Madharasi Movie Review: ಶಿವಕಾರ್ತಿಕೇಯನ್-ರುಕ್ಮಿಣಿ ಸೂಪರ್.. ಆದರೆ ಮುರುಗದಾಸ್ 'ಮದರಾಸಿ' ಅಲ್ಲ!
'ಅಮರನ್' ಅಂತಹ ಬ್ಲಾಕ್ ಬಸ್ಟರ್ ಸಿನಿಮಾವನ್ನು ಕೊಟ್ಟ ಬಳಿಕ ಶಿವಕಾರ್ತಿಕೇಯನ್ 'ಗಜನಿ' ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಕೈ ಜೋಡಿಸಿದ್ದರು. ಅದುವೇ 'ಮದರಾಸಿ'. ಟಿಪಿಕಲ್ ಮುರುಗದಾಸ್ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಇಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಅಪರೂಪದ ಜೋಡಿಯ ಜಾದುವನ್ನು ತೆರೆಮೇಲೆ ನೋಡುವ ಕುತೂಹಲವಿತ್ತು.
'ಮದರಾಸಿ' ಟೈಟಲ್ ಪರ ರಾಜ್ಯಗಳಲ್ಲಿ ಅಪಸ್ವರ ಎತ್ತಿದ ಬೆನ್ನಿನಲ್ಲೇ ಸಿನಿಮಾ ತೆರೆಕಂಡಿದೆ. ಶಿವಕಾರ್ತಿಕೇಯನ್ ಹಾಗೂ ಎ.ಆರ್. ಮುರುಗದಾಸ್‌ಗಾಗಿ ಈ ಸಿನಿಮಾ ಹೈಪ್ ಕ್ರಿಯೇಟ್ ಮಾಡಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ನಟಿಸಿರುವುದು ಸಿನಿಮಾದ ಮತ್ತೊಂದು ಹೈಲೈಟ್. ಹಾಗಿದ್ದರೆ, ಸಿನಿಮಾದ ಕಥೆಯೇನು? 'ಅಮರನ್' ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಕೊಡುತ್ತಾರಾ? 'ಸಿಕಂದರ್' ಸೋಲಿನ ಬಳಿಕ ಮುರುಗದಾಸ್‌ಗೆ ಸಕ್ಸಸ್ ಸಿಗುತ್ತಾ? ತಿಳಿಯಲು ಮುಂದೆ ಓದಿ.

'ಮದರಾಸಿ' ಕಥೆಯೇನು?
ರಸ್ತೆ ಅಪಘಾತದಲ್ಲಿ ರಘುರಾಮ್ (ಶಿವಕಾರ್ತಿಕೇಯನ್) ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾನೆ. ಪೋಷಕರ ಸಾವು ಆತನನ್ನು ಮಾನಸಿಕ ಖಿನ್ನತೆಗೆ ತಳ್ಳುವಂತೆ ಮಾಡುತ್ತೆ. ಇದರಿಂದ ಆತ್ಯ*ಹತ್ಯೆಗೂ ಮುಂದಾಗುತ್ತಾನೆ. ಇದೇ ವೇಳೆ ಅಲ್ಲಿಗೆ ಬರೋ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (NIA) ಮುಖ್ಯಸ್ಥ ಪ್ರೇಮ್‌ನಾಥ್ (ಬಿಜು ಮೆನನ್) ರಘುರಾಮ್‌ನನ್ನು ರಕ್ಷಿಸುತ್ತಾರೆ. ಈ ಸಮಯದಲ್ಲಿ ತಮಿಳುನಾಡಿನಲ್ಲಿ ವಿರಾಟ್ (ವಿದ್ಯುತ್ ಜಮ್ವಾಲ್) ಮತ್ತು ಚಿರಾಗ್ (ಶಬೀರ್ ಕಲ್ಲರಕ್ಕಲ್) ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿರುತ್ತಾನೆ. ಇವರಿಬ್ಬರನ್ನು ತಡೆಯುವುದಕ್ಕೆ ಪ್ರೇಮ್‌ನಾಥ್ ರಘುರಾಮ್‌ನನ್ನು ಅನಧಿಕೃತವಾಗಿ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ.
ರಾಘುರಾಮ್‌ಗೆ ಕಾಡುತ್ತಿರುವ ಮಾನಸಿಕ ಸಮಸ್ಯೆ ಏನು? ಅವನು ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ? ರಘುರಾಮ್ ಎನ್ಐಎ ಮುಖ್ಯಸ್ಥ ಪ್ರೇಮ್‌ನಾಥ್ ಕಣ್ಣಿಗೆ ಬಿದ್ದಿದ್ದೇಗೆ? ಎನ್‌ಐಎ ಕಾರ್ಯಾಚರಣೆಯಲ್ಲಿ ರಘುರಾಮ್ ಭಾಗಿಯಾಗಿದ್ದೇಗೆ? ರಘುರಾಮ್‌ಗೂ ಹಾಗೂ ಡಾ.ಮಾಲತಿಗೂ (ರುಕ್ಮಿಣಿ ವಸಂತ್) ಲವ್ ಆಗಿದ್ದೇಗೆ? ಇಬ್ಬರ ಪ್ರೇಮಕಥೆ ಏನಾಯ್ತು? ತಮಿಳುನಾಡಿನಲ್ಲಿ ವಿರಾಟ್ ಮತ್ತು ಚಿರಾಗ್ ಸಂಚು ಏನಾಗಿತ್ತು? ರಘುರಾಮ್ ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿದ್ದೇಗೆ? ಈ ಎಲ್ಲ ಪ್ರಶ್ನೆಗಳಿಗೆ 'ಮದರಾಸಿ' ಸಿನಿಮಾದಲ್ಲಿ ಉತ್ತರ ಸಿಗುತ್ತೆ.
ಹೇಗಿದೆ ಸಿನಿಮಾ?
ತಮಿಳುನಾಡಿನಲ್ಲಿ ನಡೆಯುವ ಭಯೋತ್ಪಾದಕ ಕೃತ್ಯದ ಸುತ್ತ ಹೆಣೆದ ಕಾಲ್ಪನಿಕ ಆಕ್ಷನ್ ಕಮ್ ರೋಮ್ಯಾಂಟಿಕ್ ಸಿನಿಮಾ. ಈ ಕಥೆಗೆ 'ಡಿಸ್‌ಇಲ್ಯೂಷನ್ ಡಿಸಾರ್ಡರ್' ಎಂಬ ಹೊಸ ಅಂಶವನ್ನು ನಿರ್ದೇಶಕ ಮುರುಗದಾಸ್ ಸೇರಿಸಿರೋದು ಈ ಸಿನಿಮಾದ ಹೈಲೈಟ್. ಆದರೆ, ಕಥೆ ಹಾಗೂ ಚಿತ್ರಕಥೆ ಎರಡರಲ್ಲೂ ಧಮ್ ಇಲ್ಲದೇ ಇರುವುದರಿಂದ ಸಿನಿಮಾ ನೀರಸ ಎನಿಸುತ್ತೆ.
'ಮದರಾಸಿ' ಸಿನಿಮಾದ ಆಕ್ಷನ್ ದೃಶ್ಯಗಳು, ಶಿವಕಾರ್ತಿಕೇಯನ್ ಹಾಗೂ ರುಕ್ಮಿಣಿ ವಸಂತ್ ನಡುವಿನ ರೊಮ್ಯಾಂಟಿಕ್ ಟ್ರ್ಯಾಕ್ ಪ್ರೇಕ್ಷಕರನ್ನು ಸೆಳೆಯುತ್ತವೆ. ಆಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾದಲ್ಲಿ ಪಾತ್ರಗಳೇ ಪ್ಲಸ್ ಪಾಯಿಂಟ್. ಶಿವಕಾರ್ತಿಕೇಯನ್ ಮಾನಸಿಕ ಕಾಯಿಲೆಯ ಸುತ್ತ ಹೆಣೆದಿರುವ ದೃಶ್ಯಗಳು ಇಷ್ಟ ಆಗುತ್ತವೆ. ಹೀರೋ ಬಗ್ಗೆ ಪರಿಚಯ ಮಾಡಿಕೊಡುವುದಕ್ಕೆ ಸೃಷ್ಟಿಸಿರುವ ಫ್ಲಾಶ್‌ಬ್ಯಾಕ್ ಗಮನ ಸೆಳೆಯುತ್ತೆ. ಆದರೆ, ಕಥೆಯಲ್ಲಿ ಟ್ವಿಸ್ಟ್ ಅಂಡ್ ಟರ್ನ್‌ಗಳು ಇಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನು ಸಾಮಾನ್ಯ ಪ್ರೇಕ್ಷಕರು ಊಹಿಸಬಹುದಾಗಿದ್ದರಿಂದ ಥ್ರಿಲ್ಲರ್ ಪ್ರೇಮಿಗಳುಗೆ ಥ್ರಿಲ್ ಕೊಡುವುದಿಲ್ಲ.

ಪರ್ಫಾಮೆನ್ಸ್ ಹೇಗಿದೆ?
ಶಿವಕಾರ್ತಿಕೇಯನ್ ತಮ್ಮ ಇಮೇಜ್‌ಗೆ ತಕ್ಕಂತೆ ಹೀರೋಯಿಸಂ ತೋರಿಸಿದ್ದಾರೆ. ಈ ಸಿನಿಮಾದಲ್ಲೂ ಪವರ್‌ಫುಲ್ ಪರ್ಫಾಮೆನ್ಸ್ ನೋಡುವುದಕ್ಕೆ ಸಿಗುತ್ತೆ. ಸಿನಿಮಾದಲ್ಲಿನ ಭಾವನಾತ್ಮಕ ಸನ್ನಿವೇಶಗಳಲ್ಲಿ ಇಷ್ಟ ಆಗುತ್ತಾರೆ. ಹಾಗೇ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಯುವಕರನ್ನು ಸೆಳೆಯುತ್ತಾರೆ. ರುಕ್ಮಿಣಿ ವಸಂತ್ ತಮ್ಮ ನಟನೆ ಹಾಗೂ ಗ್ಲಾಮರ್‌ನಿಂದ ಇಷ್ಟ ಆಗುತ್ತಾರೆ. ಎನ್‌ಐಎ ಮುಖ್ಯಸ್ಥನ ಪಾತ್ರದಲ್ಲಿ ಬಿಜು ಮೆನನ್ ಪರ್ಫೆಕ್ಟ್ ಎನಿಸುತ್ತಾರೆ. ಖಳನಾಯಕನಾಗಿ ವಿದ್ಯುತ್ ಜಮ್ವಾಲ್ ಮತ್ತು ಶಬೀರ್ ಪರ್ಫಾಮೆನ್ಸ್ ಅದ್ಭುತವಾಗಿದೆ.
ತಾಂತ್ರಿಕವಾಗಿ ಸಿನಿಮಾ ಹೇಗಿದೆ?
'ಮದರಾಸಿ'ಯಲ್ಲಿ ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಸಿನಿಮಾಗೆ ಪವರ್ ಕೊಟ್ಟಿದೆ. ಕಥೆಯಲ್ಲಿ ಒಳ್ಳೆಯ ಸನ್ನಿವೇಶಗಳು ಇಲ್ಲದೆ ಇರುವುದರಿಂದ ಒಳ್ಳೆಯ ಹಾಡುಗಳನ್ನು ಕೊಡುವುದಕ್ಕೆ ಅವಕಾಶವಿಲ್ಲವೇನೋ ಎನ್ನುವ ಅನುಮಾನ ಮೂಡುತ್ತೆ. ಸಂದೀಪ್ ಕ್ಯಾಮರಾವರ್ಕ್ ಚೆನ್ನಾಗಿದೆ. ಕೆಲವೊಂದು ಸೀನ್‌ಗಳಿಗೆ ಕತ್ತರಿ ಬಿದ್ದಿದ್ದರೆ, ಸಿನಿಮಾದ ವೇಗ ಮತ್ತಷ್ಟು ಚೆನ್ನಾಗಿರುತ್ತಿತ್ತು. ಕೊನೆಯಲ್ಲಿ 'ಮದರಾಸಿ' ಒಂದು ಮಾಸ್ ಮತ್ತು ಕಮರ್ಷಿಯಲ್ ಅಂಶಗಳಿರುವ ಹೈ ಎಂಡ್ ಆಕ್ಷನ್ ಡ್ರಾಮಾ. ಪ್ರೇಮಕಥೆ, ಶಿವಕಾರ್ತಿಕೇಯನ್ ಅವರ ಅಭಿನಯ, ಮತ್ತು ರುಕ್ಮಿಣಿ ವಸಂತ್ ಅವರ ಗ್ಲಾಮರ್‌ಗಾಗಿ ಈ ಚಿತ್ರವನ್ನು ನೋಡಬಹುದು.


Click it and Unblock the Notifications











