Miss Shetty Mr Polishetty Review: 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಈ ಜಮಾನದ ಪ್ರಬುದ್ಧ ಪ್ರೇಮಕತೆ
ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ಬಹಳ ದಿನಗಳ ನಂತರ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಪ್ರತಿಭಾನ್ವಿತ ಕಲಾವಿದರಿಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ.
'ನಿಶಬ್ಧಂ' ಬಳಿಕ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ನಟಿಸೋದೇ ಇಲ್ಲ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಕಥೆ ಇಷ್ಟವಾಗಿ ಮತ್ತೆ ಬಣ್ಣ ಹಚ್ಚಿದ್ದರು. ನವೀನ್ ಪೊಲಿಶೆಟ್ಟಿ ಸಿನಿಮಾ ಹೀರೊ ಅಂದಾಗ ಕೆಲವರು ಅಚ್ಚರಿಗೊಂಡಿದ್ದರು. 33ರ ನವೀನ್, 41ರ ಅನುಷ್ಕಾ ಕಾಂಬಿನೇಷನ್‌ನಲ್ಲಿ ಲವ್‌ಸ್ಟೋರಿ ಸಿನಿಮಾ ಹೇಗೆ ಸಾಧ್ಯ ಎಂದವರು ಇದ್ದಾರೆ. ಆದರೆ ಅದನ್ನು ಸಾಧ್ಯವಾಗಿಸಿದೆ ಚಿತ್ರತಂಡ.

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಟ್ರೈಲರ್ ಸಿನಿಮಾ ಮೇಲಿನ ಕೊಂಚ ಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಒಂದು ದಿನ ಮೊದ್ಲೆ ವಿದೇಶಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅಷ್ಟಕ್ಕೂ ಸಿನಿಮಾ ಕತೆಯೇನು? ಸಿನಿಮಾ ಹೇಗಿದೆ? ಪ್ಲಸ್ ಏನು? ಮೈನಸ್ ಏನು? ಇಲ್ಲಿದೆ ಕಂಪ್ಲೀಟ್ ರಿವ್ಯೂ ರಿಪೋರ್ಟ್.
ಸಿನಿಮಾ ಕತೆಯೇನು?
ಯುಕೆನಲ್ಲಿ ನೆಲೆಸಿದ್ದ ಮಾಸ್ಟರ್ ಶೆಫ್ ಅನ್ವಿತಾ ರವಳಿ ಶೆಟ್ಟಿ, ತನ್ನ ತಾಯಿಯ ಅನಾರೋಗ್ಯದ ಕಾರಣ ಆಕೆಯೊಟ್ಟಿಗೆ ಭಾರತಕ್ಕೆ ಬರುತ್ತಾಳೆ. ತಾಯಿಯ ಅಗಲಿಕೆ ಬಳಿಕ ಅನ್ವಿತಾ ತನಗೊಬ್ಬ ಒಡನಾಡಿ ಬೇಕು, ಕುಟುಂಬ ಬೇಕು ಎನಿಸುತ್ತದೆ. ಆದರೆ ಮದುವೆ, ರಿಲೇಷನ್‌ಶಿಪ್ ಮಾತ್ರ ಬೇಡ ಅನ್ನೋದು ಆಕೆಯ ಷರತ್ತು. ಸಾಫ್ಟ್‌ವೇರ್ ಉದ್ಯೋಗಿ ಸಿದ್ದುಗೆ ಸ್ಟ್ಯಾಂಡಪ್ ಕಾಮೆಡಿಯನ್ ಆಗುವ ಕನಸು. ಅನ್ವಿತಾಗೆ ಆತ ಬಹಳ ಇಂಟ್ರೆಸ್ಟಿಂಗ್ ಅನ್ನಿಸುತ್ತಾನೆ. ಸಿದ್ದು ಆಕೆಯ ಪ್ರೀತಿಲಿ ಬೀಳ್ತಾನೆ. ಆದರೆ ತನ್ನಿಂದ ಆಕೆ ಏನು ಬಯಸುತ್ತಿದ್ದಾಳೆ ಅನ್ನೋದು ಗೊತ್ತಾದಾಗ ಆತ ಶಾಕ್ ಆಗುತ್ತಾನೆ.
ಮಾಸ್ಟರ್ ಶೆಫ್ ಅನ್ವಿತಾ ಮದುವೆಯಾಗದೇ ತಾಯಿಯಾಗಳು ಬಯಸುತ್ತಾಳೆ. ಸ್ಟ್ಯಾಂಡಪ್ ಕಾಮೆಡಿಯನ್ ಸಿದ್ದುನ ಗರ್ಭಧಾರಣೆಗಾಗಿ ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾಳೆ. ಆಕೆಯ ವಿಚಿತ್ರ ಐಡಿಯಾವನ್ನು ಸಿದ್ದು ಒಪ್ಪುತ್ತಾನಾ? ಆಕೆಯ ಕನಸು ನನಸಾಗುತ್ತಾ? ಅನ್ವಿತಾ ನಿರ್ಧಾರ ಬದಲಾಗುತ್ತಾ? ಅನ್ನೋದನ್ನು ತೆರೆಮೇಲೆ ನೋಡಬೇಕು.
ಸಿನಿಮಾ ಹೇಗಿದೆ?
ಮೇಲ್ನೋಟಕ್ಕೆ ಇದು ಮಹಿಳಾ ಪ್ರಧಾನ ಸಿನಿಮಾ ಅನ್ನಿಸಿದರೂ ನವೀನ್ ಪೊಲಿಶೆಟ್ಟಿ ತಮ್ಮ ನಟನೆಯಿಂದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟೈನರ್ ಆಗಿ ಬದಲಿಸಿಬಿಟ್ಟಿದ್ದಾರೆ. ಅದೇ ಹಳೇ ಆಕ್ಷನ್, ಕಾಮಿಡಿ ಸಿನಿಮಾಗಳ ನಡುವೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಹೊಸ ಕಾನ್ಸೆಪ್ಟ್ ಸಿನಿಮಾ ಎನಿಸಿಕೊಳ್ಳುತ್ತದೆ. ಇದು ಆಧುನಿಕ ಕಾಲದ ಕತೆಯಾಗಿದ್ದು ಮದುವೆ ಬೇಡ ಮಗು ಮಾತ್ರ ಬೇಕು ಎನ್ನುವ ಮಹಿಳೆ ಹಾಗೂ ಆಕೆಯನ್ನು ನೋಡಿ ಪ್ರೀತಿ ಬೀಳುವ ಯುವಕ ಕತೆ. ಇನ್ನು ವೀರ್ಯದಾನದ ವಿಚಾರವನ್ನು ಕತೆಯಲ್ಲಿ ಸೊಗಸಾಗಿ ಸೇರಿಸಿ ಒಂದೊಳ್ಳೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ.
ಫಸ್ಟ್ ಕೊಂಚ ಸ್ಲೋ ಎನಿಸಿದರು ನವೀನ್ ಪೊಲಿಶೆಟ್ಟಿ ತನ್ನ ಕಾಮಿಡಿಯಿಂದ ಸಿನಿಮಾವನ್ನು ಎಂಗೇಜಿಂಗ್ ಆಗಿ ಇಡುತ್ತಾರೆ. ಸ್ಯಾಂಡಪ್ ಕಾಮೆಡಿಯನ್ ಆಗಿ ಸಿದ್ದು ಜೋಕ್ಸ್ ಅಷ್ಟಾಗಿ ನಗು ತರಿಸುವುದಿಲ್ಲ. ಇನ್ನುಳಿದಂತೆ ನವೀನ್ ತಮ್ಮ ಕಾಮೆಡಿ ಟೈಮಿಂಗ್‌ನಿಂದ ನಗಿಸುತ್ತಾರೆ. ಸೆಕೆಂಡ್ ಹಾಫ್ ಹೆಚ್ಚು ಭಾವುಕವಾಗಿ ಸಾಗುತ್ತದೆ. ಫೆರ್ಟಿಲಿಟಿ ವಿಚಾರದ ಬಗ್ಗೆ ಚರ್ಚಿಸುವಾಗ ಕೆಲವು ಕಡೆ ಕಾಮಿಡಿ ಎಲ್ಲೆ ದಾಟುವ ಅಪಾಯವಿತ್ತು. ಆದರೆ ಆ ರೀತಿ ಆಗದಂತೆ ನಿರ್ದೇಶಕರು ಜಾಗ್ರತೆ ವಹಿಸಿ ಗೆದ್ದಿದ್ದಾರೆ.
ಇಂತಾದೊಂದು ಕತೆಯನ್ನು ಆರಿಸಿಕೊಳ್ಳುವುದು. ಅದನ್ನು ಸದಭಿರುಚಿ ಚಿತ್ರವನ್ನಾಗಿಸುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ಆ ಹಾದಿಯಲ್ಲಿ ಚಿತ್ರತಂಡ ಗೆದ್ದಿದೆ. ಇನ್ನು ಇಂತಾದೊಂದು ಬೋಲ್ಡ್ ಕತೆಯನ್ನು ಅನುಷ್ಕಾ ಶೆಟ್ಟಿ ಆಯ್ಕೆ ಮಾಡಿಕೊಂಡಿದ್ದನ್ನು ಮೆಚ್ಚಲೇಬೇಕು. ಕೊನೆಯ ಅರ್ಧ ಗಂಟೆ ಸಿನಿಮಾ ಬಹಳ ಭಾವುಕವಾಗಿದ್ದು ನವೀನ್- ಅನುಷ್ಕಾ ನಟನೆ ಪ್ರೇಕ್ಷಕರು ಸಿನಿಮಾದಲ್ಲಿ ಲೀನವಾಗುವಂತೆ ಮಾಡುತ್ತದೆ.
ಕಲಾವಿದರ ಅಭಿನಯ
ಅನುಷ್ಕಾ ಹಾಗೂ ನವೀನ್ ಇಬ್ಬರೂ ಪ್ರತಿಭಾನ್ವಿತ ಕಲಾವಿದರು ಅನ್ನೋದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಅವರ ಮೇಲಿನ ನಿರೀಕ್ಷೆಯನ್ನು ಈ ಸಿನಿಮಾದಲ್ಲಿ ಯಶಸ್ವಿಯಾಗಿ ತಲುಪಿದ್ದಾರೆ. ಸ್ಟಾರ್ ಅನುಷ್ಕಾ ಶೆಟ್ಟಿ ಸ್ಕ್ರೀನ್ ಪ್ರಸೆನ್ಸ್ ಚಿತ್ರಕ್ಕೆ ಪ್ಲಸ್ ಆಗಿದೆ. ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಇನ್ನು ನವೀನ್ ಕಾಮಿಡಿ ಮೂಲಕ ಮೋಡಿ ಮಾಡಿದ್ದಾರೆ. ಇನ್ನುಳಿದಂತೆ ನಾಯಕನ ತಂದೆ ಪಾತ್ರದಲ್ಲಿ ಮುರಳಿ ಶರ್ಮಾ ಇಷ್ಟವಾಗುತ್ತಾರೆ.
ತಾಂತ್ರಿಕವಾಗಿ ಸಿನಿಮಾ
ಸ್ಕ್ರೀನ್‌ಪ್ಲೇ, ಡೈಲಾಗ್ಸ್ ಚೆನ್ನಾಗಿದೆ. ಇನ್ನು ಬಹಳ ಅದ್ಧೂರಿಯಾಗಿಯೇ ಸಿನಿಮಾ ಮೂಡಿಬಂದಿದೆ. ಸೆಕೆಂಡ್ ಹಾಫ್ ಕೊಂಚ ಲ್ಯಾಗ್ ಅನ್ನಿಸುತ್ತದೆ. ಸಂಗೀತ ವಿಚಾರದಕ್ಕೆ ಬಂದರೆ ಸಾಂಗ್ಸ್ ನಿರಾಸೆ ಮೂಡಿಸುತ್ತವೆ. ಕ್ಯಾಚಿ ಸಾಂಗ್ಸ್ ಇಲ್ಲದೇ ಇರುವುದು ಚಿತ್ರಕ್ಕೆ ದೊಡ್ಡ ಹಿನ್ನಡೆ. ಹಿನ್ನೆಲೆ ಸಂಗೀತ ವಿಚಾರಕ್ಕೆ ಬಂದರೆ ಕೊನೆಯ ಅರ್ಧಗಂಟೆ ಹೈಲೆಟ್ ಎನಿಸಿಕೊಳ್ಳುತ್ತದೆ.
ಕೊನೆ ಮಾತು
'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಒಂದು ಮೆಚೂರ್ಡ್ ಲವ್ ಸ್ಟೋರಿ ಸಿನಿಮಾ. ನವೀನ್- ಅನುಷ್ಕಾ ಇಬ್ಬರು ತಮ್ಮ ಅಭಿನಯದಿಂದ ಕಟ್ಟಿ ಹಾಕುತ್ತಾರೆ. ಆದರೆ ಸಿನಿಮಾ ಸ್ಲೋ ಅನ್ನೋದೇ ದೊಡ್ಡ ಹಿನ್ನಡೆಯಾಗಿದೆ. ಕೆಲ ಸನ್ನಿವೇಶಗಳು ಕೃತಕ ಎನಿಸುತ್ತದೆ, ಕತೆಯನ್ನು ಮೊದಲೇ ಊಹಿಸಿಬಿಡಬಹುದು. ಆದರೂ ಸಿನಿಮಾ ಇಷ್ಟವಾಗುತ್ತದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇಷ್ಟಪಡುವರವರು ವೀಕೆಂಡ್ ಥಿಯೇಟರ್‌ಗೆ ಹೋಗಬಹುದು. ಉಳಿದವರು ಓಟಿಟಿ ಸ್ಟ್ರೀಮಿಂಗ್‌ಗೆ ಕಾಯಬಹುದು.


Click it and Unblock the Notifications











