»   » ಅತ್ತ ಕಲಾತ್ಮಕತೆಯ ಭಾರಕ್ಕೆ ಸೊರಗದೆ, ಇತ್ತ ಕಮರ್ಷಿಯಲ್‌ ಅಂಶಗಳ ಸುಳಿಗೂ ಸಿಗದೆ ಮುನ್ನುಡಿ ನಮಗೆ ತೀರಾ ಅಪರಿಚಿತ ಬದುಕನ್ನು ಪರಿಚಯಿಸುತ್ತದೆ.

ಅತ್ತ ಕಲಾತ್ಮಕತೆಯ ಭಾರಕ್ಕೆ ಸೊರಗದೆ, ಇತ್ತ ಕಮರ್ಷಿಯಲ್‌ ಅಂಶಗಳ ಸುಳಿಗೂ ಸಿಗದೆ ಮುನ್ನುಡಿ ನಮಗೆ ತೀರಾ ಅಪರಿಚಿತ ಬದುಕನ್ನು ಪರಿಚಯಿಸುತ್ತದೆ.

Subscribe to Filmibeat Kannada


ಆಕೆ ಕಾಯುತ್ತಿದ್ದಾಳೆ. ಆತ ಬಂದೇ ಬರುತ್ತಾನೆ ಎನ್ನುವುದು ಅವಳಿಗೆ ಖಾತ್ರಿಯಾಗಿದೆ. ಕಡಲ ತೀರದ ಮರಳ ಮೇಲಿನಿಂದ ಬೀಸುವ ಮರಳು ಗಾಳಿಯೂ ಆತನ ನೆನಪನ್ನೇ ಹೊತ್ತು ತರುತ್ತದೆ. ಆತ ಬಂದಂತೆ ಅಜನೆಯಾಗುತ್ತದೆ.

ಆಕೆಯ ಜೊತೆ ಅಷ್ಟೇ ಕಾತರದಿಂದ ಕಾಯುವ ಮಗಳಿದ್ದಾಳೆ. ಮಗಳಿಗೆ ಬೇಕಾಗಿರುವುದು ಅಪ್ಪನ ಹೆಸರು. ಅಪ್ಪನ ಅಸ್ತಿತ್ವ. ಅದರ ಮೂಲಕ ತನ್ನ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂಬ ಅಳಿಯಾಸೆ .

ಹೀಗೆ ಈ ಅಮ್ಮ , ಮಗಳು ಕಾಯುತ್ತಿದ್ದರೆ ಊರಲ್ಲಿ ಎಲ್ಲವೂ ಚೆನ್ನಾಗಿದೆ. ವ್ಯಾಪಾರ ತನ್ನ ಪಾಡಿಗೆ ತಾನು ನಡೆಯುತ್ತಿದೆ. ಹೆಣ್ಣು ಮಕ್ಕಳು ಬೆಳೆದು ಫಲವತಿಯರಾಗುತ್ತಾರೆ. ಅವರ ಬಡತನವೇ ಅವರನ್ನೆಲ್ಲಾ ಮತ್ತೆ ಧರ್ಮದ ಹೆಸರಿನಲ್ಲಿ ನಡೆಯುವ ನಿರ್ಲಜ್ಜ ಕೂಪಕ್ಕೆ ತಳ್ಳುತ್ತದೆ.

ಗಾಳಿ ಬೀಸುತ್ತಲೇ ಇರುತ್ತದೆ. ತೆಂಗಿನ ಮರಗಳು ನಿರ್ಲಿಪ್ತವಾಗಿ ಕಡಲತ್ತ ಬಾಗುತ್ತವೆ. ಅಲೆಗಳು ತಮಗೆ ಅಂಚೇನು ಕಡಲೇನು ಎಂಬಂತೆ ಮರಳ ಮೇಲಿನ ಹೆಜ್ಜೆ ಗುರುತನ್ನು ಅಳಿಸಿ ಹಾಕುತ್ತದೆ.

ಇದು ಮುನ್ನುಡಿ. ಕಾಯುತ್ತಿರುವ ಅಮ್ಮನ ಹೆಸರು ರುಖಿಯಾ. ಅವಳ ಒಬ್ಬಳೇ ಮಗಳು ಉನ್ನೀಸಾ . ಅವಳಿಗೊಬ್ಬಳು ಗೆಳತಿ. ಗೆಳತಿಯ ಅಪ್ಪ ಅರಬಿಗಳಿಗೆ ತನ್ನ ಜಾತಿಯ ಹೆಣ್ಣುಗಳನ್ನೇ ನಿಖಾ ಮಾಡಿಕೊಡುವ ದಲ್ಲಾಳಿ...

ಬೊಳುವಾರ ಮಹಮದ್‌ ಕುಞ್ಞಿ ಅವರ ಮುತ್ತುಚ್ಚೇರ ಕತೆಯನ್ನು ಮಾಯಾಮೃಗ ಖ್ಯಾತಿಯ ಪಿ. ಶೇಷಾದ್ರಿ ಅಚ್ಚುಕಟ್ಟಾಗಿ ತೆರೆಗೆ ಇಳಿಸಿದ್ದಾರೆ. ಇದು ಶೇಷಾದ್ರಿ ಅವರ ಚೊಚ್ಚಲ ಪ್ರಯತ್ನ. ಅತ್ತ ಕಲಾತ್ಮಕತೆಯ ಭಾರಕ್ಕೆ ಸೊರಗದೆ, ಇತ್ತ ಕಮರ್ಷಿಯಲ್‌ ಅಂಶಗಳ ಸುಳಿಗೂ ಸಿಗದೆ ಮುನ್ನುಡಿ ನಮಗೆ ತೀರಾ ಅಪರಿಚಿತವಾದ ಬದುಕೊಂದನ್ನು ಪರಿಚಯ ಮಾಡಿಕೊಡುತ್ತದೆ. ನಿರ್ದೇಶಕರು ಚಿತ್ರದ ಕೊನೆಗೆ ಕಟ್ಟಿಕೊಡುವ ಪರಿಹಾರ ಹಾಗೂ ಹೇಳಲು ಯತ್ನಿಸಿರುವ ಸಂಗತಿಗಳನ್ನು ಪೂರ್ತಿಯಾಗಿ ಮರೆತುಬಿಟ್ಟರೆ, ಎಲ್ಲ ಸಂಕೀರ್ಣತೆಗಳನ್ನೂ ಒಳಗೊಂಡ ಅತ್ಯುತ್ತಮ ಚಿತ್ರ ಇದು.

ಆ ಚಿತ್ರಕ್ಕೆ ಮೂರು ಆಯಾಮಗಳಿವೆ. ಮೊದಲನೆಯದು ಒಂದು ಊರಿನ ಶ್ರೀಮಂತ ವ್ಯಾಪಾರಸ್ಥರು ತಮ್ಮ ಲಾಭಕ್ಕಾಗಿ ತಮ್ಮ ಜಾತಿಯ ಹೆಣ್ಣುಗಳನ್ನೇ ಅರಬ್ಬಿಗಳಿಗೆ ನಿಖಾ ಮಾಡಿಕೊಡುವುದು. ಅರಬಿ ಕಡಲನ್ನು ದಾಟಿ ವ್ಯಾಪಾರಕ್ಕೆಂದು ಬರುವ ಅರಬಿಗಳು, ಮೂರು ತಿಂಗಳ ಮಟ್ಟಿಗೆ ಅರಬಿ ಹೆಣ್ಣುಗಳನ್ನು ನಿಖಾ ಮಾಡಿಕೊಳ್ಳುತ್ತಾರೆ. ನಂತರ ತಲಾಖ್‌ ಕೊಟ್ಟು ಹೊರಟುಹೋಗುತ್ತಾರೆ. ಆಕೆ ಬೇರೆಯವರನ್ನು ನಿಖಾ ಆಗಬಹುದು. ಹೀಗೆ ವರ್ಷಂಪ್ರತಿ ನಡೆಯುತ್ತಿರುತ್ತದೆ.

ಹೀಗೆ ನಿಖಾ ಮಾಡಿಕೊಂಡ ರುಖಿಯಾಳ ಪ್ರಿಯತಮ ಆಕೆಗೆ ತಲಾಖ್‌ ಕೊಡದೇ ಹೊರಟು ಹೋಗಿದ್ದಾನೆ. ಆದರೆ ಮಗಳೊಬ್ಬಳನ್ನು ಕೊಟ್ಟು ಹೊಗಿದ್ದಾನೆ. ಆತ ಮರಳಿ ಬರುತ್ತಾನೆ ಅನ್ನುವ ನಿರೀಕ್ಷೆಯಲ್ಲಿ ರುಖಿಯಾ 16 ವರ್ಷ ಸವೆಸಿದ್ದಾಳೆ. ಮಗಳು ಮದುವೆಯ ವಯಸ್ಸಿಗೆ ಬಂದು ನಿಂತಿದ್ದಾಳೆ.

ಆ ಮಗಳನ್ನು ಇನ್ನೊಬ್ಬ ಅರಬಿಯ ಜೊತೆ ನಿಖಾ ಮಾಡುವುದಕ್ಕೆ ಊರ ಸಾಹುಕಾರ ಹಾಗೂ ದಲ್ಲಾಳಿ ಪ್ರಯತ್ನಿಸುವುದೇ ಕಥಾ ವಸ್ತು. ಈ ನಡುವೆ ಒಂದು ಸಾವು, ಒಂದು ಅಘಟಿತ ಪ್ರೇಮ ಪ್ರಸಂಗ, ಒಂದು ಆತ್ಮ ವಂಚನೆ, ಮತ್ತೊಂದು ನಿಖಾ- ಎಲ್ಲವೂ ನಡೆಯುತ್ತದೆ. ಕೊನೆಗೆ ರುಖಿಯಾ ದನಿ ಎತ್ತರಿಸಿ ಮಾತನಾಡುತ್ತಾಳೆ.

ಕಡಲು ಕುದಿಯಿತು ಹಡಗು ಉರಿಯಿತು ಕಣ್ಣು ಬೆಂಕಿಯ ಕಾವಲಿ....ಯಾಗಿ ಆಕೆ ಎಲ್ಲ ಮುಸ್ಲಿ ಮಹಿಳೆಯರ ಭಾವನೆಗಳಿಗೆ ನುಡಿಯಾಗುತ್ತಾಳೆ. ಅವರ ನಾಳಿನ ಸ್ವತಂತ್ರ ಬದುಕಿಗೆ ಮುನ್ನುಡಿ ಬರೆಯುತ್ತಾಳೆ.

ರುಖಿಯಾ ಪಾತ್ರಕ್ಕೆ ತಾರಾ ಜೀವ ತುಂಬಿದ್ದಾರೆ. ಈ ಪಾತ್ರ ಅವರ ಚಿತ್ರ ಜೀವನದ ಮಹತ್ವದ ಪಾತ್ರಗಳಲ್ಲಿ ಒಂದಾಗುವ ಸಾಧ್ಯತೆಯೂ ಇದೆ. ಉಳಿದಂತೆ ದಲ್ಲಾಳಿ ಹಸನಬ್ಬನ ಪಾತ್ರವನ್ನು ಲವಲವಿಕೆಯಿಂದ ನಿರ್ವಹಿಸಿದ ಖ್ಯಾತಿ ದತ್ತಾತ್ರೇಯ ಅವರಿಗೆ ಸಲ್ಲುತ್ತದೆ. ಮನೋಹರ್‌ ಸಂಗೀತದಲ್ಲಿ ಮುಸ್ಲಿಂ ಸಂವೇದನೆಯ ಗೀತೆಗಳು ಕಿವಿಗೆ ಇಂಪು ನೀಡಿದರೆ ಮಾರ್ಮಿಕವಾದ ಹಾಡುಗಳನ್ನು ಬೊಳುವಾರು ಬರೆದಿದ್ದಾರೆ.

ಈ ತಿಂಗಳ ಕೊನೆಯ ವಾರದ ಹೊತ್ತಿಗೆ ಮಂಗಳೂರಿನಲ್ಲಿ ತೆರೆಕಾಣಲಿರುವ ಮುನ್ನುಡಿ, ಮುಂದಿನ ತಿಂಗಳು ಬೆಂಗಳೂರಿನ ಚಿತ್ರ ಮಂದಿರಗಳಿಗೂ ಬರಬಹುದು.

ಬಂದರೆ ಮಿಸ್‌ ಮಾಡಿಕೊಳ್ಳಬೇಡಿ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada