Nimitta Matra Review: 15 ವರ್ಷಗಳ ಹಿಂದಿನ ಭಯಾನಕ ಕಥೆ 'ನಿಮಿತ್ತ ಮಾತ್ರ'
'ನಿಮಿತ್ತ ಮಾತ್ರ' ಕಳೆದ ವಾರ ಬಿಡುಗಡೆಯಾಗಿರುವ ಕನ್ನಡದ ಸಿನಿಮಾ. ಚಿತ್ರರಂಗ ಅಂದ್ಮೇಲೆ ಹೊಸ ಪ್ರತಿಭೆ ಬರುತ್ತಿರಬೇಕು. ಹೊಸ ಪ್ರಯೋಗಗಳು ಆಗುತ್ತಿರಬೇಕು. ಇಂತಹ ಒಂದು ಪ್ರಯತ್ನವೇ 'ನಿಮಿತ್ತ ಮಾತ್ರ'. ಇದೊಂದು ಪ್ಯಾರಾಸೈಕಾಲಜಿಕಲ್ ಸಿನಿಮಾ. ಪ್ಯಾರಸೈಕಾಲಜಿ ಪ್ರಯೋಗದ ನಂತರದ ಪರಿಣಾಮಗಳನ್ನು ಹುಡುಕುತ್ತಾ ಸಾಗುವ ಸಿನಿಮಾ.
ಈ ಸಿನಿಮಾದ ಕತೆ ಮಂಗಳೂರಿನಲ್ಲಿ 15 ವರ್ಷಗಳ ಹಿಂದೆ ನಡೆಯುವ ಒಂದು ಭಯಾನಕ ಘಟನೆಯ ಮೇಲೆ ಬೆಳಕು ಚೆಲ್ಲುತ್ತೆ. ಮರೆತು ಹೋದ ರಹಸ್ಯಗಳು, ಕ್ರೂರ ಪ್ರಯೋಗಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಖ್ಯಾತಿಯ ಪೂರ್ಣಚಂದ್ರ ಮೈಸೂರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸಂಗೀತಾ ರಾಜೀವ್, ಅರವಿಂದ್ ಕುಪ್ಲೀಕರ್ ಈ ಸಿನಿಮಾ ಮತ್ತೆರಡು ಪ್ರಮುಖ ಪಾತ್ರಗಳು.

'ನಿಮಿತ್ತ ಮಾತ್ರ' ಸಿನಿಮಾ ಆಕ್ಷನ್ ಕಟ್ ಹೇಳಿದ್ದು ಸ್ಟಾಫ್ಟ್‌ವೇರ್ ಇಂಜಿನಿಯರ್ ನಿರ್ದೇಶಕರಾಗಿ ಬದಲಾಗಿರುವ ರೋಷನ್ ಡಿಸೋಜಾ. ಇಡೀ ಸಿನಿಮಾ ಕಥೆ ಬೆಂಗಳೂರು ಹಾಗೂ ಮಂಗಳೂರು ಬ್ಯಾಕ್‌ಗ್ರೌಂಡ್‌ನಲ್ಲಿಯೇ ಸಾಗುತ್ತೆ. ತನ್ನ ತಂದೆಯಿಂದ ಪ್ರೇರಣೆ ಹೊಂದಿ ತನಿಖಾ ಪತ್ರಿಕೋದ್ಯಮಕ್ಕೆ ಇಳಿಯುವ ಸಿನಿಮಾದ ನಾಯಕ 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕಥೆಯನ್ನು ಹುಡುಕಿಕೊಂಡು ಹೊರಡುತ್ತಾನೆ. ಆ ಮಿಸ್ಟರಿಯ ಕಥೆ ಏನು? ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತಾ? ಹಾಗಿದ್ದರೆ, 'ನಿಮಿತ್ತ ಮಾತ್ರ' ಸಿನಿಮಾ ಹೇಗಿದೆ?
'ನಿಮಿತ್ತ ಮಾತ್ರ' ಕಥೆಯೇನು?
ರೋಷನ್ ಡಿಸೋಜಾ ನಿರ್ದೇಶಿಸಿರುವ 'ನಿಮಿತ್ತ ಮಾತ್ರ' ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಸಿನಿಮಾದ ನಾಯಕ ಉರ್ಫ್ ಪೂರ್ಣಚಂದ್ರ ಮೈಸೂರು ಇಲ್ಲಿ ವಿಕ್ರಮ್ ಅನ್ನುವ ಪಾತ್ರದಲ್ಲಿ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇವರು ತನಿಖಾ ಪತ್ರಿಕೋದ್ಯಮದ ಹಾದಿ ಹಿಡೀತಾರೆ. ಮುಂದೆ ಸರಣಿ ಹಂತಕರು ಸಿಗುತ್ತಾ? ಇಲ್ಲವಾ? ಅನ್ನೋದೇ ಈ ಸಿನಿಮಾದ ಕಥೆ.
ಹೇಗೆ ಪರ್ಫಾಮೆನ್ಸ್?
ಪತ್ರಕರ್ತನ ಪಾತ್ರದಲ್ಲಿ ಪೂರ್ಣ ಚಂದ್ರ ಮೈಸೂರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಇವರಿಗೇ ನಾಯಕಿಯಾಗಿ ಗಾಯಕಿ ಸಂಗೀತಾ ರಾಜೀವ್ ಅಭಿನಯಸಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಆಗಿ ಈ ಸಿನಿಮಾದಲ್ಲಿ ನಟಿಸಿದ್ದು, ನಾಯಕನಿಗೆ ಒಂದೊಳ್ಳೆ ಸಾಥ್ ಕೊಟ್ಟಿದ್ದಾರೆ. ಹಾಗೇ ಪೊಲೀಸ್ ಪಾತ್ರದಲ್ಲಿ ಅರವಿಂದ್ ಕುಪ್ಲೀಕರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ಪ್ಲಸ್ ಏನು?
'ನಿಮಿತ್ತ ಮಾತ್ರ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದರಿಂದ ಶುರುವಿನಲ್ಲಿ ಗೊಂದಲ ಸೃಷ್ಟಿಸುತ್ತೆ. ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ಡೈರೆಕ್ಟರ್ ರೋಷನ್ ಎಲ್ಲಾ ಕನ್ಫ್ಯೂಷನ್‌ಗಳಿಗೂ ಕ್ಲಾರಿಟಿ ಕೊಟ್ಟಿದ್ದಾರೆ. ಸೀರಿಯಲ್ ಕಿಲ್ಲರ್ ಯಾರು ಅಂತಾ ಗೆಸ್ ಮಾಡುತ್ತಿದ್ದವರಿಗೆ ಕ್ಲೈಮ್ಯಾಕ್ಸ್‌ನಲ್ಲಿ ಡೈರೆಕ್ಟರ್ ಒಂದೂ ಒಳ್ಳೆಯ ಟ್ವಿಸ್ಟ್ ಕೊಟ್ಟಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವುದರಿಂದ ಈ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌ಗಳನ್ನು ನೋಡಬಹುದು.
ಸಿನಿಮಾದ ಮೈನಸ್ ಏನು?
'ನಿಮಿತ್ತ ಮಾತ್ರ' ಸಿನಿಮಾದ ಕೆಲವೊಂದು ಕಡೆ ಬಲವಂತಾಗಿ ಟ್ವಿಸ್ಟ್ ಅಂಡ್ ಟರ್ನ್‌ಗಳು ಬಲವಂತ ಅಂತ ಅನಿಸುತ್ತವೆ. ಹೀಗಿದ್ದರೂ ಪ್ರೇಕ್ಷಕನ ಗಮನವನ್ನು ಆಚೀಚೆ ಹೋಗುವುದಕ್ಕೆ ಬಿಡುವುದಿಲ್ಲ. ಆದರೆ, ಸಿನಿಮಾ ನೋಡುತ್ತಾ ಇದು ಹೊರಬರ ಸಿನಿಮಾ ಅಂತ ಎದ್ದು ಕಾಣುತ್ತೆ. ಕಥೆ ಚೆನ್ನಾಗಿ ಬರೆದುಕೊಂಡಿದ್ದರೂ, ಅದನ್ನು ತೆರೆಮೇಲೆ ತರುವಲ್ಲಿ ಸ್ವಲ್ಪ ಎಡವಿದ್ದಾರೆ ಅಂತ ಅನಿಸದೆ ಇರುವುದಿಲ್ಲ.
ಕೊನೆಯಲ್ಲಿ ಹೇಗಿದೆ ಸಿನಿಮಾ?
ಹೊಸ ತರಹದ ಸಿನಿಮಾ ಬೇಕು ಅಂತಿರುವ ಕನ್ನಡದ ಪ್ರೇಕ್ಷಕರಿಗೆ ಇದು ಇಷ್ಟ ಆಗುತ್ತೆ. ಇದನ್ನು ಹೊಸ ಪ್ರಯೋಗಾತ್ಮಕ ಸಿನಿಮಾಗಳ ಸಾಲಿಗೆ ಸೇರಿಸಬಹುದು. ಅಲ್ಲಲ್ಲಿ ಹಾಲಿವುಡ್‌ನ ಬ್ಯಾಟ್‌ಮ್ಯಾನ್, ಸ್ಟ್ರೇಂಜರ್ ಥಿಂಗ್ಸ್ ಅನ್ನು ನೆನಪಿಸುತ್ತವೆ. ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಹೆಚ್ಚು ಪ್ರಯೋಗಗಳು ಆಗಬಹುದು.


Click it and Unblock the Notifications











