The Raja Saab Review: ಅಷ್ಟೇನು ಥ್ರಿಲ್ ಕೊಡದ 'ರಾಜಾಸಾಬ್' ಪ್ರಭಾಸ್ ಫ್ಯಾಂಟಸಿ ಪ್ರಪಂಚ
ನಟ ಪ್ರಭಾಸ್ ಮಾಸ್ ಹೀರೊ ಇಮೇಜ್ ಬೆಳೆಸಿದಿಕೊಂಡಿದ್ದಾರೆ. ಹಾಗಾಗಿ ಆಕ್ಷನ್ ಸಿನಿಮಾಗಳನ್ನು ಬಿಟ್ಟು ಬೇರೆ ಪ್ರಯೋಗ ಮಾಡಿದಾಗ ಗೆಲುವು ಕಷ್ಟ ಎನ್ನುವಂತಾಗಿದೆ. ಆದರೆ ಆಗಾಗ್ಗೆ ಇಂತಹ ಸಾಹಸಗಳಿಗೆ ಕೈ ಹಾಕುತ್ತಾರೆ. ಅಭಿಮಾನಿಗಳು ಒಲ್ಲದ ಮನಸ್ಸಿನಿಂದಲೇ ಸ್ವಾಗತಿಸುತ್ತಾರೆ.
'ಸಲಾರ್' ಬಳಿಕ 'ರಾಜಾಸಾಬ್' ಆಗಿ ಪ್ರಭಾಸ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಥ್ರಿಲ್ಲರ್ ಚಿತ್ರಕ್ಕೆ ಭಾರೀ ಓಪನಿಂಗ್ ಸಿಕ್ಕಿದೆ. ಒಂದು ದಿನ ಮೊದ್ಲೆ ಪ್ರೀಮಿಯರ್ ಶೋಗಳು ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಿದೆ.

ಸಂಜಯ್ ದತ್ ಸೇರಿ ದೊಡ್ಡ ತಾರಾಗಣ 'ದಿ ರಾಜಾಸಾಬ್' ಚಿತ್ರದಲ್ಲಿದೆ. ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಭಾಸ್ ಹಿಂದಿನ ಸಿನಿಮಾಗಳಿಗೆ ಹೋಲಿಸಿದ್ದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಕ್ರೇಜ್ ಇರಲಿಲ್ಲ. ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಸಿನಿಮಾ ಎನ್ನುವುದೇ ಇದಕ್ಕೆ ಮುಖ್ಯ ಕಾರಣ. ಅಷ್ಟಕ್ಕೂ 'ದಿ ರಾಜಾಸಾಬ್' ಕಥೆಯೇನು? ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.
ಸಿನಿಮಾ ಕಥೆ
ಜಮೀನ್ದಾರನ ಮೊಮ್ಮಗನಾದರೂ ರಾಜು ಅಲಿಯಾಸ್ ರಾಜಾ ಸಾಬ್ (ಪ್ರಭಾಸ್) ತನ್ನ ಅಜ್ಜಿ(ಜರೀನಾ ವಹಾಬ್) ಜೊತೆ ಸಾಧಾರಣ ಜೀವನ ನಡೆಸುತ್ತಿರುತ್ತಾನೆ. ಅಲ್‌ಝೈಮರ್(ಮರೆವಿನ ರೋಗ) ಸಮಸ್ಯೆಯಿಂದ ಬಳಲುತ್ತಿರುವ ಅಜ್ಜಿ ತನ್ನ ಪತಿ ಕನಕರಾಜು(ಸಂಜಯ್ ದತ್)ಗಾಗಿ ಕಾಯುತ್ತಿರುತ್ತಾಳೆ. ಯಾವುದೇ ವಿಷಯ ಮರೆತರೂ ಪತಿಯನ್ನು ಆಕೆ ಮರೆತ್ತಿರುವುದಿಲ್ಲ. ಆಕಸ್ಮಿಕವಾಗಿ ತಾತನ ಫೋಟೊ ರಾಜುಗೆ ಸಿಗುತ್ತದೆ. ಮುಂದೆ ತಾತನನ್ನು ಹುಡುಕಿಕೊಂಡು ಹೈದರಾಬಾದ್‌ಗೆ ಬರ್ತಾನೆ. ಈ ಹಾದಿಯಲ್ಲಿ ಬೆಸ್ಲಿ(ನಿಧಿ ಅಗರ್‌ವಾಲ್) ಹಾಗೂ ಭೈರವಿ(ಮಾಳವಿಕಾ ಮೋಹನನ್) ಜೊತೆ ಲವ್ ಟ್ರ್ಯಾಕ್ ನಡೆಯುತ್ತದೆ.

ಹೈದರಾಬಾದ್‌ಗೆ ಬಂದ ರಾಜುಗೆ ತನ್ನ ತಾತ ಅಷ್ಟು ಸುಲಭವಾಗಿ ಸಿಕ್ತಾನಾ? ಅಜ್ಜಿ ಹಾಗೂ ರಾಜು ನರಸಾಪುರದ ಕಾಡಿನ ರಾಜಮಹಲ್‌ಗೆ ಬರೋದು ಯಾಕೆ? ಅಲ್ಲಿ ಆತನಿಗೆ ಎದುರಾಗುವ ಸಮಸ್ಯೆಗಳೇನು? ಕನಕರಾಜು ಹಾಗೂ ಗಂಗರಾಜು (ಸಮುದ್ರಖನಿ) ನಡುವಿನ ಕಿರಿಕ್ ಯಾಕೆ? ಅದನ್ನೆಲ್ಲಾ ರಾಜು ಹೇಗೆ ಬಗೆಹರಿಸುತ್ತಾನೆ? ಕನಕರಾಜು ಹಿನ್ನೆಲೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತೆರೆಮೇಲೆ ಸಿಗುತ್ತದೆ.
ಸಿನಿಮಾ ಹೇಗಿದೆ?
ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಭಾಸ್ ದಿಢೀರನೆ ಹಾರರ್ ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡಾಗ ಅಭಿಮಾನಿಗಳು ಶಾಕ್ ಆಗಿದ್ದರು. 300- 400 ಕೋಟಿ ರೂ. ಕೋಟಿ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ನೆಚ್ಚಿನ ನಟ 50 ರಿಂದ 100 ಕೋಟಿ ರೂ. ಬಜೆಟ್ ಸಿನಿಮಾದಲ್ಲಿ ನಟಿಸೋದು ಸರಿಯಲ್ಲ. ನಾವು ಈ ಸಿನಿಮಾ ನೋಡಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಬಳಿಕ ಸಂಜಯ್ ದತ್ ಎಲ್ಲಾ ನಟಿಸುತ್ತಾರೆ, ದೊಡ್ಡ ಬಜೆಟ್ ಸಿನಿಮಾ ಎಂದು ಗೊತ್ತಾಗಿ ಸುಮ್ಮನಾಗಿದ್ದರು.
ಚಿತ್ರದ ಟೀಸರ್, ಟ್ರೈಲರ್ ದೊಡ್ಡದಾಗಿ ಸದ್ದು ಮಾಡಲಿಲ್ಲ. ನೆಚ್ಚಿನ ನಟನನ್ನು ಆಕ್ಷನ್ ಸಿನಿಮಾಗಳಲ್ಲೇ ನೋಡೊದ್ದ ಅಭಿಮಾನಿಗಳಿಗೆ ಇದು ಕೊಂಡ ಗೊಂದಲ ಮೂಡಿಸಿತ್ತು. ಆದರೆ ಎಲ್ಲವನ್ನು ಮೀರಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿ ಬಿಡುಗಡೆ ಆಗಿದೆ. ಅಭಿಮಾನಿಗಳ ಲೆಕ್ಕಾಚಾರವೇ ನಿಜವಾಗಿದೆ ಎಂದು ಸಿನಿಮಾ ನೋಡಿದರೆ ಅರ್ಥವಾಗುತ್ತದೆ.
ಇತ್ತ ಪ್ರಭಾಸ್ ಅಭಿಮಾನಿಗಳನ್ನು ತೃಪ್ತಿಪಡಿಸಲು ಯತ್ನಿಸಿ, ಅತ್ತ ಹಾರರ್ ಕಾಮಿಡಿ ಸಿನಿಮಾ ಮಾಡುವ ಹೋಗಿ ಎರಡು ದೋಣಿ ಮೇಲೆ ಕಾಲಿಟ್ಟು ಮಾರುತಿ ಕಷ್ಟಪಟ್ಟಿರುವುದು ಸಿನಿಮಾ ನೋಡಿದರೆ ಅರ್ಥವಾಗುತ್ತದೆ. ಕೆಲ ಸನ್ನಿವೇಶಗಳು ಬಹಳ ಸೊಗಸಾಗಿದೆ. ಆದರೆ ಒಟ್ಟಾರೆ ಸಿನಿಮಾ ಆಗಿ ನೋಡಿದರೆ ಬೇಸರ ಮೂಡಿಸುತ್ತದೆ. ಹಾಸ್ಪಿಟಲ್ ಸನ್ನಿವೇಶದ ಬಗ್ಗೆ ಅಭಿಮಾನಿಗಳ ಮಾತನಾಡಿಕೊಳ್ಳುವಂತಿದೆ. ಇಂಟರ್‌ವಲ್ ಟ್ವಿಸ್ಟ್ ಚೆನ್ನಾಗಿದೆ. ಹಾಗಾಗಿ ಸೆಕೆಂಡ್ ಹಾಫ್ ಮೇಲೆ ನಿರೀಕ್ಷೆ ಮೂಡುತ್ತದೆ.
ಕನಕರಾಜು ಹಿನ್ನೆಲೆಯ ಕಥೆ ಆಸಕ್ತಿ ಮೂಡಿಸುತ್ತದೆ. ಸೆಕೆಂಡ್ ಹಾಫ್ ಕಾಡಿನ ಮಧ್ಯೆ ಇರುವ ಕೋಟೆಯಲ್ಲಿ ಸಾಗುತ್ತದೆ. ಬುತೇಕ ಹಾರರ್ ಥ್ರಿಲ್ಲರ್ ಕಥೆಗಳಲ್ಲಿ ಇರುವಂತೆ ಇಲ್ಲಿ ಕೂಡ ಒಂದು ಭೂತ ಬಂಗಲೆ ಸುತ್ತಾ ಕಥೆ ಸಾಗುತ್ತದೆ. ಕನಕರಾಜು ಸತ್ತು ಹೋಗಿದ್ದೇಗೆ? ಆತನ ಆತ್ಮ ಮೊಮ್ಮೊಗನಿಗೆ ಕೊಡುವ ಕ್ವಾಟ್ಲೆ ಮಜಾ ಕೊಡುತ್ತದೆ. ಮೂಲ ಕಥೆ ಚೆನ್ನಾಗಿದೆ. ಅದರ ಸುತ್ತಾ ಬರೆದುಕೊಂಡ ಚಿತ್ರಕಥೆ ಹಾಗೂ ಅದನ್ನೆಲ್ಲಾ ತೆರೆಗೆ ತಂದಿರುವ ರೀತಿ ಕೈಕೊಟ್ಟಿದೆ. ಕೊನೆಯ 20 ನಿಮಿಷ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಿದೆ.
ಕಥೆಯಲ್ಲಿ ಹೊಸತನ ಇಲ್ಲದೇ ಇದ್ದರೂ ಅದನ್ನು ಹೇಳುವ ಮಾಡಿರುವ ಪ್ರಯತ್ನ ಚೆನ್ನಾಗಿದೆ. ಆದರೆ ಅದು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ಇನ್ನು ಹಾರರ್ ಸನ್ನಿವೇಶಗಳು ಇದ್ದರೂ ಅಷ್ಟೇನು ಕುತೂಹಲ ಮೂಡಿಸುವುದಿಲ್ಲ. ಕಾಮಿಡಿಯಲ್ಲಿ ಕೂಡ ಹೊಸತನ ಇಲ್ಲದೇ ಪ್ರೇಕ್ಷಕರಿಗೆ ನಿರಾಸೆ ಆಗುತ್ತದೆ. ಆದರೆ ಬಹಳ ದಿನಗಳ ಬಳಿಕ ಪ್ರಭಾಸ್ ಕಾಮಿಡಿ ಸನ್ನಿವೇಶಗಳಲ್ಲಿ ನಟಿಸಿರುವುದು ಅಭಿಮಾನಿಗಳಿಗೆ ಖುಷಿ ಕೊಡುತ್ತದೆ.
ಕಲಾವಿದರ ನಟನೆ
ರಾಜಾಸಾಬ್ ಟೈಟಲ್‌ಗೆ ತಕ್ಕಂತೆ ಇದು ಪ್ರಭಾಸ್ ಒನ್‌ಮ್ಯಾನ್ ಶೋ. ಬಹುತೇಕ ಸಿನಿಮಾ ಪ್ರಭಾಸ್ ತೆರೆಮೇಲೆ ವಿಜೃಂಭಿಸಿದ್ದಾರೆ. ಸಿಕ್ಕಾಪಟ್ಟೆ ಯಂಗ್ ಅಂಡ್ ಎನರ್ಜಿಟಿಕ್ ಲುಕ್‌ನಲ್ಲಿ ಯಂಗ್ ರೆಬೆಲ್ ಸ್ಟಾರ್ ದರ್ಶನವಾಗಿದೆ. 'ಸಲಾರ್' ಚಿತ್ರದಲ್ಲಿ ಅವರನ್ನು ಒಂದೇ ಗೆಟಪ್‌ನಲ್ಲಿ ನೋಡಿ ಪ್ರೇಕ್ಷಕರಿಗೆ ಬೇಸರವಾಗಿತ್ತು. ಇಲ್ಲಿ ಸ್ಟೈಲಿಶ್ ಕಾಸ್ಟ್ಯೂಮ್‌ಗಳಲ್ಲಿ ಮಿಂಚಿದ್ದಾರೆ. ನಾಯಕಿಯರಿಗೆ ಮಾಳವಿಕಾ ಮೋಹನನ್ ಅವರಿಗೆ ಹೆಚ್ಚಿನ ಸ್ಕ್ರೀನ್‌ಸ್ಪೇಸ್ ಸಿಕ್ಕಿದೆ. ಒಂದು ಆಕ್ಷನ್ ಸನ್ನಿವೇಶದಲ್ಲಿ ಕೂಡ ಅಬ್ಬರಿಸಿದ್ದಾರೆ.
ಇನ್ನು ಕನಕರಾಜು ಪಾತ್ರದಲ್ಲಿ ಸಂಜಯ್ ದತ್ ಇಷ್ಟವಾಗುತ್ತಾರೆ. ತಾತ ಮೊಮ್ಮಗನ ನಡುವಿನ ಪೋಟಾಪೋಟಿ ವೇಳೆ ಸಂಜುಬಾಬು ಕಮಾಲ್ ಮಾಡುತ್ತಾರೆ. ಆದರೆ ಗ್ರಾಫಿಕ್ಸ್‌ನಲ್ಲೇ ಅವರ ಪಾತ್ರವನ್ನು ಹೆಚ್ಚು ತೋರಿಸಲಾಗಿದ್ದು ತಾಜಾ ನಟನೆ ಮಿಸ್ ಆಗಿದೆ. ಜರೀನಾ ವಹಾಬ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನುಳಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾ
ಚಿತ್ರಕಥೆ ಹಾಗೂ ಅದನ್ನು ತೆರೆಗೆ ತರುವಲ್ಲಿ ಮಾರುತಿ ವಿಫಲವಾಗಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ನೋಡುಗರ ಮೇಲೆ ಅಷ್ಟೇನು ಪರಿಣಾಮ ಬೀರುವುದಿಲ್ಲ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಿನಿಮಾ ಮೂಡಿಬಂದಿದ್ದು ಛಾಯಾಗ್ರಹಣ ಸೊಗಸಾಗಿದೆ. ತಮನ್ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಸಂಕಲನ ಇನ್ನಷ್ಟು ಹರಿತವಾಗಿರಬೇಕಿತ್ತು. 3 ಗಂಟೆಗಳ ಸಿನಿಮಾ ಪ್ರೇಕ್ಷಕರ ತಾಳ್ಮೆ ಬೇಡುತ್ತದೆ. ಬೇಡದ ಸನ್ನಿವೇಶಗಳು ಸಾಕಷ್ಟಿದೆ. ಅದಕ್ಕೆಲ್ಲಾ ಕತ್ತರಿ ಹಾಕಿದ್ದರೆ ಚೆನ್ನಾಗಿತ್ತು. ಸಿಜಿ, ವಿಎಫ್‌ಎಕ್ಸ್ ಚೆನ್ನಾಗಿದೆ. ಆದರೆ ಹಾಕಿರುವ ಸೆಟ್‌ಗಳು ಸಹಜ ಎನ್ನಿಸುವುದಿಲ್ಲ.
ಕೊನೆ ಮಾತು
ಸಾಕಷ್ಟು ಲೋಪಗಳ ಹೊರತಾಗಿಯೂ 'ದಿ ರಾಜಾ ಸಾಬ್' ಸಿನಿಮಾ ಒಮ್ಮೆ ನೋಡಬಹುದು. ಫಸ್ಟ್ ಹಾಫ್ ಓಕೆ ಓಕೆ ಅನ್ನಿಸಿದರೂ ಸೆಕೆಂಡ್ ಹಾಫ್ ಹಾಗೂ ಕ್ಲೈಮ್ಯಾಕ್ಸ್ ಪರವಾಗಿಲ್ಲ ಎನಿಸಿಕೊಂಡಿದೆ. ಪ್ರಭಾಸ್‌ಗೋಸ್ಕರ ಸಂಕ್ರಾಂತಿ ಸಂಭ್ರಮದಲ್ಲಿ ಫ್ಯಾಮಿಲಿ ಜೊತೆ ಸಿನಿಮಾ ನೋಡಲು ಮನಸ್ಸು ಮಾಡಬಹುದು.


Click it and Unblock the Notifications