ರಾಮನವಮಿ ದಿನ ಥಿಯೇಟರ್‌ಗೆ ಬಂದ 'ದಸರಾ' ಹಿಟ್ಟಾ, ಫ್ಲಾಪಾ? ಚಿತ್ರ ನೋಡಿದ ಸಿನಿ ರಸಿಕರು ಹೇಳಿದ್ದಿಷ್ಟು!
ದಸರಾ.. ಇಂದು ( ಮಾರ್ಚ್ 30 ) ರಾಮನವಮಿಯ ವಿಶೇಷ ದಿನದಂದು ಬಿಡುಗಡೆಯಾಗುತ್ತಿರುವ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರದಲ್ಲಿ ನಾಯಕನಾಗಿ ನ್ಯಾಚುರಲ್ ಸ್ಟಾರ್ ನಾನಿ ಅಭಿನಯಿಸಿದ್ದು, ನಾಯಕಿಯಾಗಿ ಕೀರ್ತಿ ಸುರೇಶ್ ನಟಿಸಿರುವ ಸಿನಿಮಾ. ಇನ್ನು ಟ್ಯಾಲೆಂಟೆಡ್ ಡೈರೆಕ್ಟರ್ ಸುಕುಮಾರ್‌ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಅನುಭವವಿರುವ ಶ್ರೀಕಾಂತ್ ಒಡೆಲಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮೊದಲ ಚಿತ್ರದ ಮೂಲಕವೇ ಪ್ಯಾನ್ ಇಂಡಿಯಾ ನಿರ್ದೇಶಕ ಎನಿಸಿಕೊಂಡಿದ್ದಾರೆ.
ಇನ್ನು ಇಂದು ದಸರಾ ಜತೆ ಹಲವಾರು ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದು, ಆ ಎಲ್ಲಾ ಚಿತ್ರಗಳಿಗಿಂತ ದಸರಾ ಸಿನಿಮಾಗೆ ಬುಕಿಂಗ್ ಕ್ರೇಜ್ ಹೆಚ್ಚಿದೆ. ಈ ಪರಿ ನಿರ್ದೇಶಕನ ವೃತ್ತಿ ಜೀವನದ ಮೊದಲ ಚಿತ್ರಕ್ಕೆ ಇಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಕೊಳ್ಳಲು ಕಾರಣ ನಾನಿ ಸ್ಟಾರ್‌ಗಿರಿ ಎನ್ನುವುದಕ್ಕಿಂತ ಚಿತ್ರದ ಟ್ರೈಲರ್ ಹಾಗೂ ಟೀಸರ್ ಎಂದರೆ ತಪ್ಪಾಗಲಾರದು. ಹೌದು, ನಾನಿ ನಟನೆಯ ಇತ್ತೀಚೆಗಿನ ಯಾವ ಚಿತ್ರಕ್ಕೂ ಇರದಿದ್ದಷ್ಟು ಕ್ರೇಜ್ ಈ ಚಿತ್ರಕ್ಕೆ ಹುಟ್ಟುಕೊಂಡಿದೆ.

ವಾವ್ ಎನಿಸುವಂತಿದ್ದ ಪರ್ಫೆಕ್ಟ್ ಟ್ರೈಲರ್ ಕಟ್, ಗೂಸ್‌ಬಂಪ್ಸ್ ಮೂಡಿಸುವಂತಹ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಭರ್ಜರಿ ಸಿನಿಮಾ ಮೇಕಿಂಗ್ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಅಲ್ಲದೇ ಸಿನಿಮಾ ಪ್ರಚಾರಕ್ಕಾಗಿ ಮಾಡಲಾಗಿದ್ದ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದ ನಟ ನಾನಿ ಚಿತ್ರದ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯ ಹಾಗೂ ಚಿತ್ರದ ನಿರ್ದೇಶಕ ಹಾಗೂ ತಂಡದ ಬಗ್ಗೆ ಆಡಿದ್ದ ವಿಶ್ವಾಸದ ಮಾತುಗಳು ಚಿತ್ರತಂಡ ದೊಡ್ಡದಾಗಿಯೇ ತಯಾರಾಗಿ ಬಂದಂತಿದೆ ಎಂಬ ನಂಬಿಕೆ ಮೂಡಿಸಿದ್ದವು. ನಾನಿ ಮಾತ್ರವಲ್ಲದೇ ಚಿತ್ರತಂಡದ ಇತರೆ ಸದಸ್ಯರೂ ಸಹ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ವಿಶ್ವಾಸದಿಂದ ಮಾತನಾಡಿದ್ದರು.
ಈ ಮಾತುಗಳನ್ನು ಕೇಳಿದ್ದ ಸಿನಿ ರಸಿಕರು ಚಿತ್ರತಂಡ ಇಷ್ಟೆಲ್ಲಾ ವಿಶ್ವಾಸದಿಂದ ಮಾತನಾಡುತ್ತಿದೆ ಎಂದರೆ ಭರ್ಜರಿ ಕಥೆಯನ್ನು ಚಿತ್ರ ಹೊಂದಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಸಿದ್ದರು. ಹೀಗೆ ಹುಟ್ಟುಹಾಕಿದ್ದ ನಿರೀಕ್ಷೆಯನ್ನು ದಸರಾ ಚಿತ್ರತಂಡ ಉಳಿಸಿಕೊಂಡಿದೆಯಾ, ಚಿತ್ರ ಚಿತ್ರತಂಡದ ಸದಸ್ಯರು ಹೇಳಿಕೊಂಡಷ್ಟು ಚೆನ್ನಾಗಿದೆಯಾ ಎಂಬ ಪ್ರಶ್ನೆಗಳಿಗೆ ಸದ್ಯ ಉತ್ತರ ಲಭಿಸಿದೆ. ಹೌದು, ಚಿತ್ರ ಇಂದು ಭಾರತದಾದ್ಯಂತ ತೆರೆ ಮೇಲೆ ಮೂಡಿ ಬರಲಿದ್ದು, ಮಧ್ಯರಾತ್ರಿಯೇ ಯುಎಸ್‌ಎಯಲ್ಲಿ ಪ್ರೀಮಿಯರ್ ಪ್ರದರ್ಶನಗಳನ್ನು ಕಂಡಿದೆ. ಅಲ್ಲಿ ನೆಲೆಸಿರುವ ಸಿನಿ ರಸಿಕರು ದಸರಾ ಚಿತ್ರವನ್ನು ನೋಡಿ ವಿಮರ್ಶೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಚಿತ್ರ ಹೇಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಚಿತ್ರ ನೋಡಿದ ನಂತರ ಚಿತ್ರ ಹೇಗಿದೆ ಎಂಬುದನ್ನು ಎನ್‌ಟಿಆರ್ ಅಭಿಮಾನಿಯೋರ್ವ ಬರೆದುಕೊಂಡಿದ್ದು, ದಸರಾ ಬ್ಲಾಕ್‌ಬಸ್ಟರ್. ಎಂತಹ ಚಿತ್ರವಿದು ಗುರೂ. ನಾನಿ ಸರ್ ಬೆಂಕಿ, ಅದ್ಭುತ. ಪ್ರಚಾರಕ್ಕಾಗಿ ಬರದ ಇಂತಹ ಚಿತ್ರಗಳು ಇರುವಾಗ ಬಾಲಿವುಡ್ ಚಿತ್ರಗಳನ್ನು ಯಾರು ನೋಡ್ತಾರೆ ಎಂದು ತಿಳಿಸಿದ್ದು, ಐದಕ್ಕೆ ನಾಲ್ಕು ಸ್ಟಾರ್‌ಗಳನ್ನು ನೀಡಿದ್ದಾರೆ.
ಮೂವೀಸ್ ಫಾರ್ ಯೂ ಎಂಬ ಸಿನಿಮಾ ಪೇಜ್ ಒಂದು ದಸರಾ ಚಿತ್ರದ ವಿಮರ್ಶೆಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ಕಲಾವಿದರ ಬೆಂಕಿಯಂತಹ ನಟನೆ, ಹಾಡುಗಳು ಹಾಗೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸಖತ್, ಟೆಕ್ನಿಕಲ್ ವ್ಯಾಲ್ಯೂಸ್ ಸೂಪರ್, ರೋಮಾಂಚನಗೊಳಿಸುವ ಮಧ್ಯಂತರ, ಅದ್ಭುತ ನಿರ್ದೇಶನ ಎಂದು ಬರೆದುಕೊಂಡಿದ್ದಾರೆ ಹಾಗೂ ಚಿತ್ರದ ಕಥೆ ಸಾಧಾರಣ ಎಂದೂ ಸಹ ಉಲ್ಲೇಖಿಸಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಗಳಿಗೆ ಈ ಚಿತ್ರ ಫುಲ್ ಮೀಲ್ಸ್ ಆದರೆ, ಸಾಮಾನ್ಯ ಸಿನಿ ಪ್ರೇಕ್ಷಕರು ನೋಡಬಹುದಾದಂತಹ ಚಿತ್ರ ಹಾಗೂ ಫ್ಯಾಮಿಲಿ ಆಡಿಯನ್ಸ್‌ಗೆ ಈ ಚಿತ್ರ ಹಬ್ಬವೇ ಎಂದು ತಿಳಿಸಿದ್ದಾರೆ.
ಮತ್ತೋರ್ವ ಸಾಮಾನ್ಯ ಸಿನಿ ಪ್ರೇಕ್ಷಕ ಚಿತ್ರವನ್ನು ವೀಕ್ಷಿಸಿದ ಬಳಿಕ ಚಿತ್ರ ಹೇಗಿದೆ ಎಂಬುದನ್ನು ಟ್ವಿಟರ್ ವೇದಿಕೆಯಲ್ಲಿ ತಿಳಿಸಿದ್ದು, ನಾನಿ ಪ್ರಶಸ್ತಿಗೆ ಅರ್ಹವಾಗುವಂತಹ ನಟನೆ ಮಾಡಿದ್ದಾರೆ, ಕೀರ್ತಿ ಸುರೇಶ್ ಹಾಗೂ ದೀಕ್ಷಿತ್ ಶೆಟ್ಟಿ ನಟನೆ ಅದ್ಭುತ, ಮೈನವಿರೇಳಿಸುವಂತಹ ವಿಷುಯಲ್ಸ್, ಇತ್ತೀಚೆಗಿನ ದಿನಗಳಲ್ಲಿ ಬೆಸ್ಟ್ ಎನಿಸುವಂತಹ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಚೊಚ್ಚಲ ಚಿತ್ರ ಎನಿಸದಂತಹ ಶ್ರೀಕಾಂತ್ ಒಡೆಲಾ ನಿರ್ದೇಶನ ಹಾಗೂ ಚಿತ್ರದ ಕಥೆ ಮತ್ತು ಅದನ್ನು ತೆರೆ ಮೇಲೆ ಹೇಳಿರುವ ರೀತಿ ಸೂಪರ್ ಎಂದು ಬರೆದುಕೊಂಡಿದ್ದು, ಐದಕ್ಕೆ ಐದು ಸ್ಟಾರ್‌ಗಳನ್ನು ನೀಡಿ ಚಿತ್ರ ಬ್ಲಾಕ್‌ಬಸ್ಟರ್ ಎಂದಿದ್ದಾರೆ.
ಸಿನಿ ವರ್ಲ್ಡ್ ಎಂಬ ತೆಲುಗು ಸಿನಿಮಾ ಮೂವಿ ಪೇಜ್ ದಸರಾ ವಿಮರ್ಶೆಯನ್ನು ಪ್ರಕಟಿಸಿದ್ದು, ಒಳ್ಳೆಯ ಇಂಟ್ರಡಕ್ಷನ್‌ನೊಂದಿಗೆ ಆರಂಭವಾಗುವ ಮೊದಲಾರ್ಧ ಮಧ್ಯಂತರದವರೆಗೂ ಎಂಗೇಜಿಂಗ್ ಆಗಿದ್ದು, ದ್ವಿತೀಯಾರ್ಧ ತುಸು ಸ್ಲೋ ಎನಿಸುತ್ತೆ ಹಾಗೂ ಚಿತ್ರದಲ್ಲಿ ಎಮೋಷನ್ ಅತಿಯಾಯಿತು ಎನಿಸುತ್ತೆ. ನಾನಿ ಧರಣಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, 100% ಪ್ರದರ್ಶನ ನೀಡಿದ್ದಾರೆ. ಕೀರ್ತಿ ಸುರೇಶ್ ನಟನೆ ಚೆನ್ನಾಗಿದೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಮೊದಲ ನಿರ್ದೇಶನದಲ್ಲಿಯೇ ಗೆದ್ದಿದ್ದಾರೆ. ಆದರೆ ದ್ವಿತೀಯಾರ್ಧದ ಕುರಿತು ಇನ್ನಷ್ಟು ಕಾಳಜಿ ವಹಿಸಬೇಕಿತ್ತು, ಸಂಗೀತ ಓಕೆ ಓಕೆ, ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಛಾಯಾಗ್ರಹಣ ನೆಕ್ಸ್ಟ್ ಲೆವೆಲ್. ಒಟ್ಟಾರೆಯಾಗಿ ದಸರಾ ಒಂದೊಳ್ಳೆ ಕಥೆಯನ್ನು ಹೊಂದಿದ್ದು, ಅತಿಯಾದ ಎಮೋಷನ್ಸ್ ಹಾಗೂ ನಿಧಾನಗತಿಯ ಚಿತ್ರಕಥೆ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತೆ. ಇವುಗಳನ್ನು ಕಡೆಗಣಿಸಿದರೆ ದಸರಾ ಚಿತ್ರವನ್ನು ಒಂದೊಮ್ಮೆ ನೋಡಬಹುದು ಎಂದು ಐದಕ್ಕೆ 2.67 ಸ್ಟಾರ್ ನೀಡಿದ್ದಾರೆ.
ಒಟ್ಟಿನಲ್ಲಿ ದಸರಾ ಚಿತ್ರಕ್ಕೆ ವ್ಯಕ್ತವಾಗಿರುವ ವಿಮರ್ಶೆಗಳ ಪೈಕಿ ಸಾಮಾನ್ಯ ಸಿನಿ ರಸಿಕರು ಚಿತ್ರ ಸೂಪರ್ ಎಂದು ಫುಲ್ ಮಾರ್ಕ್ಸ್ ನೀಡಿದ್ದರೆ, ಸಿನಿಮಾ ಪೇಜ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಆದರೆ ಎಲ್ಲಿಯೂ ದಸರಾ ಬಗ್ಗೆ ಒಂದೇ ಒಂದೂ ಸಹ ನೆಗೆಟಿವ್ ವಿಮರ್ಶೆ ಸಿಕ್ಕಿಲ್ಲ. ಹೀಗಾಗಿ ದಸರಾ ಕ್ಲೀನ್ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮುವುದು ಪಕ್ಕಾ ಎನ್ನಬಹುದು.


Click it and Unblock the Notifications











