Mastiii 4 Review ; ಕಳೆಗುಂದಿದ ಮೂವರು ಸ್ನೇಹಿತರ ಹಾಸ್ಯದ ಹಬ್ಬ - ಹೇಗಿದೆ ಮಸ್ತಿ 4 ? ಇಲ್ಲಿದೆ ವಿಮರ್ಶೆ
ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮೊದಲು ಬಾಲಿವುಡ್‌ನವರ ಪಾರುಪಥ್ಯ ಇತ್ತು. ಒಂದು ವರದಿಯ ಪ್ರಕಾರ 2019ರಲ್ಲಿ ಬಾಲಿವುಡ್‌ನ ಒಂದು ವರ್ಷದ ಗಳಿಕೆ 16 ಸಾವಿರ ಕೋಟಿಯವರೆಗೆ ತಲುಪಿತ್ತು. ಆದರೆ ಕೊರೊನಾ ನಂತರ ಬಾಲಿವುಡ್‌ಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಪುಟಿದೇಳುವ ಯಾವ ಲಕ್ಷಣ ಕೂಡ ಹಿಂದಿ ಚಿತ್ರರಂಗದಲ್ಲಿ ಕಂಡು ಬರುತ್ತಿಲ್ಲ. ಬಾಲಿವುಡ್‌ನ ಈ ಅವನತಿಗೆ ಹಲವಾರು ಕಾರಣಗಳಿವೆ. ಆ ಪೈಕಿ ಕತೆಯ ಸಮಸ್ಯೆ ಕೂಡ ಒಂದು.
ಕೊರೊನಾ ನಂತರ ಜನ ಭಿನ್ನ ವಿಭಿನ್ನ ವಿಡಿಯೋಗಳನ್ನು ನೋಡಿದ್ದಾರೆ. ಹೊಸಬಗೆಯ ಪರಿಕಲ್ಪನೆಯ ಕಥೆಗಳನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ ಪ್ರೇಕ್ಷಕರಿಗೆ ಬೇಕಾದ ರೀತಿಯಲ್ಲಿ ಬಾಲಿವುಡ್ ಬದಲಾಗುತ್ತಿಲ್ಲ. ಬದಲಿಗೆ ಏನು ಕೊಟ್ಟರು ಜನ ನೋಡುತ್ತಾರೆ ಎನ್ನುವ ಭಾವನೆ ಮುಂದುವರೆಸಿಕೊಂಡು ಹೋಗುತ್ತಿದೆ. ಇದಕ್ಕೆ ಮತ್ತೊಂದು ಉದಾಹರಣೆಯೇ ''ಮಸ್ತಿ 4''.

ಹೌದು, ವಿವೇಕ್ ಓಬೆರಾಯ್.. ರಿತೇಶ್ ದೇಶಮುಖ್.. ಅಫ್ತಾಬ್ ಶಿವದಾಸನಿ.. ಅಭಿನಯದ ಬ್ಲಾಕ್ ಬಸ್ಟರ್ ಫ್ರಾಂಚೈಸಿ ''ಮಸ್ತಿ''ಯ ನಾಲ್ಕನೇ ಭಾಗ ಈ ವಾರ ತೆರೆಗೆ ಬಂದಿದೆ. ಹಾಗಿದ್ದರೆ ಚಿತ್ರ ಹೇಗಿದೆ..? ಚಿತ್ರದ ಕಥಾಹಂದರವೇನು..? ಒಮ್ಮೆಯಾದರೂ ಈ ಚಿತ್ರ ನೋಡಬಹುದಾ..? ಮಸ್ತಿ ಫ್ರಾಂಚೈಸಿಯ ಘನತೆಯನ್ನು ಈ ಚಿತ್ರ ಉಳಿಸುತ್ತಾ..? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಕಥಾಹಂದರ
''ಮಸ್ತಿ''.. ''ಗ್ರ್ಯಾಂಡ್ ಮಸ್ತಿ'' ಮತ್ತು ''ಗ್ರೇಟ್ ಗ್ರ್ಯಾಂಡ್ ಮಸ್ತಿ''.. ಚಿತ್ರಗಳನ್ನು ನೋಡಿದವರಿಗೆ ಅಮರ್ (ರಿತೇಶ್ ದೇಶಮುಖ್) ಮೀತ್ (ವಿವೇಕ್ ಓಬೆರಾಯ್) ಮತ್ತು ಪ್ರೇಮ್ ( ಅಫ್ತಾಬ್ ಶಿವದಾಸನಿ ) ಪರಿಚಯ ಇದ್ದೇ ಇರುತ್ತೆ. ''ಮಸ್ತಿ''ಯ ಪರಂಪರೆ ಕೂಡ ಗೊತ್ತಿರುತ್ತೆ.
ಈ ಪರಂಪರೆ ಇಲ್ಲಿಯೂ ಮುಂದುವರೆದಿದ್ದು ಮೂವರು ಸ್ನೇಹಿತರು ತಮ್ಮ ಪತ್ನಿಯರ ಜೊತೆ ತಮ್ಮ ವೆಡ್ಡಿಂಗ್ ಆನಿವರ್ಸರಿಯನ್ನು ಆಚರಿಸಲು ಯುಕೆಗೆ ಹೋಗುತ್ತಾರೆ. ಈ ಮೂಲಕ ಕಥೆ ತೆರೆದುಕೊಳ್ಳುತ್ತೆ.
ಅಮರ್ ಪತ್ನಿ ಬಿಂದಿಯಾ(ಎಲ್ನಾಜ್ ನೊರೌಜಿ )ದಾನ ಧರ್ಮ ಎಂದು ಇದ್ದರೆ ಮೀತ್ ಪತ್ನಿ ಆಂಚಲ್(ಶ್ರೇಯಾ ಶರ್ಮಾ)ಅನುಮಾನದ ಪಿಶಾಚಿ. ಗಂಡನ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾಳೆ. ಇನ್ನೂ ಪ್ರೇಮ್ ಪತ್ನಿ ಗೀತಾದ್ದು(ರುಹಿ ಸಿಂಗ್) ಸರ್ವ ಧರ್ಮ ಸಮಭಾವ ಎಂಬ ವ್ಯಕ್ತಿತ್ವ.

ಹೀಗೆ ವಿಭಿನ್ನ ವ್ಯಕ್ತಿತ್ವದ ತಮ್ಮ ಪತ್ನಿಯರನ್ನು ಈ ಮೂವರು ತಮ್ಮ ವಿವಾಹ ವಾರ್ಷಿಕೋತ್ಸವಕ್ಕೆ ಯುಕೆಯಲ್ಲಿರುವ ತಮ್ಮ ಸ್ನೇಹಿತ ಕಾಮರಾಜ್ (ಅರ್ಷದ್ ವಾರ್ಸಿ) ಮನೆಗೆ ಕರೆದೊಯ್ಯುತ್ತಾರೆ. ಇಲ್ಲಿ ಕಾಮರಾಜ್ ಮತ್ತು ಆತನ ಪತ್ನಿ ಮೇನಕಾ(ನರ್ಗಿಸ್ ಫಖ್ರಿ)ತಮ್ಮ ವೈವಾಹಿಕ ಜೀವನದ ರಹಸ್ಯವನ್ನು ಹೇಳುತ್ತಾರೆ. ಲವ್ ವೀಸಾ ಎಂಬ ವಿಲಕ್ಷಣ ಪರಿಕಲ್ಪನೆಯ ಕುರಿತು ಮಾತನಾಡುತ್ತಾರೆ.
ಈ ಲವ್ ವೀಸಾ ಪ್ರಕಾರ ತನ್ನ ಪತ್ನಿಯಿಂದ ಕಾಮರಾಜ್‌ಗೆ ವರ್ಷಕ್ಕೆ ಒಂದು ವಾರ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತದೆ. ಇದನ್ನು ಕೇಳಿ ರೋಮಾಂಚನಗೊಳ್ಳುವ ಮೂವರು ತಮ್ಮ ಪತ್ನಿಯರ ಬಳಿ ಲವ್ ವೀಸಾಗೆ ಅಪ್ಲಿಕೇಷನ್ ಹಾಕುತ್ತಾರೆ. ವಿಶೇಷ ಅಂದರೆ ಇವರ ಪತ್ನಿಯರು ಕೂಡ ಒಪ್ಪಿಕೊಳ್ಳುತ್ತಾರೆ. ಲವ್ ವೀಸಾ ದೊರೆತ ನಂತರ ಈ ಆರು ಜನರ ಬದುಕಿನಲ್ಲಿ ಏನಾಗುತ್ತೆ ಎನ್ನುವುದೇ ಚಿತ್ರದ ಉಳಿದ ಕಥಾವಸ್ತು.
ಅಭಿನಯ ಹೇಗಿದೆ ?
ವಿವೇಕ್ ಓಬೆರಾಯ್ , ರಿತೇಶ್ ದೇಶಮುಖ್ ಮತ್ತು ಅಫ್ತಾಬ್ ಅವರಿಗೆ ಮಸ್ತಿ ಹೊಸದಲ್ಲ. ಪ್ರೇಕ್ಷಕರಿಗೆ ಕೂಡ ಇವರ ಪಾತ್ರಗಳು ಹೊಸದಲ್ಲ. ಹಿಂದಿನ ಮೂರು ಚಿತ್ರಗಳಲ್ಲಿನ ಇವರ ಲವಲವಿಕೆಯ ಅಭಿನಯ ಇಲ್ಲಿಯೂ ಕೂಡ ಮುಂದುವರೆದಿದೆ.
ಆದರೆ ಬರವಣಿಗೆ ಇವರ ಪಾತ್ರಕ್ಕೆ ಮೋಸ ಮಾಡಿದೆ. ಇವರ ಅಭಿನಯ ಸಾಮರ್ಥ್ಯಕ್ಕೆ ಕಡಿವಾಣ ಹಾಕಿದೆ. ಡಾನ್ ಪಾಬ್ಲೋ ಪುಟಿನ್ವಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ತುಷಾರ್ ಕಪೂರ್ ಮತ್ತು ಕಾಮರಾಜ್ ಪಾತ್ರ ನಿರ್ವಹಿಸಿರುವ ಅರ್ಷದ್ ವಾರ್ಸಿ ಅವರ ವಿಚಾರದಲ್ಲಿ ಕೂಡ ಇದೇ ಆಗಿದೆ.
ಎಲ್ನಾಜ್ ನೊರೌಜಿ, ರುಹಿ ಸಿಂಗ್ ಮತ್ತು ಶ್ರೇಯಾ ಶರ್ಮಾ ಕೂಡ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಮೈನಸ್ ಪಾಯಿಂಟ್ ಏನು..?
''ಸತ್ಯಮೇವ ಜಯತೇ''.. ''ಸತ್ಯಮೇವ ಜಯತೇ 2''.. ಇತ್ತೀಚೆನ ಸೂಪರ್ ಹಿಟ್ ಚಿತ್ರ ''ಏಕ್ ದಿವಾನೆ ಕೀ ದೀವಾನಿಯತ್'' ಚಿತ್ರಗಳನ್ನು ನಿರ್ದೇಶನ ಮಾಡಿರುವ, ಈ ಹಿಂದೆ ''ಗ್ರ್ಯಾಂಡ್ ಮಸ್ತಿ'' ಚಿತ್ರಕ್ಕೆ ಕಥೆಯನ್ನು ಬರೆದಿದ್ದ ಮಿಲಾಪ್ ಮಿಲನ್ ಜವೇರಿ ಈ ಬಾರಿ ಕೂಡ ಫಾರೋಖ್ ಧೋಂಡಿ ಜೊತೆ ಸೇರಿ ಈ ಚಿತ್ರದ ಕಥೆ- ಚಿತ್ರಕಥೆಯನ್ನು ಬರೆದಿದ್ದಾರೆ.ನಿರ್ದೇಶನವನ್ನು ಕೂಡ ಮಾಡಿದ್ದಾರೆ.
ಆದರೆ... ಈ ಬಾರಿ ಕಥೆಯ ಮೇಲೆ ಮಿಲಾಫ್ ಹಿಡಿತ ಕಳೆದುಕೊಂಡಿದ್ದಾರೆ. ಊಹಿಸಬಹುದಾದ ಕಥೆ ಮೊದಲಾರ್ಧ ವೇಗವಾಗಿ ಸಾಗುತ್ತೆ. ಆದರೆ ದ್ವೀತಿಯಾರ್ಧ ಪ್ರೇಕ್ಷಕರ ತಾಳ್ಮೆಯ ಪರೀಕ್ಷೆ ಮಾಡುತ್ತೆ. ಇನ್ನು ಹಿಂದಿನ ಮೂರು ''ಮಸ್ತಿ''ಯ ಗೆಲುವಿನಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳ ಪಾತ್ರ ದೊಡ್ಡದು. ಆದರೆ ಈ ಬಾರಿ ದ್ವಂದ್ವಾರ್ಥದ ಸಂಭಾಷಣೆಗಳು ಕೂಡ ಅಲ್ಲಲ್ಲಿ ಅದೇ ಹಳೆಯ ಜೋಕ್‌ನಂತೆ ಭಾಸವಾಗುತ್ತವೆ. ಮತ್ತೂ ಕೆಲ ಒಮ್ಮೆ ಮುಜುಗರಕ್ಕೀಡು ಮಾಡುತ್ತವೆ. ಕಿರಿಕಿರಿಯುಂಟು ಮಾಡುತ್ತವೆ. ಚಿತ್ರದ ಕ್ಲೈಮ್ಯಾಕ್ಸ್ ಕೂಡ ತೃಪ್ತಿ ನೀಡುವಂತೆ ಇಲ್ಲ. ಹಾಡುಗಳಲ್ಲಿ ''ಪಕಡ್ ''ಪಕಡ್ ಹಾಡು ಚೆನ್ನಾಗಿದೆ.
ಕೊನೆ ಮಾತು
''ಮಸ್ತಿ'' ಫ್ರಾಂಚೈಸಿ ಪ್ರಿಯರು ಈ ಚಿತ್ರದ ಮೇಲೆ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗಿ ನೋಡಿದರೆ ನಿರಾಸೆ ಖಂಡಿತವಾಗುತ್ತೆ. ಇನ್ನು ಎಂದಿನಂತೆ ಇಲ್ಲಿ ಲಾಜಿಕ್‌ಗೆ ಜಾಗ ಇಲ್ಲ. ಹುಡುಕುವ ಪ್ರಯತ್ನವನ್ನು ಕೂಡ ಮಾಡಬಾರದು. ಯಾವುದೇ ನಿರೀಕ್ಷೆಗಳಿಲ್ಲದೆ .. ಹಿಂದಿನ ಮೂರು ''ಮಸ್ತಿ''ಗಳನ್ನು ಮರೆತು ಹೋದರೆ .. ಚಿತ್ರ ಇಷ್ಟವಾಗಬಹುದು. ಸಮಯ ಮತ್ತು ಹಣ ಎರಡನ್ನು ಉಳಿಸಲು ಬಯಸುವವರು ಕಳೆಗುಂದಿದ ಈ ''ಮಸ್ತಿ'' ಓಟಿಟಿಗೆ ಬರುವವರೆಗೆ ಕಾಯಬಹುದು.


Click it and Unblock the Notifications











