For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರಗಳಲ್ಲಿ ಕತೆಯೇ ನಾಸ್ತಿ ಎಂದು ಕೊರಗುತ್ತಿದ್ದವರು ನಕ್ಸಲೈಟ್‌ ಚಿತ್ರವನ್ನೊಮ್ಮೆ ನೋಡಬಹುದು

  By Staff
  |

  *ಸತ್ಯನಾರಾಯಣ

  ಒಂದೆಡೆ ಶಕ್ತಿ - ಯುಕ್ತಿಗಳ ನಡುವಣ ಸಂಘರ್ಷ, ಇನ್ನೊಂದೆಡೆ ಪರಿಸ್ಥಿತಿಯ ಕೈಗೊಂಬೆಗಳಾಗುವ ಅಮಾಯಕರ ದುರಂತ. ಇವೆರಡನ್ನ ತಳುಕು ಹಾಕುತ್ತಾ ಸಾಗುವ ನಕ್ಸಲೈಟ್‌ ಚಿತ್ರದ ಗುರಿ ಸ್ಪಷ್ಟ . ಸೆಂಟಿಮೆಂಟ್‌ ಪ್ರಿಯರನ್ನೂ, ಆ್ಯಕ್ಷನ್‌ ಪ್ರಿಯರನ್ನೂ ಏಕಕಾಲಕ್ಕೆ ಹಿಡಿದಿಡುವುದು. ಈ ನಿಟ್ಟಿನಲ್ಲಿ ಚಿತ್ರ ಯಶಸ್ಸು ಕಂಡರೂ, ಇವೆರಡನ್ನೂ ಮೀರಿ ನಿಲ್ಲುವ ಪಾತ್ರವೊಂದೇ ಕೊನೆಗೆ ಪ್ರೇಕ್ಷಕರ ನೆನಪಿನಲ್ಲುಳಿಯುವುದು ಚಿತ್ರದ ದೌರ್ಬಲ್ಯವೋ ಅಥವಾ ಪ್ಲಸ್‌ ಪಾಯಿಂಟೋ ಅನ್ನುವುದು ಕಷ್ಟ.

  ಇಂಥ ಆಕಸ್ಮಿಕ ಚಿತ್ರಕತೆಯ ಹಂತದಲ್ಲಿ ನಡೆದಿರಬೇಕು. ಯಾಕೆಂದರೆ ಪ್ರೇಕ್ಷಕರ ಗಮನ ಸೆಳೆಯುವ ಮುಖ್ಯಮಂತ್ರಿ ಪಾತ್ರಕ್ಕೂ ಕತೆಗೂ ನೇರವಾದ ಸಂಬಂಧವೇನೂ ಇಲ್ಲ . ಈ ಪಾತ್ರ ಕೊಲೆಯಾದ ನಂತರವೇ ಚಿತ್ರದ ಕತೆಗೆ ಟೇಕಾಫ್‌ ಸಿಗುತ್ತದೆ. ಆದರೆ ಚಿತ್ರಕ್ಕೆ ಟೇಕಾಫ್‌ ಸಿಕ್ಕಿರುವುದು ಈ ಪಾತ್ರದಿಂದಲೇ ಹಾಗೂ ಇದು ಕಣ್ಮರೆಯಾದ ನಂತರ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಆಸಕ್ತಿ ಹೊರಟುಹೋಗುವುದು ಕೂಡಾ ವಿಪರ್ಯಾಸವೇ. ಅದಕ್ಕೆ ಕಾರಣ ಆ ಪಾತ್ರಕ್ಕೆ ಸಿಕ್ಕಿರುವ ಮೈಲೇಜ್‌.

  ಮಾತೆತ್ತಿದರೆ ಜಗತ್ತಿನಲ್ಲಿರುವ ಬೈಗಳ ಪದಗಳನ್ನೆಲ್ಲಾ ಪ್ರಯೋಗಿಸುವ ಮುಖ್ಯಮಂತ್ರಿಯನ್ನು ನೀವೆಲ್ಲೂ , ಯಾವತ್ತೂ ಕಾಣುವುದಕ್ಕೆ ಸಾಧ್ಯವಿಲ್ಲ . ಆದರೆ ಕತೆಯಲ್ಲೇ ಇದಕ್ಕೊಂದು ಸಮರ್ಥನೆಯಿದೆ. ಈ ಮಹಿಳಾ ಮುಖ್ಯಮಂತ್ರಿ ಸ್ಲಮ್‌ನಿಂದ ಬಂದವಳು, ಅಂಥಾ ಜನರಿಗಾಗಿಯೇ ಅಧಿಕಾರವನ್ನು ಬಳಸುವ ಸಂಕಲ್ಪ ತೊಟ್ಟವಳು. ನಿರ್ದೇಶಕರ ಕೈ ಮೀರಿ ಈ ಪಾತ್ರಕ್ಕೊಂದು ಕಾಮಿಕ್‌ ಟಚ್‌ ಸಿಕ್ಕಿದೆ. ಹಾಗಾಗಿ ಪ್ರೇಕ್ಷಕರಿಗೆ ಇದೊಂದು ಹಾಸ್ಯ ಪಾತ್ರವಾಗಿ ರಂಜಿಸುತ್ತದೆ.

  ಮಿಕ್ಕಂತೆ ಹಂತಹಂತವಾಗಿ ಪಾತ್ರಗಳ ಪ್ರವೇಶವಾಗುತ್ತದೆ. ಮುಖ್ಯಮಂತ್ರಿಯ ಕೊಲೆ ಮೊದಲ ತಿರುವು. ಆ ಕೊಲೆಗೆ ಕಾರಣಕರ್ತರನ್ನು ಹುಡುಕುವ ಹೊತ್ತಿಗೆ ಬಡ ಮೇಷ್ಟ್ರ ಕುಟುಂಬವೊಂದು ಗುಮಾನಿಗೆ ಗುರಿಯಾಗುವುದು ಎರಡನೇ ತಿರುವು. ದೆಹಲಿಯಿಂದ ವಿಶೇಷ ಅಧಿಕಾರಿಯ ಆಗಮನ ಕೊನೆಯ ತಿರುವು. ಇವಿಷ್ಟೂ ಘಟನೆಗಳ ನಂತರವೂ ಚಿತ್ರ ಮುಂದುವರಿಯುತ್ತದೆ. ಅಲ್ಲಿರುವುದು ಭಾರೀ ವಿವರಗಳ ದೃಶ್ಯಲೋಕ. ತಂತ್ರಜ್ಞಾನ ಮತ್ತು ಪೊಲೀಸ್‌ ಕಾರ್ಯಾಚರಣೆ ಬಗ್ಗೆ ಆಸಕ್ತಿಯುಳ್ಳವರಿಗಷ್ಟೇ ಈ ಭಾಗ ಇಷ್ಟವಾಗಬಹುದು.

  ಹಾಗೆ ನೋಡಿದರೆ ಮೇಷ್ಟ್ರ ಕತೆ ಒಂದು ಪ್ರತ್ಯೇಕ ಎಪಿಸೋಡ್‌ ಆಗಿ ಕೂಡಾ ಇಷ್ಟವಾಗುತ್ತದೆ. ಆದರ್ಶಗಳನ್ನು ನಂಬಿ ಬದುಕುವ ಮೇಷ್ಟ್ರು ಮಾಡುವ ಏಕೈಕ ತಪ್ಪೆಂದರೆ, ತನ್ನ ಮನೆಯ ಮೇಲ್ಭಾಗವನ್ನು ಅಪರಿಚಿತರಿಗೆ ಬಾಡಿಗೆ ಕೊಡುವುದು. ಅವರೇ ಮುಖ್ಯಮಂತ್ರಿಯ ಕೊಲೆ ಮಾಡುತ್ತಾರೆ. ಆ ತಪ್ಪಿಗೆ ಮೇಷ್ಟ್ರು ಕುಟುಂಬವೇ ಬಲಿಯಾಗುತ್ತದೆ. ಕಾನೂನಿನ ಸಂಕೋಲೆಯಲ್ಲರುವ ಲೋಪಗಳು, ಪೊಲೀಸರ ಇಂಟರೊಗೇಷನ್‌ ಎಂಬ ಚಿತ್ರಹಿಂಸೆ, ಇತ್ಯಾದಿಗಳು ಸಹಜವಾಗಿ ಮೂಡಿಬಂದಿವೆ.

  ಶಕ್ತಿಯನ್ನು ನೆಚ್ಚಿಕೊಂಡಿರುವ ಲೋಕಲ್‌ ಅಧಿಕಾರಿ ಹಾಗೂ ಯುಕ್ತಿಯನ್ನು ನಂಬಿಕೊಂಡಿರುವ ದೆಹಲಿ ಅಧಿಕಾರಿಗಳ ನಡುವಣ ಇಗೋ ಸಂಘರ್ಷದಲ್ಲಿ ಕೂಸು ಬಡವಾಗುವುದನ್ನೂ ನಿರ್ಮಾಪಕರು ಸಮರ್ಥವಾಗಿ ತೋರಿಸಿದ್ದಾರೆ. ಅದೇ ರೀತಿ ಅಪರಾಧಿ ಪತ್ತೆಯಲ್ಲಿ ಕಂಪ್ಯೂಟರ್‌ ಬಳಕೆ, ಫಿಂಗರ್‌ ಪ್ರಿಂಟ್‌ ಬಳಕೆ ಇತ್ಯಾದಿ ವಿವರಗಳು ಚಿತ್ರಕ್ಕೊಂದು ಅಥೆಂಟಿಸಿಟಿಯನ್ನು ಒದಗಿಸಿವೆ. ಆದರೆ ಸಾಕ್ಷಿಗಳನ್ನು ಹುಡುಕುವುದಕ್ಕಾಗಿ ಅಧಿಕಾರಿ ಊರೆಲ್ಲಾ ಸುತ್ತುವುದು, ಕೈಗೆ ಸಿಕ್ಕಿದವರನ್ನೆಲ್ಲಾ ಮಾತಾಡಿಸುವುದು ಸಾಕಷ್ಟು ಕಾಲವ್ಯಯ ಮಾಡುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಗಾರರ ಹೆಸರನ್ನು ಆತ ಬಯಲು ಮಾಡುವ ಹೊತ್ತಿಗೆ ಪ್ರೇಕ್ಷಕನಿಗೆ ಆ ಇಶ್ಯೂನಲ್ಲಿ ಆಸಕ್ತಿ ಹೊರಟು ಹೋಗಿರುತ್ತದೆ.

  ತಾಂತ್ರಿಕವಾಗಿ ಚಿತ್ರದಲ್ಲಿ ಕೊರತೆಗಳಿಲ್ಲ . ಕಥೆಯೂ ಸಾಕಷ್ಟು ಗಟ್ಟಿಯಾಗಿದೆ. . ಇಲ್ಲಿ ಕತೆ ಸಮೃದ್ಧ ... ಒಂದಲ್ಲ ಎರಡು ಚಿತ್ರಗಳನ್ನು ನಿರ್ಮಿಸಬಹುದು. ಹೊಸ ಕಲ್ಪನೆಯಾಂದಿಗೆ ಆಧುನಿಕ ತಂತ್ರಜ್ಞಾನವೂ ಕೈ ಜೋಡಿಸಿದಾಗ ಸಿನಿಮಾ ನೀಡುವ ಅನುಭವವೇ ಬೇರೆ ಅನ್ನೋದಕ್ಕೂ ನಕ್ಸಲೈಟ್‌ ಸಾಕ್ಷಿ .

  ಹಂಸಲೇಖಾ ಸಂಗೀತದಿಂದ ಚಿತ್ರಕ್ಕೇನೂ ಉಪಯೋಗವಾಗಿಲ್ಲ . ಅದೇ ರೀತಿ ವಿಜಯಲಕ್ಷ್ಮಿಯಂಥ ಒಳ್ಳೇ ನಟಿ ಇಲ್ಲಿ ವೇಸ್ಟ್‌ ಆಗಿದ್ದಾರೆ. ದೇವರಾಜ್‌, ಥ್ರಿಲ್ಲರ್‌ ಮಂಜು, ದತ್ತಾತ್ರೇಯ, ಅರವಿಂದ್‌, ಅಶ್ವಥ್‌, ಭವ್ಯಶ್ರೀ ರೈ ಮೊದಲಾದ ಹತ್ತಾರು ಪರಿಚಿತ ಕಲಾವಿದರು ನಟಿಸಿದ್ದರೂ ಕೊನೆಗೆ ನೆನಪಲ್ಲುಳಿಯುವುದು ಮುಖ್ಯಮಂತ್ರಿ ಪಾತ್ರ ವಹಿಸಿದ ಸರೋಜಮ್ಮ ಅವರ ನಟನೆ.

  ನಿರ್ದೇಶಕ ಶಿವಮಣಿ ಈ ಚಿತ್ರದಲ್ಲಿ ಕೆಲವೊಂದು ಅಚ್ಚರಿಗಳನ್ನಂತೂ ನೀಡಿದ್ದಾರೆ. ಅದು ಚಿತ್ರಕತೆಯಿಂದಾಚೆ ನಿಲ್ಲುತ್ತದೆ ಅನ್ನೋದೇ ಬೇಜಾರು. ಅದೇ ರೀತಿ ಸಂಭಾಷಣೆ ಬರೆದ ರವಿ ಶ್ರೀವತ್ಸ ಅವರೂ ಚಿತ್ರದ ಪ್ರತಿ ಸನ್ನಿವೇಶವನ್ನು ಆನಂದಿಸಿದ್ದು ಎದ್ದು ಕಾಣುತ್ತದೆ. ಛಾಯಾಗ್ರಹಣ ಇಂಥಾ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.

  ಒಂದೇ ಕ್ಯಾನ್‌ವಾಸ್‌ನಲ್ಲಿ ಎರಡು ಚಿತ್ರಗಳನ್ನು ಪೇಂಟ್‌ ಮಾಡುವ ಈ ಪ್ರಯತ್ನದಲ್ಲಿ ಶಿವಮಣಿ ಸೋತಿಲ್ಲ ಅನ್ನುವುದೂ ಗಮನಾರ್ಹ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X