twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ನಾತಿಚರಾಮಿ-ಸ್ವಾಭಿಮಾನಿ ಮಹಿಳೆಯ ಪ್ರಶ್ನೆಗಳು, ತುಮುಲಗಳು

    By ಕಾಂತಿ ಹೆಗಡೆ
    |

    "ನಾತಿಚರಾಮಿ".. ಹೆಣ್ಣಿನ ತುಮುಲಗಳಿಗೆ ಉತ್ತರ, ಹೆಣ್ಣಿನ ಅಂತರಂಗದ ಪಯಣ, ಇವೇ ಮುಂತಾದ ಉಪ ಶಿರೋನಾಮೆಗಳೊಂದಿಗೆ ಈ ಸಿನೆಮಾ ಮೇಕಿಂಗ್ ನ ಗಮನಿಸುತ್ತಿದ್ದೆ.

    ನೆಟ್ ಫ್ಲಿಕ್ಸ್ ನಲ್ಲಿ ಚಿತ್ರ ನೋಡಿದ ಮೇಲೆ ಅನಿಸಿದ್ದು, ಹೆಣ್ಣಿನ ತುಮುಲ, ಅಂತರಂಗ ಅಂತಲ್ಲ ಎಲ್ಲಾ ಪಾತ್ರಗಳೂ ಇಡೀ ಸಮಾಜದ ತುಮುಲಗಳನ್ನು ಒಟ್ಟಾರೆ ನಿಧಾನಗತಿಯಲ್ಲಿ ತಮ್ಮದೇ ರೀತಿಯಲ್ಲಿ ಪ್ರಶ್ನೆ ಮಾಡುತ್ತಾ ಸಾಗಿದ್ದು, ನಮ್ಮ ದಿನನಿತ್ಯ ಬದುಕಿನಲ್ಲಿ ಕಾಣುವಂಥದ್ದು.

    ಗೌರಿ ವಿಧವೆ, ಒಂಟಿ ಹೆಣ್ಣು. ಗಂಡನನ್ನು ಕಳೆದುಕೊಂಡ ಆಘಾತದಿಂದ ಹೊರಬರಲು ಒದ್ದಾಡುತ್ತ, ಆರ್ಥಿಕವಾಗಿ ಸ್ವತಂತ್ರವಾಗಿ ಬದುಕುವಾಕೆ. ಆಕೆ ಬೆಳೆದ ವಾತಾವರಣದಿಂದ ಕಟ್ಟಿಕೊಡಲ್ಪಟ್ಟ ಪೂರ್ವಾಗ್ರಹದಿಂದ ಹೊರಬರಲು ಒದ್ದಾಡುತ್ತಲೇ, ಮತ್ತೆ ಅದರೊಳಗೇ ನುಸುಳುವ ಸಾಮಾನ್ಯ ಹೆಣ್ಣು.

    ಈ ಪಾತ್ರ ಎಲ್ಲ ಆಸೆಗಳನ್ನೂ ಮುಚ್ಚಿಟ್ಟಂತೆ ತೋರುತ್ತಾ ನಿಧಾನಕ್ಕೆ ಬಿಚ್ಚಿಕೊಳ್ಳುತ್ತಾ ಸಾಗುವುದು ಚಿತ್ರದ ಮುಖ್ಯ ವಸ್ತು. ಇದಕ್ಕೆ ಪೂರಕವಾಗಿ ಬರುವ ಉಳಿದೆಲ್ಲಾ ಪಾತ್ರಗಳೂ ಕೂಡ ಎಲ್ಲೂ ಎಡವದೇ ತಮ್ಮದೇ ಧಾಟಿಯಲ್ಲಿ ವೀಕ್ಷಕನಿಗೆ ಪ್ರಶ್ನೆಗಳನ್ನೆತ್ತುತ್ತಾ ಸಾಗುವುದೇ ಈ ಚಿತ್ರದ ವೈಖರಿ.

    ಗಿರೀಶ್ ಕಾಸರವಳ್ಳಿ ಒಂದು ಸಂವಾದದಲ್ಲಿ ಹೇಳಿದ್ದ ನೆನಪು. ಪಾತ್ರಗಳು ಸಹಜವಾಗಿ ಅಭಿನಯಿಸಬೇಕೆಂದರೆ ಏನಾದ್ರೂ ಕೆಲಸ ಕೊಡ್ಬೇಕು ಅಂತ. ಬಹುಷಃ ಈ ತರ್ಕವನ್ನು ಚಿತ್ರದಲ್ಲಿ ಅಳವಡಿಸಿಕೊಂಡಂತೆ ಕಾಣುತ್ತೆ. ಎಲ್ಲ ಪಾತ್ರಗಳ ಸಹಜ ಅಭಿನಯ ಹಾಗೂ ಅದನ್ನು ಬಳಸಿಕೊಂಡೇ ಕಥೆ ಹೆಣೆದ ರೀತಿ ಮೆಚ್ಚುವಂಥದ್ದು. ತುಮುಲಗಳಿಗೆ ಒತ್ತು ಕೊಡುತ್ತಾ, ಪೂರ್ವಾಗ್ರಹಗಳ ಬಗ್ಗೆ ಪ್ರಶ್ನೆಯೆತ್ತುತ್ತಾ ಸಾಗಿದ ಚಿತ್ರ ಕೊನೆಗೆ ಎಲ್ಲ ಚಿತ್ರಗಳಂತೆ ಸಾಂಪ್ರದಾಯಿಕವಾಗಿ ಸೆಂಟಿಮೆಂಟಲ್ ಆಗಿ ಕೊನೆಗೊಂಡಿದ್ದು ಮಾತ್ರ ಆಶ್ಚರ್ಯ.

    ಗೌರಿ ತಾಯಿಯ ದೃಷ್ಟಿಕೋನ

    ಗೌರಿ ತಾಯಿಯ ದೃಷ್ಟಿಕೋನ

    ಎಲ್ಲಾ ಮಧ್ಯಮ ವರ್ಗದ ತಾಯಿಯರಂತೆ ಗೌರಿಯ ತಾಯಿಗೂ ಮಗಳ ಮನೆ ಬೆಳಗುವಾಸೆ. ಗೌರಿ ಮನೆಯವರ ಇಚ್ಛೆಯೆಗೆ ವಿರುದ್ಧವಾಗಿ ಮದುವೆಯೂ ಆಗಿ ವಿಧವೆಯಾಗಿದ್ದಾಳೆ, ಇವಳನ್ನು ಇನ್ಯಾರು ಮದುವೆ ಆಗ್ತಾರೆ ಅನ್ನೋ ಆತಂಕ.

    ತೀರಾ ಸಹಜವಾಗಿ ನನ್ನ ತಮ್ಮ ನಿಂಗೆ ಬಾಳು ಕೊಡೋಕೆ ಒಪ್ಗೊಂಡಿದ್ದಾನೆ ಕಣೇ ಎನ್ನುವಾಗ "ಕೊಡೋಕೆ-ತೊಗೊಳೋಕೆ ಬಾಳೇನು ಅಂಗಡಿಯಲ್ಲಿ ಲಭ್ಯವಿರುವ ಶಾಂಪುವೆ??" ಅನಿಸದೇ ಇರದು.

    ಬಹುಷಃ ವಿಧವೆ, ವಿಚ್ಛೇದಿತೆ, 30 ಮೀರಿದ ಅವಿವಾಹಿತೆಯರಿಗೆ ತೀರಾ ಸಹಜವಾದ ಈ ಮಾತು ಕೇಳುವುದು, ಸಹಜವಾಗಿ ಸ್ವೀಕರಿಸುವುದು ಅನಿವಾರ್ಯವೇ. ಈ ಶಾಂಪೂ ಹಾಕಿ ತಲೆ ತಿಕ್ಕಿದರೆ ಕೂದಲು ಪಳ ಪಳ ಹೊಳೆಯುತ್ತೆ ಎಂಬ ಜಾಹೀರಾತಿನೊಂದಿಗೆ ಶಾಂಪೂ ಕೊಳ್ಳುತ್ತೇವೆಯಲ್ಲ, ಹಾಗೆ ಒಂಟಿ ಹೆಣ್ಣಿನ ಅನಿವಾರ್ಯಕ್ಕೆ ಬದುಕು ಪಳಗುಡಿಸಲು ಗಂಡು ಬಾಳು ಕೊಡಬೇಕೆಂಬುದು ಜಗದ ನಿಯಮ.

    ಒಂಥರಾ ಜಾಹೀರಾತು ನೋಡಿ ಪ್ರಾಡಕ್ಟ್ ಕೊಂಡುಕೊಂಡ ಹಾಗೆ. ಹಾಗಾಗೇ ನಮ್ಮಲ್ಲಿ ಹೆಣ್ಣು ಕೊಟ್ಟಿದ್ದು- ಹೆಣ್ಣು ತಗಂಡು ಬಂದಿದ್ದು ಎಂಬ ಮಾತು ಮಗಳನ್ನು ಇಂಥಲ್ಲಿಗೆ ಮದುವೆ ಮಾಡಿದ್ದೇವೆ ಎಂಬುದಕ್ಕೆ ಪರ್ಯಾಯವಾಗಿ, ತೀರಾ ಸಹಜವಾಗಿ ಒಪ್ಪಿಕೊಂಡಿದ್ದೇವೆ.
    ಗೌರಿ "ಮದುವೆಯಾಗೇ ಸಂಸಾರ ಮಾಡ್ಲೇಬೇಕು ಅಂತ ಏನಿದೆ?? ಹಾಗೇ ಮಾಡೋಕಾಗಲ್ವ?" ಎಂದು ತಾಯಿಗೆ ಪ್ರಶ್ನೆಯೆತ್ತಿದ್ದು ಇಂಥದ್ದೊಂದು ಸಾಮಾಜಿಕ ಮನಸ್ಥಿತಿಯ ಬಗ್ಗೆ ವಸ್ತುನಿಷ್ಠವಾಗಿ ಎತ್ತಿದ ಮುಖ್ಯ ಪ್ರಶ್ನೆ.

    ಹಲವಾರು ಸಂಬಂಧಗಳು ಸಾಮಾಜಿಕ ಅನಿವಾರ್ಯತೆಗಳೇ

    ಹಲವಾರು ಸಂಬಂಧಗಳು ಸಾಮಾಜಿಕ ಅನಿವಾರ್ಯತೆಗಳೇ

    "ಬೀಯಿಂಗ್ ಯೌಸೆಡ್ ಅನಿಸೋದು ಹೆಣ್ಣಿಗೆ ಮಾತ್ರ ಅಲ್ಲ ಗೌರಿ" ಅನ್ನೋ ಅಭಿಮನ್ಯು ಪ್ರೀತಿ-ಸಂಬಂಧ ಎನ್ನುವುದು ಲಿಂಗ ಬೇಧ ಮೀರಿದ ಪರಸ್ಪರ ಆಕರ್ಷಣೆ ಎನ್ನುವತ್ತ ಗೌರಿಯ ಗಮನವನ್ನೂ, ವೀಕ್ಷಕನ ಗಮನವನ್ನೂ ಕೊಂಡೊಯ್ಯುತ್ತಾನೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವ ಮನಸ್ಸುಗಳು ಹೇಗೆ ಯೋಚಿಸುತ್ತಿವೆ ಎಂಬುದಕ್ಕೆ ಗೌರಿಯ ಕಿರಿಯ ಸಹೋದ್ಯೋಗಿಗಳೂ, ಸೆಕ್ಸ್ ಬಗೆಗೆ ಅವರ ಸಹಜ ಸ್ವೀಕೃತ ಮನೋಭಾವವೂ ಒಳ್ಳೆ ಉದಾಹರಣೆ.

    ಮನೆ ಕೆಲಸದಾಕೆಯ ಮನದೊಳಗೆ ಒಂದೊಳ್ಳೇ ಸ್ತ್ರೀವಾದಿಯಿದ್ದಾಳೆ ಹಾಗೆಯೇ ಸಾಮಾಜಿಕ ಸತ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡ ಪ್ರಾಯೋಗಿಕವಾದಿಯೂ. "ಗಂಡಸು ತಪ್ಪು ಮಾಡಿದ್ರೆ ಕತ್ತು ಪಟ್ಟಿ ಹಿಡ್ಕೊಂಡು ಕೇಳಬೇಕು, ಓಡೋಯ್ತೀನಿ ಅಂತೀರಲ್ಲ" ಎಂದು ಪಲಾಯನವಾದಿಗೆ ಬುದ್ದಿ ಹೇಳುವ, ಒಲ್ಲದ ಸಂಬಂಧವನ್ನು ಖುದ್ದು ಒದ್ದು ಓಡಿಬಂದಿರುವ ದಿಟ್ಟೆ.

    ಅಷ್ಟೇ ಮುಚ್ಚಟೆಯಾಗಿ ಮತ್ತೊಬ್ಬ ಗಂಡಸನ್ನು ಮದುವೆಯಾಗಿದ್ದೂ ಇರೋಕೊಂದು ಗೂಡು ಬೇಕಲ್ಲ ಎಂಬ ಅನಿವಾರ್ಯತೆಗೆ ಎಂದು ಸಹಜವಾಗೇ ಒಪ್ಪಿಕೊಳ್ಳುವಾಗ ಪ್ರಪಂಚದ ಹಲವಾರು ಸಂಬಂಧಗಳು ಸಾಮಾಜಿಕ ಅನಿವಾರ್ಯತೆಗಳೇ. ಆಘಾತಗಳು, ಕಲ್ಪನೆಗಳನ್ನು ಮೀರಿ, ಬದುಕಿನ ಅನಿವಾರ್ಯತೆಗಳು ಒಂದು ವರ್ಗದ ಜನರನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ ಅನಿಸದೇ ಇರದು.

    ಅನಿವಾರ್ಯತೆಯ ಜೊತೆ ಜೊತೆಗೆ ಜೀವನ ಪ್ರೀತಿಯನ್ನು ಸಾರ್ಥಕವಾಗಿ ತೋರುವ ಪಾತ್ರ ಈಕೆಯದು.

    ಸ್ವಾಭಿಮಾನಿ ಮಹಿಳೆಯರು ಸಮಾಜಕ್ಕೆತ್ತುವ ಪ್ರಶ್ನೆಗಳೇ

    ಸ್ವಾಭಿಮಾನಿ ಮಹಿಳೆಯರು ಸಮಾಜಕ್ಕೆತ್ತುವ ಪ್ರಶ್ನೆಗಳೇ

    ಸುರೇಶನದು ತಾನು ಗಂಡಸು ಎಂಬ ಅಹಮ್ಮಿರುವ ಪೂರ್ವಾಗ್ರಹ ಪೀಡಿತ ಮೇಲ್ ಸ್ಟೀರಿಯೋಟೈಪ್ ವ್ಯಕ್ತಿತ್ವ. "ಮದ್ವೆ ಅನ್ನೋದೊಂದು ನಾನು ಅಂದ್ಕೊಂಡಂಗೆ ಆಗ್ಲೇ ಇಲ್ಲ ನೋಡು" ಎನ್ನುವಾಗ ನಮ್ಮ ಸಮಾಜದಲ್ಲಿ ತಮ್ಮ ಜೀವನದ ಬಗೆಗೆ ವ್ಯಕ್ತಿಗತ ಆಯ್ಕೆ ಎನ್ನುವುದು ವಿದ್ಯಾವಂತರಿಗೂ ಎಷ್ಟು ಕಷ್ಟ ಅನಿಸೋದು.


    ಓದಿ, ಕೆಲಸ ಹಿಡಿದು, ಮದುವೆ ಆಗಿ, ಮನೆ ಕಟ್ಟಿ ಒಟ್ಟಾರೆ ಸಮಾಜದಲ್ಲಿ ಭೇಷ್ ಎನಿಸಿಕೊಳ್ಳುವ ಪ್ರಯತ್ನದಲ್ಲಿ ತನಗೆ ಜೀವನದಲ್ಲಿ ಮನಸ್ಪೂರ್ವಕವಾಗಿ ಬೇಕಾಗಿರುವುದೇನು, ತನ್ನ ಆಯ್ಕೆಗಳು ತನ್ನ ಆಸೆಗಳಿಗೆ ಪೂರಕವಾಗಿ ಹೇಗಿರಬೇಕು ಎಂದು ಯೋಚಿಸದಷ್ಟೂ ಪೂರ್ವಾಗ್ರಹಕ್ಕೆ ಸಮಾಜ ನಮ್ಮನ್ನು ನೂಕಿರುವುದಕ್ಕೆ ಸಂಗಾತಿಯ ಆಯ್ಕೆಯಲ್ಲಿ ಸುರೇಶನಂಥ ಹಲವಾರು ಎಡವಿ, ಚಿಂತೆ-ಮುಂಗೋಪದಲ್ಲೇ ಬದುಕು ಸವೆಸುವುದೇ ಸಾಕ್ಷಿ.


    "ಅವಳನ್ನ ಒಳ್ಳೆ ಫ್ಯಾಮಿಲಿ ಇಂದ ಬಂದೋವಳು ಅಂದುಕೊಂಡಿದ್ದೆ, ಅವಳಾಗೇ ಕೆಳಬಾರದಿತ್ತು" ಅನ್ನುವಾಗ ಸುರೇಶ ತನಗೆ ಗೊತ್ತಿಲ್ಲದೇ ಗೌರಿಯ ಹಿನ್ನೆಲೆಯ ಬಗ್ಗೆ ತೀರ್ಪಿತ್ತಿದ್ದಾನೆ.

    ಅದೇ ಗೌರಿ ತಾಳ್ಮೆಯಿಂದ "ಅದು ಹೇಗೆ ನಾನು ನನ್ನ ನಿರೀಕ್ಷೆಗಳನ್ನ ಹೇಳಿಕೊಂಡಾಕ್ಷಣ ಕೆಟ್ಟ ಫ್ಯಾಮಿಲಿ ಗೆ ಸೇರ್ತೆನೆ! ಇಷ್ಟ ಇದ್ರೆ ಇದೆ ಅನ್ನಬಹುದಿತ್ತು ಇಲ್ಲಾಂದ್ರೆ ಇಲ್ಲ ಎನ್ನಬಹುದಿತ್ತು" ಅಂದಾಗ ಸುರೇಶ "ಹೌದಲ್ವಾ! ನಾನು ಈ ರೀತಿ ಯೋಚ್ನೆನೆ ಮಾಡಿರ್ಲಿಲ್ಲ" ಅಂತ ಸಹಜವಾಗಿ ತಪ್ಪೊಪ್ಪಿಕೊಳ್ಳೋದು ಬಹುಷಃ ನಮ್ಮ ಪೂರ್ತಿ ಸಮಾಜಕ್ಕೆ ಬರಬೇಕಾದ ಸಹಜ ಗುಣ. ಇಲ್ಲಿ ಗೌರಿ ಎತ್ತುವ ಪ್ರಶ್ನೆಗಳು ಎಲ್ಲ ಸ್ವಾಭಿಮಾನಿ ಮಹಿಳೆಯರು ಸಮಾಜಕ್ಕೆತ್ತುವ ಪ್ರಶ್ನೆಗಳೇ.
    ಸರಿ-ತಪ್ಪುಗಳ ತುಲನೆ ವೀಕ್ಷಕರಿಗೆ ಬಿಟ್ಟ ವಿಚಾರ

    ಸರಿ-ತಪ್ಪುಗಳ ತುಲನೆ ವೀಕ್ಷಕರಿಗೆ ಬಿಟ್ಟ ವಿಚಾರ

    ಗೌರಿ ಎಲ್ಲ ಬಿಟ್ಟು ಸಂಸಾರಿ ಸುರೇಶನನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತಾಳೆ? ಎಷ್ಟಾದರೂ ಸಂಸಾರಿ, ಭಾವನಾತ್ಮಕ ಬಂಧವನ್ನು ಬಯಸಲಾರ ಸೇಫ್ ಅಂತಲೇ? ಅಥವಾ ವಿಧವೆಯಾದ ತನ್ನ ಬಗ್ಗೆ ಅನುಕಂಪ ತೋರದೆ ಸಹಜವಾಗಿ ಗೆಳೆತನ ಬಯಸಿದ್ದಕ್ಕೋ? ಇಲ್ಲಿ ಸರಿ-ತಪ್ಪುಗಳ ತುಲನೆ ವೀಕ್ಷಕರಿಗೆ ಬಿಟ್ಟ ವಿಚಾರ.

    ಇಷ್ಟು ನಿರ್ಭೀಡೆಯಿಂದ ತನ್ನ ಜಿಜ್ಞಾಸೆಗಳನ್ನು ಸುರೇಶನೆದುರು ಬಿಚ್ಚಿಡುವ ಗೌರಿ ಯಾಕೆ ತನ್ನ ಬಾಸ್ ಗೆ ಎಗರಾಡುತ್ತಾಳೆ? ಇಲ್ಲಿ ಮುಖ್ಯವಾದ ವ್ಯತ್ಯಾಸ ಇಷ್ಟೇ,
    ನಮ್ಮ ಸಮಾಜ ಮುಖ್ಯವಾಗಿ ಎಡವಿರುವುದು ಬೇರೆಯವರ ಅದರಲ್ಲೂ ಹೆಣ್ಣಿನ ಬೌಂಡರಿಗಳನ್ನು ಅರ್ಥ ಮಾಡಿಕೊಳ್ಳದೆ ಇರುವಲ್ಲಿ. "ನೋ" ಪದಕ್ಕೆ ಅದರದ್ದೇ ಆದ ಅರ್ಥವಿದೆ.

    ವರ್ತನೆಯಲ್ಲಿ ಅಥವಾ ನೇರವಾಗಿ ವ್ಯಕ್ತಪಡಿಸಿದ "ಇಷ್ಟ ಇಲ್ಲ" ದ ಮೇರೆಯನ್ನು ಮೀರಬಾರದು ಅಷ್ಟೇ.
    ಸುರೇಶನ ಹೆಂಡತಿ ಸಾಮಾನ್ಯ ಗೃಹಿಣಿ. ಈ ಪಾತ್ರ ದಿನನಿತ್ಯ ಕಾಣುವ ಪೂರ್ವಾಗ್ರಹ ಪೀಡಿತ ಫೀಮೇಲ್ ಸ್ಟೀರಿಯೋಟೈಪ್ ನಂತೆ ಹೊರನೋಟಕ್ಕೆ ಕಂಡರೂ, ಸಂಬಂಧದಲ್ಲಿ ತನ್ನತನ ಹುಡುಕುತ್ತಾ, ಮತ್ತೆ ಮತ್ತೆ ಪ್ರೀತಿಗೆ ಹಂಬಲಿಸುವ, ಹಲವು ಗೃಹಿಣಿಯರಂತೆ ಒಮ್ಮೊಮ್ಮೆ ತನ್ನ ನಿಲುವಿಗೆ ಬದ್ಧಳಾಗಿ ಗಂಡನನ್ನು ವಿರೋಧಿಸುತ್ತ, ಬದುಕನ್ನು ಪ್ರೀತಿಸುವುದಕ್ಕೆ ಹಂಬಲಿಸುವ ಜೀವಂತ ಉದಾಹರಣೆ.

    ಗಮನ ಸೆಳೆಯುವ ಥೆರಪಿಸ್ಟ್ ಕರ್ವಾಲೋ

    ಗಮನ ಸೆಳೆಯುವ ಥೆರಪಿಸ್ಟ್ ಕರ್ವಾಲೋ

    ಇವೆಲ್ಲಾ ಪಾತ್ರಗಳಿಗಿಂತಲೂ ನನಗೆ ಮುಖ್ಯ ಅನಿಸಿದ್ದು ಥೆರಪಿಸ್ಟ್ ಕರ್ವಾಲೋ. ಥೆರಪಿಯ ಎಲ್ಲ ಸೆಶನ್ ಗಳಲ್ಲೂ ಒಂದು ಆಸಕ್ತಿದಾಯಕ ವಿವರಣೆಯೊಂದಿಗೆ ಗೌರಿಯ ಸೆಕ್ಸ್ ಬಗೆಗಿನ ಮನೋಸ್ಥಿತಿಯನ್ನು ವಿಮರ್ಶಿಸುತ್ತಾ ಸಲಹೆಗಳನ್ನು ಕೊಡುವ ಕರ್ವಾಲೋ ಪಾತ್ರವನ್ನು ಇನ್ನೂ ಪರಿಣಾಮಕಾರಿಯಾಗಿ ಹೆಣೆಯಬಹುದಿತ್ತು.

    ಈ ಚಿತ್ರದ ಒಟ್ಟು ಗೆಲುವು ನನ್ನ ಮಟ್ಟಿಗೆ ಕರ್ವಾಲೋ ಮತ್ತು ಗೌರಿಯ ಸಂಭಾಷಣೆ. ಪ್ರತೀ ಮನುಷ್ಯ ತಾನು ಹುಟ್ಟಿದ ಪರಿಸರಕ್ಕನುಗುಣವಾಗಿ, ಅನುಭವಗಳಿಗನುಗುಣವಾಗಿ ಹಲವು ಪ್ಯಾಕೇಜ್ ಗಳನ್ನು ತಲೆಯಲ್ಲಿ ತುಂಬಿಕೊಂಡೆ ಬದುಕುತ್ತಿರುತ್ತಾನೆ.ಅವನ್ನೆಲ್ಲ ಸುಸೂತ್ರವಾಗಿ ಅರ್ಥ ಮಾಡಿಕೊಂಡು, ಗೌರಿಯ ಬಾಯಿಂದ ನಿಧಾನವಾಗಿ ಒಂದೊಂದೇ ಸಬ್ ಕಾನ್ಶಿಯಸ್ ಬ್ಲಾಕೇಜ್ ಗಳನ್ನು ಹೊರತರಿಸಿ, ತನ್ನಿಂತಾನೇ ಸಮಸ್ಯೆಗಳನ್ನು ಅರಿವಿಗೆ ತರುವಂತೆ ಮಾಡುವುದು ಥೆರಪಿಸ್ಟ್ ಪಾತ್ರದ ಸವಾಲು.ಇಲ್ಲಿ ಕರ್ವಾಲೋ ಮತ್ತು ಗೌರಿಯ ಸಂಭಾಷಣೆಗಳು ತುರ್ತಾಗಿ ಸವಾಲಿಲ್ಲದೆ ಮುಗಿದು ಹೋಗುತ್ತವೆ. ಯಾವುದೇ ಥೆರಪಿಸ್ಟ್ ಕೂಡ ಸಂಸಾರಿಯೊಟ್ಟಿಗೆ ಹೊಸದಾಗಿ ದೈಹಿಕ ಸಂಬಂಧ ಬೆಳೆಸಲು ತನ್ನ ಕ್ಲಾಯಿಂಟ್ ನ ಪ್ರೇರೇಪಿಸಲಾರ. ಸ್ವಲ್ಪ ಆಯ ತಪ್ಪಿದರೂ ಮತ್ತೊಂದು ಹೆಣ್ಣಿಗೆ ಆಗುವ ಅನ್ಯಾಯದ ಬಗ್ಗೆ ಎಚ್ಚರಿಸುತ್ತಾನೆ.ಹಾಗೆಯೇ ಇಲ್ಲಿ ಗೌರಿಯ ಸಮಸ್ಯೆ ಬರೀ ದೈಹಿಕ ಸುಖಕ್ಕಷ್ಟೇ ಸೀಮಿತಪಡಿಸಿರುವುದು ಕರ್ವಾಲೋ ಪಾತ್ರದ ಮಿತಿ. ಆದರೂ ಸೈಕೋ ಥೆರಪಿಗೆ ಹುಚ್ಚರು ಮಾತ್ರ ಹೋಗೋದು ಎನ್ನುವ ಸಮಾಜಕ್ಕೆ, ಅಲ್ಲ! ಮಾನಸಿಕ ಆರೋಗ್ಯಕ್ಕೆ, ಖಿನ್ನತೆಗೆ ತಜ್ಞರ ಸಲಹೆ ಅಷ್ಟೇ ಎಂದು ತೋರಿಸಿದ್ದು ಈ ಪಾತ್ರದ ಗೆಲುವು.

    English summary
    Shruthi Hariharan, Sanchari Vijay starrer Nathicharami film is now available on Netflix. Mansore directed Naticharami film review by Kanthi Hegde.
    Wednesday, January 30, 2019, 18:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X