»   » ಪ್ರೀತಿ ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ಅಖಿಲ ಕರ್ನಾಟಕ ಯುವ ಸಮುದಾಯಕ್ಕೆ ಸಂದೇಶ ಕೊಡುವ ಚಿತ್ರದ ಪ್ಲಸ್‌ ಪಾಯಿಂಟ್‌ಗಳನ್ನು ಲೆಕ್ಕ ಹಾಕುವುದು ಕಷ್ಟದ ಕೆಲಸ!

ಪ್ರೀತಿ ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ಅಖಿಲ ಕರ್ನಾಟಕ ಯುವ ಸಮುದಾಯಕ್ಕೆ ಸಂದೇಶ ಕೊಡುವ ಚಿತ್ರದ ಪ್ಲಸ್‌ ಪಾಯಿಂಟ್‌ಗಳನ್ನು ಲೆಕ್ಕ ಹಾಕುವುದು ಕಷ್ಟದ ಕೆಲಸ!

Subscribe to Filmibeat Kannada

ಪ್ರೀತಿಗಿಂತ ಬದುಕು ದೊಡ್ಡದು ಅನ್ನುತ್ತಾನೆ ನಾಯಕ. ಅದು ಕ್ಲೈಮಾಕ್ಸ್‌. ಆ ಹೊತ್ತಿಗೆ ಆತ ತನ್ನ ಅಪ್ಪನನ್ನು ಕಳಕೊಂಡಾಗಿರುತ್ತದೆ. ಹಾಗಾಗಿ ವಿಳಂಬ ಜ್ಞಾನೋದಯದಿಂದ ಚಿತ್ರದ ಯಾವ ಪಾತ್ರಗಳಿಗೂ ಲಾಭವಾಗದಿದ್ದರೂ, ಪ್ರೇಕ್ಷಕರಿಗಂತೂ ಸಂದೇಶ ಲಾಭವಿದೆ. ಅಖಿಲ ಕರ್ನಾಟಕದ ಯುವ ಸಮುದಾಯವನ್ನು ಉದ್ದೇಶಿಸಿ ಹೀರೋ ಒಂದು ಭಾಷಣ ಬಿಗೀತಾನೆ. ಪ್ರೀತಿ ಪ್ರೇಮ ಅಂತ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಹುಚ್ಚಪ್ಪಗಳಿರಾ, ಹುಡುಗಿಯರು ಶುದ್ಧ ಮನಸ್ಸಿನ ಪ್ರೇಮಿಯನ್ನು ಯಾವತ್ತೂ ಪ್ರೀತಿಸುವುದಿಲ್ಲ. ಅವರು ಪ್ರೀತಿಯ ನಾಟಕವಾಡುವವರನ್ನಷ್ಟೇ ಇಷ್ಟಪಡುತ್ತಾರೆ. ಕೊನೆಗೆ ತಮ್ಮ ಬದುಕು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ಅಯ್ಯಾ ಪ್ರೇಮಿಗಳೇ, ನೀವು ಬದುಕಲ್ಲಿ ಮುಂದೆ ಬರುವ ಯೋಚನೆ ಮಾಡುವುದೊಳಿತು. ಇದು ಭಾಷಣದ ಸಾರಾಂಶ.

ಮುಂದಿನ ದೃಶ್ಯದಲ್ಲಿ ನಾಯಕ ಟಿಪ್‌ ಟಾಪ್‌ ಡ್ರೆಸ್ನಲ್ಲಿ ಮನೆಯಾಚೆ ಬರ್ತಾನೆ. ಈ ಬಾರಿ ಫಾರ್‌ ಎ ಚೇಂಜ್‌ ಹುಡುಗಿಯ ಭೇಟಿಗಲ್ಲ, ನೌಕರಿಯ ಬೇಟೆಗೆ. ಎಂಬಲ್ಲಿಗೆ ಶುಭಂ.

ಮೂರು ವರ್ಷದ ಹಿಂದೆ ತಮಿಳಿನಲ್ಲಿ ಬಂದ ‘ಲವ್‌ ಟುಡೆ’ ಚಿತ್ರದ ರೀಮೇಕೇ ‘ಮಜ್ನೂ’. ಇಲ್ಲಿರುವುದು ಏಕ ಮುಖ ಪ್ರೀತಿ. ಕಾಲೇಜು ಓದುತ್ತಿರುವ ವೈದ್ಯ ಪುತ್ರ ವಿನಾಕಾರಣ ಒಬ್ಬಾಕೆಯನ್ನು ಪ್ರೀತಿಸುತ್ತಾನೆ. ಮತ್ತದೇ ಹಳೇ ಸ್ಟೈಲ್‌. ರಸ್ತೆಯಲ್ಲಿ ಆಕೆಯನ್ನು ಹಿಂಬಾಲಿಸುವುದು. ಪ್ರೇಮನಿವೇದನೆಗೆ ಬೇಕಾದ ಗಟ್ಟಿ ಎದೆ ಅವನಿಗಿಲ್ಲ. ನಾಯಕಿಯೋ ಪುಸ್ತಕ ಪ್ರೇಮಿ. ಪರೀಕ್ಷೆಯಲ್ಲಿ ಗೋಲ್ಡ್‌ ಮೆಡಲ್‌ ಗಳಿಸುವುದೊಂದೇ ಅವಳ ಗುರಿ. ಹೀಗೇ ಪರಸ್ಪರ ಸಂವಾದವಿಲ್ಲದೆ ಸಾಗುವ ಈ ಪ್ರೀತಿಗೊಂದು ತಿರುವು ಕೊಡುವ ಸಲುವಾಗಿ ಸ್ನೇಹಿತೆ ಪಾತ್ರ ಬರುತ್ತದೆ. ನಾಯಕಿಯ ಎದೆಯಲ್ಲಿ ಪ್ರೀತಿಯ ಹೂವನ್ನರಳಿಸುವ ಕೆಲಸದಲ್ಲಿ ಆಕೆಯೂ ಫೇಲ್‌ ಆದಾಗ, ನಾಯಕನೇ ಪ್ರೇಮ ಪತ್ರ ಬರೆಯುತ್ತಾನೆ. ಅದನ್ನು ವಗಾಯಿಸುವ ಹೊತ್ತಲ್ಲಿ ನಾಯಕಿಯ ಅಪ್ಪ ಹಾಜರ್‌. ಆತ ಪೊಲೀಸ್‌ ಅಧಿಕಾರಿಯೂ ಆಗಿರುವುದರಿಂದ ಹೀರೋಗೆ ಭರ್ಜರಿ ಸನ್ಮಾನ ನಡೆಯುತ್ತದೆ. ಇಲ್ಲಿಂದ ನಾಯಕ ನಾಯಕಿಯರ ನಡುವೆ ಅಪ್ಪಂದಿರ ಪ್ರವೇಶ, ಜಗಳ, ಪ್ರತಿಜ್ಞೆ ಇತ್ಯಾದಿಗಳು ಸಾಂಗವಾಗಿ ನೆರವೇರುತ್ತವೆ. ನಾಯಕಿಯ ಅಪ್ಪ ಏನೇ ಮಾಡಿದರೂ ಜಗ್ಗುವುದಿಲ್ಲ. ಮಗಳನ್ನು ಊರಾಚೆ ಕಳಿಸುವ ಪ್ಲಾನ್‌ ಮಾಡಿ ಕೊನೇ ಕ್ಷಣದಲ್ಲಿ ಅದನ್ನು ರದ್ದು ಮಾಡುತ್ತಾನೆ. ಆಕೆಯನ್ನು ಹುಡುಕುತ್ತಾ ನಾಯಕ ಚೆನ್ನೈಗೆ ಹೋದಾಗ, ಇಲ್ಲಿ ವೈದ್ಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆಮೇಲೆ ಒಂದಿಷ್ಟು ಮೆಲೋ ಡ್ರಾಮಾ ಕೊನೆಗೆ ನಾಯಕಿಗೆ ಪಶ್ಚಾತ್ತಾಪ. ಅದರ ಬೆನ್ನಿಗೇ ಪ್ರೇಮಾಂಕುರ. ಆದರೆ ಈ ಬಾರಿ ಪ್ರೀತಿಯನ್ನು ತಿರಸ್ಕರಿಸುವ ಸರದಿ ಹೀರೋನದ್ದು.

ಕ್ಲೈಮಾಕ್ಸ್‌ ಮತ್ತು ನಾಯಕಿಯ ತಿಕ್ಕಲು ಮತ್ತು ಕುಡುಕ ಅಪ್ಪನ ಪಾತ್ರದಲ್ಲಿ ಪ್ರಕಾಶ್‌ ರೈ ಅಭಿನಯದ ಹೊರತಾಗಿ ಚಿತ್ರದಲ್ಲಿ ಇಷ್ಟವಾಗುವ ಸಂಗತಿಗಳು ಕಡಿಮೆಯಿವೆ. ಅಪ್ಪ- ಮಗನ ಸಂಬಂಧ ಕೂಡ ಕೊಂಚ ಹೊಸದೆನಿಸಿದರೂ ಅದು ಬೆಳೆಯುವುದಿಲ್ಲ. ರಿಚರ್ಡ್‌ ಲೂಯಿಸ್‌ ಸಂಭಾಷಣೆ ಅಲ್ಲಲ್ಲಿ ಮಿಂಚುತ್ತದೆ. ತಾಂತ್ರಿಕ ವಿಭಾಗದಲ್ಲಿ ಗುರುಕಿರಣ್‌ ಸಂಗೀತವೇ ಹೈಲೈಟ್‌. ಹಿಂದಿ ಹಾಡುಗಳ ಛಾಯೆಯಿದ್ದರೂ ಮೂರು ಗೀತೆಗಳು ಸುಖ ಕೊಡುತ್ತವೆ. ಛಾಯಾಗ್ರಹಣ ಮತ್ತು ಸಂಕಲನ, ಚಿತ್ರದ ಇನ್ನೆರಡು ವಿಲನ್‌ಗಳು.

ದ್ವಾರಕೀಶ್‌ ಚಿತ್ರವೆಂದ ಮೇಲೆ ಒಂದಷ್ಟು ಚಮಕ್‌, ಗಿಮಿಕ್‌ ಇರಬೇಕಾದ್ದು ನ್ಯಾಯ.ಆದರೆ ಮಜ್ನೂ ಚಿತ್ರದಲ್ಲಿ ಅದೂ ಮಿಸ್‌ ಆಗಿದೆ. ನಿರೂಪಣೆಯಲ್ಲಿ ಶ್ರದ್ಧೆ, ಶಿಸ್ತು ಮಾಯವಾಗಿದೆ. ಅವಸರದಲ್ಲೇ ಚಿತ್ರೀಕರಣ ನಡೆದಿದೆ ಅನ್ನೋದಕ್ಕೆ ಚಿತ್ರದುದ್ದಕ್ಕೂ ಪುರಾವೆಗಳು ಸಿಗುತ್ತವೆ. ದ್ವಾರ್ಕಿ ಪುತ್ರ ಹಾಗೂ ನಾಯಕ ಗಿರಿ ಏಕತಾನತೆಯಿಂದ ಹೊರಬರದಿದ್ದಲ್ಲಿ ಮುಂದೆ ಕಷ್ಟವಾಗಬಹುದು.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada