Ondh Kathe Hella Review : ಹಾರರ್ ಪ್ರಿಯರಿಗೆ ಆಪ್ತವಾಗುವ ಸಿನಿಮಾ
ಕನ್ನಡದಲ್ಲಿ ಹಾರರ್ ಸಿನಿಮಾಗಳ ಟ್ರೆಂಡ್ ಕಡಿಮೆಯಾಗಿರುವ ಈ ಸಮಯದಲ್ಲಿ ಒಂದೊಳ್ಳೆ ಹಾರರ್ ಚಿತ್ರ ಬಂದಿದೆ ಅದೇ 'ಒಂದ್ ಕಥೆ ಹೇಳ್ಲಾ' ಸಿನಿಮಾ. ಒಂದು ಕಥೆಯಿಂದ ಶುರುವಾಗುವ ಈ ಸಿನಿಮಾದಲ್ಲಿ ಐದು ಕಥೆಗಳು ಬರುತ್ತದೆ. ಎಲ್ಲ ಕಥೆಗಳು ಥ್ರಿಲ್ಲಿಂಗ್ ಆಗಿವೆ. ಚಿತ್ರಮಂದಿರಕ್ಕೆ ಹೋದವರಿಗೆ ನಿರಾಸೆ ಮಾಡದೆ ಕಳುಹಿಸುವ ಈ ಚಿತ್ರ ಒಂದು ಭರವಸೆಯ ಸಿನಿಮಾ.
ಐದು ಗೆಳೆಯರು, ಐದು ಕಥೆಗಳು
ಬೆಂಗಳೂರಿನಿಂದ ಐದು ಸ್ನೇಹಿತರು ಅದರಲ್ಲಿ ಮೂವರು ಹುಡುಗರು, ಇಬ್ಬರು ಹುಡುಗಿಯರು ಕಾರ್ ನಲ್ಲಿ ಹೊರಡುತ್ತಾರೆ. ದೂರದ ಹೋಮ್ ಸ್ಟೇಗೆ ಪ್ರಯಾಣ ಬೆಳೆಸುವ ಇವರು ಒಂದರ ನಂತರ ಒಂದರಂತೆ ಕಥೆ ಹೇಳಲು ಶುರು ಮಾಡುತ್ತಾರೆ. ತಾವು ಕೇಳಿದ ನಿಜ ಜೀವನದ ಭೂತದ ಕಥೆಗಳನ್ನು ಹೇಳುತ್ತ ಇವರ ಜರ್ನಿ ಮುಂದುವರೆಯುತ್ತದೆ. ತಾವು ತಮ್ಮ ಪ್ರಯಾಣದಲ್ಲಿ ಹೇಳಿದ ಕಥೆಗಳ ಅನುಭವ ತಮಗೇ ಆದರೆ ಅವರ ಪರಿಸ್ಥಿತಿ ಹೇಗಿರುತ್ತದೆ. ಎನ್ನುವುದೇ ಈ ಸಿನಿಮಾ.
ಉಪಕಥೆಗಳೆ ಚಿತ್ರದ ಶಕ್ತಿ
ಸಿನಿಮಾದಲ್ಲಿ ಬರುವ ಐದು ಉಪಕಥೆಗಳೆ ಅದರ ಶಕ್ತಿಗಳು. ಆ ಐದೂ ಕಥೆಗಳ ನಿರೂಪಣೆ ಚೆನ್ನಾಗಿದೆ. ಬಹುಪಾಲು ಎಲ್ಲ ಹೊಸ ಕಲಾವಿದರೇ ಇಲ್ಲಿ ನಟಿಸಿದ್ದು, ಎಲ್ಲರ ಅಭಿನಯದ ಚೆನ್ನಾಗಿದೆ. ಮುಖ್ಯವಾಗಿ ಗೋವಿಂದನ ಪಾತ್ರ ಮಾಡಿದ್ದ ಕಾರ್ತಿಕ್ ರಾವ್ ನಟನೆ ಸಿನಿಮಾದ ಆಕರ್ಷಣೆಯಲ್ಲಿ ಒಂದು. ಸಣ್ಣ ಪಾತ್ರವಾದರೂ ಕಥೆಗೆ ಆ ಪಾತ್ರ ನೀಡುವ ತಿರುವು ದೊಡ್ಡದು.
ಸಿನಿಮಾದಲ್ಲಿ ಹೀರೋ ಇಲ್ಲ
ಕೆಲವು ಚಿತ್ರತಂಡಗಳು ನಮ್ಮ ಸಿನಿಮಾದಲ್ಲಿ ಹೀರೋ ಇಲ್ಲ, ಕಥೆಯೇ ಹೀರೋ ಎನ್ನುವ ಕಾಮನ್ ಡೈಲಾಗ್ ಹೇಳುವುದನ್ನು ನೀವು ಕೇಳಿರುತ್ತಿರಾ. ಆದರೆ, ಈ ಸಿನಿಮಾದಲ್ಲಿ ನಿಜಕ್ಕೂ ಹೀರೋ ಅಂತ ಯಾರೋ ಒಬ್ಬರಿಲ್ಲ. ಚಿತ್ರದ ಮುಖ್ಯ ಕಥೆ ಹಾಗೂ ಉಪಕಥೆಗಳಲ್ಲಿ ಬರುವ ಎಲ್ಲ ಪಾತ್ರಗಳು ಪ್ರಧಾನವಾಗಿದೆ. ಕಥೆಯ ನಿರೂಪಣೆಯೇ ಇಲ್ಲಿ ಹೀರೋ ಆಗಿದೆ.
ಹಾಗೆಯೇ ಉಳಿಯುವ ಪ್ರಶ್ನೆ
ದೆವ್ವ ಇದ್ಯಾ.. ಇಲ್ವಾ? ಎನ್ನುವುದು ಉತ್ತರ ಸಿಗದ ಪ್ರಶ್ನೆ. ಅದೇ ರೀತಿ ಸಿನಿಮಾದಲ್ಲಿ ಬರುವ ಭೂತಚೇಷ್ಟೆ ಕೂಡ ನಿಜವೋ ಸುಳ್ಳೊ ಎನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಸಿನಿಮಾದ ಪ್ರಾರಂಭದಲ್ಲಿ ಶುರು ಆಗುವ ಪ್ರಶ್ನೆ ಸಿನಿಮಾ ಮುಗಿದರೂ ಹಾಗೆಯೇ ಉಳಿದು ಬಿಡುತ್ತದೆ. ಇಲ್ಲಿ ನಡೆಯುವ ಘಟನೆಗಳು ಸತ್ಯನೋ.. ಸಳ್ಳೋ ಗೊತ್ತಾಗುವುದಿಲ್ಲ.
ಟೆಕ್ನಿಕಲ್ ಆಗಿ ಸೂಪರ್
ಸಿನಿಮಾ ಟೆಕ್ನಿಕಲ್ ಆಗಿ ಸೂಪರ್ ಆಗಿದೆ. ವಿಶೇಷವಾಗಿ ಕ್ಯಾಮರಾ ಹಾಗೂ ಹಿನ್ನಲೆ ಸಂಗೀತ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ರೋಣದ ಬಕ್ಕೇಶ್ ಮ್ಯೂಸಿಕ್, ಪ್ರತೀಕ್ ಎಡಿಟಿಂಗ್ ಹಾಗೂ ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್ ಕೆಲಸಕ್ಕೆ ದೊಡ್ಡ ಚಪ್ಪಾಳೆ ಬರಬೇಕು.
ತನ್ನ ಶೈಲಿಯ ನಿರ್ದೇಶನ
ಪ್ರತಿಯೊಬ್ಬ ನಿರ್ದೇಶಕರಿಗೆ ಒಂದೊಂದು ರೀತಿಯ ಸ್ಟೈಲ್ ಇರುತ್ತದೆ. ಅದೇ ರೀತಿ ಮೊದಲ ಸಿನಿಮಾದಲ್ಲಿಯೇ ಗಿರೀಶ್ ತಮ್ಮದೆ ಶೈಲಿಯಲ್ಲಿ ಕಥೆ ಹೇಳಿ ಗಮನ ಸೆಳೆದಿದ್ದಾರೆ. ತಮ್ಮ ಕಥೆಯನ್ನು ತೆರೆ ಮೇಲೆ ತಂದಿರುವ ರೀತಿ ತುಂಬ ಚೆನ್ನಾಗಿದೆ. ಗಿರೀಶ್ ಪ್ರತಿಭಾವಂತ ನಿರ್ದೇಶಕ ಎನ್ನುವುದನ್ನು ತೋರಿಸಿದ್ದಾರೆ. ನಿರ್ದೇಶನದ ಜೊತೆಗೆ ನರಸಿಂಹನ ಅವತಾರದಲ್ಲಿಯೂ ಮಿಂಚಿದ್ದಾರೆ.
ಹಾರರ್ ಪ್ರಿಯರು ನೋಡಬೇಕಾದ ಚಿತ್ರ
ಹಾರರ್ ಸಿನಿಮಾಗಳನ್ನು ಇಷ್ಟಪಡುವವರು ಈ ಸಿನಿಮಾವನ್ನು ನೋಡಿ. ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರಿಗೆ ಉಳಿಯುವ ಗೊಂದಲ ಸೇರಿದಂತೆ ಕೆಲ ಸಣ್ಣ ಪುಟ್ಟ ತಪ್ಪು ಬಿಟ್ಟರೆ ಸಿನಿಮಾ ಚೆನ್ನಾಗಿದೆ. ಟ್ರೇಲರ್ ನೋಡಿ ಇಷ್ಟ ಪಟ್ಟವರಿಗೆ ಸಿನಿಮಾ ಕೂಡ ಪಕ್ಕಾ ಇಷ್ಟ ಆಗುತ್ತದೆ.


Click it and Unblock the Notifications











