Drishyam- 3 Review: ಹಿಟ್ ಸರಣಿಯಲ್ಲಿ ಕೊಂಚ ನಿರಾಸೆ ಮೂಡಿಸುವ ಜಾರ್ಜ್‌ಕುಟ್ಟಿ 3ನೇ ಆಟ

13 ವರ್ಷಗಳ ಹಿಂದೆ ಬಂದಿದ್ದ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾ 'ದೃಶ್ಯಂ' ಹಿಟ್ ಆಗಿತ್ತು. ಬಳಿಕ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ರೀಮೆಕ್ ಆಗಿ ಗೆದ್ದಿತ್ತು. 4 ವರ್ಷಗಳ ಹಿಂದೆ ಸೀಕ್ವೆಲ್ ಬಂದು ಗೆದ್ದು ಇತರೆ ಭಾಷೆಗಳಿಗೆ ರೀಮೆಕ್ ಆಗಿತ್ತು. ಇದೀಗ ಪಾರ್ಟ್-3 ತೆರೆಗೆ ಬಂದಿದೆ. ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿದೆ.

Rating:
2.5/5
Star Cast: ಮೋಹನ್ ಲಾಲ್, ಮೀನಾ ಮುಂತಾದವರು.
Director: ಜಿತು ಜೋಸೆಫ್

ಕೇಬಲ್ ಆಪರೇಟರ್ ಜಾರ್ಜ್‌ಕುಟ್ಟಿ(ಮೋಹನ್ ಲಾಲ್) ಹಾಗೂ ಪತ್ನಿ ರಾಣಿ(ಮೀನಾ). ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಸುಂದರ ಕುಟುಂಬದಲ್ಲಿ ಅದೊಂದು ಘಟನೆ ಅಲ್ಲೋಲ ಕಲ್ಲೋಲ ಸೃಷ್ಟಿಸಿಬಿಡುತ್ತದೆ. ಆತ್ಮರಕ್ಷಣೆಗಾಗಿ ರಾಣಿ ಹಾಗೂ ಮಗಳು ಅಂಜು ಮಾಡುವ ಹತ್ಯೆ ಅವರ ಬದುಕಿನಲ್ಲಿ ವಾಸಿಯಾಗದ ಗಾಯ ಮಾಡಿಬಿಡುತ್ತದೆ. ಸತ್ತವನ ಹೆಣ ಮುಚ್ಚಿಟ್ಟು ಕುಟುಂಬವನ್ನು ರಕ್ಷಿಸಲು ಜಾರ್ಜ್‌ಕುಟ್ಟಿ ಮುಂದಾಗುತ್ತಾನೆ.

Mohanlal Starrer Suspense thriller  Drishyam- 3 Review and rating in kannada

ಸತ್ತವನು ಹಿರಿಯ ಪೊಲೀಸ್ ಅಧಿಕಾರಿ ಮಗ ವರುಣ್. ಹಾಗಾಗಿ ಅಷ್ಟು ಸುಲಭವಾಗಿ ಪ್ರಕರಣ ಮುಚ್ಚಿ ಹಾಕಲು ಸಾಧ್ಯವಾಗಲ್ಲ. ಅದಕ್ಕಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಜಾರ್ಜ್‌ಕುಟ್ಟಿ ಹೋರಾಟ ಮುಂದುವರೆಸಿದ್ದಾನೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಪೊಲೀಸ್ ಇಲಾಖೆಯನ್ನು ಯಾಮಾರಿಸಿ ಮಡದಿ ಮಗಳನ್ನು ಶಿಕ್ಷೆಯಿಂದ ತಪ್ಪಿಸುವ ಕೆಲಸವನ್ನು ಎರಡನೇ ಭಾಗದಲ್ಲಿ ಕೂಡ ಜಾರ್ಜ್‌ಕುಟ್ಟಿ ಬಿಡಲಿಲ್ಲ. ಈಗ 'ದೃಶ್ಯಂ- 3' ಸಿನಿಮಾದಲ್ಲೂ ಅದೇ ಪುನರಾವರ್ತನೆಯಾಗಿದೆ.

'ದೃಶ್ಯಂ- 3' ಕಥೆ

ಟೈಟಲ್‌ ಕಾರ್ಡ್ ಹಿನ್ನೆಲೆಯಲ್ಲಿ ಈವರೆಗೆ ನಡೆದ ಕಥೆಯನ್ನು ನೋಡುಗರಿಗೆ ನೆನಪಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಜಾರ್ಜ್‌ಕುಟ್ಟಿ ಸಿನಿಮಾ ನಿರ್ಮಾಪಕನಾಗಿದ್ದಾನೆ. ತನ್ನ ಜೀವನದಲ್ಲಿ ನಡೆದ ಘಟನೆಗಳನ್ನೆ 'ದೃಶ್ಯಂ' ಹೆಸರಿನಲ್ಲಿ ಸಿನಿಮಾ ಮಾಡಿ ಗೆಲ್ತಾನೆ. ಮತ್ತೊಂದು ಕಡೆ ಮಗಳು ಅಂಜು ಮದುವೆ ಮಾಡಲು ಮುಂದಾಗುತ್ತಾನೆ. ಅದಕ್ಕಾಗಿ ವರಾನ್ವೇಷಣೆ ಆರಂಭಿಸಿದ್ದಾನೆ. ಜೊತೆಗೆ ಹಿಂದೆ ಮಾಡಿರುವ ತಪ್ಪಿನ ಪಾಪಪ್ರಜ್ಞೆ ಅವನ ಕುಟುಂಬವನ್ನು ಕಾಡುತ್ತಲೇ ಇದೆ.

Mohanlal Starrer Suspense thriller  Drishyam- 3 Review and rating in kannada

ವರುಣ್ ತಂದೆ ಪ್ರಭಾಕರ್ ಹಾಗೂ ತಾಯಿ ಗೀತಾ ಪ್ರಭಾಕರ್ ವಿದೇಶಕ್ಕೆ ಹೋಗಿ ನೆಲೆಸಿದ್ದಾರೆ. ಮಗನ ಅಗಲಿಕೆ, ಜಾರ್ಜ್ ಕುಟ್ಟಿ ತಪ್ಪಿಸಿಕೊಂಡ ಎಂದು ಗೀತಾ ಖಿನ್ನತೆಗೆ ಜಾರಿದ್ದಾಳೆ. 'ದೃಶ್ಯಂ' ಸಿನಿಮಾ ಗೆಲುವು ಆಕೆಗೆ ಮತ್ತಷ್ಟು ನೋವು ತಂದಿದೆ. ಈಗ ಹೊಸ ಆಟ ಶುರುವಾಗಿದೆ. ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ದಾವಂತದಲ್ಲಿ ಜಾರ್ಜ್ ಕುಟ್ಟಿಯಿಂದ ಕೆಲವರಿಗೆ ಅನ್ಯಾಯವಾಗಿದೆ. ಅವರೆಲ್ಲರೂ ಆತನ ನೆಮ್ಮದಿ ಹಾಳು ಮಾಡಲು ಹೊಂಚು ಹಾಕಿದ್ದಾರೆ. ಅಂಜು ಮದುವೆ ನಿಲ್ಲಿಸಲು ಪಣ ತೊಡುತ್ತಾರೆ. ಅದಕ್ಕೆ ಮತ್ತೊಂದು ಕೈ ಜೊತೆಯಾಗುತ್ತದೆ. ಪೊಲೀಸರ ಸಾಥ್ ಕೂಡ ಸಿಗುತ್ತದೆ. ಹಾಗಾದ್ರೆ ಅಂಜು ಮದುವೆ ನಡೆಯಲ್ವಾ? ಈ ಸಲ ಜಾರ್ಜ್‌ಕುಟ್ಟಿ ಸಿಕ್ಕಿಬೀಳ್ತಾನಾ? ಅದಕ್ಕೆಲ್ಲಾ ಉತ್ತರ ಸಿಗಬೇಕು ಅಂದರೆ ಸಿನಿಮಾ ನೋಡಬೇಕು. ಇದಕ್ಕಿಂತ ಹೆಚ್ಚು ಕಥೆ ಹೇಳಿದ್ರೆ, ಸಿನಿಮಾ ನೋಡುವ ಕುತೂಹಲ ಮಿಸ್ ಆಗಬಹುದು.

'ದೃಶ್ಯಂ- 3' ಹೇಗಿದೆ?

ಜಾರ್ಜ್‌ ಕುಟ್ಟಿ ಬಹಳ ಚಾಲಾಕಿ. ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾನೆ. ಅದಕ್ಕಾಗಿ ಏನು ಮಾಡಲು ಸಿದ್ಧ. ಆದರೆ ಬರ್ತಾ ಬರ್ತಾ ಪಶ್ಚಾತ್ತಾಪ ಹೆಚ್ಚಾಗಿದೆ. ಹಾಗಂತ ತನ್ನ ಮಡದಿ, ಮಕ್ಕಳನ್ನು ಬಿಟ್ಟು ಕೊಡಲು ಸಿದ್ಧನಿಲ್ಲ. ಮೊದಲ ಭಾಗದಲ್ಲಿ ಕೇಬಲ್ ಆಪರೇಟರ್ ಆಗಿದ್ದ ಜಾರ್ಜ್ 2ನೇ ಭಾಗದಲ್ಲಿ ತನ್ನ ಕಥೆಯನ್ನು 'ದೃಶ್ಯಂ' ಕಾದಂಬರಿಯಾಗಿ ಹೊರತಂದು ಅದನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. 3ನೇ ಭಾಗದಲ್ಲಿ ಅದೇ ಕಥೆ ಆಧರಿಸಿ ಸಿನಿಮಾ ನಿರ್ಮಿಸಿ ಗೆಲ್ಲುತ್ತಾನೆ. ಹೀಗೆ ಕಥೆಯನ್ನು ಜಿತು ಜೋಸೆಫ್ ಮುಂದುವರೆಸಿದ್ದಾರೆ. ಮಗಳ ಮದುವೆ, ಅದನ್ನು ತಪ್ಪಿಸಲು ನಡೆಸುವ ಕೆಲವರ ಪ್ರಯತ್ನಗಳನ್ನು ತೋರಿಸುತ್ತಾ ಮೊದಲಾರ್ಧ ಮುಗಿಸಿದ್ದಾರೆ.

ಇಂಟಲ್‌ವಲ್ ವೇಳೆಗೆ ಈ ಬಾರಿ ಜಾರ್ಜ್ ಕುಟ್ಟಿ ಹಿಂದೆ ಬಿದ್ದಿರುವವರು ಯಾರು? ಎನ್ನುವುದನ್ನು ರಿವೀಲ್ ಮಾಡುತ್ತಾರೆ. ಆದರೆ ಆತನನ್ನು ಆಡಿಸುತ್ತಿರುವುದು ಯಾರು ಎನ್ನುವುದು ದ್ವಿತಿಯಾರ್ಧದಲ್ಲಿ ಗೊತ್ತಾಗುತ್ತದೆ. ಟ್ರೈಲರ್ ನೋಡಿದಾಗ ವರದಿಗಾರ್ತಿಯೊಬ್ಬಳು ಈ ಪ್ರಕರಣದ ಹಿಂದೆ ಬಿದ್ದು ಭೇದಿಸುವ ಯತ್ನಿಸುವಂತೆ ತೋರಿಸಲಾಗಿತ್ತು. ಆದರೆ ಅದಕ್ಕಿಂತ ಬೇರೆಯದೇ ಕಥೆ ಚಿತ್ರದಲ್ಲಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ ಕೊನೆಗೆ ಪ್ರೇಕ್ಷಕರು ಸೀಟಿನ ತುದಿಗೆ ತಂದು ಕೂರಿಸಲಾಗಿದೆ. ಒಂದು ಹಂತಕ್ಕೆ ಎದುರಾಳಿಗಳು ತೋಡಿದ ಖೆಡ್ಡಾಗೆ ಜಾರ್ಜ್ ಕುಟ್ಟಿ ಬೀಳುತ್ತಾನೆ. ಆದರೂ ಅದರಿಂದ ಮೇಲೆದ್ದು ಬಂದು ತಿರುಗೇಟು ಕೊಡುತ್ತಾನೆ. ಮತ್ತೊಮ್ಮೆ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುತ್ತಾನೆ. ನನ್ನ ಕುಟುಂಬಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ, ಇನ್ನಾದರೂ ನನ್ನ ಬೆನ್ನಟ್ಟುವುದು ಬಿಟ್ಟುಬಿಡಿ ಎಂದು ಕೊನೆಗೆ ಎಚ್ಚರಿಕೆ ಕೊಡುತ್ತಾನೆ. ಹೀಗೆ ಕಥೆಯನ್ನು ಜಿತು ಜೋಸೆಫ್ ಕಟ್ಟಿಕೊಡುತ್ತಾ ಹೋಗಿದ್ದಾರೆ. ಆದರೆ ಹಿಂದಿನ ಎರಡು ಭಾಗಗಳಿಗೆ ಹೋಲಿಸಿದರೆ ಸಿನಿಮಾ ಕೊಂಚ ನಿರಾಸೆ ಮೂಡಿಸುತ್ತದೆ. ಮೊದಲಾರ್ಧ ಸಪ್ಪೆಯಾಗಿದೆ.

ಕಲಾವಿದರ ಅಭಿನಯ

ಎಂದಿನಂತೆ ಮೋಹನ್ ಲಾಲ್ ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಯಾವುದೇ ಕ್ಷಣದಲ್ಲಿ ಜಾರ್ಜ್‌ಕುಟ್ಟಿ ಪಾತ್ರದಿಂದ ಹೊರ ಬರದೇ ಜೀವಿಸಿದ್ದಾರೆ. ಇನ್ನು ಪತ್ನಿಯಾಗಿ ಮೀನಾ, ಮಕ್ಕಳ ಪಾತ್ರಗಳಲ್ಲಿ ಅನ್ಸಿಬಾ ಹಸನ್ ಹಾಗೂ ಎಸ್ತರ್ ಅನಿಲ್ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಇನ್ನುಳಿದಂತೆ ಯಾವುದೇ ಪಾತ್ರಕ್ಕೆ ಅಷ್ಟು ಮಹತ್ವ ಇಲ್ಲ. ಆಶಾ ಶರತ್, ಸಿದ್ಧಿಕಿ, ಮುರಳಿ ಗೋಪಿ ತಮ್ಮ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾನೆ. ಒಂದ್ಕಡೆ ಅಪರಾಧಿ ಮನಸ್ಸು, ಮತ್ತೊಂದು ಕಡೆ ಕುಟುಂಬವನ್ನು ರಕ್ಷಿಸಿಕೊಳ್ಳುವ ಹಠಕ್ಕೆ ಬಿದ್ದ ಮನಸ್ಸು ಎರಡನ್ನು ಆ ಪಾತ್ರದಲ್ಲಿ ಅನಾವರಣ ಮಾಡುವ ಮೋಹನ್ ಲಾಲ್ ಒನ್‌ಮ್ಯಾನ್ ಶೋ.

ಟೆಕ್ನಿಕಲಿ ಸಿನಿಮಾ

ಹೊಸದಾಗಿ ಕಥೆ ಏನೂ ಇಲ್ಲ. ಈಗಾಗಲೇ ಗೊತ್ತಿರುವ ಕಥೆಯನ್ನು ಮತ್ತಷ್ಟು ಮುಂದುವರೆಸಿದ್ದಾರೆ ಜಿತು ಜೋಸೆಫ್. ಆದರೆ ಚಿತ್ರಕಥೆಯನ್ನು ಸೊಗಸಾಗಿ ಹೆಣೆದಿದ್ದಾರೆ. ಕ್ಲೈಮ್ಯಾಕ್ಸ್ ಏನು ಎನ್ನುವುದು ಗೊತ್ತಿದ್ದರೂ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇನ್ನುಳಿದಂತೆ ಸತೀಶ್ ಕುರುಪ್ ಛಾಯಾಗ್ರಹಣ, ಅನಿಲ್ ಜಾಸನ್ ಸಂಗೀತ ಚಿತ್ರಕ್ಕಿದೆ. ಮೊದಲ ಭಾಗದಲ್ಲಿ 2 ಹಾಡು, 2ನೇ ಭಾಗದಲ್ಲಿ ಒಂದು ಹಾಡು ಇತ್ತು. ಆದರೆ ಈ ಬಾರಿ ಯಾವುದೇ ಹಾಡು ಇಲ್ಲ.

ಕೊನೆ ಮಾತು

2 ಗಂಟೆ 39 ನಿಮಿಷಗಳ ಕಾಲಾವಧಿ ಕೊಂಚ ಅಧಿಕವಾಯ್ತು ಅನಿಸುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಹೆಚ್ಚು ಎಳೆಯದೇ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಬಹುದಿತ್ತು ಎನಿಸುತ್ತದೆ. ಈಗಾಗಲೇ ಗೊತ್ತಿರುವ ಕಥೆ ಆಗಿರುವುದರಿಂದ ಬಹಳ ಬೇಗ ಕ್ಲೈಮ್ಯಾಕ್ಸ್ ಸೇರಿಕೊಂಡಿದ್ದರೆ ಚೆನ್ನಾಗಿತ್ತು. ಇನ್ನುಳಿದಂತೆ 'ದೃಶ್ಯಂ'-3 ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಹಿಂದಿನ 2 ಸಿನಿಮಾಗಳನ್ನು ಮೆಚ್ಚಿಕೊಂಡವರು ಮಿಸ್ ಮಾಡದೇ ಪಾರ್ಟ್- 3 ನೋಡಿ. ಹೆಚ್ಚು ನಿರೀಕ್ಷೆ ಇಲ್ಲದೇ ಚಿತ್ರಮಂದಿರಕ್ಕೆ ಹೋಗುವುದು ಒಳಿತು. ಮುಂದಿನ ದಿನಗಳಲ್ಲಿ ಪಾರ್ಟ್- 4 ಕೂಡ ಬರಲಿದೆ.

Read more about: mohanlal review malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X