Daredevil Musthafa Review: ಅಬಚೂರಿನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಅರಳಿಸುವ 'ಡೇರ್‌ಡೆವಿಲ್ ಮುಸ್ತಫಾ'
ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರಿಗೆ ಇರುವ ಅಭಿಮಾನಿಗಳು ಯಾವ ಸಿನಿಮಾ ಸ್ಟಾರ್ ಗಿಂತ ಕಡಿಮೆ ಏನು ಇಲ್ಲ. ಪುಸ್ತಕ ಓದುವ ಹವ್ಯಾಸ ಇದ್ದವರಿಗೂ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕದ ಪರಿಚಯವಿದ್ದೆ ಇರುತ್ತದೆ. ಅವರಿಗೆ ಅಷ್ಟು ಅಭಿಮಾನಿಗಳಿದ್ದಾರೆ. ತೇಜಸ್ವಿ ಅವರು ಬರೆದ ಪುಸ್ತಕದಲ್ಲಿ ಡೇರ್ ಡೆವಿಲ್ ಮುಸ್ತಫಾ ಕೂಡ ಒಂದು. ಈ ಪುಸ್ತಕವೇ ಈಗ ಸಿನಿಮಾವಾಗಿ ಹೊರ ಬಂದಿದೆ.
ಪೂರ್ಣಚಂದ್ರ ತೇಜಸ್ವಿ ಅವರ ಒಂದಷ್ಟು ಕಥೆಗಳನ್ನು ಸಿನಿಮಾ ಮಾಡಬೇಕು ಎಂದು ಹಲವರು ಪ್ಲಾನ್ ಮಾಡಿಕೊಂಡಿದ್ದರು. ಈಗ ಮೈಸೂರು ಮೂಲದ ಟೆಕ್ಕಿ ಶಶಾಂಕ್ ಸೋಗಾಲ್ ತೇಜಸ್ವಿಯವರ 'ಡೇರ್ ಡೆವಿಲ್ ಮುಸ್ತಫಾ' ಕಥೆಯನ್ನು ಸಿನಿಮಾ ಮಾಡಿದ್ದಾರೆ.

ಮತ್ತೊಂದು ವಿಶೇಷ ಅಂದ್ರೆ, ಅವರ ನೂರು ಜನ ಅಭಿಮಾನಿಗಳೇ ಸೇರಿ 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ 'ಡೇರ್ ಡೆವಿಲ್ ಮುಸ್ತಾಫಾ' ತೆರೆಮೇಲೆ ಹೇಗಿದ್ದಾನೆ? ತಿಳಿಯುವುದಕ್ಕೆ ಮುಂದೆ ಓದಿ.
ಹದವಾದ ಕಾಮಿಡಿ
ಒಂದು ಪುಸ್ತಕವನ್ನು ಓದುವಾಗ ಬರುವ ಊಹೆಯೆ ಬೇರೆ. ಅದನ್ನೇ ತೆರೆ ಮೇಲೆ ನೋಡಿದಾಗ ಮೂಡುವ ದೃಶ್ಯವೇ ಬೇರೆ. 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾ ಕೂಡ ಕೆಲವೊಂದಿಷ್ಟು ಬದಲಾವಣೆಯನ್ನು ಹೊತ್ತು ಬಂದಿದೆ. ಓದುವಾಗ ಆ ಪಾತ್ರಗಳೆಲ್ಲಾ ನಮ್ಮ ಊಹೆಗೆ ಬಿಟ್ಟಿರುತ್ತದೆ. ಆದರೆ ಸಿನಿಮಾದಲ್ಲಿ ಕಣ್ಣ ಮುಂದೆಯೇ ಆ ಪಾತ್ರಗಳು ಕಾಣಿಸುತ್ತವೆ. ಈ ಸಿನಿಮಾದಲ್ಲಿ ಒಂದಷ್ಟು ನಮ್ಮ ನಿನ್ಮ ಕಾಲೇಜಿನ ದಿನಗಳು ಬಂದು ಹೋಗುತ್ತವೆ. ಹೊಟ್ಟೆ ಉಣ್ಣಾಗುವಷ್ಟು ಕಾಮಿಡಿ ಇಲ್ಲದೆ ಹೋದರೂ ಸ್ವಲ್ಪ ಮಟ್ಟಿಗೆ ಆರಂಭದಿಂದ ಅಂತ್ಯದವರೆಗೂ ಆಗಾಗ ನಗಿಸುವಂತಹ ದೃಶ್ಯಗಳಿವೆ.
ಮುಸ್ತಫಾನದ್ದೇ ಗಾಸಿಪ್
ಸಿನಿಮಾದ ಹೆಸರೇ ಸೂಚಿಸಿದಂತೆ 'ಡೇರ್ ಡೆವಿಲ್ ಮುಸ್ತಫಾ'. ಸಿನಿಮಾದ ಆರಂಭದಲ್ಲಿ ಮುಸ್ತಫಾನನ್ನು ನೋಡುವುದಕ್ಕೇನೆ ಕಾತುರ. ಯಾಕಂದ್ರೆ, ಅಬಚೂರು ಕಾಲೇಜಿನಲ್ಲಿ ಕಂಪ್ಲೀಟ್ ಹಿಂದೂ ಧರ್ಮದವರೇ ವಿದ್ಯಾರ್ಥಿಗಳು. ಮೊದಲ ಬಾರಿಗೆ ಮುಸ್ತಫಾನ ಅಡ್ಮಿಷನ್ ಆಗಿರುತ್ತೆ. ಅಟೆಂಡೆನ್ಸ್‌ನಲ್ಲಿ ಜಯಮಾಲ ದಮಯಂತಿ ಸೇನಾ ಅಂತ ಹೆಸರು ಇರುತ್ತೆ. ಆದರೆ, ಅದನ್ನು ಪ್ರಿನ್ಸಿಪಲ್ ಬಿಡಿಸಿದಾಗಲೇ ಅದು ಜಮಾಲ್ ಅಬ್ದುಲ್ ಮುಸ್ತಫಾ ಹುಸೈನ್ ಅಂತ ಗೊತ್ತಾಗೋದು. ಮುಸ್ತಫಾನ ದರ್ಶನ ಆಗೋವರೆಗೂ ಅವನದ್ದೇ ಗಾಸಿಪ್. ಮುಖ ನೋಡದೆ ಇದ್ದರೂ, ಅವನು ಸೆಂಟ್‌ನಲ್ಲೇ (ಪರ್ಫ್ಯೂಮ್) ಮುಳುಗ್ತಾನಂತೆ, ನೀರಿಲ್ಲೇ ಪಂಚರ್ ಹಾಕ್ತಾನಂತೆ, ಹೀಗೆ ಅವನದ್ದೇ ಗಾಸಿಪ್. ಕಾಲೇಜು ಶುರುವಾದ ಇಪ್ಪತ್ತು ದಿನಕ್ಕೆ ಕೊನೆಗೂ ಅವನ ದರ್ಶನ ಭಾಗ್ಯ ಸಿಗುತ್ತೆ.

ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ
ಟೈಟಲ್ ಮತ್ತು ಸಬ್ ಟೈಟಲ್ ಹೇಳುವಂತೆ ಮುಸ್ತಫಾ ಮತ್ತೆ ರಾಮಾನುಜ ಅಯ್ಯಂಗಾರಿ ಪಟಾಲಂ ನಡುವೆ ಯುದ್ಧವೇ ನಡೆಯುತ್ತಿರುತ್ತೆ. ಅಯ್ಯಂಗಾರಿ ಮನೆಯಲ್ಲಿ ನಡೆದ ಒಂದೇ ಒಂದು ಘಟನೆಯಿಂದ ಮುಸ್ತಫಾ ಒಳ್ಳೆಯವನಾದರೂ ಕೆಟ್ಟವನಾಗಿಯೇ ಕಾಣುತ್ತಾನೆ. ಇನ್ನು ಅಯ್ಯಾಂಗಾರಿ ಗ್ಯಾಂಗ್ ಕೂಡ ಕಾಲೇಜು ಶುರುವಾದಾಗಿನಿಂದ ಮುಸ್ತಫಾಗೆ ತೊಂದರೆ ಕೊಡುತ್ತಲೇ ಬರುತ್ತದೆ. ಅದರಿಂದ ಅಯ್ಯಂಗಾರಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಮುಸ್ತಫಾ ಪಡೆದುಕೊಳ್ಳುತ್ತಾ ಬರುತ್ತಾನೆ. ಕಾಲೇಜಿನಲ್ಲೂ ಹೀರೊ ಆಗಿ ಬಿಡುತ್ತಾನೆ. ಹೀಗೆ ಇಬ್ಬರು ಹುಡುಗರ ನಡುವಿನ ಕಿತ್ತಾಟವೂ ಇಲ್ಲಿದೆ.
ಅಬಚೂರಿನಲ್ಲಿ ಸರ್ವಜನಾಂಗದ ಶಾಂತಿಯ ತೋಟ
ಮುಸ್ತಫಾ ಮುಸ್ಲಿಂ ಎಂಬ ಕಾರಣಕ್ಕೆ ತಮ್ಮ ಕಾಲೇಜು, ತಮ್ಮ ಊರಿನ ಗೆಲುವನ್ನೇ ಬಿಟ್ಟುಕೊಡುವ ಹುಡುಗರನ್ನು ಯಾರೂ ಒಪ್ಪಲ್ಲ. ಆಗ ಅಯ್ಯಾಂಗಾರಿ ಪಟಾಲಂ ಮತ್ತು ಮುಸ್ತಫಾ ಒಂದು ಒಪ್ಪಂದಕ್ಕೆ ಬಂದಿರುತ್ತಾರೆ. ಅದರ ಪ್ರಕಾರ, ಊರಿನ ಮುಸ್ಲಿಂ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತೆ. ಸ್ಟುಡೆಂಟ್ ಟೀಂ ಜೊತೆಗೆ ಮುಸ್ತಫಾ ಸೇರಿಕೊಳ್ಳುತ್ತಾನೆ. ಅವನ ಸೋಲಿಗಾಗಿ ಅಯ್ಯಂಗಾರಿ ಕೆಟ್ಟಮಟ್ಟದ ಆಟ ಆಡ್ತಾನೆ. ಇದನ್ನು ಥಿಯೇಟರ್‌ನಲ್ಲಿ ಕೂತ ಪ್ರೇಕ್ಷಕ ಸಹಿಸೋದಿಲ್ಲ. ಮೊದಲಿಂದ ಸಿನಿಮಾವನ್ನ ಬೇರೆಯದ್ದೇ ರೀತಿಯಲ್ಲಿ ನೋಡಿಕೊಂಡು ಬಂದರೂ ಕೂಡ ಇದೊಂದು ಆಟ ಮಾತ್ರ ಪ್ರೇಕ್ಷಕನ ಮನಸ್ಸು ಮುಸ್ತಫಾಗೆ ಸಪೋರ್ಟ್ ಮಾಡುತ್ತೆ. ಅಯ್ಯಂಗಾರಿ ಕೋಪ ಯಾಕೆ ಅನ್ನೋದು ಗೊತ್ತಾದ ಮೇಲೆ ಕಡೆಯ ಒಂದೇ ಒಂದು ಬಾಲ್‌ನಲ್ಲಿ ಅಯ್ಯಂಗಾರಿಯ ಮನಸ್ಸಿನ ಬದಲಾವಣೆಗಾಗಿ ಕಾದು ಕುಳಿತ ಪ್ರೇಕ್ಷಕನಿಗೆ ಆ ಗೆಲುವು ಸಿಕ್ಕಿ ಬಿಡುತ್ತೆ. ಪ್ರೇಕ್ಷಕರು ಕಡೆಗೂ ಅಬಚೂರಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅರಳಿತ್ತಲ್ಲ ಎಂಬ ನಿಟ್ಟುಸಿರು ಬಿಟ್ಟು ಹೊರ ಬರುತ್ತಾನೆ.
ಪುಸ್ತಕ ಓದಿದವರಿಗೆ ಖುಷಿ ಕೊಡುವ ಸಿನಿಮಾ
ಪುಸ್ತಕವನ್ನು ಓದುವುದೇ ಬೇರೆ.. ಆ ಕಥೆಯನ್ನು ಪಾತ್ರದ ಮೂಲಕ ನೋಡುವುದೇ ಬೇರೆ. ಇಲ್ಲಿ ಪುಸ್ತಕ ಓದಿದವರಿಗೆ ಕಥೆ ಮೊದಲೇ ಅರ್ಥವಾಗಿ ಬಿಡುತ್ತೆ. ಕಥೆಯಲ್ಲಿರೋ ಪಾತ್ರಗಳು ಕಣ್ಮುಂದೆ ಬಂದು ಬಿಡುತ್ತವೆ. ಆದರೆ, ಕಥೆ ಗೊತ್ತಿಲ್ಲದೆ ಇದ್ದವರಿಗೆ ಸ್ವಲ್ಪ ಕಷ್ಟ ಅನಿಸಬಹುದು. ಸಾಹಿತ್ಯ ಪ್ರಿಯರಲ್ಲದೆ ಹೋಗಿ ಥಿಯೇಟರ್‌ನಲ್ಲಿ ಕುಳಿತವರಿಗೆ ಸಿನಿಮಾ ಅಷ್ಟರ ಮಟ್ಟಿಗೆ ರುಚಿಸುವುದಿಲ್ಲ. ಹಾಗಂತ ತೀರಾ ಬೋರು ಹೊಡೆಸಲ್ಲ. ಕಡೆಯಲ್ಲಿ ಒಂದು ಬಾಲ್ ಕ್ರಿಕೆಟ್ ಪಂದ್ಯದ ದಿಕ್ಕನ್ನು ಬದಲಿಸುತ್ತೆ. ಪ್ರೇಕ್ಷಕರ ಬೇಸರವನ್ನೆಲ್ಲಾ ಮರೆ ಮಾಚುತ್ತೆ.
ಅಣ್ಣಾವ್ರು ಬಂದಾಗ ಖುಷಿಯೋ ಖುಷಿ
ಹೀರೋ ಆಗ್ಬೇಕು ಅಂತ ಹೊರಟಾಗ ಅಯ್ಯಂಗಾರಿ ಪಟಾಲಂ ಪ್ಲ್ಯಾನ್ ಮಾಡ್ತಾರೆ. ಆಗ ಮೈಸೂರು ರಾಜ್ಯದ ದೊರೆಯೇ ಹಾಡಿನಲ್ಲಿ ಅಣ್ಣಾವ್ರು ಕಾಣ್ತಾರೆ. ಈ ಸಿನಿಮಾದಲ್ಲಿ ಶಿಶಿರ್, ಆದಿತ್ಯಾ, ಪ್ರೇರಣಾ, ಶ್ರೀವತ್ಸ, ಆಶಿತ್, ಅಭಯ್, ಸುಪ್ರೀತಾ ಭಾರದ್ವಾಜ್, ಕಾರ್ತೀಕ್ ಪತ್ತಾರ್, ನಾಗಭೂಷಣ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಪೂರ್ಣಚಂದ್ರ, ಉಮೇಶ್, ಚೈತ್ರಾ ಶೆಟ್ಟಿ, ವಿಜಯ್ ಶೋಭರಾಜ್ ಪಾವೂರ್ ಎಲ್ಲರೂ ಅವರವರ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆಲವರು ಹೊಸಬರೇ ಆದರೂ ಹೊಸಬರು ಅಂತ ಅನಿಸುವುದಿಲ್ಲ.
ಮೈನಸ್ ಏನು?
'ಡೇರ್‌ಡೆವಿಲ್ ಮುಸ್ತಫಾ' ಸಿನಿಮಾದಲ್ಲಿ ಮೈನಸ್ ಪಾಯಿಂಟ್‌ಗಳಿವೆ. ಟೆಕ್ಕಿ ಶಶಾಂಕ್ ಸೋಗಾಲ್ ಈ ಸಿನಿಮಾದ ನಿರ್ದೇಶಕರು. ಅಲ್ಲಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆ ಬೋರು ಹೊಡೆಸುತ್ತೆ. ಹೀಗಾಗಿ ಸಿನಿಮಾಗೆ ಕೆಲವೆಡೆ ಕತ್ತರಿ ಹಾಕಬಹುದಿತ್ತು ಅನಿಸುತ್ತೆ. ಕೆಲವೊಮ್ಮೆ ಬರೀ ಡೈಲಾಗ್ಸ್ ಹೆಚ್ಚಿದೆ ಅನ್ನೋ ಅನುಭವ ಆಗುತ್ತೆ. ಒಟ್ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಗಳಿಗೆ, ಪುಸ್ತಕ ಪ್ರೇಮಿಗಳಿಗೆ, ಅಪ್ಪಟ ಕನ್ನಡಿಗರಿಗೆ 'ಡೇರ್‌ಡೆವಿಲ್ ಮುಸ್ತಫಾ' ಖಂಡಿತಾ ಇಷ್ಟ ಆಗುತ್ತೆ.


Click it and Unblock the Notifications











