»   » ನೀಲಾ ನಿಮ್ಮ ಮಗಳೇ ಆಗಿದ್ದರೆ ನಿಮ್ಮಂತಿರಬೇಕಿತ್ತು. ಆದರೆ ಅನಾಥಳಂತೆ ಕಾಣಿಸುತ್ತಾಳೆ. ನಮಸ್ಕಾರ...ನಿಮಗೂ ಚಿತ್ರಕ್ಕೂ... ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ, ನಮಗೂ...ಚಿತ್ರರಂಗಕ್ಕೂ...

ನೀಲಾ ನಿಮ್ಮ ಮಗಳೇ ಆಗಿದ್ದರೆ ನಿಮ್ಮಂತಿರಬೇಕಿತ್ತು. ಆದರೆ ಅನಾಥಳಂತೆ ಕಾಣಿಸುತ್ತಾಳೆ. ನಮಸ್ಕಾರ...ನಿಮಗೂ ಚಿತ್ರಕ್ಕೂ... ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ, ನಮಗೂ...ಚಿತ್ರರಂಗಕ್ಕೂ...

Posted By:
Subscribe to Filmibeat Kannada


ಇಂಥ ಹೊಗಲರಿಯದ ಹೊರೆದಾರಿಗಳಿಲ್ಲದ ನೀಲಾಳನ್ನು ನೀವೇಕೆ ಸೃಷ್ಟಿಸಿದಿರೋ ಕಾಣೆ. ಅದು ವೃತ್ತಿಗಾಯಕರ ಜೀವನಚರಿತ್ರೆಯಲ್ಲ, ಅಳಿದುಹೋದ ಕೋಟೆಯ ಬುರುಜಿನಲ್ಲಿ ಮನೆಮಾಡಿರುವ ಜಗದೇವರಾಯನ ವರ್ತಮಾನವೂ ಅಲ್ಲ, ಜಾನಪದ ಚರಿತ್ರೆಯೂ ಅಲ್ಲ. ಜಾನಪದ ಕುಲಾವಿ ತೊಟ್ಟುಕೊಂಡ ಮಡೊನ್ನಳಂತೆಯೂ ಅವಳಿಲ್ಲ. ಆಕೆ ಜೀವವಿರದ ನಾಯಕಿ.

ಕಿರುತೆರೆ ಪರದೆಗೆ ಸರಿದು ಮುರುಟಿದಿರೋ ಹೇಗೆ?

ಭರಣ, ನೀವು ಕಳೆದುಹೋಗಿದ್ದೀರಿ. ಕಿರುತೆರೆಗೆ ನಿಮ್ಮನ್ನು ಅರ್ಪಿಸಿಕೊಂಡಿದ್ದೀರಿ. ಪತ್ರಿಕೋದ್ಯಮದ ಸುಳಿಗೆ ಸಿಕ್ಕ ಕತೆಗಾರ ಕಳೆದುಹೋಗುವಂತೆ, ಕಿರುತೆರೆಯ ಸುಳಿಗೆ ಸಿಕ್ಕ ಸೃಜನಶೀಲ ನಿರ್ದೇಶಕರೂ ಕಳೆದುಕೊಳ್ಳುತ್ತಾರೆ. ತಮ್ಮನ್ನು ಮತ್ತು ತಮ್ಮ ಕಲೆಯನ್ನು.

ನೀಲಾದಲ್ಲಿ ಆದದ್ದೂ ಅದೇ. ಒಂದು ವೃತ್ತಿಗಾಯಕರ ಕುಟುಂಬ. ಆ ಕುಟುಂಬದ ಹೆಣ್ಣುಮಗಳು ನೀಲಾ. ಅವಳಿಗೊಬ್ಬ ಬಂಡಾಯದ ಅಣ್ಣ. ಸಂಪ್ರದಾಯದ ತಂದೆ. ಬಂಡಾಯದ ಅಣ್ಣ ನಾಲಗೆ ಜೀತ ಮಾಡಲಾರೆ ಎಂದು ಹೇಳಿ ಜಗದೇವರಾಯನ ಮಗಳನ್ನು ಪ್ರೀತಿಸಿ ಕೊಲೆಯಾಗುತ್ತಾನೆ. ಅಪ್ಪನೂ ಸಾಯುತ್ತಾನೆ. ಈ ಸಾವಿಗೆ ಜಗದೇವರಾಯನೇ ಕಾರಣ ಎಂದು ಜಗತ್ತಿಗೆ ಸಾರಿ ಹೇಳುವುದಕ್ಕೆ ನೀಲಾ ಹಾಡೆಂಬ ಅಸ್ತ್ರವನ್ನು ಕೈಗೆತ್ತಿಕೊಳ್ಳುತ್ತಾಳೆ. ಆ ಅಸ್ತ್ರ ಕೊಡುವ ಶಿವಯ್ಯ ಒಬ್ಬ ಜೋಗಿ.

ಇಷ್ಟೇ ಕತೆಯಾಗಿದ್ದರೆ ನಾನು ಮೆಚ್ಚಿಕೊಳ್ಳುತ್ತಿದ್ದೆ. ನಿರ್ಮಾಪಕರು ಅಮೆರಿಕಾದಲ್ಲಿದ್ದಾರೆ. ಮೈಸೂರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಮಾಡಿದ್ದಾರೆ ಎಂಬ ಕಾರಣಕ್ಕೆ ನೀಲಾಳನ್ನು ಕ್ಯಾನ್ಸರ್‌ ರೋಗಿ ಮಾಡಿದಿರಿ. ವೈದ್ಯರಾಗಿ ನೀವು ಕಾಣಿಸಿಕೊಂಡಿರಿ. ವೈದ್ಯರ ಕಳೆಯಿಲ್ಲದ ನಿಮಗೆ ನಿಮ್ಮ ಪಾತ್ರವ್ನನೇ ತೂಗಿಸಿಕೊಂಡು ಹೋಗುವುದು ಸಾಧ್ಯವಾಗಿಲ್ಲ. ಇನ್ನು ಉಳಿದವರ ಪಾಡೇನು? ಮುಸುರಿ ಕೃಷ್ಣಮೂರ್ತಿಯ ಅಪರಾವತಾರದಂತೆ ಕಾಣಿಸುವ ಏಣಗಿ ನಟರಾಜ್‌, ವ್ಯಕ್ತಿತ್ವವೇ ಇಲ್ಲದ ನವೀನ್‌ ಮಯೂರ್‌, ಸತ್ತ ನಂತರ ಬದುಕಿಬಂದಂತೆ ಭಾಸವಾಗುವ ವಿಚಿತ್ರ ಸಂಕೇತಕ್ಕೆ ಈಡಾಗುವ ಶಿವಧ್ವಜ... ಹೀಗೆ ಪಾತ್ರಗಳಿಗೆ ಕೊರತೆಯಿಲ್ಲ, ಪಾತ್ರ ಪೋಷಣೆಗಿದೆ.

ಚಿತ್ರ ಶುರುಮಾಡುವ ಮೊದಲು ನೀವು ಕೊಟ್ಟ ಹೇಳಿಕೆಯನ್ನು ನಾನು ಓದಿದ್ದೇನೆ. ಮೊದಲು ಜೈತ್ರಜಾತ್ರೆ ಎಂದು ಹೆಸರಿಟ್ಟಿದ್ದಿರಿ ಈ ಚಿತ್ರಕ್ಕೆ. ಈಗ ಅದು ನೀಲಾ ಆಗಿದೆ. ಪರವಾಗಿಲ್ಲ. ನಾಯಕಿಯ ಹೆಸರನ್ನು ಚಿತ್ರಕ್ಕಿಡೋದು ಕಿರಿತೆರೆ ಶೈಲಿಯೂ ತಾನೆ? ಆದರೆ ಕಲೆ ಹೇಳಿಕೆಯ ಮಟ್ಟದಿಂದ ಮೇಲಕ್ಕೇರಬೇಕು. ನಾಯಕಿ ದೈಹಿಕ ಕ್ಯಾನ್ಸರ್‌ ಮತ್ತು ಸಾಮಾಜಿಕ ಕ್ಯಾನ್ಸರನ್ನು ಏಕಕಾಲಕ್ಕೆ ಮೀರುತ್ತಾಳೆ ಎಂಬುದು ನಿಮ್ಮ ಆರಂಭದ ಸ್ಟೇಟ್‌ಮೆಂಟ್‌. ಸಿನಿಮಾ ನೋಡಿದ ಮೇಲೆ ಉಳಿಯುವುದೂ ಅದೇ ಸ್ಟೇಟ್‌ಮೆಂಟ್‌.

ಕ್ಷಮಿಸಿ.... ನೀಲಾ ನೋಡುವ ಹಿಂದಿನ ದಿನ ತಬರನ ಕತೆ ನಾಟಕ ನೋಡಿದೆ. ತೇಜಸ್ವಿ ನೋಡಿದ್ದರೆ ಬೇಸರ ಮಾಡಿಕೊಳ್ಳುತ್ತಿದ್ದರು. ನೀವೂ ಸೇರಿದಂತೆ ಯಾರೊಬ್ಬರಿಗೂ ಸಂಭಾಷಣೆಯೇ ಗೊತ್ತಿರಲಿಲ್ಲ. ಆ ಸೌಭಾಗ್ಯಕ್ಕೆ ತಾವು ಯಾಕೆ ನಾಟಕ ಮಾಡಬೇಕಿತ್ತೋ ಗೊತ್ತಿಲ್ಲ.

ಭರಣ, ನಾಗಾಭರಣ...ನಿಮ್ಮ ಮಿತಿಗಳನ್ನು ಅರ್ಥಮಾಡಿಕೊಳ್ಳಿ. ನೀವು ಒಳ್ಳೆಯ ಚಿತ್ರಗಾರರಲ್ಲ. ಅದು ಮೈಸೂರು ಮಲ್ಲಿಗೆಯಲ್ಲೇ ಗೊತ್ತಾಗಿ ಹೋಯಿತು. ನಿಮ್ಮ ಚಿತ್ರಗಳೆಲ್ಲಾ ಗೆದ್ದದ್ದು ಸಂಗೀತದಿಂದ. ಇಲ್ಲಿ ಸಂಗೀತವೂ ಸಪ್ಪೆ. ನೀಲಾ ಕೂಡ ಅಷ್ಟೇ. ಗಾಯತ್ರಿ ಜಯರಾಂ ನೋಡೋದಕ್ಕೆ ಚೆನ್ನಾಗಿದ್ದಾಳೆ. ಸುಮ್ಸುಮ್ನೆ ನಗುತ್ತಾಳೆ. ಅನಂತನಾಗ್‌ ಮೆಚ್ಚುವಂತೆ ನಟಿಸಿದ್ದಾರೆ. ಅವರೊಬ್ಬರೇ ಚಿತ್ರದ ಶಕ್ತಿ.

ಕ್ಷಮಿಸಿ, ಇಷ್ಟು ಹೇಳದೇ ವಿಧಿಯಿಲ್ಲ. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿದ್ದು ಸೊಗಸಾಗಿತ್ತು.

Bharana has used somebodys money lavishly and used his brain sparingly.

ಅದು ನೀಲಾ ಬಗ್ಗೆ ಅಂತಿಮ ಮಾತು.
ನಮಸ್ಕಾರ...ನಿಮಗೂ ಚಿತ್ರಕ್ಕೂ...
ನಿಮ್ಮಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ, ನಮಗೂ...ಚಿತ್ರರಂಗಕ್ಕೂ...

ನಿಮ್ಮ,
ನೊಂದು ನೀಲಿಗಟ್ಟಿದ ಪ್ರೇಕ್ಷಕ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada