Martin Review ; ಮಾರ್ಟಿನ್ ಯಾರು, ಅರ್ಜುನ್ ಯಾರು ? ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಾ ಧ್ರುವ ಸಿನಿಮಾ ?
Star Cast: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್, ಚಿಕ್ಕಣ್ಣ ಮುಂತಾದವರು
Director : A P Arjun
ಧ್ರುವಾ ಸರ್ಜಾ ಎರಡು ಮೂರು ವರ್ಷಕ್ಕೊಂದು ಚಿತ್ರ ಮಾಡುತ್ತಾರೆ ಎನ್ನುವ ಪ್ರೀತಿ ತುಂಬಿದ ತಕರಾರು ಅವರ ಅಭಿಮಾನಿಗಳಲ್ಲಿದೆ. ಈ ಹಿನ್ನೆಲೆ ವರ್ಷಕ್ಕೊಂದು ಚಿತ್ರ ಮಾಡುವ ಭರವಸೆಯನ್ನು ಧ್ರುವ ತಮ್ಮ ಅಭಿಮಾನಿಗಳಿಗೆ ನೀಡುತ್ತಾನೇ ಬಂದಿದ್ದಾರೆ. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಿರುವಾಗ ಈಗ ಧ್ರುವಾ ಸರ್ಜಾ ಕಳೆದ ಮೂರು ವರ್ಷದಿಂದ ಮಾಡಿರುವ ಮಹಾ ತಪಸ್ಸು ಮಾರ್ಟಿನ್ ಇಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಿದೆ.
ಇನ್ನೂ ಮಾರ್ಟಿನ್ ಕೇವಲ ಧ್ರುವ ಪಾಲಿಗೆ ಮಹತ್ವದ ಸಿನಿಮಾ ಅಲ್ಲ. ಚಿತ್ರದ ನಿರ್ಮಾಪಕ ಉದಯ್ ಮೆಹ್ತಾ ಅಳಿವು ಉಳಿವಿನ ಪ್ರಶ್ನೆ ಈ ಚಿತ್ರದ ಗೆಲುವು ಅಥವಾ ಸೋಲಿನಲ್ಲಿ ಅಡಗಿದೆ. ಲವ್ ಸ್ಟೋರಿಗಳಿಗೆ ಹೆಸರುವಾಸಿಯಾದ ನಿರ್ದೇಶಕ ಎ.ಪಿ.ಅರ್ಜುನ್ ಮಾಸ್ ಚಿತ್ರವೊಂದನ್ನು ನಿರ್ದೇಶನ ಮಾಡಬಹುದಾ ಎನ್ನುವ ಪ್ರಶ್ನೆಗೆ ಕೂಡ ಮಾರ್ಟಿನ್ ಉತ್ತರವಾಗಲಿದೆ. ಇನ್ನೂ ಈ ಚಿತ್ರಕ್ಕೆ ಕಥೆ ಬರೆದಿರುವುದು ಬೇರೆ ಯಾರು ಅಲ್ಲ ಬದಲಿಗೆ ಅರ್ಜುನ್ ಸರ್ಜಾ. ಈ ಹಿನ್ನೆಲೆ ಚಿತ್ರದ ಕುರಿತು ಕುತೂಹಲ ಮೂಡುವುದು ಸಹಜ. ಬೆಳ್ಳಿತೆರೆಯಲ್ಲಿ ಮಾರ್ಟಿನ್ ಅಬ್ಬರ ಹೇಗಿದೆ ಎಂಬ ಪ್ರಶ್ನೆ ಕಾಡುವುದು ಕೂಡ ಸಹಜ. ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಮುಂದೆ ಓದಿ.

ಕಥಾಹಂದರ
ಹತ್ತು ಆನೆಯ ಶಕ್ತಿಯನ್ನೊಂದಿರುವ ವ್ಯಕ್ತಿ ಪಾಕಿಸ್ತಾನದ ನೆಲದಲ್ಲಿ ತನ್ನ ಪರಾಕ್ರಮವನ್ನು ತೋರಿಸುತ್ತಾನೆ. ಇಂಡಿಯನ್ ಎಂಬ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಅಲ್ಲಿದ್ದ ಎಲ್ಲರನ್ನೂ ಮಣ್ಣು ಮುಕ್ಕಿಸುತ್ತಾನೆ. ಆ ನಂತರ ಭಾರತಕ್ಕೆ ಪರಾರಿ ಕೂಡ ಆಗುತ್ತಾನೆ. ಆದರೆ, ದುರಾದೃಷ್ಟವಶಾತ್.. ಈ ವ್ಯಕ್ತಿಗೆ ತನ್ನ ಹಿನ್ನೆಲೆ ಗೊತ್ತಿರಲ್ಲ. ತಾನ್ಯಾರು ಎನ್ನುವ ಅರಿವು ಇರಲ್ಲ. ಈ ಕಾರಣಕ್ಕೆ ಹತಾಶೆಗೊಳಗಾಗುವ ಈ ವ್ಯಕ್ತಿ ತನ್ನ ಅಸ್ತಿತ್ವವನ್ನು ಹುಡುಕಲು ಶುರುಮಾಡುತ್ತಾನೆ. ಈ ಪ್ರಯಾಣದಲ್ಲಿ ಕಾಳಸಂತೆಯ ಅರಿವು ಆಗುತ್ತೆ. ಭಾರತದ ಮೇಲೆ ದಾಳಿಯನ್ನು ಮಾಡಲು ಭಯೋತ್ಪಾದಕರು ಸರ್ವ ಸನ್ನದ್ದರಾಗಿದ್ದಾರೆ ಎಂಬ ವಿಚಾರ ಕೂಡ ಈ ಬಲಶಾಲಿಗೆ ಗೊತ್ತಾಗುತ್ತೆ. ಮುಂದೇನಾಗುತ್ತೆ.. ? ಮಾರ್ಟಿನ್ ಯಾರು..? ಅರ್ಜುನ್ ಯಾರು..? ಈ ವಿಚಾರವನ್ನು ತಿಳಿಯಲು ನೀವು ಮಾರ್ಟಿನ್ ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.
ಧ್ರುವ ಸರ್ಜಾ ಅಭಿನಯ...!
ಇಡೀ ಮಾರ್ಟಿನ್ ಚಿತ್ರವನ್ನು ಧ್ರುವಾ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ದೈತ್ಯಾಕಾರದ ವ್ಯಕ್ತಿಯಾಗಿ ಅಬ್ಬರಿಸಿದ್ದಾರೆ. ತಮ್ಮ ಅಭಿನಯದ ಸಾಮರ್ಥ್ಯದ ಪ್ರದರ್ಶನವನ್ನು ಮಾಡಿದ್ದಾರೆ. ಸಾಹಸ ಸನ್ನಿವೇಶದಲ್ಲಿ ಧ್ರುವಾ ಅವರನ್ನು ನೋಡುವುದೇ ಚೆಂದದ ಅನುಭವ.
ಚಿಕ್ಕಣ್ಣ ಸರ್‌ಫ್ರೈಸ್..!
ಇನ್ನೂ ಸಾಮಾನ್ಯವಾಗಿ ಚಿಕ್ಕಣ್ಣ ಹೆಸರು ಕೇಳಿದ ತಕ್ಷಣ ಮುಖದಲ್ಲೊಂದು ಮಂದಹಾಸ ಮೂಡುತ್ತೆ. ಹಾಸ್ಯ ನಟ ಎಂದು ಚಿತ್ರರಂಗ ಕೂಡ ಇವರನ್ನು ಬ್ರ್ಯಾಂಡ್ ಮಾಡಿದೆ. ಆದರೆ.. ಮಾರ್ಟಿನ್ ಚಿತ್ರದಲ್ಲಿ ಚಿಕ್ಕಣ್ಣ ನಿಮ್ಮನ್ನು ನಗಿಸುವುದಿಲ್ಲ. ಯಾಕೆಂದರೆ.. ಇದೇ ಮೊದಲ ಬಾರಿ ಚಿಕ್ಕಣ್ಣ ತುಂಬಾ ಗಂಭೀರವಾದ ಪಾತ್ರವನ್ನು ಮಾಡಿದ್ದಾರೆ. ಈ ಮೂಲಕ ಅಚ್ಚರಿಗೆ ದೂಡಿದ್ದಾರೆ. ಚಿತ್ರದ ವಿಶೇಷತೆಯಲ್ಲಿ ಇದು ಕೂಡ ಒಂದು.
ಉಳಿದ ಕಲಾವಿದರ ಅಭಿನಯದ
ಮಾರ್ಟಿನ್ ಹೇಳಿ ಕೇಳಿ ಮಾಸ್ ಸಿನಿಮಾ. ಇಡೀ ಚಿತ್ರ ಧ್ರುವಾ ಮೇಲೆ ಕೇಂದ್ರಿಕೃತವಾದ ಸಿನಿಮಾ. ಹೀಗಾಗಿ ಇಲ್ಲಿ ಬೇರೆಯವರಿಗೆ ಹೆಚ್ಚೇನು ಅವಕಾಶ ಇಲ್ಲ. ಸುಕೃತಾ ವಾಗ್ಲೆ..ಅಚ್ಯುತ್ ಕುಮಾರ್.. ನಿಕಿತಿನ್ ಧೀರ್.. ಮತ್ತು ಮುಂತಾದವರಿಗೆ ಇಲ್ಲಿ ಹೆಚ್ಚೇನು ಕೆಲಸ ಇಲ್ಲ. ಚಿತ್ರಕ್ಕೊಂದು ತಿರುವು ನೀಡುವುದೇ ಚಿತ್ರದ ಇನ್ನೊಬ್ಬ ನಾಯಕಿ ಅನ್ವೇಶಿ ಜೈನ್ ಸಾಧನೆ. ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿರುವುದು ಸಮಾಧಾನದ ಸಂಗತಿ.
ಸಂಗೀತ- ಹಿನ್ನೆಲೆ ಸಂಗೀತ
ಮಣಿ ಶರ್ಮಾ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಆ ಕ್ಷಣಕ್ಕೆ ಖುಷಿಯನ್ನು ನೀಡುತ್ತವೆ. ಅದರಲ್ಲಿಯೂ ಐಟಂ ಸಾಂಗ್ ಕಣ್ಮನ ಸೆಳೆಯುತ್ತೆ. ಆದರೆ.. ಚಿತ್ರಮಂದಿರದಿಂದ ಆಚೆ ಬಂದ ನಂತರ ಜೀವ ನೀನೆ ಹಾಡು ಹೊರತು ಪಡಿಸಿದರೆ ಯಾವ ಹಾಡು ಕೂಡ ನೆನಪಿನಲ್ಲಿ ಉಳಿಯಲ್ಲ. ಇನ್ನೂ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಅಂದರೆ ಅಬ್ಬರ ಇರಲೇಬೇಕು ಎಂಬ ಅಲಿಖಿತ ನಿಯಮ ಇದೆ. ಆ ನಿಯಮ ಇಲ್ಲಿಯೂ ಕೂಡ ಮುಂದುವರೆದಿದೆ.
ಚಿತ್ರದ ಪ್ಲಸ್ ಪಾಯಿಂಟ್ಸ್
ಧ್ರುವ ಸರ್ಜಾ ಈ ಚಿತ್ರದ ಬೆನ್ನೆಲುಬಾದರೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಈ ಚಿತ್ರದ ಶಕ್ತಿ. ಪ್ರತಿಯೊಂದು ದೃಶ್ಯವನ್ನು ಸತ್ಯ ಹೆಗ್ಡೆ ಅದ್ಭುತವಾಗಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವೊಂದು ದೃಶ್ಯಗಳಂತೂ ನಿಬ್ಬೇರಗಾಗಿಸುತ್ತಾವೆ. ಇನ್ನೂ ಚಿತ್ರಕ್ಕೆ ಹಣ ಹೂಡಿರುವ ನಿರ್ಮಾಪಕ ಉದಯ್ ಮೆಹ್ತಾ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಚಿತ್ರದ ಪ್ರತಿಯೊಂದು ಹಂತದಲ್ಲಿಯೂ ಅದ್ದೂರಿತನ ಎದ್ದು ಕಾಣಿಸುತ್ತೆ.
ಚಿತ್ರದ ಮೈನಸ್ ಪಾಯಿಂಟ್ಸ್
ಇನ್ನೇನು ಮಾರ್ಟಿನ್ ಚಿತ್ರ ಬಿಡುಗಡೆಯಾಗಲಿದೆ ಎನ್ನುವಾಗ ವಿಎಫ್‌ಎಕ್ಸ್ ಹಗರಣ ಬಯಲಿಗೆ ಬಂದಿತ್ತು. ಚಿತ್ರದ ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ನಿರ್ಮಾಪಕ ಉದಯ್ ಮೆಹ್ತಾ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಮಾರ್ಟಿನ್ ಚಿತ್ರದ ಮೇಲೆ ಈ ಹಣದ ಅವ್ಯವಹಾರ ಪರಿಣಾಮ ಬೀರಿದೆ. ಚಿತ್ರದ ವಿಎಫ್‌ಎಕ್ಸ್ ಕೆಲಸವನ್ನು ಕೊನೆ ಕ್ಷಣದಲ್ಲಿ ಬೇರೆಯವರಿಂದ ಮಾಡಿಸಿರುವ ಕಾರಣಕ್ಕೆ ಸಮಯಾವಕಾಶದ ಕೊರತೆಯಿಂದಾಗಿ ಕೆಲಸಗಳನ್ನೆಲ್ಲ ಆತುರಾತುರವಾಗಿ ಮಾಡಿರುವುದು ಎದ್ದು ಕಾಣುತ್ತೆ. ಅಲ್ಲಲ್ಲಿ ವಿಎಫ್‌ಎಕ್ಸ್ ಕೆಲಸ ಕೈ ಕೊಟ್ಟಿದೆ. ಇನ್ನೂ ಪಾಕಿಸ್ತಾನದ ಜೈಲಿನಲ್ಲಿ ಧ್ರುವ ಸರ್ಜಾ ಜೊತೆ ಅಲ್ಲಿರುವ ಕೈದಿಗಳು ಕನ್ನಡದಲ್ಲಿಯೇ ಮಾತನಾಡುತ್ತಾರೆ. ಇದು ಅಭಾಸಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರಕಥೆಯ ಮೇಲೆ ಗಮನ ವಹಿಸಿದ್ದರೆ ಚಿತ್ರ ಇನ್ನೂ ರೋಮಾಂಚಕಾರಿಯಾಗಿರುತ್ತಿತ್ತು.
ಕೊನೆ ಮಾತು
ಒಟ್ನಲ್ಲಿ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಬಿಡುಗಡೆಯಾದ ಮಾರ್ಟಿನ್ ಚಿತ್ರದಲ್ಲಿ ಮಾಸ್ ಪ್ರೇಕ್ಷಕರಿಗೆ ಮತ್ತು ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಇಷ್ಟವಾಗುವಂತಹ ಹೇರಳವಾದ ಸನ್ನಿವೇಶಗಳಿವೆ. ನೋ ಡೌಟ್.. ಆಕ್ಷನ್ ಪ್ರಿಯರಿಗೆ ಮತ್ತು ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಿಯೇ ಆಗುತ್ತೆ. ಕ್ಲಾಸ್ ಪ್ರೇಕ್ಷಕರು ಕೂಡ ಈ ಮಾಸ್ ಚಿತ್ರಕ್ಕೆ ಬಹುಪರಾಕ್ ಹಾಕಿದರೆ, ಮಾರ್ಟಿನ್‌ನ ಗೆಲ್ಲುವುದರಿಂದ ತಡೆಯುವುದು ಅಸಾಧ್ಯ.


Click it and Unblock the Notifications











