»   » ಗಾನ-ನಾಟ್ಯ - ಲಯ ಧಾರೆಯ ‘ಪರ್ವ’ ನಾದೋನ್ಮಾದಗಳ ಬಿರುಗಾಳಿಗೆ ಸಿಲುಕಿ ಶಬ್ದಗಳ ಕುಣಿತವಾಯಿತೇಕೆ?

ಗಾನ-ನಾಟ್ಯ - ಲಯ ಧಾರೆಯ ‘ಪರ್ವ’ ನಾದೋನ್ಮಾದಗಳ ಬಿರುಗಾಳಿಗೆ ಸಿಲುಕಿ ಶಬ್ದಗಳ ಕುಣಿತವಾಯಿತೇಕೆ?

Posted By:
Subscribe to Filmibeat Kannada

ಚಿತ್ರ : ಪರ್ವನಿರ್ದೇಶನ : ಸುನಿಲ್‌ ಕುಮಾರ್‌ ದೇಸಾಯಿತಾರಾಗಣ : ಪ್ರೇಮ, ವಿಷ್ಣುವರ್ಧನ್‌, ರೋಜಾ, ಕೆರೆಮನೆ ಶಂಭು ಹೆಗಡೆ ಮತ್ತಿತರರು.
*ಚಿತ್ರಗುಪ್ತ

ನೀವು ಖ್ಯಾತ ಹರಿಕಥೆ ವಿದ್ವಾನ್‌ ಗುರುರಾಜುಲು ನಾಯ್ಡು ಅವರ ಹರಿಕಥೆ ಕೇಳಿದ್ದರೆ, ‘ಪರ್ವ’ ಚಿತ್ರ ನೋಡುವಾಗ ಅವರ ನೆನಪು ನಿಮಗೆ ಬಾರದಿರದು. ಕಾರಣ ಏನುಗೊತ್ತೆ. ಗುರುರಾಜುಲು ನಾಯ್ಡು ಅವರ ಹರಿಕಥೆಯಲ್ಲಿ ಉಪಕತೆಗಳು - ಹಾಡುಗಳು ಇರುವಂತೆ ಈ ಚಿತ್ರದುದ್ದಕ್ಕೂ ಫ್ಲಾಷ್‌ ಬ್ಯಾಕ್‌ ಮತ್ತು ಚಿತ್ರಗೀತೆಗಳಿವೆ. ಜೊತೆಗೊಂದಿಷ್ಟು ನೃತ್ಯ.

ಆದರೆ, ಹಂಸಗೀತೆ, ಸನಾದಿ ಅಪ್ಪಣ್ಣ, ಮಲಯಮಾರುತ, ಹೇಮಾವತಿಯೇ ಮೊದಲಾದ ಕೆಲವೇ ಕೆಲವು ಸಂಗೀತ ಪ್ರಧಾನ ಚಿತ್ರಗಳ ನಂತರ ಸಂಗೀತ- ನೃತ್ಯ ಪ್ರಧಾನವಾದ ಪರ್ವ ಗಾನ-ನಾಟ್ಯ ಪ್ರಿಯರಿಗೆ ಓಕೆ ಎನಿಸಿ, ‘ಸಂಗೀತ ಪರ್ವ’ ‘ನೃತ್ಯಪರ್ವ’ ಎನಿಸಿಕೊಳ್ಳುವ ಮಟ್ಟಿಗೆ ಸದಭಿರುಚಿಯ ಚಿತ್ರವೇ.

ಆದರೆ, ಚಿತ್ರಮಂದಿರದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು ಏನು ಗೊತ್ತೆ? ದೇಸಾಯರಿಗೆ ಹೀಗಾಗಬಾರದಾಗಿತ್ತು? , ಹಲವು ಉತ್ತಮ ಚಿತ್ರ ನಿರ್ದೇಶಿಸಿದ ದೇಸಾಯರಿಗೆ ಇದ್ದಕ್ಕಿದಂತೆ ಏನಾಯ್ತು? ಈ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.

ಒಟ್ಟಾರೆಯಾಗಿ ಗಾನ-ನಾಟ್ಯ ರಸ ಧಾರೆ ಹರಿಸುವ ಚಿತ್ರದಲ್ಲಿ ಸಂಗೀತ- ನೃತ್ಯವೇ ಬಂಡವಾಳ. ಅದುವೇ ಕ್ಲೈಮ್ಯಾಕ್ಸ್‌. 12 ನಿಮಿಷಗಳ ಹಾಡಲ್ಲಿ ಇದನ್ನು ಸೆರೆಹಿಡಿದಿರುವುದು ‘ಪರ್ವ’ದ ವಿಶೇಷ. ದೇಸಾಯರು ಪಾಶ್ಚಿಮಾತ್ಯ ಸಂಗೀತವನ್ನು ಶಾಸ್ತ್ರೀಯ ಸಂಗೀತದೊಂದಿಗೆ ಬೆಸೆಯುವ ಕಸರತ್ತೂ ಮಾಡಿದ್ದಾರೆ. ‘ಪರ್ವ’ ದಲ್ಲಿ ನಾಯಕ ಹಾಡುತ್ತಾನೆ, ಕುಣಿಯುತ್ತಾನೆ. ಡ್ರಮ್‌ ಬಾರಿಸುತ್ತಾನೆ, ಗಿಟಾರ್‌ ನುಡಿಸುತ್ತಾನೆ, ಕೊಳಲು ಊದುತ್ತಾನೆ...

ಅಂದರೆ ಅರ್ಥವಾಯಿತಲ್ಲ... ನಾಯಕ ಸಕಲ ಕಲಾ ವಲ್ಲಭ. ಪಾಶ್ಚಿಮಾತ್ಯ - ಶಾಸ್ತ್ರೀಯ ಸಂಗೀತಗಳ ವಿಶಾರದ. ಹಾಡುವುದನ್ನೇ ತನ್ನ ಬದುಕಾಗಿಸಿಕೊಂಡ ನಾಯಕ (ವಿಷ್ಣು), ತಾನು ಪ್ರೀತಿಸಿದ ಹುಡುಗಿ (ರೋಜಾ) ಕೈಕೊಟ್ಟಾಗ ಭಗ್ನ ಪ್ರೇಮಿ ಆಗ್ತಾನೆ. ಡ್ರಮ್‌, ಕೊಳಲು, ಗಿಟಾರ್‌ಗೆ ಗುಡ್‌ಬೈ ಹೇಳಿ ಬಾಟ್ಲಿ ಬಾಯ್‌ ಆಗ್ತಾನೆ. ಗುಂಡು ಹಾಕುತ್ತಾ ಓಲಾಡುತ್ತಾನೆ.

ಅಷ್ಟೊತ್ತಿಗೆ ದೇಸಾಯರು ಅತಿದೊಡ್ಡ ನಾಟ್ಯ ಕಲಾವಿದೆ ಎಂಬಂತೆ ಬಿಂಬಿಸಿರುವ ‘ಪ್ರೇಮಾ ’ ಹಾಗೂ ನೃತ್ಯವೆಂಬ ಚ್ಯವನಪ್ರಾಶ ನಾಯಕನಿಗೆ ಹೊಸ ಚೈತನ್ಯ ತುಂಬತ್ತೆ. ವಿಸ್ಕಿ ಬಾಟಲಿ ಕೈಜಾರಿ ಮೈಕ್‌ ಕೈಹಿಡಿಯತ್ತೆ. (ದೇಸಾಯರಿಗೆ ನಾಯಕನ ಪಾತ್ರ ಪೋಷಣೆಯಲ್ಲೇ ಸಾಕಷ್ಟು ಗೊಂದಲ ಇರುವುದು ಗೋಚರವಾಗತ್ತೆ. ಹಾಡಿನ ಚಿತ್ರೀಕರಣದಲ್ಲಿ ಬಳಸಲಾಗಿರುವ ಅದ್ಧೂರಿ ಸೆಟ್‌ಗಳ ಅಗತ್ಯವಿತ್ತೆ ಎಂಬ ಪ್ರಶ್ನೆಯೂ ಮೂಡತ್ತೆ)

ರಾಧಾರವಿಯೆಂಬ ವಿಲನ್‌ನಿಂದ ಪ್ರೇಮಾ ನೃತ್ಯ ಮಾಡುವುದನ್ನು ಬಿಡುವುದಲ್ಲದೆ, ನಾಯಕನ ಕಣ್ಣಿನಿಂದಲೂ ಕಣ್ಮರೆ ಆಕ್ತಾರೆ. ಈ ಮಧ್ಯೆ ನಾದೋನ್ಮಾದಗಳ ಬಿರುಗಾಳಿಯಲ್ಲಿ ಅದ್ಧೂರಿತನವೆಂಬ ಅಡೆತಡೆಗಳಿಗೆ ಡಿಕ್ಕಿ ಹೊಡೆವ ಕಥೆಯಲ್ಲಿ ಕೆಲವೊಮ್ಮೆ ತಾಳಮೇಳಗಳು ತಪ್ಪಿ ಶಬ್ದಗಳೇ ನಾಟ್ಯವಾಡುತ್ತವೆ. ಕೊನೆಯಲ್ಲಿ ಎಲ್ಲಾ ಗ್ರೂಪ್‌ ಫೋಟೋಗೆ ನಿಲ್ಲುವ ಕಾರಣ ಇದು ಸುಖಾಂತ್ಯ ಚಿತ್ರ ಎಂದು ಹೇಳುವ ಅಗತ್ಯ ಇಲ್ಲ ಬಿಡಿ.

ಹೇಳಿ ಕೇಳಿ ಮ್ಯೂಸಿಕಲ್‌ ಮನರಂಜನೆ ಎಂಬ ಹಣೆಪಟ್ಟಿ ಕಟ್ಟಿಕೊಂಡ ಚಿತ್ರದಲ್ಲಿ ಪ್ರೇಮ- ಸಂಗೀತ- ನಾಟ್ಯದ ಸಮಾಗಮದಲ್ಲಿ ಪ್ರೇಮಕಥಾನಕ ಹರಿಯುತ್ತದೆ. ಕಥೆಯನ್ನೂ ಗೀತೆಗಳೇ ಹೇಳುವುದು ಇಲ್ಲಿನ ಮತ್ತೊಂದು ವಿಶೇಷ. ಕೆರೆಮನೆ ಶಂಭು ಹೆಗಡೆ ಮಾತ್ರ ತಮಗೆ ಸಿಕ್ಕ ಪಾತ್ರದಲ್ಲಿ ಶಿಸ್ತುಬದ್ಧವಾಗಿ ನಟಿಸಿದ್ದಾರೆ. ಉದಿತ್‌ ನಾರಾಯಣ್‌ ಕನ್ನಡ ಹಾಡನ್ನು ಹಿಂದಿ ಶೈಲಿಯಲ್ಲಿ ಹಾಡಿದ್ದಾರೆ. ಹಂಸಲೇಖಾ ಕೂಡ ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ವೇಣು ಛಾಯಾಗ್ರಹಣ ಉತ್ತಮವಾಗಿದೆ. ಅದುವೆ ಚಿತ್ರದ ಪ್ಲಸ್‌ ಪಾಯಿಂಟ್‌. ಅಂದಹಾಗೆ ಶ್ರುತಿ, ಲಯ, ಸ್ವರ, ತಾಳಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿದ್ದರೆ, ಉತ್ತರ ಕಂಡುಕೊಳ್ಳಲು ಈ ಚಿತ್ರ ನೋಡಬಹುದು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada