Hari Hara Veera Mallu review; ಪವನ್ 'ಹರಿಹರ ವೀರಮಲ್ಲು' ಕಂಪ್ಲೀಟ್ ರಿವ್ಯೂ
ಪವರ್ ಸ್ಟಾರ್ ಪವನ್ ಕಲ್ಯಾಣ್ ಬಹಳ ವರ್ಷಗಳ ಬಳಿಕ ಬೆಳ್ಳಿ ಪರದೆ ಮೇಲೆ ಬಂದಿದ್ದಾರೆ. ಅದು ಕೂಡ ಪ್ರಪಂಚ 'ವೀರಮಲ್ಲು' ಅವತಾರದಲ್ಲಿ. ರಾಜಕೀಯರಂಗದಲ್ಲಿ ಕಳೆದು ಹೋಗಿದ್ದ ಪವನ್ ನಿಂತು ಹೋಗಿದ್ದ ಸಿನಿಮಾ ಮುಗಿಸಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಐತಿಹಾಸಿಕ ಕಥಾಹಂದರ ಈ ಕಾಲ್ಪನಿಕ ಕಥೆಯಲ್ಲಿ ಭಾರೀ ಸಾಹಸಗಾಥೆ ಪ್ರದರ್ಶಿಸಿದ್ದಾರೆ.
ಕ್ರಿಶ್ ಹಾಗೂ ಜ್ಯೋತಿಕೃಷ್ಣ 'ಹರಿಹರ ವೀರಮಲ್ಲು' ಸಿನಿಮಾ ನಿರ್ದೇಶನ ಮಾಡಿದ್ದಾರೆ. 5 ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಅಂತೂ ಇಂತೂ ತೆರೆಗೆ ಬಂದಿದೆ. ಪವನ್ ಕಲ್ಯಾಣ್ ಕೂಡ ಚಿತ್ರಕ್ಕಾಗಿ ಭಾರೀ ಪ್ರಚಾರ ಮಾಡಿದ್ದರು. ಹಾಗಾಗಿ ನಿರೀಕ್ಷೆ ಹೆಚ್ಚಾಗಿತ್ತು. ಪೋಸ್ಟರ್, ಟೀಸರ್ ಎಲ್ಲವೂ ನಿರಾಸೆ ಮೂಡಿಸಿತ್ತು. ಟ್ರೈಲರ್‌ನಿಂದ ಸಿನಿಮಾ ಬಗ್ಗೆ ಕೊಂಚ ಹೈಪ್ ಕ್ರಿಯೇಟ್ ಆಗಿತ್ತು. ಹಾಗಾಗಿ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ.

ಇಂದು (ಜುಲೈ 24) ವಿಶ್ವದಾದ್ಯಂತ 'ಹರಿಹರ ವೀರಮಲ್ಲು' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬೆಳ್ಳಂ ಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಆದರೆ ಒಂದು ದಿನ ಮೊದಲೇ ಅಂದ್ರೆ ನಿನ್ನೆ ರಾತ್ರಿಯೇ ಅಭಿಮಾನಿಗಳಿಗಾಗಿ ಪ್ರೀಮಿಯರ್ ಶೋಗಳು ಏರ್ಪಡಿಸಲಾಗಿತ್ತು. ಕರ್ನಾಟಕದಲ್ಲಿ ಕೂಡ ಸಿನಿಮಾ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ರಿವ್ಯೂ ರಿಪೋರ್ಟ್ ಮುಂದೆ ಓದಿ.
'ಹರಿಹರ ವೀರಮಲ್ಲು' ಕಥೆ
16ನೇ ಶತಮಾನದಲ್ಲಿ ಸಿನಿಮಾ ಕಥೆ ಸಾಗುತ್ತದೆ. ಮೊಘಲರ ಆಳ್ವಿಕೆಯಲ್ಲಿ ಭಾರತೀಯರು ಸಂಕಷ್ಟ ಎದುರಿಸುತ್ತಿದ್ದ ಸಮಯ. ಔರಂಗಜೇಬ್(ಬಾಬಿ ಡಿಯೋಲ್) ದಬ್ಬಾಳಿಕೆ ಮಿತಿ ಮೀರಿರುತ್ತದೆ. ಬಲವಂತದಿಂದ ಮತಾಂತರ ಮಾಡುತ್ತಿರುತ್ತಾರೆ. ಒಪ್ಪದವರ ಮೇಲೆ ಜಿಜಿಯಾ ತೆರಿಗೆ ಹಾಕುತ್ತಿರುತ್ತಾನೆ. ಇತ್ತ ಕೊಲ್ಲೂರು ಪ್ರಾಂತ್ಯದಲ್ಲಿ ಸಿಗುವ ಬಹಳ ಅಮೂಲ್ಯವಾದ ಕೊಹಿನೂರ್ ವಜ್ರವನ್ನು ಔರಂಗಜೇಬ್ ವಶಪಡಿಸಿಕೊಳ್ಳುತ್ತಾನೆ.
ರಾಬಿನ್ ಹುಡ್ ಮಾದರಿಯ ಕಳ್ಳ ವೀರಮಲ್ಲು(ಪವನ್ ಕಲ್ಯಾಣ್). ವಜ್ರಗಳನ್ನು ಕದಿಯುವುದು ಅವನ ಕೆಲಸ. ಉಳ್ಳವರ ಬಳಿ ಕದ್ದು ಇಲ್ಲದವರಿಗೆ ಕೊಡುತ್ತಿರುತ್ತಾನೆ. ವೀರಮಲ್ಲು ಶಕ್ತಿ ಸಾಮರ್ಥ್ಯ ಗೋಲ್ಕೊಂಡದ ದೊರೆ ಕುತುಬ್ ಷಾ (ದಲಿಪ್ ತಾಹಿಲ್)ಗೆ ಗೊತ್ತಾಗುತ್ತದೆ. ಆತನನ್ನು ಕರೆಸಿ ಕೊಹಿನೂರ್ ವಜ್ರ ತಂದುಕೊಡುವ ಕೆಲಸ ವಹಿಸುತ್ತಾನೆ. ಇದನ್ನು ವೀರಮಲ್ಲು ಒಪ್ಪಿಕೊಳ್ಳುವುದು ಯಾಕೆ? ಅದಕ್ಕಾಗಿ ಆತ ಹಾಕುವ ಷರತ್ತು ಏನು? ಕೊಹಿನೂರ್ ವಜ್ರಕ್ಕಾಗಿ ಹೈದರಾಬಾದ್‌ನಿಂದ ದೆಹಲಿಗೆ ಹೊರಡುವ ವೀರಮಲ್ಲು ಈ ಪ್ರಯತ್ನದಲ್ಲಿ ಯಶಸ್ವಿ ಆಗುತ್ತಾನಾ? ಈ ಹಾದಿಯಲ್ಲಿ ಎದುರಾಗುವ ಪಂಚಮಿ(ನಿಧಿ ಅಗರ್‌ವಾಲ್) ಯಾರು? ಎನ್ನುವುದು ಇನ್ನುಳಿದ ಕಥೆ.
ಸಿನಿಮಾ ಹೇಗಿದೆ?
'ಹರಿಹರ ವೀರಮಲ್ಲು' ನೈಜ ಕಥೆ ಅಲ್ಲ. ಮೊಘಲರ ಆಳ್ವಿಕೆ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿರುವ ಒಂದು ಕಾಲ್ಪನಿಕ ಕಥೆ. ಈ ವಿಚಾರವನ್ನು ಸ್ವತಃ ಪವನ್ ಕಲ್ಯಾಣ್ ಹೇಳಿದ್ದಾರೆ. ಇತ್ತೀಚೆಗೆ ಇಂತಹ ಪ್ರಯತ್ನಗಳು ನಡೆಯುತ್ತಿದೆ. ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮುರಂ ಭೀಮ್ ಎಂಬ ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆಯಲ್ಲಿ ರಾಜಮೌಳಿ 'RRR' ಸಿನಿಮಾ ಕಟ್ಟಿಕೊಟ್ಟಿದ್ದು ಗೊತ್ತೇಯಿದೆ. ಅದೇ ರೀತಿ ಇಲ್ಲಿ ಕೂಡ ಒಂದು ಕಾಲ್ಪನಿಕ ಕಥೆ ಇದೆ. ಆದರೆ ಅದನ್ನು ಇತಿಹಾಸದ ಪಾತ್ರಗಳ ಜೊತೆಗೆ ಸಮೀಕರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಲಾಗಿದೆ.
ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ಪರಿ ಚೆನ್ನಾಗಿದೆ. ಆದರೆ ಅದನ್ನು ಚಿತ್ರಕಥೆ ಮಾಡಿ ಸಿನಿಮಾ ರೂಪಕ್ಕೆ ಇಳಿಸುವಲ್ಲಿ ಚಿತ್ರತಂಡ ಸೋತಿದೆ. ಬರೀ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪವನ್ ಇದೇ ಮೊದಲ ಬಾರಿಗೆ ಇಡೀ ಸಿನಿಮಾ ಐತಿಹಾಸಿಕ ಹೋರಾಟಗಾರನ ಪಾತ್ರದಲ್ಲಿ ಮಿಂಚಿದ್ದಾರೆ. ಕಾಸ್ಟ್ಯೂಮ್ ಡ್ರಾಮಾವನ್ನು ಬಹಳ ದೊಡ್ಡದಾಗಿ ತೆರೆಗೆ ತರುವ ಪ್ರಯತ್ನ ನಡೆದಿದೆ. ಆದರೆ ಇದರಲ್ಲಿ ಸಂಪೂರ್ಣವಾಗಿ ಚಿತ್ರತಂಡ ಗೆದ್ದಿಲ್ಲ. ನಿರ್ದೇಶಕರು ಬದಲಾಗಿದ್ದು ಪವನ್ ಕಲ್ಯಾಣ್ ರಾಜಕೀಯರಂಗದತ್ತ ಮುಖ ಮಾಡಿ ಸರಿಯಾಗಿ ಚಿತ್ರೀಕರಣದಲ್ಲಿ ಭಾಗಿ ಆಗದೇ ಇದ್ದಿದ್ದು 5 ವರ್ಷಗಳ ಕಾಲ ಸಿನಿಮಾ ನಿರ್ಮಾಣವಾಗಿದ್ದು ಎಲ್ಲವೂ ಚಿತ್ರಕ್ಕೆ ಹಿನ್ನಡೆ ತಂದಿದೆ.
ಸಾಕಷ್ಟು ಕಡೆಗಳಲ್ಲಿ ಪವನ್ ಕಲ್ಯಾನ್ ಬದಲು ಡ್ಯೂಪ್ ಬಳಸಿ ಚಿತ್ರೀಕರಣ ನಡೆಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಫಸ್ಟ್ ಹಾಫ್ ಓಕೆ ಓಕೆ ಎನಿಸಿದರೂ ಸೆಕೆಂಡ್ ಹಾಫ್ ನಿರಾಸೆ ಮೂಡಿಸುತ್ತದೆ. ವಿಎಫ್‌ಎಕ್ಸ್ ಚಿತ್ರದ ದೊಡ್ಡ ಲೋಪ ಎಂದೇ ಹೇಳಬೇಕು. ಇತ್ತೀಚಿನ ದಿನಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಇದಕ್ಕಿಂತ ಒಳ್ಳೆ ವಿಎಫ್‌ಎಕ್ಸ್ ನೋಡಬಹುದು. ಆದರೆ 'ಹರಿಹರ ವೀರಮಲ್ಲು' ಸಿನಿಮಾ ಗ್ರಾಫಿಕ್ಸ್ ಬೇಸರ ಮೂಡಿಸುತ್ತದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರದ ದೊಡ್ಡ ಬಲ. ಸಾಕಷ್ಟು ಸನ್ನಿವೇಶಗಳನ್ನು ತಮ್ಮ ಸಂಗೀತದಿಂದ ಮೇಲುತ್ತುವ ಪ್ರಯತ್ನ ಮಾಡಿದ್ದಾರೆ.
ಸೆಕೆಂಡ್ ಹಾಫ್‌ನಲ್ಲಿ ಬರುವ ಆಕ್ಷನ್ ಸನ್ನಿವೇಶಗಳು ಬಹಳ ಪೇಲವವಾಗಿದೆ.ಡಬ್ಬಿಂಗ್ ಕೂಡ ಅಲ್ಲಲ್ಲಿ ಕೈ ಕೊಟ್ಟಿದೆ. ಕಲಾವಿದರ ತುಟಿ ಚಲನೆಗೂ ವಾಯ್ಸ್‌ಗೂ ಸಿಂಕ್ ಆಗುವುದಿಲ್ಲ. ಫಸ್ಟ್ ಹಾಫ್ ನೋಡಿ ವಾರೆವ್ಹಾ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಂತೆ ಸೆಕೆಂಡ್ ಹಾಫ್ ನೋಡಿ ಮುಖ ಬಾಡುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ನಿರಾಸೆ ಮೂಡಿಸುತ್ತದೆ. ಆರಂಭದಲ್ಲಿ ಬಂದರಿನಲ್ಲಿ ಬರುವ ಸಾಹಸ ಸನ್ನಿವೇಶ ಮಜಾ ಕೊಡುತ್ತದೆ. ಇಡೀ ಸಿನಿಮಾ ನಿರ್ದೇಶಕ ಕ್ರಿಶ್ ನಿರ್ದೇಶನ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಕೆಲ ಭಿನ್ನಾಭಿಪ್ರಾಯಗಳಿಂದ ಕ್ರಿಶ್ ಅರ್ಧಕ್ಕೆ ಹೊರಬಂದು ಜ್ಯೋತಿಕೃಷ್ಣ ಸಿನಿಮಾ ಪೂರ್ತಿಗೊಳಿಸಿದ್ದರು.
ಕಲಾವಿದರ ಅಭಿನಯ
5 ವರ್ಷಗಳ ಕಾಲ ಸಿನಿಮಾ ಚಿತ್ರೀಕರಣ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಕಲಾವಿದರ ಲುಕ್ಸ್ ವಿಚಾರದಲ್ಲಿ ವ್ಯತ್ಯಾಸ ಕಾಣುತ್ತದೆ. ಪವನ್ ಕಲ್ಯಾಣ್ ನಟನೆ ವಿಚಾರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಲಿವೇಷನ್ ಶಾರ್ಟ್ಸ್‌ಗಳಲ್ಲೇ ಪವನ್ ಹೆಚ್ಚು ಅಬ್ಬರಿಸಿದ್ದಾರೆ. ಪವನ್ ಸ್ಟಾರ್ ತೆರೆಮೇಲೆ ಬಂದಾಗಲೆಲ್ಲಾ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುವಂತಿದೆ. ಮೊದಲೇ ಹೇಳಿದಂತೆ ಆಕ್ಷನ್ ಸನ್ನಿವೇಶಗಳಲ್ಲಿ ಡ್ಯೂಪ್ ಬಳಸಿರುವುದು ಬೇಸರ ಮೂಡಿಸುತ್ತದೆ. ಪಂಚಮಿ ಪಾತ್ರದಲ್ಲಿ ನಿಧಿ ಅಗರ್‌ವಾಲ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಆದರೆ ಒಂದು ಸಣ್ಣ ಟ್ವಿಸ್ಟ್‌ನಿಂದ ಆಕೆಯ ಪಾತ್ರ ಮನಸ್ಸಿನಲ್ಲಿ ಉಳಿಯುವಂತಾಗುತ್ತದೆ.
ಪವನ್ ಬಿಟ್ಟರೆ ಚಿತ್ರದಲ್ಲಿರುವ ಸ್ಟಾರ್ ನಟ ಅಂದರೆ ಅದು ಬಾಡಿ ಡಿಯೋಲ್. ಇತ್ತೀಚೆಗೆ ಪವರ್ ಫುಲ್ ಪಾತ್ರಗಳಿಗೆ ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಔರಂಗಜೇಬ್ ಆಗಿ ಸನ್ನಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಚಿನ್ ಖಡೇಕರ್, ರಘುಬಾಬು, ಸತ್ಯರಾಜ್ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.
ಟೆಕ್ನಿಕಲಿ ಸಿನಿಮಾ
ಎಂ. ಎಂ ಕೀರವಾಣಿ ಸಂಗೀತವೇ ಚಿತ್ರದ ಹೈಲೆಟ್. ಇನ್ನು ಸಾಯಿ ಮಾಧವ ಬುರ್ರಾ ಸಂಭಾಷಣೆ ಚಿತ್ರಕ್ಕೆ ಪೂರಕವಾಗಿದೆ. ಕ್ರಿಶ್ ಇಡೀ ಚಿತ್ರಕ್ಕೆ ಚಿತ್ರಕಥೆ ಒದಗಿಸಿದ್ರಾ? ಅಥವಾ ಅದನ್ನು ಜ್ಯೋತಿಕೃಷ್ಣ ಬದಲಿಸಿಕೊಂಡ್ರಾ? ಗೊತ್ತಿಲ್ಲ. ಜ್ಞಾನ ಶೇಖರ್ ಹಾಗೂ ಮನೋಜ್ ಪರಮಹಂಸ ಛಾಯಾಗ್ರಹಣ ಕೆಲವು ಕಡೆಗಳಲ್ಲಿ ಒಳ್ಳೆ ಅನುಭವ ನೀಡುತ್ತದೆ. ವಿಎಫ್‌ಎಕ್ಸ್ ಚಿತ್ರಕ್ಕೆ ದೊಡ್ಡ ಮೈನಸ್ ಅಂದರೆ ತಪ್ಪಾಗಲ್ಲ. ಈ ವಿಚಾರದಲ್ಲಿ ಮತ್ತಷ್ಟು ಗಮನ ಹರಿಸಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತಿತ್ತು.
ಕೊನೆ ಮಾತು
ಪವನ್ ಕಲ್ಯಾಣ್ ಅಭಿಮಾನಿಗಳಿಗೆ 'ಹರಿಹರ ವೀರಮಲ್ಲು' ಸಿನಿಮಾ ಇಷ್ಟವಾಗುತ್ತದೆ. ಆದರೆ ಭಾರೀ ನಿರೀಕ್ಷೆ ಇಟ್ಟುಕೊಂಡು ಹೋದರೆ ಮಾತ್ರ ನಿರಾಸೆ ಗ್ಯಾರಂಟಿ. ವಿಷ್ಯುವಲಿ 'ಬಾಹುಬಲಿ', 'RRR' ರೀತಿಯ ಸಿನಿಮಾಗಳನ್ನು ಮನಸ್ಸಿನಲ್ಲಿಟ್ಟುಕೊಂಡು 'ಹರಿಹರ ವೀರಮಲ್ಲು' ಸಿನಿಮಾ ನೋಡಲು ಹೋಗಬಾರದು.


Click it and Unblock the Notifications











