OMG 2 review: ಓಎಂಜಿ 2ಗೆ ಸಬ್ಜೆಕ್ ಪ್ಲಸ್ ಪಾಯಿಂಟ್, ಯುವಜನತೆ, ಶಿಕ್ಷಣ ಸಂಸ್ಥೆಗಳು ನೋಡಲೇಬೇಕಾದ ಸಿನಿಮಾ!
ವಿವಾದಗಳು, ಮೆಚ್ಚುಗೆಗಳು ಪಡೆದಿದ್ದ 2012ರಲ್ಲಿ ಬಿಡುಗಡೆಯಾದ ಓ ಮೈ ಗಾಡ್ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಈ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ಓ ಮೈ ಗಾಡ್ 2 ಬಿಡುಗಡೆಯಾಗಿದ್ದು, ಇದು ಹಳೆಯ ಸಿನಿಮಾಕ್ಕೆ ಸಂಪೂರ್ಣ ಉಲ್ಟಾ....! ಎಸ್.. ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ ಓಎಂಜಿ 2 ತನ್ನ ವಿಭಿನ್ನ ಕಥಾ ಹಂದರದ ಮೂಲಕ ಸಿನಿಪ್ರಿಯರ ಮನಗೆದ್ದಿದೆ.
ಟೀಸರ್ ಬಿಡುಗಡೆ ಮಾಡಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಚಿತ್ರತಂಡಕ್ಕೆ ಸೆನ್ಸಾರ್ ಬೋರ್ಡ್ ಕೂಡ ಎ ಪ್ರಮಾಣಪತ್ರ ನೀಡಿ ಮತ್ತಷ್ಟು ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಿಂದ ಹೊರಗಿಟ್ಟಿದೆ. ಹೀಗಾಗಿಯೇ ಚಿತ್ರತಂಡ ಟ್ರೈಲರ್‌ನಲ್ಲಿ ಕೆಲವು ಬದಲಾವಣೆ ಮಾಡಿತ್ತು. ಲೈಂಗಿಕ ಶಿಕ್ಷಣದಂತಹ ವಿಷಯಗಳನ್ನು ದೇವರ ಬಾಯಲ್ಲಿ ಹೇಳಿಸಲಾಗಿದೆ ಎಂಬ ಆರೋಪಗಳ ಬೆನ್ನಲ್ಲೇ ಸಿನಿಮಾಗೆ ಫ್ಯಾಮಿಲಿ ಆಡಿಯನ್ಸ್‌ನಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಹಾಗಾದರೆ ಓಎಂಜಿ 2 ಸಿನಿಮಾದಲ್ಲಿ ಇರೋದೇನು...? ಚಿತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ..? ಅಕ್ಷಯ್ ಕುಮಾರ್ ಶಿವನೋ, ಶಿವಗಣನೋ...? ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿ...

ಓಎಂಜಿ 2 ಚಿತ್ರದ ಕಥೆಯೇನು...?
ಕಾಂತಿ ಶರಣ್ ಮುದ್ಗಲ್ (ಪಂಕಜ್ ತ್ರಿಪಾಠಿ) ಒಬ್ಬ ಶಿವ ಭಕ್ತ. ಇಡೀ ಕುಟುಂಭ ಶಿವ ಭಕ್ತರು. ಮಹಾಕಾಳನ ಸನ್ನಿಧಿಯಲ್ಲಿ ಅಂಗಡಿ ನಡೆಸುತ್ತಾ ಸೀದಾಸಾದ ಬದುಕು ನಡೆಸುತ್ತಿದ್ದ ಇವರ ಜೀವನದಲ್ಲಿ ನಡೆಯುವ ಒಂದು ಘಟನೆ ಬದುಕನ್ನೇ ಅಲ್ಲೋಲಕಲ್ಲೋಲ ಮೂಡಿಸುತ್ತದೆ. ಶಾಲೆಯಲ್ಲಿ ಸ್ನೇಹಿತರಿಂದ ತನ್ನ ಖಾಸಗಿ ಅಂಗದ ಕುರಿತು ಅವಮಾನಕ್ಕೆ ಒಳಗಾಗುವ ವಿವೇಕ್ (ಕಾಂತಿ ಶರಣ್ ಮುದ್ಗಲ್ ಮಗ) ತನ್ನ ಅಂಗವನ್ನು ಬೆಳೆಸಿಕೊಳ್ಳಬೇಕು ಎಂಬ ಪ್ರಯತ್ನದಲ್ಲಿ ಹಸ್ತಮೈಥುನ ಮಾಡಿಕೊಳ್ಳಲು, ನಕಲಿ ವೈದ್ಯರ ಬಳಿ ಅಲೆಯಲು ಆರಂಭಿಸುತ್ತಾನೆ. ಮಾನಸಿಕ ಹಿಂಸೆಗೆ ಒಳಗಾದ ವಿವೇಕ್ ಶಾಲೆಯ ಶೌಚಾಲಯದಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಯಬಿಡುತ್ತಾರೆ. ಇದರಿಂದ ಮನೆ, ನೆರೆ ಹೊರೆಯವರು ಅವಮಾನ ಮಾಡುತ್ತಾರೆ, ಶಾಲೆ ಆತನನ್ನು ಹೊರಹಾಕುತ್ತದೆ. ಎಲ್ಲರಿಂದ ಬೇಸತ್ತ ಆತ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾನೆ.
ಈ ವೇಳೆ ಶಿವ ತನ್ನ ಪರಮ ಭಕ್ತ ಕಾಂತಿ ಶರಣ್ ಮುದ್ಗಲ್‌ಗೆ ಸಹಾಯ ಮಾಡಲು ತನ್ನ ಶಿವಗಣದ ಸದ್ಯಸ (ಅಕ್ಷಯ್ ಕುಮಾರ್) ಅವರನ್ನು ಭೂಮಿಗೆ ಕಳುಹಿಸುತ್ತಾರೆ. ಮಗನ ಮೇಲೆ ಕೋಪಗೊಂಡಿದ್ದ ತಂದೆ ಮಗನ ಪರವಾಗಿ ನ್ಯಾಯಾಲಯದಲ್ಲಿ ಶಾಲೆ, ನಕಲಿ ವೈದ್ಯರು, ನಾಟಿ ವೈದ್ಯರು ಮತ್ತು ಮೆಡಿಕಲ್ ಸ್ಟೋರ್ ಮಾಲೀಕ ಮತ್ತು ತನ್ನ ವಿರುದ್ಧವೇ ಮಾನನಷ್ಟ ಮೊಕದಮೆ ಹೂಡುತ್ತಾನೆ. ಇಲ್ಲಿ ಎಲ್ಲಾ ಇತರರ ಪರವಾಗಿ ಕಾಮಿನಿ ಮಹೇಶ್ವರಿ (ಯಾಮಿ ಗೌತಮ್) ವಕೀಲರಾಗುತ್ತಾರೆ. ಇಲ್ಲಿ ನಡೆಯುವ ಕೋರ್ಟ್ ರೂಂ ಡ್ರಾಮಾದಲ್ಲಿ ನಾಯಕ ತನ್ನ ಮಗನ ಪರವಾಗಿ ಹೇಗೆ ವಾದಿಸುತ್ತಾರೆ.. ಹಸ್ತಮೈಥುನ, ಲೈಂಗಿಕಶಿಕ್ಷಣ ನೀಡದ ಶಾಲೆಯ ವಿರುದ್ಧ ಹೇಗೆ ಗೆಲ್ಲುತ್ತಾರೆ..? ಇಂಗ್ಲೀಷ್ ಸರಿಯಾಗಿ ಬರದ ಇವರಿಗೆ ಅಕ್ಷಯ್ ಕುಮಾರ್ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು.

ಓಎಂಜಿ 2 ಚಿತ್ರ ಹೇಗಿದೆ...?
ಓಎಂಜಿ 2 ವಿವಾದವಾಗುವಂತಹ ಸಿನಿಮಾವಲ್ಲ. ಏಕೆಂದರೇ ಅಂತಹ ಅಂಶಗಳು ಸಿನಿಮಾದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಇಂದಿನ ಯುವಜನತೆಗೆ ಅದರಲ್ಲೂ ಮುಖ್ಯವಾಗಿ 12- 17 ವರ್ಷದ ಮಕ್ಕಳಿಗೆ ಅವಶ್ಯಕವಾಗಿ ಬೇಕಾದಂತಹ ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುತ್ತದೆ. ಶಾಲಾ - ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಕನಿಷ್ಠ ಜ್ಞಾನ ನೀಡದ ಶಾಲೆಗಳ ಬಗ್ಗೆ ಮಾತನಾಡುತ್ತದೆ. ಸೆಕ್ಸ್ ಎಜುಕೇಷನ್ ಪ್ರಾಮುಖ್ಯತೆಯ ಬಗ್ಗೆ ಪಂಜಕ್ ತ್ರಿಪಾಠಿ ಮನಮುಟ್ಟುವಂತೆ ತಿಳಿಸಿದ್ದಾರೆ.
ಸಿನಿಮಾದಲ್ಲಿ ಪ್ರತಿವಾದಿಯಾಗಿರುವ ಯಾಮಿ ಗೌತಮ್ ನಮ್ಮ ಇಂದಿನ ಮನಸ್ಥಿತಿಯ ಪ್ರತಿರೂಪವಾಗಿ ಕಾಣಿಸುತ್ತಾರೆ. ನಾವು ಯಾವುದನ್ನು ಅಶ್ಲೀಲ, ವಲ್ಗರ್ ಎಂದು ಕರೆಯುತ್ತೇವೆಯೋ ಅದು ಸಾವಿರಾರು ವರ್ಷಗಳ ಹಿಂದಿನ ಕಾಮಸೂತ್ರಕ್ಕೆ ಮಾಡುವ ಅವಮಾನ. ಸೆಕ್ಸ್ ಬಗ್ಗೆ ತಿಳುವಳಿಕೆಯಿಲ್ಲದಿದ್ದರೇ ನಡೆಯುವ ಅನಾಹುತಗಳ ಬಗ್ಗೆ ಸಿನಿಮಾ ಮಾತನಾಡಿದೆ. ನಮ್ಮ ಪುರಾತನ ಶಾಸ್ತ್ರ, ಶಿಲ್ಪಕಲೆಗಳಲ್ಲಿ ಕಾಮಕ್ಕೆ ಇರುವ ಪ್ರಾಮುಖ್ಯತೆ, ಗುರುಕುಲ ವ್ಯವಸ್ಥೆಯಲ್ಲಿದ್ದ ಲೈಂಗಿಕ ಶಿಕ್ಷಣವನ್ನು ಮೆಕಾಲೆ ಶಿಕ್ಷಣ ಪದ್ಧತಿ ಬಿಟ್ಟದ್ದನ್ನು ಹೇಳುತ್ತದೆ.

ನಟನೆ ಹೇಗಿದೆ?
ಚಿತ್ರದಲ್ಲಿ ಪಂಕಜ್ ತ್ರಿಪಾಠಿ ಮತ್ತಯ ಯಾಮಿ ಗೌತಮ್ ಪ್ರಮುಖ ಪಾತ್ರಗಳು. ಸಹಜವಾಗಿ ನಟಿಸಿರುವ ಇಬ್ಬರು ಸಿನಿಮಾಕ್ಕೆ ತಮ್ಮ 100% ನೀಡಿದ್ದಾರೆ. ಅಕ್ಷಯ್ ಕುಮಾರ್ ಕೆಲವು ಕಡೆ ಕಾಣಿಸಿಕೊಂಡಿದ್ದರೂ ಸಿನಿಮಾದಲ್ಲಿ ಅವರ ಪಾತ್ರಕ್ಕೆ ತೂಕವಿದೆ. ಒಬ್ಬ ತಂದೆಯಾಗಿ, ಗಂಡನಾಗಿ ಮಗನ ಸ್ವಾಭಿಮಾನಕ್ಕಾಗಿ ಕಷ್ಟಪಡುವ ಪಂಕಜ್ ತ್ರಿಪಾಠಿ ಜನರ ಮನಗೆಲ್ಲುತ್ತಾರೆ. ಪ್ರತಿವಾದಿಯಾಗಿ ಯಾಮಿ ಗೌತಮ್ ಖಡಕ್ ಆಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಅವರ ತಾಂಡವ ನೃತ್ಯ ಇಷ್ಟವಾಗುತ್ತದೆ. ಉಳಿದವರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ಹಳೆಯ ಓಎಂಜಿ ತಟ್ಟನೆ ನೆನಪಿಗೆ ಬಂದು ಸಾಗುತ್ತದೆ. ಉದಾಹರಣೆಗೆ ಆಸ್ಪತ್ರೆಯಲ್ಲಿ ಶಿವನ ದರ್ಶನ, ಕಾರ್ ಸವಾರಿ ಇತ್ಯಾದಿ.
ಸಿನಿಮಾ ಏಕೆ ನೋಡಬೇಕು??
ಮೊದಲನೆಯದಾಗಿ ಈ ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಎಂದರೆ ಅದು ಚಿತ್ರತಂಡ ಆರಿಸಿಕೊಂಡಿರುವ ಕಥಾವಸ್ತು. ಇಂದು ಲೈಂಗಿಕ ಶಿಕ್ಷಣದ ಅವಶ್ಯಕತೆ ಹೆಚ್ಚಾಗಿದೆ. ಇಂಟರ್‌ನೆಟ್ ಯುಗದಲ್ಲಿ ಎಳೆಯ ಮಕ್ಕಳ ಕೈಯಲ್ಲಿ ಮೊಬೈಲ್‌ಗಳಿದ್ದು, ಯಾವಾಗ ಏನನ್ನೂ ನೋಡಬೇಕು ಎಂಬ ಕನಿಷ್ಠ ಜವಾಬ್ದಾರಿ ಬರಬೇಕು ಎಂದರೆ ಅವರಿಗೆ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ಚಿತ್ರಕ್ಕೆ ಕಥೆಯೇ ನಾಯಕ.
ಶಾಲಾ- ಕಾಲೇಜುಗಳಲ್ಲಿ ಇಂದಿಗೂ ಮಾನವ ಸಂತಾನೋತ್ಪತ್ತಿ ವ್ಯವಸ್ಥೆ (human reproductive system) ಬಗ್ಗೆ ಪಾಠ ಮಾಡದೇ ಹಾಗೆ ಬಿಡುವ, ಎಕ್ಸಾಂಗೆ ಪ್ರಶ್ನೆ ಬರುವುದಿಲ್ಲ ಎಂದು ನೆಪ ಹೇಳುವ ಟೀಚರ್‌ಗಳೇ ಹೆಚ್ಚು. ವಿದ್ಯಾರ್ಥಿಗಳು ಲೈಂಗಿಕತೆ ಬಗ್ಗೆ ಪ್ರಶ್ನೆ ಮಾಡಿದರೇ ಮೂಗು ಮುರಿಯುವ ಶಿಕ್ಷಕರಿರುವ ಈ ಸಮಯದಲ್ಲಿ ಇಂತಹ ಸಿನಿಮಾಗಳು ಯುವಜನತೆಯಲ್ಲಿ ಜಾಗೃತಿ ಮೂಡಿಸಬಲ್ಲವು.
ಸೂಕ್ಷ್ಮ ವಿಷಯದ ಸುತ್ತಾ ಕಥೆ ಸುತ್ತುತಿದ್ದರೂ ನಿಮಗೆ ಬೇಸರವಾಗದಿರಲೂ ಅಲ್ಲಲ್ಲಿ ಪಂಕಜ್ ತ್ರಿಪಾಠಿ ಅವರ ಸಂಭಾಷಣೆಗಳು ನಗು ಉಕ್ಕಿಸುತ್ತದೆ. ನಾಯಕ ಇಂಗ್ಲಿಷ್‌ನ ಪದಗಳನ್ನು ಉಚ್ಛರಿಸುವಾಗ, ಹಳೆಯ ಹಿಂದಿ, ಸಂಸ್ಕೃತ ಪದಗಳ ಅರ್ಥ ತಿಳಿಯದೇ ಜಡ್ಜ್ ಮುಖ ಮುಖ ನೋಡಿಕೊಳ್ಳುವುದು ಎಲ್ಲವೂ ನಗು ಬರಿಸಲಿದೆ. ಹಳೆಯ ಓಎಂಜಿಯಲ್ಲಿ ಕೋರ್ಟ್ ರೂಂ ಡ್ರಾಮಾ ಹೆಚ್ಚು ಕಚಗುಳಿ ಇಟ್ಟಿತ್ತು. ಆದರೆ ಇದರಲ್ಲಿ ಅದು ಕಾಣೆಯಾಗಿದೆ. ಅದು ಸಿನಿಮಾ ಕಥೆಯ ಕಾರಣಕ್ಕೆ.
ಕೊನೆ ಮಾತು!
ಸಿನಿಮಾಗೆ ಎ ಪ್ರಮಾಣಪತ್ರ ನೀಡಿರುವುದು ಯಾಕೆ ಎಂಬುದು ಎಲ್ಲಿಯೂ ತಿಳಿಯುವುದಿಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ. ಮನೆ ಮಂದಿಯೆಲ್ಲಾ ಕುಳಿತು ಮುಜುಗುರವಿಲ್ಲದೆ ಸಿನಿಮಾ ನೋಡಬಹುದು. ಅದರಲ್ಲೂ ಯುವಜನತೆಗೆ, ಪೋಷಕರಿಗೆ, ಶಿಕ್ಷಣ ಸಂಸ್ಥೆಗಳು ನೋಡಲೇಬೇಕಾದ ಸಿನಿಮಾ. ಇಂತಹ ಕಥೆಯನ್ನು ಮುಖ್ಯವಾಹಿನಿಯ ಮಾಧ್ಯಮಕ್ಕೆ ತರಲು ಯತ್ನಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಸೂಚಿಸಲೇಬೇಕು.


Click it and Unblock the Notifications











