ಪ್ರೀಮಿಯರ್ ಕ್ಲಾಸ್ ನಲ್ಲಿ ಪದ್ಮಿನಿಯೊಂದಿಗೆ ಸುಖಕರವಾದ ಪ್ರಯಾಣ
ಒಬ್ಬ ನಿಜವಾದ ಕಲಾವಿದನಿಗೆ ಅಳಿವಿಲ್ಲ ಹಾಗೂ ಅವನ ಕೊನೆಯುಸಿರಿರುವವರೆಗೂ ಆತ ಜೀವಂತ ಅನ್ನೋದನ್ನ ಮತ್ತೋಮ್ಮೆ ಜಗ್ಗೇಶ್ ಅವರು ಸಾಬೀತು ಪಡಿಸಿದ್ದಾರೆ. ಒಂದು ಮನೆಯಲ್ಲಿಯೇ ನಡೆಯುವ ಸಾಮಾನ್ಯ ಘಟನೆಗಳು, ಅವುಗಳ ತಾಳ, ಮೇಳ, ಲಯ ತಪ್ಪಿದಾಗ ಏನಾಗುತ್ತದೆ ಎನ್ನುವುದೇ ಈ ಪ್ರೀಮಿಯರ್ ಪದ್ಮಿನಿಯ ವಿಶೇಷ.
ಮೊದಲನೆಯದಾಗಿ ಈ ಪ್ರೀಮಿಯರ್ ಪದ್ಮಿನಿ ಚಿತ್ರವನ್ನು ನಿರ್ಮಾಣ ಮಾಡಿದ ಶೃತಿ ನಾಯ್ಡು ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿಭಾಯಿಸಿರುವ ರಮೇಶ್ ಇಂದಿರಾ ಪೈಸಾ ವಸೂಲ್ ಚಿತ್ರವನ್ನು ನೀಡಿದ ಇಬ್ಬರಿಗೂ ನನ್ನ ಹೃದಯಸ್ಪರ್ಶಿ ಧನ್ಯವಾದಗಳು.

ಒಂದು ಕಮರ್ಷಿಯಲ್ ಚಿತ್ರ ಯಾವೆಲ್ಲ ರೀತಿ ಇರಬೇಕು ಅಂದುಕೊಂಡಿರುತ್ತೇವೆಯೋ ಅದಕ್ಕೆ ಪೂರಕವಾಗಿ ಎಲ್ಲೂ ನಿತ್ರಾಣಗೊಳಿಸದೆ ಹಾಗೂ ವಿಶ್ರಾಂತಿ ನೀಡದೆ ನಮ್ಮನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುವಲ್ಲಿ ಪ್ರೀಮಿಯರ್ ಪದ್ಮಿನಿ ಯಶಸ್ವಿಯಾಗಿದೆ.
ವಿನಾಯಕನ ಪಾತ್ರವನ್ನು ನಿಭಾಯಿಸಿರುವ ಜಗ್ಗೇಶ್ ಅವರು ನಿಜವಾಗಿಯೂ ಹಲವಾರು ವಿಘ್ನಗಳನ್ನು ಅನುಭವಿಸಿ, ಜಯಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಹಾಗೂ ಅವರಿಗೆ ಅಣ್ಣಯ್ಯ ಖ್ಯಾತಿಯ ಮಧುಬಾಲ ಅವರು ಜೊತೆಯಾಗಿದ್ದಾರೆ. ಗಂಡಹೆಂಡತಿ ಇಬ್ಬರಲ್ಲೂ ಹಲವಾರು ವಿಷಯದಲ್ಲಿ ಸಹಮತ ವಿರದ ಕಾರಣ ವಿಚ್ಛೇದನಕ್ಕೆ ಮುಂದಾಗುತ್ತಾರೆ ಹಾಗೂ ತಮ್ಮ ಮಗನ ವಿರೋಧಕ್ಕೂ ಕಾರಣವಾಗುತ್ತರೆ.

ಇನ್ನು ವಿಚ್ಛೇದನ ಸಿಗದೆ ವಿಷಯ ಕೋರ್ಟ್ ನಲ್ಲಿ ಇರುವಾಗಲೇ ರಾಜೇಶ್ ಜೊತೆ ಮದುವೆಯಾಗುತ್ತಾರೆ. ಮದುವೆ ಎತ್ತರಕ್ಕೆ ಬೆಳೆದ ರಾಜೇಶ್ ಮೊದಲನೆ ಹೆಂಡತಿಯ ಮಗಳಿಗೂ ವಿಲನ್ ಆಗುತ್ತಾರೆ. ಈ ರೀತಿಯ ತಮ್ಮ ತಮ್ಮ ಬೇಜವಾಬ್ದಾರಿಗಳಿಂದ ಸಂಸಾರ ಹಾಗೂ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸುತ್ತಾರೆ. ಮಕ್ಕಳಿಗೆ ನೀವು ಮಾಡುವುದು ತಪ್ಪು ಎನ್ನುವುದಾದರೆ ತಾವುಗಳು ಮಾಡುವುದೇನು ಎನ್ನುವುದು ಪ್ರೇಕ್ಷಕನ ಪ್ರಶ್ನೆ.
ಈ ನಡುವೆ ವಿನಾಯಕನ ಕಾರು ಚಾಲಕನಾಗಿ ಸೇರುವ ಹೊಸ ಹುಡುಗ ಥೇಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಂತೆ ಹೊಲುವ ಪ್ರಮೋದ್ ಅತ್ಯಂತ ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಪ್ರಮೋದ್ ತನ್ನ ಹಳ್ಳಿ ಹಾಗು ತನ್ನ ಮನೆಯವರನ್ನು ಮಾಲಿಕ ವಿನಾಯಕನಿಗೆ ಪರಿಚಯ ಮಾಡಿಸಿದಾಗ ವಿನಾಯಕ ಪ್ರಮೋದನಿಗೆ ನೀನೆ ಅದೃಷ್ಟವಂತ ಎಂದು ತನ್ನ ಜೀವನದ ಘಟನೆಗಳನ್ನು ಇದರೊಂದಿಗೆ ಹೊಲಿಕೆ ಮಾಡಿ ನೋಡುತ್ತಾನೆ.

ವಿನಾಯಕನ ಅಪಾರ್ಟ್ಮೆಂಟ್ ಸದಸ್ಯರಾಗಿ ಸುಧಾರಾಣಿ ಹಾಗೂ ದತ್ತಣ್ಣ ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಉತ್ತಮ ಅನುಭವಗಳು ಹಾಗೂ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಅರ್ಜನ್ ಜನ್ಯ ಅವರ ಉತ್ತಮ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕಿವಿಗೆ ಹಿತವೆನಿಸುತ್ತದೆ. ಹೊಸಬರಾದ ರಾಜೇಂದ್ರ ಅರಸ್ ಅವರ ಸಂಕಲನ ಹಾಗೂ ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರದ ಮೈಲೆಜ್ ಹೆಚ್ಚಿಸುವಲ್ಲಿ ಗೆದ್ದಿದೆ.


Click it and Unblock the Notifications











