»   » ನಾಯಕನ ತಂದೆ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ಲವಲವಿಕೆಯ ಅಭಿನಯ ಮತ್ತು ನಾಯಕ-ನಾಯಕಿಯ ನಡುವಣ ಸರಸ ಸಲ್ಲಾಪಗಳೇ ಚಿತ್ರದ ಹೈಲೈಟ್ಸ್‌

ನಾಯಕನ ತಂದೆ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ಲವಲವಿಕೆಯ ಅಭಿನಯ ಮತ್ತು ನಾಯಕ-ನಾಯಕಿಯ ನಡುವಣ ಸರಸ ಸಲ್ಲಾಪಗಳೇ ಚಿತ್ರದ ಹೈಲೈಟ್ಸ್‌

Posted By:
Subscribe to Filmibeat Kannada

ಚಿತ್ರ: ಮಹಾಲಕ್ಷ್ಮಿನಿರ್ದೇಶನ: ಕಾರ್ತಿಕ್‌ ರಾಜಾತಾರಾಗಣ : ಶ್ರುತಿ, ರಮೇಶ್‌, ಕುಮಾರ್‌ ಗೋವಿಂದ್‌
*ಸತ್ಯನಾರಾಯಣ

ಮಹಾಲಕ್ಷ್ಮಿ- ಮತ್ತೊಂದು ತ್ರಿಕೋಣ ಪ್ರೇಮ ಕಥೆ. ವ್ಯತ್ಯಾಸವೆಂದರೆ ಇಲ್ಲಿ ನಾಯಕಿಗೆ ಮದುವೆಯಾಗಿದೆ. ಪ್ರೀತಿಸಿ ಮದುವೆಯಾದ ಗಂಡನನ್ನು ಕಳೆದುಕೊಂಡಿದ್ದೂ ಆಗಿದೆ. ಇನ್ನೊಂದು ಪ್ರೀತಿಯ ಸುಳಿಯಲ್ಲಿ ಸಿಲುಕಿ ಮತ್ತೊಂದು ಮದುವೆಯಾಗಿದ್ದಾಳೆ. ಆಗ ಹಳೇ ಗಂಡ ರಕ್ತ ಮಾಂಸದೊಂದಿಗೆ ಪ್ರತ್ಯಕ್ಷವಾದರೆ ಹೇಗಿರಬಹುದು ?

ಮಹಾಲಕ್ಷ್ಮಿ ಚಿತ್ರದ ಒಟ್ಟಾರೆ ಕತೆ ಅಡಗಿರುವುದೇ ಕೊನೇ ಅರ್ಧ ಗಂಟೆಯಲ್ಲಿ. ಅಲ್ಲಿಯ ತನಕ ಒಂದಿಷ್ಟು ಫ್ಲಾಷ್‌ ಬ್ಯಾಕ್‌, ಹಾಡು. ಇಡೀ ಚಿತ್ರ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಅವರ ನೋವು ನಲಿವು, ತಲ್ಲಣಗಳ ಅಭಿವ್ಯಕ್ತಿಯಲ್ಲೇ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ನಿರ್ದೇಶಕರದು. ಅದರಲ್ಲಿ ಅವರು ಯಶಸ್ಸು ಕಾಣದೇ ಇದ್ದರೆ ಅದಕ್ಕೆ ಕಾರಣ ಅತಿಯಾದ ಮಾತು. ಸಿನಿಮಾ ಎನ್ನುವುದು ಮೂಲತಃ ದೃಶ್ಯ ಮಾಧ್ಯಮ ಅನ್ನೋದನ್ನ ನಿರ್ದೇಶಕರು ಮರೆತದ್ದೇ ದುರಂತ.

ಚಿತ್ರದ ಕಥಾ ಹಂದರ ಹೀಗಿದೆ. ಮೊದಲ ನಾಯಕ ಇಂಜಿನಿಯರ್‌. ಅವನು ಮಹಾಲಕ್ಷ್ಮಿಯನ್ನು ಮದುವೆಯಾಗುತ್ತಾನೆ. ಮೊದಲ ರಾತ್ರಿಗೆ ಮುಂಚೆಯೇ ಕರ್ತವ್ಯ ನಿಮಿತ್ತ ದೂರದೂರಿಗೆ ಪಯಣಿಸಬೇಕಾಗುತ್ತದೆ. ಹಾದಿಯಲ್ಲೇ ಕಾರು ಅಪಘಾತದಲ್ಲಿ ಆತ ಸಾವನ್ನಪ್ಪಿದ ಸುದ್ದಿ ಪತ್ನಿಗೆ ತಲುಪುತ್ತದೆ. ಈ ದುಃಖವನ್ನು ಮರೆಯುವ ಸಲುವಾಗಿ ಆಕೆ ಖಾಸಗಿ ಆಸ್ಪತ್ರೆಯಾಂದರಲ್ಲಿ ನರ್ಸ್‌ ಆಗಿ ಸೇರಿಕೊಳ್ಳುತ್ತಾಳೆ. ಅಲ್ಲಿಯ ವೈದ್ಯನೇ ಆಕೆಯನ್ನು ಮೆಚ್ಚಿಕೊಳ್ಳುತ್ತಾನೆ. ಆರಂಭದಲ್ಲಿ ವೈದ್ಯನ ಪ್ರೀತಿಯನ್ನು ನಿರಾಕರಿಸುವ ಲಕ್ಷ್ಮಿ ಕೊನೆಗೆ ಹಿರಿಯರ ಒತ್ತಾಯಕ್ಕೆ ಮಣಿದು ಮದುವೆಯಾಗುತ್ತಾಳೆ. ಅದಾಗಿ ಕೆಲ ದಿನಗಳಲ್ಲಿ ವೈದ್ಯ ಒಬ್ಬ ರೋಗಿಯನ್ನು ಮನೆಗೆ ಕರೆತರುತ್ತಾನೆ. ನೆನಪು ಶಕ್ತಿಯನ್ನು ಕಳಕೊಂಡ ವ್ಯಕ್ತಿಯಾತ. ಆತನೇ ಗತಿಸಿದ ಪತಿ ಎಂಬ ಅನುಮಾನ ನಾಯಕಿಯದು. ಆದರೆ ಇಬ್ಬರೂ ಒಂದೇ ತರ ಕಾಣೋಕೆ ಸಾಧ್ಯ ಎಂಬ ತರ್ಕ ವೈದ್ಯನದ್ದು. ಕೊನೆಗೆ ಆಪರೇಷನ್‌ ನಡೆದು ರೋಗಿಗೆ ಹಳೇ ನೆನಪುಗಳು ಮರುಕಳಿಸುತ್ತವೆ. ಅದೇ ಚಿತ್ರದ ಸಸ್ಪೆನ್ಸ್‌.

ಆಕಸ್ಮಿಕ ಹಾಗೂ ಪವಾಡಗಳನ್ನೇ ನೆಚ್ಚಿಕೊಂಡ ಚಿತ್ರವಿದು. ನಾಯಕ ಮರಳಿ ಬರುವ ಹಂತದಲ್ಲೇ ಚಿತ್ರ ಸ್ವಾರಸ್ಯಕರವಾಗಬೇಕಿತ್ತು. ವೈದ್ಯನ ಭೀತಿ ಮತ್ತು ನಾಯಕಿಯ ದ್ವಂದ್ವಗಳನ್ನು ಪರಿಣಾಮಕಾರಿಯಾಗಿ ಸೆರೆ ಹಿಡಿಯಬಹುದಿತ್ತು. ಚಿತ್ರಕತೆಯಲ್ಲಿರುವ ಈ ಅವಕಾಶವನ್ನು ನಿರ್ದೇಶಕರು ಮಿಸ್‌ ಮಾಡಿಕೊಂಡಿದ್ದಾರೆ. ಹಾಗಾಗಿ ಎಲ್ಲಾ ಪಾತ್ರಗಳು ತಮ್ಮ ಭಾವನೆಗಳನ್ನು ಮಾತಿನ ಮೂಲಕವೇ ಒಪ್ಪಿಸುವಂತಾಗಿದೆ.

ಕತೆ ಮತ್ತು ಚಿತ್ರಕತೆಯಲ್ಲಿರುವ ಗೊಂದಲಗಳನ್ನು ಬಿಟ್ಟರೆ ಚಿತ್ರದ ನಿರೂಪಣೆ ಸಲೀಸಾಗಿ ಸಾಗುತ್ತದೆ. ಹೃದಯ ವಿದ್ರಾವಕ ಸನ್ನಿವೇಶಗಳನ್ನು ಉದ್ದೇಶಪೂರ್ವಕವಾಗಿ ಅಂಡರ್‌ ಪ್ಲೇ ಮಾಡಿರುವುದು ಮೆಚ್ಚುವ ಸಂಗತಿ. ಆದರೆ ವೈದ್ಯನ ಪಾತ್ರಕ್ಕೆ ಗೋವಿಂದು ಅವರನ್ನು ಆಯ್ಕೆ ಮಾಡಿದ್ದು ಮೊದಲ ತಪ್ಪು. ಆ ಪಾತ್ರದ ವ್ಯಾಖ್ಯಾನವನ್ನೇ ಅವರು ಅರ್ಥ ಮಾಡಿಕೊಂಡಿಲ್ಲ. ರಮೇಶ್‌ ಅವರಿಗೆ ಎಂದಿನ ತ್ಯಾಗರಾಜ್‌ ಪಾತ್ರ. ಅದನ್ನು ಅವರು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಜೊತೆಗೆ ಚಿತ್ರದ ಅಂತ್ಯದ ಬಗ್ಗೆ ಪ್ರೇಕ್ಷಕರಿಗೆ ಮೊದಲೇ ಸುಳಿವು ನೀಡುತ್ತಾರೆ. ಶ್ರುತಿ ಅವರದು ಎಂದಿನ ಅಳುಮುಂಜಿ ಇಮೇಜ್‌.

ತಮಿಳಿನ ಕಾರ್ತಿಕ ರಾಜಾ ನಿರ್ದೇಶಿಸಿರುವ ಮಹಾಲಕ್ಷ್ಮಿ ವಿಶೇಷಗಳಿಲ್ಲದ ಚಿತ್ರ. ಚಿತ್ರದ ಬಜೆಟ್‌, ಲೊಕೇಷನ್‌, ಸಂಗೀತ ಎಲ್ಲವೂ ಚಿತ್ರಕ್ಕೊಂದು ಮಿತಿಯನ್ನು ಹಾಕಿದೆ. ಹಾಗಾಗಿ ಒಂದು ಟೆಲಿಫಿಲಂ ನೋಡಿದ ಅನುಭವವನ್ನೇ ಲಕ್ಷ್ಮಿ ನೀಡುತ್ತಾಳೆ. ನಾಯಕನ ತಂದೆ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ಅವರ ಲವಲವಿಕೆಯ ಅಭಿನಯ ಮತ್ತು ನಾಯಕ-ನಾಯಕಿಯ ನಡುವಣ ಸರಸ ಸಲ್ಲಾಪಗಳೇ ಚಿತ್ರದ ಹೈಲೈಟ್ಸ್‌.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada