Kannappa Review: 'ಕಣ್ಣಪ್ಪ'ನ ಜೊತೆ ಶಿವಲೀಲೆ.. ಎಲ್ಲರ ಕಣ್ಣು ಪ್ರಭಾಸ್ ಮೇಲೆ
ದಶಕಗಳ ಬಳಿಕ 'ಬೇಡರ ಕಣ್ಣಪ್ಪ' ಕಥೆ ಮತ್ತೆ ಸಿನಿಮಾ ರೂಪದಲ್ಲಿ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡ್ತಿದೆ. ಕಣ್ಣಪ್ಪನ ಪಾತ್ರದಲ್ಲಿ ತೆಲುಗು ನಟ ಮಂಚು ವಿಷ್ಣು ನಟಿಸಿದ್ದಾರೆ. ಮೋಹನ್ ಲಾಲ್ ಹಾಗೂ ಪ್ರಭಾಸ್ ಅತಿಥಿ ಪಾತ್ರಗಳಲ್ಲಿ ಮಿಂಚಿರುವುದು ವಿಶೇಷ.
ಪೋಸ್ಟರ್ ಹಾಗೂ ಟೀಸರ್ ಬಂದಾಗಲೇ ಸಿನಿಮಾ ಬಗ್ಗೆ ಬೇಸರ ಮೂಡಿತ್ತು. ಆದರೂ ಪ್ರಭಾಸ್ ಕಾರಣಕ್ಕೆ ಸಾಕಷ್ಟು ಜನ ಸಿನಿಮಾ ನೋಡಲು ಹೋಗುತ್ತಿದ್ದಾರೆ. ಹೀರೊ ಮಂಚು ವಿಷ್ಣುಗಿಂತ ಅತಿಥಿ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಬಗ್ಗೆಯೇ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಆಡಿಯನ್ಸ್ ಸಿನಿಮಾ ನೋಡಲು ಮುಂದಾಗಿದ್ದಾರೆ.

'ಕಣ್ಣಪ್ಪ' ಕಥೆ ಕನ್ನಡಿಗರಿಗೂ ಚಿರಪರಿಚಿತ. ಡಾ. ರಾಜ್‌ಕುಮಾರ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ 'ಬೇಡರ ಕಣ್ಣಪ್ಪ'. ಮುಂದೆ ಇದೇ ಕಥೆಯನ್ನು ಕೊಂಚ ಬದಲಿಸಿ 'ಶಿವಮೆಚ್ಚಿದ ಕಣ್ಣಪ್ಪ' ಆಗಿ ಶಿವಣ್ಣ ನಟಿಸಿದ್ದರು. ಆ ಸಿನಿಮಾ ಕೂಡ ಗಮನ ಸೆಳೆದಿತ್ತು. ಇದೇ ಕಥೆ ತೆಲುಗಿನಲ್ಲಿ 'ಕನ್ನಪ್ಪ' ಆಗಿ ಸಿನಿಮಾ ರೂಪ ಪಡೆದಿತ್ತು. ಕೃಷ್ಣಂರಾಜು ನಟಿಸಿದ್ದರು. ಅಷ್ಟಕ್ಕೂ ಮಂಚು ವಿಷ್ಣು 'ಕಣ್ಣಪ್ಪ' ಕಥೆ ಏನು? ಸಿನಿಮಾ ಹೇಗಿದೆ? ರಿವ್ಯೂ ರಿಪೋರ್ಟ್ ಮುಂದೆ ಓದಿ.
'ಕಣ್ಣಪ್ಪ' ಕಥೆ
ಸ್ವರ್ಣಮುಖಿ ನದಿ ತೀರದ ಕಾಡಿನಲ್ಲಿ ನಾಲ್ಕು ಬುಡಕಟ್ಟು ಗುಂಪುಗಳು ನೆಲೆಸಿರುತ್ತವೆ. ಅದರಲ್ಲಿ ಒಂದು ಗುಂಪಿನ ನಾಯಕ ನಾಥನಾಥ(ಶರತ್ ಕುಮಾರ್). ಆತನ ಮಗ ದಿಣ್ಣ. ಚಿಕ್ಕಂದಿನಲ್ಲಿ ಕಣ್ಣೆದುರು ನಡೆದ ಒಂದು ಘಟನೆ ಆತನಿಗೆ ದೇವರ ಮೇಲೆ ದ್ವೇಷ ಹುಟ್ಟಿ ಮಹಾನ್ ನಾಸ್ತಿಕನಾಗುತ್ತಾನೆ. ಬಿಲ್ವಿದ್ದೆಯಲ್ಲಿ ಬಹಳ ನಿಪುಣನಾದ ದಿಣ್ಣ ಮಹಾನ್ ವೀರನಾಗಿ ತಮ್ಮ ಜನರ ಬೆಂಬಲಕ್ಕೆ ನಿಲ್ಲುತ್ತಾನೆ. ಈ ನಡುವೆ ಪಕ್ಕದ ಬುಡಕಟ್ಟಿನ ಯುವತಿಯನ್ನು ಪ್ರೀತಿಸಿ ಮುಂದೆ ಮದುವೆ ಆಗುತ್ತಾನೆ.
ಈ ಬೇಡರ ಗುಂಪುಗಳು ಇರುವ ಪ್ರಾಂತ್ಯದಲ್ಲೇ ಒಂದು ವಾಯುಲಿಂಗ ಇರುತ್ತದೆ. ಅದಕ್ಕೆ ಮಹಾದೇವಶಾಸ್ತ್ರಿ(ಮೋಹನ್ ಬಾಬು) ಮಾತ್ರ ಪೂಜೆ ಮಾಡುತ್ತಿರುತ್ತಾನೆ. ಯಾರನ್ನು ಹತ್ತಿರಕ್ಕೆ ಸುಳಿಯಲು ಬಿಡುವುದಿಲ್ಲ. ಅದರ ಮೇಲೆ ಕಾಲಮುಖನ ವಕ್ರದೃಷ್ಟಿ ಬೀಳುತ್ತದೆ. ಅದಕ್ಕಾಗಿ ಕಾಲಮುಖ ತನ್ನ ಸೈನ್ಯದೊಂದಿಗೆ ಬಂದು ದಿಣ್ಣನನ್ನು ಎದುರಿಸಿ ಸಾಯುತ್ತಾನೆ. ಆದರೆ ಒಮ್ಮೆ ಶಿವರಾತ್ರಿಯ ದಿನ ಶಿವ ಲೀಲೆಯಂತೆ ದಿಣ್ಣ ವಾಯುಲಿಂಗದ ಬಳಿಗೆ ಬರುವಂತಾಗುತ್ತದೆ. ನಾಸ್ತಿಕನಾಗಿದ್ದ ಆತ ಮಹಾನ್ ಶಿವಭಕ್ತನಾಗುತ್ತಾನೆ. ಕೊನೆಗೆ ತನ್ನ ಕಣ್ಣುಗಳನ್ನೇ ಶಿವನಿಗೆ ಅರ್ಪಿಸಿ ಭಕ್ತ ಕಣ್ಣಪ್ಪ ಎನಿಸಿಕೊಳ್ಳುತ್ತಾನೆ.

ಸಿನಿಮಾ ಹೇಗಿದೆ?
ಭಕ್ತ ಕಣ್ಣಪ್ಪ ಕಥೆ ಎಲ್ಲರಿಗೂ ಗೊತ್ತೇಯಿದೆ. ಆದರೆ ಅದನ್ನು ಸಾಕಷ್ಟು ಬದಲಾಯಿಸಿ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಲಾಗಿದೆ. ನೈಜ ಕಥೆಗೆ ಬಹಳ ದೂರ ಎನ್ನುವಂತೆ ಈ ಸಿನಿಮಾ ಕಥೆ ಭಾಸವಾಗುತ್ತದೆ. ಈ ಹಿಂದೆ ಬಂದಿರುವ ಕಣ್ಣಪ್ಪನ ಜೀವನಾಧರಿತ ಸಿನಿಮಾಗಳಿಗೂ ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮುಗ್ಧ ಬೇಡರ ಕಣ್ಣಪ್ಪನ ಕಥೆಯನ್ನು ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಂತೆ ವಿಜೃಂಭಿಸಿ ತೆರೆಗೆ ತರಲಾಗಿದೆ.
ಸ್ವತಃ ಮಂಚು ವಿಷ್ಣು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಮೂಲ ಕಥೆಯ ಕೆಲವು ಅಂಶಗಳನ್ನು ಮಾತ್ರ ಉಳಿಸಿಕೊಂಡು ಅದರ ಸುತ್ತಾ ಕಲ್ಪಿತ ಕಥೆಯನ್ನು ಹೆಣೆಯಲಾಗಿದೆ. ಆದರೆ ಮೂಲ ಕಥೆಗಿಂತ ಸುತ್ತ ವಿಸ್ತರಿಸಿದ ಕಥೆಯನ್ನೇ ಹೈಲೆಟ್ ಮಾಡಿ ತೋರಿಸಲಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮಾಡುವ ಪ್ರಯತ್ನ ಮಾಡಲಾಗಿದೆ. ತೆರೆಮೇಲೆ ಸಿನಿಮಾ ಎಷ್ಟೇ ಚೆನ್ನಾಗಿದೆ ಅನ್ನಿಸುತ್ತಿದ್ದರೂ ಏನೋ ಮಿಸ್ ಆಗುತ್ತಿರುವ ಭಾವ ಕೊನೆಯವರೆಗೂ ಮುಂದುವರೆಯುತ್ತದೆ.
ಫಸ್ಟ್ ಹಾಫ್ ದಿಣ್ಣನ ಹಿನ್ನೆಲೆಯನ್ನು ಕಟ್ಟಿಕೊಡುವುದರಲ್ಲೇ ಮುಗಿದು ಹೋಗುತ್ತದೆ. ಆತನ ಲವ್ ಸ್ಟೋರಿಗೆ ಹೆಚ್ಚಿನ ಮಹತ್ವ ಸಿಕ್ಕಿ ಕಥೆ ಎಳೆದದಂತೆ ಭಾಸವಾಗುತ್ತದೆ. ಇನ್ನು ದಿಣ್ಣನ ಮೇಲೆ ಕಾಲಮುಖ ದಾಳಿ ಮಾಡುವ ಸನ್ನಿವೇಶ ಬಾಹುಬಲಿ ಚಿತ್ರದಲ್ಲಿ ಕಾಲಕೇಯನ ಸೈನ್ಯ ಯುದ್ಧಕ್ಕೆ ಬರುವುದನ್ನು ನೆನಪಿಸುತ್ತದೆ. ಇಂಟರ್‌ವಲ್ ವೇಳೆಗೆ ದಿಣ್ಣನ ಹಿಂದಿನ ಜನ್ಮದ ರಹಸ್ಯವನ್ನು ತೋರಿಸಲಾಗುತ್ತದೆ. ಅದಕ್ಕಾಗಿ ಮಹಾಭಾರತದ ಕಿರಾತಾರ್ಜುನೀಯ ಕಥೆಯ ಅರ್ಜುನ(ಮಂಚು ವಿಷ್ಣು) ಮತ್ತು ಬೇಟೆಗಾರ ಕಿರಾತ(ಮೋಹನ್ ಲಾಲ್)ನ ವೇಷದಲ್ಲಿರುವ ಭಗವಾನ್ ಶಿವನ ನಡುವಿನ ಕಾಳಗವನ್ನು ತೋರಿಸಲಾಗಿದೆ.
ಇಂಟರ್‌ವಲ್‌ನಲ್ಲಿ ಸಣ್ಣ ಟ್ವಿಸ್ಟ್ ಇಟ್ಟು ಸೆಕೆಂಡ್ ಹಾಫ್ ಬಗ್ಗೆ ನಿರೀಕ್ಷೆ ಹುಟ್ಟುವಂತೆ ಮಾಡುತ್ತಾರೆ. ಆದರೆ ಕಿರಾತನ ಕತೆ ಮುಗಿಯುತ್ತಿದ್ದಂತೆ ಮತ್ತೆ ಕಥೆ ಹಳಿ ಬಿಟ್ಟು ಎಲ್ಲೆಲ್ಲೋ ಹೋಗುತ್ತದೆ. ರುದ್ರನಾಗಿ ಪ್ರಭಾಸ್ ಎಂಟ್ರಿ ಬಳಿಕ ಕಥೆ ಮತ್ತೆ ಕ್ಲೈಮ್ಯಾಕ್ಸ್ ಕಡೆಗೆ ವಾಲುತ್ತದೆ. ಕೊನೆಯ 30 ನಿಮಿಷ ಬಹಳ ಎಮೋಷನಲ್ ಆಗಿ ಸಿನಿಮಾ ಸಾಗುತ್ತದೆ. ಅದಾಗಲೇ ಎರಡೂವರೆ ಗಂಟೆ ಸಿನಿಮಾ ನೋಡಿ ಬೇಸರಗೊಂಡವರಿಗೆ ಕೊನೆಯ ಎಪಿಸೋಡ್ ಕೂಡ ಅಷ್ಟಾಗಿ ರುಚಿಸುವುದಿಲ್ಲ. ಒಟ್ಟಾರೆ ಫಸ್ಟ್ ಹಾಫ್ ಬೇಸರ ಮೂಡಿಸಿದರೆ ಸೆಕೆಂಡ್ ಹಾಫ್ ಪರವಾಗಿಲ್ಲ ಎನಿಸಿಕೊಳ್ಳುತ್ತದೆ.
ಇಡೀ ಕಥೆಯನ್ನು ನ್ಯೂಜಿಲೆಂಡ್ ಕಾಡುಗಳಲ್ಲಿ ಚಿತ್ರೀಕರಿಸಿರುವುದು ಬೇಸರ ಸಂಗತಿ. ಇದೇ ಕಾರಣಕ್ಕೆ ಆ ನದಿ, ಕಾಡು, ಪರಿಸರಕ್ಕೆ ಕನೆಕ್ಟ್ ಆಗುವುದು ಕಷ್ಟವಾಗುತ್ತದೆ. ಇದು ನಮ್ಮ ಕಥೆ ಅಲ್ವಾ? ಯಾವುದೋ ಹಾಲಿವುಡ್ ಕಥೆನಾ? ಎನಿಸುತ್ತದೆ. ರಾಯಲ ಸೀಮೆಯ ಕಣ್ಣಪ್ಪ ಕಥೆ ಆಗಿದ್ದರೂ ಯಾವುದೋ ಊರಿನ ಸನ್ನಿವೇಶಗಳನ್ನು ನೋಡಿದಂತೆ ಭಾಸವಾಗುತ್ತದೆ.
ಕಲಾವಿದರ ಅಭಿನಯ
ಕಣ್ಣಪ್ಪನ ಪಾತ್ರ ಮಾಡಲು ವಿಷ್ಣು ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಪಾತ್ರಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಬೇರೆ ಯಾರಾದರೂ ಆಗಿದ್ದರೆ ಸಿನಿಮಾ ಮತ್ತಷ್ಟು ಚೆನ್ನಾಗಿ ಬರುತ್ತಿತ್ತು ಎನಿಸದೇ ಇರುವುದಿಲ್ಲ. ದಿಣ್ಣನ ಪ್ರೇಯಸಿಯಾಗಿ ಪ್ರೀತಿ ಮುಕುಂದನ್ ಇಷ್ಟವಾಗುತ್ತಾರೆ. ಮಹಾದೇಶ ಶಾಸ್ತ್ರಿಯಾಗಿ ಗಂಭೀರ ಪಾತ್ರದಲ್ಲಿ ಮೋಹನ್ ಲಾಲ್ ಅಬ್ಬರಿಸಿದ್ದಾರೆ. ಇನ್ನು ರುದ್ರನಾಗಿ ಬರುವ ಪ್ರಭಾಸ್ ಸಂಪೂರ್ಣ ಅಂಕ ಗಿಟ್ಟಿಸುತ್ತಾರೆ.
ಕೆಲವೇ ನಿಮಿಷಗಳು ಪ್ರಭಾಸ್ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ ಅಷ್ಟು ಹೊತ್ತು ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆರೆಹಿಡಿಯುತ್ತಾರೆ. ಕಿರಾತನಾಗಿ ಒಂದೇ ಒಂದು ಸನ್ನಿವೇಶದಲ್ಲಿ ಮೋಹನ್ ಲಾಲ್ ಅಬ್ಬರಿಸಿ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಶರತ್‌ಕುಮಾರ್, ದೇವರಾಜ್, ಮಧೂ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಶಿವ-ಪಾರ್ವತಿಯಾಗಿ ಅಕ್ಷಯ್‌ಕುಮಾರ್ ಹಾಗೂ ಕಾಜಲ್ ಅಗರ್‌ವಾಲ್ ಇಷ್ಟವಾಗುತ್ತಾರೆ. ಅವರಿಬ್ಬರು ಚಿತ್ರಕ್ಕೆ ಹೊಸ ಕಳೆ ತರುತ್ತಾರೆ.
ತಾಂತ್ರಿಕವಾಗಿ ಸಿನಿಮಾ
ಟೆಕ್ನಿಕಲಿ ಸಿನಿಮಾ ಬಹಳ ವೀಕ್ ಎನಿಸುತ್ತದೆ. ಕೆಲವು ಕಡೆ ಸಿಜಿ ಬಹಳ ಚೆನ್ನಾಗಿದೆ. ಮತ್ತೆ ಕೆಲವು ಕಡೆ ಪೇಲವ ಎನಿಸಿಬಿಡುತ್ತದೆ. ಸ್ಟೀಫನ್ ದೇವಸ್ಸಿ ಸಂಗೀತದಲ್ಲಿ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಬಿಜಿಎಂ ಕೆಲವೊಮ್ಮೆ ಇವತ್ತಿನ ಕಮರ್ಷಿಯಲ್ ಸಿನಿಮಾಗಳನ್ನು ನೆನಪಿಸುತ್ತದೆ. ಶೆಲ್ಡನ್ ಚೌ ಕ್ಯಾಮರಾ ಕೈಚಳಕ ಸೊಗಸಾಗಿದೆ.
ಕೊನೆ ಮಾತು
3 ಗಂಟೆಗಳ ಸುದೀರ್ಘ ಕಾಲಾವಧಿ 'ಕಣ್ಣಪ್ಪ' ಚಿತ್ರದ ದೊಡ್ಡ ಮೈನಸ್. ನೇರವಾಗಿ ಕಥೆ ಹೇಳದೇ ಎಲ್ಲೆಲ್ಲೋ ಕಥೆ ಎಳೆದು ನೋಡುಗರ ತಾಳ್ಮೆ ಪರೀಕ್ಷಿಸುವಂತಿದೆ. ಹಾಗೆ ನೋಡಿದರೆ ಫಸ್ಟ್ ಹಾಫ್ ಬೇಡವಾಗಿತ್ತು ಎನಿಸದೇ ಇರದು. ಇಂಟರ್‌ವಲ್ ಬಳಿಕ ಶುರುವಾಗುವ ಕಥೆಯನ್ನೇ ನೇರವಾಗಿ ಸಿನಿಮಾ ಮಾಡಿದ್ದರೆ ಸಾಕಿತ್ತು. ಪ್ರಭಾಸ್ ಎಪಿಸೋಡ್ ತೆಗೆದುಬಿಟ್ಟರೆ ಸಿನಿಮಾದಲ್ಲಿ ಏನೇನು ಇಲ್ಲ ಎನಿಸುತ್ತದೆ. 'ಬೇಡರ ಕಣ್ಣಪ್ಪ' ಕಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಿನಿಮಾ ನೋಡಲು ಹೋದರೆ ಬೇಸರವಾಗುತ್ತದೆ. ಹೊಸ ಪ್ರಯತ್ನ ಎಂದು ಕೊಂಚ ತಾಳ್ಮೆಯಿಂದ ನೋಡುವಂತಿದ್ದರೆ ಒಮ್ಮೆ ನೋಡಬಹುದು.


Click it and Unblock the Notifications











