»   » ದೇಸಾಯಿ ಗೊಂದಲದಲ್ಲಿದ್ದಾರೆಯೇ, ಹತಾಶರಾಗಿದ್ದಾರೆಯೇ, ತಮ್ಮ ಸುತ್ತು ಸುತ್ತಿಕೊಂಡ ನಿರೀಕ್ಷೆಗಳಿಂದ ಕಂಗಾಲಾಗಿದ್ದಾರೆಯೇ. ಇಂಥಾ ಹತ್ತಾರು ಪ್ರಶ್ನೆಗಳು ಪರ್ವ ನೋಡಿದ ಮೇಲೆ ಕಾಡುತ್ತವೆ. ಇದು ಪರ್ವ-ದ ಮತ್ತೊಂ-ದು ರಿವ್ಯೂ...

ದೇಸಾಯಿ ಗೊಂದಲದಲ್ಲಿದ್ದಾರೆಯೇ, ಹತಾಶರಾಗಿದ್ದಾರೆಯೇ, ತಮ್ಮ ಸುತ್ತು ಸುತ್ತಿಕೊಂಡ ನಿರೀಕ್ಷೆಗಳಿಂದ ಕಂಗಾಲಾಗಿದ್ದಾರೆಯೇ. ಇಂಥಾ ಹತ್ತಾರು ಪ್ರಶ್ನೆಗಳು ಪರ್ವ ನೋಡಿದ ಮೇಲೆ ಕಾಡುತ್ತವೆ. ಇದು ಪರ್ವ-ದ ಮತ್ತೊಂ-ದು ರಿವ್ಯೂ...

Subscribe to Filmibeat Kannada

ಚಿತ್ರ : ಪರ್ವನಿರ್ದೇಶನ : ಸುನಿಲ್‌ ಕುಮಾರ್‌ ದೇಸಾಯಿತಾರಾಗಣ : ಪ್ರೇಮ, ವಿಷ್ಣುವರ್ಧನ್‌, ರೋಜಾ, ಕೆರೆಮನೆ ಶಂಭು ಹೆಗಡೆ ಮತ್ತಿತರರು.
* ನಾರಾಯಣ ಶಾಸ್ತ್ರೀ, ದೊಡ್ಡಬಳ್ಳಾಪುರ

ಛೇ.. ದೇಸಾಯಿ ಮತ್ತೆ ಕೈಕೊಟ್ರು..

‘ಪರ್ವ’ ನೋಡಿದಾಕ್ಷಣ ಅಭಿಮಾನಿಯಾಬ್ಬ ಮಾಡಿದ ಈ ಕಾಮೆಂಟೇ ‘ಪರ್ವ’ಕ್ಕೆ ಒಳ್ಳೇ ವಿಮರ್ಶೆಯಾಗಬಹುದು. ನಿರೀಕ್ಷೆಗಳಿರುವುದೇ ಸುಳ್ಳಾಗುವುದಕ್ಕೆ ಅನ್ನೋದನ್ನು ದೇಸಾಯಿ ನಿಜ ಮಾಡಿದ್ದಾರೆ. ಮಕ್ಕಳ ಕೈಯಿಂದ ಅಕಸ್ಮಾತ್ತಾಗಿ ಜಾರಿ ಹೋಗುವ ಬಲೂನಿನಂತೆ ‘ಪರ್ವ’ ಚಿತ್ರ ದೇಸಾಯಿ ಕೈಯಿಂದ ಜಾರಿಹೋಗಿದೆ. ಸಂಗೀತ ಪರ್ವವಾಗಬೇಕಿದ್ದ ಚಿತ್ರ ದೃಶ್ಯಪರ್ವವಾಗಿದೆ. ಚಂದದಲ್ಲಿ ಸಿಂಗಾರಗೊಂಡ ಗುಡಿಯಾಳಗೆ ದೇವರೇ ಇಲ್ಲ. ಕಣ್ಣಿಗೆ ಕಟ್ಟುವ ಚಿತ್ರ ಮನಸ್ಸಿಗೆ ತಟ್ಟುವುದಿಲ್ಲ.

ತಪ್ಪಾಗಿದ್ದೆಲ್ಲಿ?

ಹಿಂದೊಮ್ಮೆ ದೇಸಾಯಿಗೆ ಸಂಗೀತಜ್ಞಾನವಿಲ್ಲ ಅನ್ನುವ ಕಾಮೆಂಟ್‌ ಬಂದಿತ್ತು. ಅದು ‘ಬೆಳದಿಂಗಳಬಾಲೆ’ ಚಿತ್ರ ಹೊರಬಂದ ಸಂದರ್ಭ. ಮಿಕ್ಕಂತೆ ಅದ್ಭುತವಾಗಿದ್ದ ಆ ಚಿತ್ರದಲ್ಲಿ ಸಂಗೀತ ಮಾತ್ರ ದುರ್ಬಲವಾಗಿತ್ತು. ಈ ಟೀಕೆಯನ್ನು ಸುಳ್ಳು ಮಾಡುವ ಹಠದಲ್ಲಿ ದೇಸಾಯಿ ‘ನಮ್ಮೂರ ಮಂದಾರ ಹೂವೆ’ ಚಿತ್ರವನ್ನು ಮಧುರಗೀತೆಗಳಿಂದ ಅಲಂಕರಿಸಿದರು. ಆದರೆ ಪರ್ವ ಸಂಪೂರ್ಣ ಸಂಗೀತಮಯ ಚಿತ್ರ. ಇದು ದೊಡ್ಡ ರಿಸ್ಕ್‌. ಶಾಸ್ತ್ರೀಯ ಸಂಗೀತವನ್ನು ಅರೆದು ಕುಡಿದಿರುವ ಸಂಗೀತ ನಿರ್ದೇಶಕನ ನೆರವಿದ್ದರೆ ದೇಸಾಯಿ ಗೆಲ್ಲುವ ಸಾಧ್ಯತೆಯಿತ್ತೇನೋ. ಉದಾಹರಣೆಗೆ ವಿಜಯಭಾಸ್ಕರ್‌. ಆದರೆ, ‘ಪರ್ವ’ ಚಿತ್ರ ಹಂಸಲೇಖಾ ಕೈಗೆ ಸಿಕ್ಕಿ ನರಳಿದೆ. ಕರ್ನಾಟಕ ಸಂಗೀತಕ್ಕೆ ಪಾಶ್ಚಾತ್ಯ ಸಂಗೀತವನ್ನು ಬೆರೆಸುವ ಪ್ರಯೋಗ (ಫ್ಯೂಷನ್‌) ದಯನೀಯವಾಗಿ ನೆಲಕಚ್ಚಿದೆ. ಸಿನಿಮಾ ಸಂಗೀತ ಬೇಡುವುದು ಮಾಧುರ್ಯವನ್ನೇ ಹೊರತಾಗಿ ಸಂಪ್ರದಾಯಬದ್ಧ ಸ್ವರ ಸಂಯೋಜನೆಯನ್ನಲ್ಲ ಅನ್ನೋದು ಮತ್ತೊಮ್ಮೆ ರುಜುವಾತಾಗಿದೆ. ‘ಪರ್ವ’ ಚಿತ್ರ ನೋಡಿದ ಬಳಿಕ ಒಂದೇ ಒಂದು ಹಾಡಾಗಲೀ, ಅದರ ರಾಗವಾಗಲೀ ನಿಮಗೆ ನೆನ ಪಾದರೆ ಅದು ಜಗತ್ತಿನ ಎಂಟನೇ ಅದ್ಭುತ! ಹಾಡುಗಳನ್ನು ಮರೆತುಬಿಡೋಣ. ಹಿನ್ನೆಲೆ ಸಂಗೀತದಲ್ಲಾದರೂ ಹಂಸಲೇಖಾ ಗೆದ್ದಿದ್ದಾರಾ? ಬಿಲ್‌ಕುಲ್‌ ಇಲ್ಲ. ಡ್ರಮ್‌ ಮತ್ತು ತಮಟೆಗಳ ನಾದ ನಿಮ್ಮ ಕಿವಿತಮ್ಮಟೆಯನ್ನೇ ಒಡೆಯುವಂತಿದೆ.

ಸಂಗೀತಗಾರನ ಪಾತ್ರಕ್ಕೆ ವಿಷ್ಣುವರ್ಧನ್‌ ಅವರನ್ನು ಹಾಕಿಕೊಂಡಿದ್ದು ಇನ್ನೊಂದು ಪ್ರಮಾದ. ಸಂಗೀತಗಾರನಾಗಿ ವಿಷ್ಣು ಟ್ರಾಕ್‌ ರೆಕಾರ್ಡ್‌ ಚೆನ್ನಾಗಿಲ್ಲ. ಈ ಮಾತಿಗೆ ‘ಮಲಯಮಾರುತ’ ಚಿತ್ರದ ಉದಾಹರಣೆಯೇ ಸಾಕು. ‘ಪರ್ವ’ದಲ್ಲಿ ವಿಷ್ಣು ಪಾಪ್‌ ಸಂಗೀತಗಾರ, ಜೊತೆಗೆ ಕುಣಿಯುವ ಕೆಲಸ ಎಕ್ಸ್‌ಟ್ರಾ. ಭಾವಾಭಿನಯಕ್ಕೆ ಇರುವುದು ಎರಡೇ ಸನ್ನಿವೇಶಗಳು. ಹಾಗಾಗಿ ಸಂಗೀತಪ್ರಿಯರಿಗಾಗಲೀ ವಿಷ್ಣು ಪ್ರಿಯರಿಗಾಗಲೀ ಚಿತ್ರ ಇಷ್ಟವಾಗುವುದಿಲ್ಲ. ಪ್ರೇಮಾರನ್ನು ಭರತನಾಟ್ಯ ನೃತ್ಯಗಾರ್ತಿಯಾಗಿ ನೋಡುವುದು ಇನ್ನೊಂದು ಹಿಂಸೆ. ಚಿತ್ರದುದ್ದಕ್ಕೂ ವಿನಾಕಾರಣ ಥಕಥೈ ಎಂದು ಕುಣಿಯುವ ಪ್ರೇಮಾ ಬದಲಿಗೆ ಭರತನಾಟ್ಯ ಗೊತ್ತಿರುವ ಹುಡುಗಿಯನ್ನೇ ಈ ಪಾತ್ರಕ್ಕೆ ಹಾಕಿಕೊಳ್ಳಬಹುದಾಗಿತ್ತು. ಕ್ಲೈಮ್ಯಾಕ್ಸ್‌ನಲ್ಲಿ ಭರತನಾಟ್ಯ ತಜ್ಞೆ ಅಪರ್ಣ ವೈದ್ಯನಾಥನ್‌ ಮತ್ತು ಪ್ರೇಮಾ ನಡುವೆ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದು ದೇಸಾಯಿ ದುಸ್ಸಾಹಸಕ್ಕೆ ಇನ್ನೊಂದು ಉದಾಹರಣೆ. ನೃತ್ಯ-ದ ಮೇಸ್ಟ್ರ ಪಾತ್ರಕ್ಕೆ ಯಕ್ಷಗಾನ ಕಲಾವಿದ -ಕೆ-ರೆ-ಮ-ನೆ ಶಂಭುಹೆಗಡೆಯವರನ್ನು ಆಯ್ಕೆ ಮಾಡಿದ್ದು ಮತ್ತೊಂದು ತಪ್ಪು. ಅವರು ಅಬ್ಬರಿಸುತ್ತಾರೆ, ಕುಣಿದಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಿಂದಿ ಚಿತ್ರವೊಂದರ ವಿಲನ್‌ ಪಾತ್ರವಾಗಿ ಬಿಡುತ್ತಾರೆ.

ಕಾಳಿದಾಸನ ಪ್ರಕಾರ ಸಂಗೀತದಲ್ಲಿ ನೃತ್ಯವೂ ಒಳಗೊಂಡಿರುತ್ತದೆ. ಹಾಗಾಗಿ ಚಿತ್ರದ ಪಾತ್ರಗಳು ಹಾಡುತ್ತಾ ಕುಣಿಯುವುದನ್ನು ಕ್ಷಮಿಸಬಹುದು. ಆದರೆ, ಆ ನೃತ್ಯಪ್ರಕಾರ ಯಾವುದು ಅನ್ನೋದು ದೇಸಾಯಿ ಅವರಿಗಷ್ಟೇ ಗೊತ್ತು ! ಒಮ್ಮೆ ಬ್ಯಾಲೆ, ಮತ್ತೊಮ್ಮೆ ಕಂಸಾಳೆ, ಮಗದೊಮ್ಮೆ ಭರತನಾಟ್ಯ. ಈ ಮಧ್ಯೆ ಪ್ರೇಮಕತೆಯೂ ಹೀಗೆ ಬಂದು ಹಾಗೆ ಹೋಗುತ್ತದೆ. ಹುಡುಗಿ ಕೈಕೊಟ್ಟಳೆಂಬ ಬೇಜಾರಿಗೆ ನಾಯಕ ಹಾಡುವುದನ್ನು ನಿಲ್ಲಿಸಿ ಕುಡಿಯೋದಕ್ಕೆ ಶುರುಮಾಡುತ್ತಾನೆ. ಮತ್ತೊಬ್ಬ ನೃತ್ಯಗಾರ್ತಿ ಸಿಕ್ಕಳು ಅನ್ನೋ ಸಂತೋಷಕ್ಕೆ ಮತ್ತೆ ಹಾಡುವುದಕ್ಕೆ ಶುರುಮಾಡುತ್ತಾನೆ. ಅವಳನ್ನು ವಿನಾಕಾರಣ ಕಾಡುವ ಮತ್ತೊಬ್ಬ ಸಂಗೀತಗಾರನ ಜೊತೆ ಜಗಳಕಾಯುತ್ತಾನೆ. ಗಾಯನ ಸ್ಪರ್ಧೆಯಲ್ಲಿ ಅವನನ್ನು ಸೋಲಿಸುತ್ತಾನೆ. ಅದುವೇ ಕ್ಲೈಮ್ಯಾಕ್ಸ್‌. ಇದಕ್ಕೂ ಮುಂಚೆ ಏಳು ಫ್ಲಾಷ್‌ಬ್ಯಾಕ್‌ಗಳು ಬಂದು ಹೋಗುತ್ತವೆ. ಹದಿನಾಲ್ಕು ಹಾಡಿನ ತುಣುಕುಗಳು ಬಂದು ಹೋಗುತ್ತವೆ. ಆರು ಸಂಗೀತಗಾರರು ನಾಯಕನ ಸುತ್ತಾ ಕುಣಿದು ಹೋಗುತ್ತಾರೆ. ರೋಜಾ ಬ್ಯಾಲೆ, ಪ್ರೇಮನೃತ್ಯ, ಶಂಭುಹೆಗಡೆಯ ನವರಸಗಳು, ರಾಧಾರವಿಯ ಹೂಂಕಾರ, ಅಪರ್ಣ ವೈದ್ಯನಾಥನ್‌ ಗೆಜ್ಜೆನಾದ, ಇವೆಲ್ಲದಕ್ಕೆ ಸಾಕ್ಷಿಯಾಗಿರುವ ವಿಷ್ಣುವರ್ಧನ್‌ ಆಗಾಗ ಸ್ವಗತ ಚಕ್ರವರ್ತಿಯಾಗುತ್ತಾರೆ. ಮತ್ತೊಮ್ಮೆ ತಾನೇನು ಮಾಡಬೇಕು ಅನ್ನೋದು ಗೊತ್ತಾಗದೆ ಸ್ಟೇಜ್‌ನಲ್ಲಿ ಗಿಟಾರ್‌ ಹಿಡಿದುಕೊಂಡು ಅತ್ತಿತ್ತ ಓಡಾಡುತ್ತಾರೆ. ಇದಪ್ಪಾ ಚಾನ್ಸ್‌ ಅಂತ ಹಂಸಲೇಖಾ ಕೈಗೆ ಸಿಕ್ಕ ವಾದ್ಯೋಪಕರಣಗಳನ್ನೆಲ್ಲಾ ಬಾರಿಸುತ್ತಾರೆ.

ಇಂತಿಪ್ಪ ‘ಪರ್ವ’ದಲ್ಲಿ ನೀವು ನೋಡಬೇಕಾದ ಐಟಂ ಅಂದರೆ ವೇಣು ಛಾಯಾಗ್ರಹಣ. ಕಿಕ್ಕಿರಿದ ತೆರೆಯನ್ನು ಅವರು ಒಂದಿನಿತೂ ಗೊಂದಲವಿಲ್ಲದಂತೆ ಸೆರೆಹಿಡಿಯುತ್ತಾರೆ. ಅರುಣ್‌ ಕಲಾ ನಿರ್ದೇಶನದಲ್ಲಿ ಮೂಡಿದ ಭವ್ಯಸೆಟ್‌ಗಳೂ ವೇಣು ಕೌಶಲಕ್ಕೆ ಸಾಂಗತ್ಯ ಒದಗಿಸುತ್ತವೆ. ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ಅನ್ನುವುದೇ ಅವರ ತತ್ವವಾಗಿರಬಹುದು.

ದೇಸಾಯಿ ಗೊಂದಲದಲ್ಲಿದ್ದಾರೆಯೇ, ಹತಾಶರಾಗಿದ್ದಾರೆಯೇ, ತಮ್ಮ ಸುತ್ತು ಸುತ್ತಿಕೊಂಡ ನಿರೀಕ್ಷೆಗಳಿಂದ ಕಂಗಾಲಾಗಿದ್ದಾರೆಯೇ. ಇಂಥಾ ಹತ್ತಾರು ಪ್ರಶ್ನೆಗಳು ಪರ್ವ ನೋಡಿದ ಮೇಲೆ ಕಾಡುತ್ತವೆ. ರೀಮೇಕು ಯುಗದ ನಡುವೆ ಸ್ವಮೇಕು ಪರ್ವ ಶುರುವಾಗುತ್ತಿದೆ ಎಂದು ಸಂತೋಷ ಪಡುವವರಿಗೆ ‘ಪರ್ವ’ ಒಂದು ಸಣ್ಣ ಶಾಕ್‌ ನೀಡುತ್ತದೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada