸುತ್ತಾರಾ?'' ಇಂಥಹಾ ಕೆಲವು ಜಾತಿ ಪದ್ಧತಿ ಪ್ರಶ್ನಿಸುವ ಸಾಲುಗಳು ಸಿನಿಮಾದಲ್ಲಿವೆ.

    Rating:
    3.5/5

    ಚುರುಕಾದ ಸಂಭಾಷಣೆ ಚಿತ್ರದಲ್ಲಿದೆ

    ಚುರುಕಾದ ಸಂಭಾಷಣೆ ಚಿತ್ರದಲ್ಲಿದೆ

    ಮಹಿಳಾ ಸಮಾನತೆ, ಮಹಿಳೆಯರ ಮೇಲಿನ ಕಟ್ಟುಪಾಡುಗಳು, ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ. ''ನನ್ನನ್ನು ಕಾವಲು ಕಾಯುವ ಬದಲಿಗೆ ನಿನ್ನ ಮಗನನ್ನು ಕಾವಲು ಕಾದಿದ್ದಿದ್ದರೆ ನನ್ನ ಬದುಕು ಇಂದು ಹೀಗೆ ಆಗುತ್ತಿರಲಿಲ್ಲ'' ಎಂದು ನಾಯಕಿ ಹೇಳುವ ಸಂಭಾಷಣೆ ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದನ್ನು ಹೇಳುತ್ತಿದೆ. ಸಿನಿಮಾದಲ್ಲಿ ಇಂಥಹಾ ಹಲವು ಒಳ್ಳೆಯ ಅಂಶಗಳಿವೆ ಆದರೆ ಒಳ್ಳೆಯ ಅಂಶಗಳನ್ನು ಕತೆಯ ರೂಪದಲ್ಲಿ ಹೇಳುವಾಗ ನಿರ್ದೇಶಕರು ತುಸು ಹಾದಿ ತಪ್ಪಿದ್ದಾರೆ. ದ್ವಿತಿಯಾರ್ಧದಲ್ಲಿ ಕತೆ ಅವರ ಕೈಮೀರಿ ಎಲ್ಲೆಲ್ಲೊ ಹರಿದಾಡಿಬಿಟ್ಟಿದೆ. ನಂತರ ಕತೆಯನ್ನು ಬಲವಂತವಾಗಿ ಎಳೆದು ತಂದು ಕ್ಲೈಮ್ಯಾಕ್ಸ್‌ನಲ್ಲಿ ಖಳನನ್ನು ಕೊಂದು ಸಿನಿಮಾ ಮುಗಿಸಿದ್ದಾರೆ.

    ನಾಗ ಚೈತನ್ಯ-ಸಾಯಿ ಪಲ್ಲವಿ ಇಬ್ಬರು ಸಮಾನವಾಗಿ ಗಮನ ಸೆಳೆಯುತ್ತಾರೆ

    ನಾಗ ಚೈತನ್ಯ-ಸಾಯಿ ಪಲ್ಲವಿ ಇಬ್ಬರು ಸಮಾನವಾಗಿ ಗಮನ ಸೆಳೆಯುತ್ತಾರೆ

    ನಾಯಕ ನಾಗ ಚೈತನ್ಯ ಹಾಗೂ ನಾಯಕಿ ಸಾಯಿ ಪಲ್ಲವಿ ಇಬ್ಬರೂ ಸಮಾನವಾಗಿ ಗಮನ ಸೆಳೆಯುತ್ತಾರೆ. ಮಧ್ಯಮ ವರ್ಗದ ಕುಟುಂಬದವರಾಗಿ ಇಬ್ಬರ ಅಭಿನಯವೂ ಚೇತೋಹಾರಿಯಾಗಿದೆ. ನೃತ್ಯದಲ್ಲಿ ಸಾಯಿ ಪಲ್ಲವಿಯನ್ನು ಮೀರಿಸುವ ನಟಿಯರು ವಿರಳ. ಭಾವನೆಗಳನ್ನು ತುಳುಕಿಸುವುದರಲ್ಲಿಯೂ ಅವರು ನಂಬರ್ ಒನ್. ನಾಗ ಚೈತನ್ಯ ನಟನೆಗೂ ಧಾರಾಳವಾಗಿ ಅಂಕಗಳನ್ನು ಕೊಡಬಹುದು. ಇಬ್ಬರ ನಡುವಿನ ಪ್ರೀತಿಯ, ಜಗಳದ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ.

    ಅದ್ಧೂರಿತನವಿಲ್ಲದ ಸರಳ ಸಿನಿಮಾ

    ಅದ್ಧೂರಿತನವಿಲ್ಲದ ಸರಳ ಸಿನಿಮಾ

    ಎಲ್ಲಿಯೂ ಅದ್ಧೂರಿತನವಿಲ್ಲದೆ ಸರಳವಾದ ಕತೆಯನ್ನು ಅಷ್ಟೇ ಸರಳವಾಗಿ ನಿರ್ದಶಕ ಶೇಖರ್ ಕಮ್ಮುಲ ಪ್ರಸ್ತುತ ಪಡಿಸಿದ್ದಾರೆ. ಮಧ್ಯಮ ವರ್ಗದವರ ಕತೆಗೆ ಅದ್ಧೂರಿತನದ ಅವಶ್ಯಕತೆ ಇಲ್ಲ ಎಂದು ಅವರು ನಿಶ್ಚಯಿಸಿದಂತಿದೆ. ಹಾಗಾಗಿಯೇ ಸಿನಿಮಾದ ಕೆಲವು ಫ್ರೇಮ್‌ಗಳು ಡಲ್ ಆಗಿ, ಜಾಳು-ಜಾಳಾಗಿ ಕಾಣುತ್ತವೆ. ಆದರೆ ಈ ಸಣ್ಣ ಕೊರತೆಯನ್ನು ಸಾಯಿ ಪಲ್ಲವಿ-ನಾಗ ಚೈತನ್ಯ ತಮ್ಮ 'ಅಪಿಯರೆನ್ಸ್‌'ನಿಂದ ನಿವಾರಿಸಿಬಿಟ್ಟಿದ್ದಾರೆ.

    ಸಂಗೀತ ಬಹಳ ಚೆನ್ನಾಗಿದೆ

    ಸಂಗೀತ ಬಹಳ ಚೆನ್ನಾಗಿದೆ

    ಸಿನಿಮಾದ ಸಂಗೀತ ಬಹಳ ಚೆನ್ನಾಗಿದೆ. ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಎರಡಕ್ಕೂ ಈ ಮಾತು ಅನ್ವಯವಾಗುತ್ತದೆ. ಸಿನಿಮಾದ ಕೊನೆಯಲ್ಲಿ ಬರುವ 'ಸಾರಂಗ ಧರಿಯಾ' ಹಾಡಂತೂ ಏಕೆ ಇಷ್ಟು ಬೇಗ ಮುಗಿದು ಹೋಯಿತು ಎನಿಸುವಷ್ಟು ಚೆನ್ನಾಗಿದೆ. ಸಿನಿಮಾದ ಬತ್ತೊಂದು ಪ್ರಮುಖ ಅಂಶ ನೃತ್ಯ. ಅದರಲ್ಲಿಯೂ ಸಾಯಿ ಪಲ್ಲವಿ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ನಾಗ ಚೈತನ್ಯ ಅದ್ಭುತ ನೃತ್ಯಗಾರ ಎಂದು ಗುರುತಿಸಿಕೊಂಡವರಲ್ಲ ಆದರೂ ಅವರೂ ಸಾಯಿ ಪಲ್ಲವಿಗೆ ಒಳ್ಳೆಯ ಸ್ಪರ್ಧೆಯನ್ನೇ ಒಡ್ಡಿದ್ದಾರೆ, ವಿನ್ನರ್ ಸಾಯಿ ಪಲ್ಲವಿಯೇ. ಸಿನಿಮಾದ ಖಳನಾಯಕನ ಪಾತ್ರಧಾರಿ ರಾಜೇಶ್ ಕನಕಾಲ ಅಭಿನಯವೂ ಚೆನ್ನಾಗಿದೆ. ಒಂದು ಬಾರಿ ನೋಡಲು ಅಡ್ಡಿಯಿಲ್ಲ.

    English summary
    Love Story Telugu movie review in Kannada. Naga Chaithanya and Sai Pallavi were in lead role, movie directed by Shekhar Kammula.
    Saturday, September 25, 2021, 10:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X