ಜಾನ್ ಅಬ್ರಾಹಂ ಅಭಿನಯದ 'ಪರಮಾಣು' ಚಿತ್ರದ ವಿಮರ್ಶೆ
1998ರಲ್ಲಿ ಭಾರತವು ಅಮೇರಿಕಾದ ಗೂಢಚಾರಕ ಉಪಗ್ರಹಗಳ ಕಣ್ಣಿಗೆ ಮಣ್ಣರೆಚಿ ಮೂರು ಅಣುಪರೀಕ್ಷೆ ನಡೆಸಿದ ಪೋಖ್ರಾನ್-2ದ ಘಟನೆಯೇ 'ಪರಮಾಣು' ಚಿತ್ರದ ಕಥಾವಸ್ತು. ಚಿತ್ರವೂ ನಿಜಘಟನೆಗಳ ಆಧಾರಿತವಾಗಿದ್ದರೂ, ನಿರ್ದೇಶಕ ಅಭಿಷೇಕ್ ಶರ್ಮಾ ಪ್ರೇಕ್ಷಕರಿಗೆ ರುಚಿಸಲೆಂದು ಸಾಕಷ್ಟು ಮಸಾಲೆ ಸೇರಿಸಿದ್ದಾರೆ.
ಭಾರತದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಪ್ರಾಮಾಣಿಕ ಅಧಿಕಾರಿ ಅಶ್ವಥ್ ರೈ (ಜಾನ್ ಅಬ್ರಾಹಂ) ಪ್ರಧಾನಮಂತ್ರಿಯನ್ನು ಅಣುಪರೀಕ್ಷೆಯ ಅವಶ್ಯಕತೆಯ ಕುರಿತು ಮನವರಿಕೆ ಮಾಡುವ ದೃಶ್ಯದಿಂದ ಚಿತ್ರವು ಪ್ರಾರಂಭವಾಗುತ್ತದೆ. ಆದ್ರೆ, ದುರದೃಷ್ಟವಶಾತ್ ಅವನ ಈ ಪ್ರಯತ್ನ ಅವನ ಮೇಲಾಧಿಕಾರಿಗಳಿಂದ ನಗೆಪಾಟಲಿಗೆ ಈಡಾಗುತ್ತದೆ. ಕಡೆಗೆ ವ್ಯವಸ್ಥೆಯ ಸಂಚಿಗೆ ಬಲಿಯಾಗಿ ಅಧಿಕಾರದಿಂದ ಅಮಾನತುಗೆ ಒಳಗಾಗುತ್ತಾನೆ. ತನ್ನ ಕುಟಂಬದವರ ಜೊತೆ ಹೊಸ ಬದುಕನ್ನರಸಿ ಮಸೂರಿಗೆ ಹೋಗುತ್ತಾನೆ.
3 ವರ್ಷದ ನಂತರ ಸರಕಾರ ಬದಲಾದಾಗ, ಅಶ್ವಥ್ ಮರಳಿ ಅಣುಪರೀಕ್ಷೆಯ ನೇತೃತ್ವ ವಹಿಸಲು ಕರೆಯಲ್ಪಡುತ್ತಾನೆ. ಅಮೇರಿಕಾ ಉಪಗ್ರಹದ ಹದ್ದಿನ ಕಣ್ಣು ಹಾಗೂ ಪಾಕಿಸ್ತಾನಿ ಗೂಢಚಾರಿಯ ದೃಷ್ಟಿಗೆ ಮಣ್ಣೆರೆಚಿ ,ಸಾಕಷ್ಟು ಸಂಶಯಗಳ ನಡುವೆ ಹೇಗೆ ಈ ಪರೀಕ್ಷೆ ಯಶಸ್ವಿಯಾಗುತ್ತದೆ ಎಂಬುದೆ ಚಿತ್ರದ ಕಥಾವಸ್ತು.

ಜಾನ್ ಅಬ್ರಾಹಂ ತನ್ನ ಸೀಮಿತ ಅಭಿನಯದಲ್ಲೇ ಚಾಪು ಮೂಡಿಸುತ್ತಾರೆ. ಚಿತ್ರದ ಕೊನೆ ಕೊನೆಗೆ ಅಶ್ವಥ್ ಪಾತ್ರ ಗೆಲ್ಲುತ್ತದೆ. ನಾವಿಕ ಅಧಿಕಾರಿಣಿಯಾಗಿ ಡಯಾನಾ ಪಿಂಟೆಯ ಪಾತ್ರ ನಿರಾಸೆ ಮೂಡಿಸುತ್ತದೆ. ಸಹಾಯಕ ಪಾತ್ರದಲ್ಲಿ ಬೊಮ್ಮನ್ ಇರಾನಿಯ ಪಾತ್ರ ಚಿತ್ರದ ಕತೆಗೆ ಪೂರಕವಾಗಿದೆ.

ಚಿತ್ರದ ಸಂಗೀತ ಸಪ್ಪೆಯಾಗಿದೆ ಮತ್ತು ಕಥೆಯ ಚಲನೆಗೆ ಪೂರಕವಾಗಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕಂದರೆ ಚಿತ್ರವೂ ತನ್ನ ಕಥಾವಸ್ತುವಿನಿಂದ ರೋಮಾಂಚಕಾರಿಯಾಗಿದ್ದರೂ , ಕಳಪೆ ನಿರೂಪಣೆಯಿಂದ ಪ್ರೇಕ್ಷಕರ ಮೇಲೆ ಪರಿಣಾಮಕಾರಿಯಾಗಿಲ್ಲ.


Click it and Unblock the Notifications











