»   » ಮತದಾನ ಅಲ್ಲಲ್ಲಿ ಇಷ್ಟವಾಗುತ್ತದೆಯೇ ಹೊರತು ಅದಕ್ಕೆ ಕಾನೂರು ಹೆಗ್ಗಡಿತಿಯ ವೈಶಾಲ್ಯವಾಗಲೀ, ಮುನ್ನುಡಿಯ ಭೂಮಿಕೆಯಾಗಲೀ ಲಭ್ಯವಾಗಿಲ್ಲ

ಮತದಾನ ಅಲ್ಲಲ್ಲಿ ಇಷ್ಟವಾಗುತ್ತದೆಯೇ ಹೊರತು ಅದಕ್ಕೆ ಕಾನೂರು ಹೆಗ್ಗಡಿತಿಯ ವೈಶಾಲ್ಯವಾಗಲೀ, ಮುನ್ನುಡಿಯ ಭೂಮಿಕೆಯಾಗಲೀ ಲಭ್ಯವಾಗಿಲ್ಲ

Subscribe to Filmibeat Kannada

ಚಿತ್ರ : ಮತದಾನಕಥೆ : ಎಸ್‌.ಎಲ್‌. ಭೈರಪ್ಪ, ಸಂಗೀತ : ಅಶ್ವಥ್‌- ಮನೋಹರ್‌ಚಿತ್ರಕಥೆ- ನಿರ್ದೇಶನ : ಟಿ.ಎನ್‌. ಸೀತಾರಾಮ್‌ತಾರಾಗಣ : ಅನಂತನಾಗ್‌, ತಾರಾ, ಅವಿನಾಶ್‌, ಮುಖ್ಯಮಂತ್ರಿ ಚಂದ್ರು, ಹೇಮಂತ್‌ ಹೆಗಡೆ
*ಸತ್ಯವ್ರತ ಹೊಸಬೆಟ್ಟು

ಕರ್ನಾಟಕದ ಒಂದು ಪುಟ್ಟ ಹಳ್ಳಿ. ಅಲ್ಲೊಬ್ಬ ರಾಜಕೀಯಾಸಕ್ತ. ಹೆಸರು ರಾಮಲಿಂಗೇಗೌಡ. ಆತನ ಪ್ರತಿಸ್ಪರ್ಧಿ ಮಾರ್ಕಂಡೇಗೌಡ. ಇಬ್ಬರ ನಡುವೆ ವರ್ಷಾನುಗಟ್ಟಲೆ ವೈರತ್ವ. ರಾಮಲಿಂಗೇಗೌಡ ಸದಾ ಪುಟ್ಟೇಗೌಡರ ಅನುಯಾಯಿ. ರಾಮಲಿಂಗೇಗೌಡರ ಜನಪ್ರಿಯತೆಯಿಂದಾಗಿ ಪುಟ್ಟೇಗೌಡರಿಗೆ ಸದಾ ಜಯ.

ರಾಮಲಿಂಗೇಗೌಡರ ಎರಡನೆಯ ಮಗಳು ಲಕ್ಷ್ಮಿ . ಆಕೆಗೆ ಅದೇ ಊರಿನ ಶಿವಪ್ಪನ ಮೇಲೆ ಪ್ರೀತಿ. ಶಿವಪ್ಪನೋ ಅನಗತ್ಯ ಆದರ್ಶವಾದಿ.

ಹೀಗೆ ಒಂದು ಊರಿನ ಜಾತಿ, ಪ್ರೀತಿ ಮತ್ತು ರಾಜಕೀಯದ ಸುತ್ತ ಸುತ್ತುವ ಚಿತ್ರ ಮತದಾನ. ಭೈರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದ ಚಿತ್ರ. ರಾಜಕೀಯ ನಾಟಕಗಳ ಮೂಲಕ ಹೆಸರು ಮಾಡಿದ ಟಿ.ಎನ್‌. ಸೀತಾರಾಮ್‌ ನಿರ್ದೇಶನದಲ್ಲಿ , ಅಶ್ವಥ್‌- ಮನೋಹರ್‌ ಸಂಗೀತ ನಿರ್ದೇಶನದಲ್ಲಿ ಹೊರಬಂದ ಈ ಚಿತ್ರವನ್ನು ಬಗೆದು ನೋಡುವುದು ಕಷ್ಟದ ಕೆಲಸ.

ಸೀತಾರಾಮ್‌ ಇದೊಂದು ರಾಜಕೀಯ ಚಿತ್ರ ಎಂದು ಹೇಳಿಕೊಂಡಿದ್ದರು. ಜಾತಿ ರಾಜಕೀಯ ರಾಮಲಿಂಗೇಗೌಡ ಎಂಬ ಸಜ್ಜನನನ್ನು ಕ್ರಮೇಣ ಅವನತಿಯ ಪಾತಾಳಕ್ಕೆ ತಳ್ಳುವುದನ್ನು ಮತದಾನ ನಿರೂಪಸುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರೀತಿ ವಿರೂಪವಾಗುತ್ತಾ ಹೋಗುತ್ತದೆ. ರಾಮಲಿಂಗೇಗೌಡ ಕೂಡ ತನ್ನ ಖದರು ಕಳಕೊಂಡು ಸೂತ್ರದ ಗೊಂಬೆಯಾಗುತ್ತಾನೆ. ಕೊನೆಗೆ ಎಲ್ಲಕ್ಕೂ ಸಾವು ಉತ್ತರವಾಗುತ್ತದೆ.

ಅತ್ತ ಪ್ರೀತಿಸಿದವನನ್ನು ಮದುವೆಯಾಗಲಾರದೇ, ಮದುವೆ ಆದವನ ಜೊತೆಗೆ ಬಾಳಲಾಗದೇ ಲಕ್ಷ್ಮಿ ಇನ್ನೊಂದು ವಿಚಿತ್ರ ವಿಸ್ಮೃತಿಯ ಪಂಜರದೊಳಗೆ ಬಂಧಿಯಾಗುತ್ತಾಳೆ. ರಾಮಲಿಂಗೇಗೌಡರ ಬಿಡುಗಡೆಯಾಂದಿಗೆ ಅತ್ತ ಲಕ್ಷ್ಮಿಯ ಬಿಡುಗಡೆಯೂ ಆಗುತ್ತದೆ. ಆಕೆ ಕೊನೆಗೂ ತಾನು ಪ್ರೀತಿಸಿದ ಶಿವಪ್ಪನನ್ನು ಸೇರುತ್ತಾಳೆ. ಇದೆಲ್ಲಾ ತೀರಾ ಸರಳವಾಗಿಸಿದ್ದಾರೆ ಸೀತಾರಾಮ್‌ ಅನ್ನೋದು ಚಿತ್ರದ ಬಗ್ಗೆ ಇರುವ ಏಕೈಕ ದೂರು. ಘಟನೆಗಳು ಬೆಳೆಯುತ್ತಾ ಹೋದಂತೆ ಆರಂಭದಲ್ಲಿ ಎತ್ತರದ ಸ್ಥಾನದಲ್ಲಿದ್ದ ರಾಮಲಿಂಗೇಗೌಡ ಕುಸಿಯುತ್ತಾ ಹೋಗುತ್ತಾನೆ. ವಿರೋಧಿ ಬಣಗಳ ಕೈ ಮೇಲಾಗುತ್ತದೆ. ನಂಬಿದ ಪುಟ್ಟೇಗೌಡ ಕೊನೆಗೆ ಕೈ ಕೊಡುತ್ತಾನೆ. ರಾಜಕೀಯ ಉದ್ದೇಶಕ್ಕಾಗಿ ಕೈಗೊಂಡ ಭ್ರಷ್ಟಾಚಾರಗಳು ರಾಮಲಿಂಗೇಗೌಡನ ಚರಮಗೀತೆ ಬರೆಯುತ್ತವೆ.

ಇದೊಂದು ಘಟನೆಯನ್ನು ನೋಡಿ. ನಮ್ಮ ಮಾವನವರು ರಾಮಲಿಂಗೇಗೌಡರು. ಮಂತ್ರಿ ಪುಟ್ಟತಿಮ್ಮಯ್ಯನವರ ಗೆಳೆಯರು. ನಮ್ಮಂಥವರಿಗೇ ಹೀಗಾದರೆ ಹೇಗೆ?

ಇಂಥ ತಮಾಷೆ ಹಾಗೂ ಕ್ಲೈಮಾಕ್ಸ್‌ನ ವಿಷಾದ ಚಿತ್ರದ ಹೈಲೈಟ್ಸ್‌. ಆದರೆ ಮತದಾನ ಹೀಗೆ ಅಲ್ಲಲ್ಲಿ ಇಷ್ಟವಾಗುತ್ತದೆಯೇ ಹೊರತು ಅದಕ್ಕೆ ಒಂದು ಉತ್ತಮ ಚಿತ್ರದ ಕ್ಯಾನ್‌ವಾಸ್‌ ದಕ್ಕಿಲ್ಲ. ಕಾನೂರು ಹೆಗ್ಗಡಿತಿಯ ವೈಶಾಲ್ಯವಾಗಲೀ, ಮುನ್ನುಡಿಯ ಭೂಮಿಕೆಯಾಗಲೀ ಲಭ್ಯವಾಗಿಲ್ಲ. ಒಳ್ಳೆಯ ಸಿನಿಮಾದ ಘಮಘಮದಿಂದಲೂ ಅದು ವಂಚಿತವಾಗಿದೆ.

ಸೀತಾರಾಮ್‌ ತಮಗಿಷ್ಟವಾದ ಸಂಭಾಷಣೆಯನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಮಾತುಗಳಿಗೇ ಪಾತ್ರಗಳು ಜೋತು ಬೀಳುತ್ತವೆ. ಗಾಢತೆ ಮಾಯವಾಗಿ, ತೆಳುವಾದ ದಾರಿಯಲ್ಲಿ ಸುದೀರ್ಘ ಪ್ರಯಾಣ ಹೊರಟ ಅಕ್ಷರಗಳಂತೆ ಚಿತ್ರ ಕಣ್ಣ ಮುಂದೆ ಕಟ್ಟಿಕೊಳ್ಳುತ್ತದೆ.

ಭೈರಪ್ಪ ಇದನ್ನು ಮೆಚ್ಚಿಕೊಳ್ಳುವುದಕ್ಕೆ ಕಾರಣಗಳೂ ಇವೆ. ಭೈರಪ್ಪ ಅತ್ಯಂತ ಜನಪ್ರಿಯ ಕಾದಂಬರಿಕಾರರೇ ಇರಬಹುದು. ಆದರೆ ಅವರ ಪಾತ್ರಗಳು ಬದುಕಿನ ಆಳಕ್ಕೆ ಇಳಿಯುವುದಿಲ್ಲ. ಅವಕ್ಕೆ ಇನ್ನೊಂದು ಮಗ್ಗಲೂ ಇರುವುದಿಲ್ಲ. ರಾಮಲಿಂಗೇಗೌಡನ decay ಅವನಿಗಷ್ಟೇ ಸೀಮಿತ ಎಂದು ನಿಮಗನ್ನಿಸಿ, ಪರಕೀಯ ಪ್ರಜ್ಞೆ ನಿಮ್ಮ ನ್ನು ಕಾಡತೊಡಗುತ್ತದೆ. ವಿಠಲ ಮೂರ್ತಿಯವರ ಒತ್ತಾಸೆಗೋ ಒತ್ತಾಯಕ್ಕೋ ಮಣಿದು ಅನಗತ್ಯವಾಗಿ ತಾರಾ ಅವರ ಪಾತ್ರವನ್ನು ಬೆಳೆಸಲಾಗಿದೆ. ಇಡೀ ಚಿತ್ರದ ಮಟ್ಟಿಗೆ ತಾರಾ ಔಟ್‌ ಸೈಡರ್‌. ಆಕೆಯದು ಇನ್ನೊಂದು ಕತೆಗೆ ವಸ್ತು ಅಷ್ಟೆ . ಅದನ್ನು ಇದರ ಜೊತೆ ಎಳೆದು ತಂದಿರುವುದು ಚಿತ್ರದ ಓಟ, ಪರಿಣಾಮ ಎರಡಕ್ಕೂ ಅಡ್ಡಿಯನ್ನುಂಟು ಮಾಡಿದೆ. ಅದರಲ್ಲೂ ರಾಮಲಿಂಗೇಗೌಡರ ಸಾವಿನ ವಿಷಾದ ಮನಸ್ಸನ್ನು ಕವಿದಿರುವ ಹೊತ್ತಲ್ಲಿ, ಮತ್ತೆ ತಾರಾ ಜೀವನದತ್ತ ನಿರ್ದೇಶಕರು ಮುಖ ಮಾಡಿರುವುದು. .. ವೈಯಕ್ತಿಕ ಒತ್ತಡವೇ ಹೊರತು ಕತೆಯ ಆಂತರಿಕ ಅಗತ್ಯವೇನಲ್ಲ.

ವಾರ್ತಾಸಂಚಿಕೆ
ತೀರ್ಥಹಳ್ಳಿಯಲ್ಲಿ ಮುಂದುವರಿದ ಮತದಾನ
ಮತದಾನಕ್ಕೆ ಮೊದಲೇ ಪ್ರಶಸ್ತಿ ರಾಜಕೀಯ ಆರಂಭವಾದರೂ ಅಚ್ಚರಿಯಿಲ್ಲ

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada