Mark Review: ಮ್ಯಾಕ್ಸ್‌ಗೆ ಸೆಡ್ಡು ಹೊಡೆಯುತ್ತಾನಾ ಮಾರ್ಕ್ ? ಸುದೀಪ್ ಅಬ್ಬರ-ಹೇಗಿದೆ ಸಿನಿಮಾ ? ಇಲ್ಲಿದೆ ವಿಮರ್ಶೆ
ಸುದೀಪ್ .. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು.
ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಅತ್ಯುತ್ತಮ ನಿರೂಪಕ ಕೂಡ ಹೌದು. ಇಂಥಾ ಸುದೀಪ್ ಕಳೆದ ವರ್ಷ ''ಮ್ಯಾಕ್ಸ್'' ಮೂಲಕ ಬೆಳ್ಳಿತೆರೆಯಲ್ಲಿ ಅಬ್ಬರಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿದ್ದರು. ಈ ವರ್ಷ ''ಮಾರ್ಕ್'' ಚಿತ್ರದ ಸರದಿ. ಹಾಗಿದ್ದರೆ ಮಾರ್ಕ್ ಹೇಗಿದೆ..? ಮ್ಯಾಕ್ಸ್ ಚಿತ್ರದಂತೆಯೇ ಈ ಚಿತ್ರ ಕೂಡ ಮಜಾ ಕೊಡುತ್ತಾ..? ಚಿತ್ರದ ಕಥಾಹಂದರವೇನು..? ಎಂದು ತಿಳಿಯಲು ಮುಂದೆ ಓದಿ.

ಕಥಾಹಂದರ
ಅಮಾನತ್ತಾದ ಎಸ್‌ಪಿ ಅಜಯ್ ಮಾರ್ಕಂಡೇಯ (ಸುದೀಪ್) ಭ್ರಷ್ಟ ರಾಜಕಾರಣಿ ಆದಿಕೇಶವ (ಶೈನ್ ಟಾಮ್ ಚಾಕೋ) ಹೆಡೆಮುರಿ ಕಟ್ಟಲು ಮುಂದಾಗುತ್ತಾನೆ. ಆದರೆ ಇದೇ ಸಮಯದಲ್ಲಿ ಮಕ್ಕಳ ಅಪಹರಣವಾಗುತ್ತೆ. ಮತ್ತೊಂದು ಕಡೆ ಡ್ರಗ್ಸ್ ವಾಸನೆ ಕೂಡ ಬಡಿಯುತ್ತೆ. ಆದಿಕೇಶವನ ರಾಜಕೀಯ ಚಕ್ರವ್ಯೂಹವನ್ನು ಮಾರ್ಕ್ ಭೇದಿಸುತ್ತಾನಾ..? ಮಕ್ಕಳ ಅಪಹರಣದ ಹಿಂದಿನ ಕೈ ಯಾರದ್ದು..? ಈ ಮೂರು ಪ್ರಕರಣಗಳಿಗೂ ಒಂದಕ್ಕೊಂದು ಇರುವ ಸಂಬಂಧವೇನು..? ಈ ಪ್ರಶ್ನೆಗಳಿಗೆಲ್ಲ ಮಾರ್ಕ್ ಕೇವಲ 36 ಗಂಟೆಯಲ್ಲಿ ಉತ್ತರ ಹುಡುಕುತ್ತಾನಾ ಎನ್ನುವುದೇ ಈ ಚಿತ್ರದ ತಿರುಳು.
ಸುದೀಪ್ ಒನ್ ಮ್ಯಾನ್ ಶೋ
''ಮಾರ್ಕ್'' ಚಿತ್ರದಲ್ಲಿ ಹಲವಾರು ಜನ ಇದ್ಧಾರೆ. ಆದರೆ ಇದು ಸುದೀಪ್ ಅವರ ಶೋ. ಖಡಕ್ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ. ಪಾತ್ರಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ ಇವರದ್ದು. ಇವರ ಸ್ಟೈಲ್.. ಸ್ಮೈಲ್.. ಆ ಗತ್ತು ಅಭಿಮಾನಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಪ್ರೇಕ್ಷಕರಿಗೆ ಕೂಡ ಇಷ್ಟವಾಗುತ್ತೆ. ಇಡೀ ಚಿತ್ರವನ್ನು ಸುದೀಪ್ ಆವರಿಸಿಕೊಂಡಿದ್ದಾರೆ.

ಬೇರೆಯವರ ಅಭಿನಯದ ಹೇಗಿದೆ..?
''ಮಾರ್ಕ್'' ಚಿತ್ರದಲ್ಲಿ ನವೀನ್ ಚಂದ್ರ.. ವಿಕ್ರಾಂತ್.. ಗುರು ಸೋಮಸುಂದರಂ.. ಶೈನ್ ಟಾಮ್ ಚಾಕೋ.. ಯೋಗಿ ಬಾಬು.. ರಘು ರಾಮನಕೊಪ್ಪ.. ಗೋಪಾಲ್ ಕೃಷ್ಣ ದೇಶಪಾಂಡೆ.. ಪ್ರತಾಪ್ ನಾರಾಯಣ್.. ರೋಶಿನಿ ಪ್ರಕಾಶ್.. ಅರ್ಚನಾ ಕೊಟ್ಟಿಗೆ.. ದೀಪ್ಶಿಕಾ.. ಹೀಗೆ ಹಲವರು ಇದ್ದಾರೆ. ಎಲ್ಲರು ಅವರವರ ಪಾತ್ರಕ್ಕೆ ಸೀಮಿತ ಅವಕಾಶದಲ್ಲಿ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.
ಪ್ಲಸ್ ಪಾಯಿಂಟ್ಸ್ ಏನು..?
''ಮ್ಯಾಕ್ಸ್'' ಚಿತ್ರದಂತೆಯೇ ''ಮಾರ್ಕ್'' ಕಥೆ ಕೂಡ ವೇಗವಾಗಿ ಸಾಗುತ್ತೆ. ಚಿತ್ರದಲ್ಲಿನ ಎರಡು ರಾತ್ರಿ ಮತ್ತು ಒಂದು ಹಗಲು ಕಳೆದಿದ್ದು ಗೊತ್ತಾಗಲ್ಲ. ಇನ್ನೂ ಶೇಖರ್ ಚಂದ್ರ ಅವರ ಕ್ಯಾಮರಾ ಕಣ್ಣು ಚಿತ್ರದ ಕಳೆ ಹೆಚ್ಚಿಸಿದೆ. ಚಿತ್ರಕ್ಕೆ ಬೇಕಿದ್ದ ರಾ ಫೀಲ್‌ನ ಕಲಾ ನಿರ್ದೇಶಕ ಶಿವಕುಮಾರ್ ತಮ್ಮ ಕೈಚಳಕದಿಂದ ಇಲ್ಲಿ ನೀಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಇನ್ನೊಂದು ಆಕರ್ಷಣೆ.
ಮೈನಸ್ ಪಾಯಿಂಟ್ಸ್ ಏನು ?
''ಮ್ಯಾಕ್ಸ್'' ಬಿಡುಗಡೆಯಾಗಿ ಒಂದು ವರ್ಷದ ನಂತರ ''ಮಾರ್ಕ್'' ತೆರೆಗೆ ಬಂದಿದೆ. ಆದರೆ.. ''ಮ್ಯಾಕ್ಸ್''ನಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದ ನಿರ್ದೇಶಕ ವಿಜಯ ಕಾರ್ತಿಕೇಯ ಈ ಬಾರಿ ಚೂರು ಎಡವಿದ್ದಾರೆ. ಸುದೀಪ್ ಅಭಿಮಾನಿಗಳ ನಾಡಿ ಮಿಡಿತ ಗೊತ್ತಾಗಿದೆ ಎಂಬ ಭಾವನೆಯಲ್ಲಿ ಭಾವನಾತ್ಮಕವಾದ ಅಂಶ ಸೇರಿಸುವುದನ್ನು ಮರೆತಿದ್ದಾರೆ. ಕೆಲ ಕಡೆ ಲಾಜಿಕ್ ಹುಡುಕಲು ಇಲ್ಲಿ ಹೋಗಬಾರದು.
ಇನ್ನು ''ಮ್ಯಾಕ್ಸ್'' ಸಮಯದಲ್ಲಿ ಚಿತ್ರದಲ್ಲಿ ಪ್ರಬಳವಾದ ಖಳನಾಯಕನ ಕೊರತೆ ಕಂಡು ಬಂದಿದ್ದರ ಕುರಿತು ಸುದೀಪ್ ಈ ಹಿಂದೆ ಖುದ್ದು ಮಾತನಾಡಿದ್ದರು. ಆ ಸಮಸ್ಯೆ ಇಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿದ್ದರು. ಆದರೂ ಕೂಡ ಅದ್ಯಾಕೋ ನೋಡುಗರಿಗೆ ಈ ಸಮಸ್ಯೆ ಸರಿ ಹೋದಂತೆ ಕಾಣಿಸುವುದಿಲ್ಲ. ಇನ್ನೂ ಯೋಗಿ ಬಾಬು ಅವರ ಹಾಸ್ಯ ಕನ್ನಡದಲ್ಲಿ ವರ್ಕ್ ಆಗಲ್ಲ. ಇವರ ಡಬ್ಬಿಂಗ್ ಆ ಕಚಗುಳಿ ನೀಡುವುದಿಲ್ಲ. ಇದರ ನಡುವೆ ಕಥೆ ಬೇರೆ.. ಪ್ರಪಂಚ ಬೇರೆಯಾದರೂ ಕೂಡ ''ಮಾರ್ಕ್'' ನೋಡುವಾಗ ''ಮ್ಯಾಕ್ಸ್'' ಬೇಡ ಬೇಡ ಎಂದರೂ ನೆನಪಾಗುತ್ತಾನೆ.
ಕೊನೆ ಮಾತು
ಒಟ್ನಲ್ಲಿ ''ಮ್ಯಾಕ್ಸ್'' ಚಿತ್ರವನ್ನು ಮರೆತು ''ಮಾರ್ಕ್'' ನೋಡಿದರೆ, ಪ್ರೇಕ್ಷಕರಿಗೆ ಮಜಾ ಸಿಗಬಹುದು. ''ಮ್ಯಾಕ್ಸ್'' ಚಿತ್ರವನ್ನು ತಲೆಯಲ್ಲಿಟ್ಟುಕೊಂಡು ಹೋದರೆ ನಿರಾಸೆಯೂ ಆಗಬಹುದು. ಆದರೆ.. ಸುದೀಪ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತೆ. ಬೇರೆಯವರು ಒಮ್ಮೆ ಈ ಚಿತ್ರವನ್ನು ಮುಲಾಜಿಲ್ಲದೇ ನೋಡಬಹುದು.


Click it and Unblock the Notifications











