Veeram Review: ಅತಿಯಾದ ಬಿಲ್ಡಪ್ ಮಧ್ಯೆ ಗೌಣವಾಗಿಬಿಡುವ ಅಕ್ಕ ತಮ್ಮನ ಬಾಂಧವ್ಯದ ಕಥೆ
ಒಂದ್ಕಡೆ ಚುನಾವಣೆ ಭರಾಟೆ ಮತ್ತೊಂದು ಕಡೆ ಐಪಿಎಲ್ ಫೀವರ್ ಇವೆರಡರ ನಡುವೆ ಸಿನಿಮಾ ರಿಲೀಸ್ ಮಾಡಲು ಕೆಲವರು ಹೆದರುತ್ತಾರೆ. ಆದರೆ 'ವೀರಂ' ಚಿತ್ರವನ್ನು ಈ ವಾರ ಪ್ರೇಕ್ಷಕರ ಮುಂದೆ ತರಲಾಗಿದೆ. ಖದರ್ ಕುಮಾರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ನಾಯಕ ನಾಯಕಿಯಾಗಿ ಮಿಂಚಿದ್ದಾರೆ. ರಿಲೀಸ್‌ಗೂ ಮುನ್ನ ಅಷ್ಟೇನು ಅಷ್ಟೇನು ನಿರೀಕ್ಷೆ ಮೂಡಿಸದಿದ್ದ 'ವೀರಂ' ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.
ಪ್ರಜ್ವಲ್ ದೇವರಾಜ್ ಅತ್ತ ಸಂಪೂರ್ಣವಾಗಿ ಮಾಸ್ ಹೀರೊ ಆಗದೇ ಇತ್ತ ಕ್ಲಾಸ್ ಹೀರೊ ಹಣೆಪಟ್ಟಿಯನ್ನು ಕಟ್ಟಿಕೊಳ್ಳದೇ ಗೊಂದಲದಲ್ಲಿದ್ದಾರೆ. ಆ ಗೊಂದಲದ ನಡುವೆಯೇ 'ವೀರಂ' ಸಿನಿಮಾ ಕೂಡ ಬಂದಿದೆ. ಪ್ರಜ್ವಲ್ ಈ ಹಿಂದೆ ಹೇಳಿದಂತೆ ಇದು ಬರೀ ಹೊಡಿ ಬಡಿ ಸಿನಿಮಾ ಖಂಡಿತ ಅಲ್ಲ. ಚಿತ್ರದಲ್ಲೊಂದು ಫ್ಯಾಮಿಲಿ ಕಥೆಯಿದೆ.

'ವೀರಂ' ಸಿನಿಮಾ ಒನ್‌ಲೈನ್ ಕಥೆ
ವೀರು(ಪ್ರಜ್ವಲ್)- ನರಸಿಂಹ(ಶ್ರೀನಗರ ಕಿಟ್ಟಿ) ಸಹೋದರರು. ತಂದೆ ತಾಯಿಯಿಲ್ಲದ ಇಬ್ಬರಿಗೂ ಅಕ್ಕ(ಶ್ರುತಿ) ಭಾವ(ಅಚ್ಯುತ್‌ಕುಮಾರ್)ನೇ ತಂದೆ- ತಾಯಿ. ಅಕ್ಕ ಸೀತಾ ಸಾಹಸಸಿಂಹ ವಿಷ್ಣುವರ್ಧನ್ ದೊಡ್ಡ ಅಭಿಮಾನಿ. ಅಕ್ಕನಂತೆ ದಾದಾ ಅಭಿಮಾನಿಯಾಗಿ ಕೈ ಮೇಲೆ ನೆಚ್ಚಿನ ನಟನ ಭಾವಚಿತ್ರವನ್ನು ವೀರು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ತಮ್ಮಂದಿರು ಓದಿ ಒಳ್ಳೆ ಕೆಲಸಕ್ಕೆ ಸೇರಿ ಚೆನ್ನಾಗಿರಬೇಕು ಅನ್ನೋದು ಸೀತಾ ಆಸೆ. ಇತ್ತ ಕಲಾಸಿಪಾಳ್ಯದ ಮಾರ್ಕೆಟ್ ಹಾಗೂ ಆರ್‌ಎಂಸಿ ಯಾರ್ಡ್ ಮೇಲೆ ಅಧಿಪತ್ಯ ಸಾಧಿಸಲು ದೇವಿ ಹಾಗೂ ಕೂಲಿಂಗ್ ಗ್ಲಾಸ್ ಗೋವಿಂದ ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿರುತ್ತಾರೆ.
ಕೆಟ್ಟವರ ಸಹವಾಸವೇ ಬೇಡಕೊಂಡಿದ್ದ ಕುಟುಂಬದ ಹುಡುಗ ನರಸಿಂಹ ಹುಡುಗಾಟದ ವಯಸ್ಸಿನಲ್ಲಿಗೋವಿಂದನ ಗ್ಯಾಂಗ್ ಸೇರಿ ಬಿಡ್ತಾನೆ. ಇನ್ನು ವೀರು ಕೆಲಸಕ್ಕೆ ಸೇರಬೇಕಾದ ಸಮಯದಲ್ಲೇ ದೇವಿ ಕೊಲೆಯಾಗುತ್ತದೆ. ತನ್ನದಲ್ಲ ತಪ್ಪಿಗೆ ಜೈಲಿಗೆ ಹೋಗುವ ವೀರು ಅಕ್ಕನಿಂದ ದೂರಾಗುತ್ತಾನೆ. ಇನ್ನು ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ವೀರು, ಸೀರು ಭಾಯ್ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ತಂದೆ ಹತ್ಯೆಯ ಪ್ರತಿಕಾರಕ್ಕೆ ದೇವಿ ಮಗ ಜೇಡ ನಿಲ್ತಾನೆ? ದೇವಿ ಹತ್ಯೆಗೆ ಕಾರಣ ಯಾರು? ವೀರು ಮತ್ತೆ ಅಕ್ಕನ ಮನೆಗೆ ವಾಪಸ್ ಹೋಗ್ತಾನಾ? ಸೀರು ಭಾಯ್ ಯಾರು? ಇದಕ್ಕೆಲ್ಲಾ ಉತ್ತರ ಬೇಕು ಅಂದರೆ ಸಿನಿಮಾ ನೋಡಲೇಬೇಕು.
'ವೀರಂ' ಸಿನಿಮಾ ಹೇಗಿದೆ?
ನಿರ್ದೇಶಕ ಖದರ್ ಕುಮಾರ್ ಒಂದೊಳ್ಳೆ ಕಥೆಯನ್ನು ಮಾಸ್ ಎಲಿಮೆಂಟ್ಸ್ ಸೇರಿಸಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅತಿಯಾದ ಬಿಲ್ಡಪ್ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಒಬ್ಬರಿಗಿಂತ ಒಬ್ಬರಿಗೆ ಬಿಲ್ಡಪ್ ಹೆಚ್ಚಾಗಿದೆ. ವಿಲನ್ ಜೇಡ ಆಗಿ ಶಿಷ್ಯ ದೀಪಕ್‌ಗೆ ಹೀರೊ ಪ್ರಜ್ವಲ್‌ಗಿಂತ ಹೆಚ್ಚು ಬಿಲ್ಡಪ್ ಸಿಕ್ಕಿರೋದು ವಿಪರ್ಯಾಸ. ಇನ್ನು ಅತಿಯಾಗಿ ಹಾಡುಗಳನ್ನು ತುರುಕದೇ ಸೊಗಸಾಗಿ ಕಥೆ ಹೇಳುವ ಪ್ರಯತ್ನ ಮಾಡಿರೋದು ವಿಶೇಷ.

ಅಕ್ಕ ತಮ್ಮಂದಿರ ಬಾಂಧವ್ಯದ ಸನ್ನಿವೇಶಗಳನ್ನು ಸೊಗಸಾಗಿ ತೆರೆಗೆ ತರಲಾಗಿದೆ. ಆಕ್ಷನ್ ಸನ್ನಿವೇಶಗಳಲ್ಲಿ ಪ್ರಜ್ವಲ್ ದೇವರಾಜ್ ಅಬ್ಬರಿಸಿದ್ದಾರೆ. ಕಲಾವಿದರೆಲ್ಲಾ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಂಟರ್‌ವಲ್ ವೇಳೆಗೆ ಮುಗಿದು ಹೋಗುವ ಕಥೆಯನ್ನು ಮತ್ತೆ ಒಂದು ಗಂಟೆ ಎಳೆದಂತೆ ಭಾಸವಾಗುತ್ತದೆ. ಅಷ್ಟೇನು ಕುತೂಹಲ ಇಲ್ಲದೇ ಮುಂದೇನು ಆಗುತ್ತದೆ ಎನ್ನುವುದನ್ನು ಪ್ರೇಕ್ಷಕರು ಊಹಿಸಿಬಿಡಬಹುದು. ಅಷ್ಟಕ್ಕೂ ಚಿತ್ರದಲ್ಲಿ ಹೊಸ ಕಥೆ ಕೂಡ ಇಲ್ಲ.
ಕಲಾವಿದರ ಅಭಿನಯ ಹೇಗಿದೆ?
'ವೀರಂ' ಚಿತ್ರದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ವೀರು ಪಾತ್ರದಲ್ಲಿ ಹೀರೊ ಪ್ರಜ್ವಲ್ ದೇವರಾಜ್ ಅಬ್ಬರಿಸಿದ್ದಾರೆ. ಆದರೆ ಅವರಿಗಿಂತ ಅಕ್ಕನ ಪಾತ್ರದಲ್ಲಿ ಶ್ರುತಿ ಹೆಚ್ಚು ಅಂಕ ಗಿಟ್ಟಿಸಿಬಿಡುತ್ತಾರೆ. ವೀರು ಪ್ರೇಯಸಿ ದಾತ್ರಿ ಆಗಿ ರಚಿತಾ ರಾಮ್‌ಗೆ ಅಷ್ಟೇನು ಕೆಲಸವಿಲ್ಲ. ಪ್ರಜ್ವಲ್ ಸಹೋದರನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಪಾತ್ರ ನೆನಪಿನಲ್ಲಿ ಉಳಿಯುತ್ತದೆ.
ಕಿಟ್ಟಿ ಎಂಟ್ರಿ ಸೀನ್ ಬೊಂಬಾಟ್ ಆಗಿದೆ. ಆದರೆ ಹೆಚ್ಚು ಹೊತ್ತು ಸಿನಿಮಾದಲ್ಲಿ ಈ ಪಾತ್ರ ಇರೋದಿಲ್ಲ. ಜೊತೆಗೆ ಇದ್ದಷ್ಟು ಹೊತ್ತಲ್ಲಿ ಒಳ್ಳೆ ಸನ್ನಿವೇಶಗಳು ಸಿಕ್ಕಿಲ್ಲ. ಜೇಡ ಆಗಿ ಶಿಷ್ಯ ದೀಪಕ್, ಮಾರ್ಕೆಟ್ ದೇವಿ ಆಗಿ ಬಲ ರಾಜವಾಡಿ, ಕೂಲಿಂಗ್ ಕ್ಲಾಸ್ ಗೋವಿಂದನಾಗಿ ಮೈಕೋ ನಾಗರಾಜ್ ತಮ್ಮ ತಮ್ಮ ಪಾತ್ರಗಳಲ್ಲಿ ಸೊಗಸಾಗಿ ನಟಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತ, ಲವಿತ್ ಛಾಯಾಗ್ರಹಣ 'ವೀರಂ' ಚಿತ್ರಕ್ಕೆ ಪೂರಕವಾಗಿದೆ.

ಕೊನೆ ಮಾತು
ಫ್ಯಾಮಿಲಿ ಎಮೋಷನ್, ಲವ್, ಆಕ್ಷನ್ ಎಲ್ಲವನ್ನು ಸೇರಿಸಿ 'ವೀರಂ' ಸಿನಿಮಾ ಕಟ್ಟಿಕೊಡಲಾಗಿದೆ. ಆದರೆ ಅತಿಯಾದ ಬಿಲ್ಡಪ್ ಕೆಲವೊಮ್ಮೆ ವಾಕರಿಕೆ ಬರಿಸುತ್ತದೆ. ಬಿಲ್ಡಪ್ ಸೀನ್‌ಗಳನ್ನು ಸಹಿಸಿಕೊಳ್ಳಲು ಸಿದ್ಧರಿದ್ದರೆ ನೀವು ಒಮ್ಮೆ 'ವೀರಂ' ಸಿನಿಮಾ ನೋಡಲು ಥಿಯೇಟರ್‌ಗೆ ವಿಸಿಟ್ ಹಾಕಬಹುದು.


Click it and Unblock the Notifications











