Mardaani 3 Review ; ಸಿಂಹಿಣಿ ಅಬ್ಬರ, 'ಅಮ್ಮಾ' ಅಟ್ಟಹಾಸ - ಹೇಗಿದೆ ಮರ್ದಾನಿ 3 ? ಇಲ್ಲಿದೆ ವಿಮರ್ಶೆ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದು ತುಂಬಾನೇ ಕಡಿಮೆ. ನಾಯಕಿಯ ಸುತ್ತ ಕಥೆ ಸುತ್ತಿದರೆ ಪ್ರೇಕ್ಷಕರ ತಲೆ ಸುತ್ತಿ ಬರುತ್ತೆ ಎನ್ನುವ ಹಲವರ ನಂಬಿಕೆಯೇ ಇದಕ್ಕೆ ಮೂಲ ಕಾರಣ. ಹೀಗಾಗಿಯೇ ಹಲವರು ನಾಯಕಿಯರು ಅಂದರೆ ಕೇವಲ ಮರ ಸುತ್ತಲು, ಚಿತ್ರದ ಗ್ಲ್ಯಾಮರ್ ಹೆಚ್ಚಿಸಲು ಅಷ್ಟೇ ಲಾಯಕ್ಕು ಎಂದುಕೊಂಡಿದ್ದಾರೆ.
ಆದರೆ.. ಇವರ ಈ ಮಾತುಗಳನ್ನು.. ನಂಬಿಕೆಯನ್ನ .. ಅವಕಾಶ ಸಿಕ್ಕಾಗ ಹಲವರು ಇಲ್ಲಿಯವರೆಗೆ ಸುಳ್ಳಾಗಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಿದ್ದಾರೆ. ಉದಾಹರಣೆಗೆ ರಾಣಿ ಮುಖರ್ಜಿ.

ಹೌದು, ರಾಣಿ ಮುಖರ್ಜಿ.. ಬಾಲಿವುಡ್‌ನಲ್ಲಿ ಹಸ್ಕಿ ಧ್ವನಿಯನ್ನು ಹೊಂದಿರುವ ಚೆಲುವೆ. ಕಳೆದ 30 ವರ್ಷಗಳಿಂದ ತಮ್ಮ ಅಭಿನಯದಿಂದ ಅಭಿಮಾನಿಗಳ ಮನಸೊರೆಗೊಂಡ ರಾಣಿ ಮುಖರ್ಜಿ ಸದ್ಯ ಮರ್ದಾನಿ 3 ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬಂದಿದ್ದಾರೆ. ಹಾಗಿದ್ದರೆ ಹೇಗಿದೆ ಮರ್ದಾನಿ 3..? ಚಿತ್ರದ ಕಥಾಹಂದರವೇನು..? ಎಂದು ತಿಳಿಯಲು ಮುಂದೆ ಓದಿ.
ಕಥಾಹಂದರ
ಪಶ್ಚಿಮ ಬಂಗಾಳದ ಸುಂದರಬನ್ಸ್‌ನಲ್ಲಿನ ಅಪ್ರಾಪ್ತ ಬಾಲಕಿಯರ ಸಾಮೂಹಿಕ ಅಪಹರಣದ ಸುತ್ತ ಈ ಬಾರಿ ಕಥೆಯನ್ನು ಹೆಣೆಯಲಾಗಿದೆ. ಸಾಮಾನ್ಯವಾಗಿ ಬಡ ಮಕ್ಕಳನ್ನೇ ಗುರಿಯಾಗಿಸಿಕೊಂಡು ಮಾಡಲಾಗುವ ಈ ಕೃತ್ಯಕ್ಕೆ ಕಡಿವಾಣ ಹಾಕುವಂತೆ ಎಷ್ಟೇ ಮನವಿಯನ್ನು ಮಾಡಿದರು, ಹಲವರು ದೂರು ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗುವುದಿಲ್ಲ.
ಹೀಗಿರುವಾಗ ಟರ್ಕಿಯ ಭಾರತೀಯ ರಾಯಭಾರಿ ಐಂದ್ರನೀಲ್ ಭಟ್ಟಾಚಾರ್ಯ ಅವರ ಅವರ ಮಗುವನ್ನು ಅಪಹರಣಾಕಾರರು ತಮಗೆ ಅರಿವು ಇಲ್ಲದಂತೆ ಕಿಡ್ನಾಪ್ ಮಾಡುತ್ತಾರೆ. ಆಗ ಅಲ್ಲಿಯವರೆಗೆ ಕೇವಲ ಸಂಖ್ಯೆಗಷ್ಟೇ ಕಾಣೆಯಾದವರ ಅಂಕಿ ಅಂಶವನ್ನು ಸೀಮಿತ ಮಾಡಿದ್ದ ನಮ್ಮ ವ್ಯವಸ್ಥೆ ತುರ್ತು ಪರಿಸ್ಥಿತಿ ಎಂಬಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತೆ. ಮಗು ಸಿಕ್ಕ ನಂತರ ಕಾಣೆಯಾದ ಬೇರೆ ಮಕ್ಕಳ ಬಗ್ಗೆ ಚಿಂತೆ ಮಾಡದಂತೆ ಒತ್ತಡವೂ ಕೂಡ ಹಾಕುತ್ತೆ.
ಶಿವಾನಿ ರಾಯ್ ( ರಾಣಿ ಮುಖರ್ಜಿ ) ಈ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಾರೆ. ಟ್ರಸ್ಟ್ ನಡೆಸುವ ರಮಾನುಜಂ (ಪ್ರಜೇಶ್ ಕಶ್ಯಪ್) ಮತ್ತು ಕಿರಿಯ ಪೊಲೀಸ್ ಅಧಿಕಾರಿ ಫಾತಿಮಾ ( ಜಾನಕಿ ಬೋಡಿವಾಲಾ ) ತನಿಖೆಗೆ ನೆರವಾಗುತ್ತಾರೆ. ಈ ಭೀಕರ ಕೃತ್ಯಗಳ ಹಿಂದೆ ಅಮ್ಮಾ ( ಮಲ್ಲಿಕಾ ಪ್ರಸಾದ್ ) ಕೈವಾಡ ಇರುವುದನ್ನು ಅರಿತ ಶಿವಾನಿ ರಾಯ್ ಅಮ್ಮಾ ಭದ್ರ ಕೋಟೆಯನ್ನು ಹೇಗೆ ಛಿದ್ರ ಮಾಡುತ್ತಾಳೆ ಎನ್ನುವುದೇ ಚಿತ್ರದ ತಿರುಳು.

ಅಭಿನಯ ಹೇಗಿದೆ..?
ಕನ್ನಡಕ್ಕೆ ಮಾಲಾಶ್ರೀ ಹೇಗೋ ಹಾಗೇ ಬಾಲಿವುಡ್‌ಗೆ ರಾಣಿ ಮುಖರ್ಜಿ. ''ಮರ್ದಾನಿ'' ಫ್ರಾಂಚೈಸಿಯ ಮೂಲಕ ಖಾಕಿಯಲ್ಲಿ ಮಿಂಚುತ್ತಿರುವ ರಾಣಿ ಮುಖರ್ಜಿ ಈ ಬಾರಿ ಕೂಡ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ಸಾಹಸಗಾಥೆ ಇರಬಹುದು.. ಅಭಿವ್ಯಕ್ತಿ ಇರಬಹುದು.. ಇಂತಹ ಪಾತ್ರಗಳಲ್ಲಿ ಸದ್ಯ ರಾಣಿ ಮುಖರ್ಜಿಗೆ ಬೇರೆ ಯಾರು ಸಾಟಿ ಇಲ್ಲ. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಮರ್ಥವಾಗಿ ಮುನ್ನಡೆದಿದ್ದಾರೆ ರಾಣಿ ಮುಖರ್ಜಿ.
ಇನ್ನು ''ಮರ್ದಾನಿ''ಯ ಹಿಂದಿನ ಎರಡು ಭಾಗಗಳಲ್ಲಿ ಪ್ರಬಲವಾದ ಖಳನಾಯಕರಿದ್ದರು.[2014ರಲ್ಲಿ ತಾಹಿರ್ ರಾಜ್ ಮತ್ತು 2019ರಲ್ಲಿ ವಿಶಾಲ್ ಜೇಠ್ವಾ]ಈ ಬಾರಿ ಕೂಡ ರಾಣಿಗೆ ಸವಾಲು ಹಾಕಲು ಇಲ್ಲಿ ಬೆಂಕಿಯಂತಹ ಖಳನಾಯಕಿಯನ್ನು ಹೆಕ್ಕಿ ತರಲಾಗಿದೆ.ಅಮ್ಮ ಪಾತ್ರದಲ್ಲಿ ಮಲ್ಲಿಕಾ ಪ್ರಸಾದ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರು ಇವರನ್ನು ಪ್ರೇಕ್ಷಕರು ದ್ವೇಷಿಸದೆ ಇರಲು ಸಾಧ್ಯವಿಲ್ಲ. ಪ್ರಜೇಶ್ ಕಶ್ಯಪ್ ರಮಾನುಜಂ ಪಾತ್ರದಲ್ಲಿ ಗಮನ ಸೆಳೆದರೆ, ಜಾನಕಿ ಬೋಡಿವಾಲಾ ಫಾತಿಮಾ ಪಾತ್ರದಲ್ಲಿ ಪ್ರಭಾವ ಬೀರುತ್ತಾರೆ.
ಪ್ಲಸ್ ಪಾಯಿಂಟ್ಸ್
''ಸುಲ್ತಾನ್''.. ''ಫ್ಯಾನ್''.. ''ಗುಂಡೇ''..''ವಾರ್ 2''.. ಹೀಗೆ ಹಲವಾರು ಚಿತ್ರಗಳಿಗೆ ಕಳೆದ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅಭಿರಾಜ್ ಮಿನಾವಾಲಾ ತಮ್ಮ ನಿರ್ದೇಶನದ ಮೂಲಕ ಇಲ್ಲಿ ಗಮನ ಸೆಳೆಯುತ್ತಾರೆ. 2 ಗಂಟೆ 9 ನಿಮಿಷ ಎಲ್ಲಿಯೂ ಬೋರಾಗದಂತೆ ನೋಡಿಕೊಂಡಿದ್ದಾರೆ. ನೈಜತೆಗೆ ಮಹತ್ವ ನೀಡಿರುವ ಅಭಿರಾಜ್ ಎಲ್ಲಿಯೂ ಅತಿಯಾಗದಂತೆ ಮುತುವರ್ಜಿ ವಹಿಸಿದ್ದಾರೆ. ಎಲ್ಲರಿಂದ ಅತ್ಯುತ್ತಮವಾದ ಕೆಲಸವನ್ನು ಮಾಡಿಸಿದ್ದಾರೆ.
ಆಯುಷ್ ಗುಪ್ತಾ, ದೀಪಕ್ ಕಿಂಗ್ರಾಣಿ, ಮತ್ತು ಬಲ್ಜೀತ್ ಸಿಂಗ್ ಮರ್ವಾಹ ಬರೆದ ಕಥೆ ಮತ್ತು ಗುಪ್ತಾ ಬರೆದಿರುವ ಚಿತ್ರಕಥೆ ಹಾಗೂ ಸಂಭಾಷಣೆ ಮೊನಚಾಗಿದೆ. ಚಿತ್ರದ ಆರಂಭ, ಮಧ್ಯಂತರ ಮತ್ತು ಕ್ಲೈಮ್ಯಾಕ್ಸ್ ಸೊಗಸಾಗಿದೆ. ಐಗಿರಿ ನಂದಿನಿ, ಮಹಿಷಾಸುರ ಮರ್ದಿನಿ ಸ್ತೋತ್ರವನ್ನು ಹಿನ್ನೆಲೆ ಸಂಗೀತವನ್ನಾಗಿ ಬಳಸಿಕೊಳ್ಳಲಾಗಿದ್ದು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅನವಶ್ಯಕ ಹಾಡುಗಳಿಗೆ ಇಲ್ಲಿ ಜಾಗ ಇಲ್ಲ.
ಮೈನಸ್ ಪಾಯಿಂಟ್ಸ್
ಸೀಟಿನ ಅಂಚಿನಲ್ಲಿ ಚಿತ್ರ ಕೂರಿಸುತ್ತಾದರೂ ಚಿತ್ರದ ಕಥೆಯನ್ನು ಪ್ರೇಕ್ಷಕರು ಊಹೆ ಮಾಡಬಹುದು. ನೇರವಾಗಿ ಎಸ್‌ಎಸ್‌ಪಿ ಮನೆಗೆ ನುಗ್ಗಿ ವಿಲನ್ ದಾಳಿ ಮಾಡುವ ದೃಶ್ಯ ಸೇರಿ ಅಲ್ಲಲ್ಲಿ ಕೆಲ ದೃಶ್ಯಗಳು ಅತಿರಂಜಿತ ಎನಿಸುತ್ತವೆ. ಭಿಕ್ಷಾಟನೆ ಮಾಫಿಯಾದ ಕರಾಳತೆಯನ್ನು ತೋರಿಸುವಾಗ ಕೆಲವು ದೃಶ್ಯಗಳಲ್ಲಿನ ಹಿಂಸೆಯಿಂದ ಕೆಲವರಿಗೆ ಹಿಂಸೆ ಆಗಬಹುದು.
ಕೊನೆ ಮಾತು
ಒಟ್ನಲ್ಲಿ ಈ ಚಿತ್ರದ ಮೂಲಕ ರಾಣಿ ಮುಖರ್ಜಿ ತಾವು ಬಾಲಿವುಡ್‌ನ ಮಹಾರಾಣಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ''ಮರ್ದಾನಿ'' ಸರಣಿಯ ಅಭಿಮಾನಿಗಳು ಅಥವಾ ಮಹಿಳಾ ಪ್ರಧಾನ ಚಿತ್ರಗಳನ್ನು ಇಷ್ಟಪಡುವವರು ''ಮರ್ದಾನಿ 3'' ನೋಡಬಹುದು. ಗಟ್ಟಿಯಾದ ಕಥೆ ಬಿಗಿಯಾದ ಚಿತ್ರಕಥೆ ಮತ್ತು ಅದ್ಭುತವಾದ ಅಭಿನಯವನ್ನು ನೋಡಲು ಬಯಸುವವರಿಗೆ ''ಮರ್ದಾನಿ 3'' ನಿರಾಸೆ ಮಾಡುವುದಿಲ್ಲ.


Click it and Unblock the Notifications










