James Movie Review: ಸ್ನೇಹದ ಸಂದೇಶ ಸಾರುವ ಕತೆಯಲ್ಲಿ ಅಪ್ಪು ಒನ್‌ಮ್ಯಾನ್ ಶೋ
ಪುನೀತ್ ರಾಜ್ ಕುಮಾರ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಕೊನೆಯ ' ಜೇಮ್ಸ್' ಇಂದು ಬಿಡುಗಡೆ ಆಗಿದೆ. ಅಪ್ಪು ಇಲ್ಲವಾದ ನಂತರ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದು. ಹಾಗಾಗಿ ಅಭಿಮಾನಿಗಳು ಭಾವುಕ ಹೃದಯ ಹೊತ್ತುಕೊಂಡೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಅವರಿಗೆ ನಿರಾಸೆ ಮಾಡಿಲ್ಲ ನಿರ್ದೇಶಕ ಚೇತನ್.
Recommended Video

ಕಾರ್ಪೊರೇಟ್ ಮಾದರಿಯ ಅಂತರಾಷ್ಟ್ರೀಯ ಡ್ರಗ್ಸ್ ಮಾಫಿಯಾ, ಅಟ್ಟಹಾಸ ಮೆರೆವ ವಿಲನ್‌ಗಳು, ಅವರನ್ನು ನಾಮಾವಶೇಷ ಮಾಡಲು ಬರುವ ನಾಯಕ. ನಡುವೆ ಕೆಲವು ತಿರುವುಗಳು ಹೀಗೆ ಸಾಮಾನ್ಯ ಕಮರ್ಷಿಯಲ್ ಚಿತ್ರದ ಮಾದರಿಯೇ ಈ ಸಿನಿಮಾದ್ದು, ಆದರೆ ಸಿನಿಮಾ ವಿಶೇಷವಾಗಲು ಕಾರಣ ಪುನೀತ್ ರಾಜ್‌ಕುಮಾರ್.
ಸಿನಿಮಾದ ಕತೆ ಸರಳ, ಜೆ ವಿಂಗ್ಸ್ ಹೆಸರಿನ ಸೆಕ್ಯೂರಿಟಿ ಏಜೆನ್ಸಿಯಲ್ಲಿನ ಪವರ್‌ಫುಲ್ ವ್ಯಕ್ತಿ ಸಂತೋಶ್ (ಪುನೀತ್ ರಾಜ್‌ಕುಮಾರ್) ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ಗ್ಯಾಂಗ್‌ಸ್ಟರ್ ಒಬ್ಬನಿಗೆ ಭದ್ರತೆ ಒದಗಿಸಲು ನೇಮಕವಾಗುತ್ತಾನೆ. ಅವನ ಕೆಲಸ ಭದ್ರತೆ ನೀಡುವುದಷ್ಟೆ. ಆದರೆ ಭದ್ರತೆ ಕೊಡಲು ಹೋದವನನ್ನೇ ಹೇಗೆ ಆತ ಕಾನೂನು ಕೈವಶ ಮಾಡುತ್ತಾನೆ, ಡ್ರಗ್ಸ್ ಮಾಫಿಯಾ ದಂಧೆಯನ್ನು ಹೇಗೆ ನಿರ್ನಾಮ ಮಾಡುತ್ತಾನೆ ಎಂಬುದು ಸಿನಿಮಾದ ಕತೆ.

ಸಿನಿಮಾದಲ್ಲಿ ಅಪ್ಪು ಅವರದ್ದು ಒನ್ ಮ್ಯಾನ್ ಶೋ. ಅಭಿಮಾನಿಗಳು ಸೀಟಿನೆಂದೆದ್ದು ಕುಣಿವಂತೆ ಮಾಡುತ್ತದೆ ಅಪ್ಪು ಎಂಟ್ರಿ. ಸಿನಿಮಾದ ನಾಯಕ ಸಂತೋಶ್‌ಗೆ (ಪುನೀತ್ ರಾಜ್‌ಕುಮಾರ್) ವಿಲನ್‌ಗಳೆಲ್ಲ ಲೆಕ್ಕಕ್ಕೇ ಇಲ್ಲ. ಎಷ್ಟೇ ಮಂದಿ ಬಂದರೂ ಚಚ್ಚಿ ಚಿಂದಿ ಉಡಾಯಿಸಬಲ್ಲ ಗಟ್ಟಿಗ. ಬುಲೆಟ್‌ಗಳ ಮಳೆಯೇ ತನ್ನೆಡೆಗೆ ಸುರಿಯುತ್ತಿದ್ದರೂ ಎದುರಿಸಿ ವಿಲನ್ನುಗಳನ್ನು ಕೊಲ್ಲಬಲ್ಲ ಚಾಣಾಕ್ಷ. ಈತ ಸೆಕ್ಯೂರಿಟಿ ಏಜೆನ್ಸಿ ಪ್ರಾರಂಭಿಸಲು, ಡ್ರಗ್ಸ್ ಮಾಫಿಯಾ ಗ್ಯಾಂಗ್‌ಸ್ಟರ್‌ಗೆ ಭದ್ರತೆ ನೀಡಲು ಹೋಗಲು ಕಾರಣವಿದೆ. ಏನು ಆ ಕಾರಣ? ಸಿನಿಮಾ ನೋಡಿಯೇ ತಿಳಿಯಬೇಕು.
ಸಿನಿಮಾದಲ್ಲಿ ಕೆಲವು ಟ್ವಿಸ್ಟ್‌ಗಳು ಸಹ ಇವೆ, ಸೆಕ್ಯೂರಿಟಿ ಏಜೆನ್ಸಿಯ ಸಂತೋಶ್‌ಗೆ ಒಂದು ಫ್ಲಾಶ್‌ಬ್ಯಾಕ್ ಕತೆಯೂ ಇದೆ. ಸಿನಿಮಾದಲ್ಲಿ ಸ್ನೇಹತದ ಮಹತ್ವ ಸಾರುವ ಸಂದೇಶವಿದೆ. ಅದ್ಧೂರಿ ಸೆಟ್‌ಗಳು, ಸೂಟು ಬೂಟು ಧರಿಸಿದ ಕಾರ್ಪೊರೇಟ್ ಮಾದರಿಯ ವಿಲನ್ನುಗಳ ದೊಡ್ಡ ಪಡೆಯೇ ಇದೆ. ಇಡೀಯ ಸಿನಿಮಾ ಪುನೀತ್ ಮಯವಾಗಿದೆ. ಎರಡು ಶೇಡ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ನಗುವಲ್ಲಿ, ನಗಿಸುವಲ್ಲಿ, ಡ್ಯಾನ್ಸ್‌ಗಳಲ್ಲಿ, ಆಕ್ಷನ್ ದೃಶ್ಯಗಳಲ್ಲಿ ಅಪ್ಪು ತಮ್ಮತನ ಮೆರೆದಿದ್ದಾರೆ.

ಮೊದಲಾರ್ಧ ಭರಪೂರ ಆಕ್ಷನ್ ದೃಶ್ಯಗಳಿಂದ ತುಂಬಿದೆ. ದ್ವೀತೀಯಾರ್ಧದಲ್ಲಿ ಫ್ಲಾಶ್‌ಬ್ಯಾಕ್ ತೆರೆದುಕೊಂಡಾಗ ಕತೆ ತುಸು ಸಾವಧಾನವಾಗಿ ಸಾಗುತ್ತದೆ. ಇಂಟರ್ವೆಲ್‌ನಲ್ಲಿ ಬರುವ ಟ್ವಿಸ್ಟ್‌ಗೆ ಉತ್ತರ ಸಿಗುವುದು ದ್ವಿತೀಯಾರ್ಧದಲ್ಲಿ. ಕತೆಯ ನಿಜ ಸಂದೇಶ ಎದುರಾಗುವುದು ಸಹ ಇಂಟರ್ವೆಲ್ ನಂತರವೇ.
ಸಿನಿಮಾದಲ್ಲಿ ಪ್ರೀತಿಯ ಕೋನ ಇದೆಯಾದರೂ ಅದಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ ನಿರ್ದೇಶಕರು. ಹಾಗಾಗಿ ನಾಯಕಿ ಪ್ರಿಯಾ ಆನಂದ್‌ಗೆ ಹೆಚ್ಚು ಕೆಲಸವಿಲ್ಲ. ಹಾಸ್ಯಕ್ಕೆ ಸಾಧು ಕೋಕಿಲ ಇದ್ದಾರೆ ಆದರೆ ಅವರ ಪಾತ್ರ ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ. ಚಿಕ್ಕಣ್ಣ, ಶೈನ್ ಶೆಟ್ಟಿ, ತಿಲಕ್ ಅವರುಗಳು ಪುನೀತ್ ಗೆಳೆಯರ ಪಾತ್ರದಲ್ಲಿ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್, ಅನು ಪ್ರಭಾಕರ್ ಹೀಗೆ ಬಂದು ಹಾಗೆ ಹೋಗುತ್ತಾರೆ. ರಂಗಾಯಣ ರಘು ಸಿನಿಮಾದುದ್ದಕ್ಕೂ ಇದ್ದಾರೆ. ತೆಲುಗಿನ ಶ್ರೀಕಾಂತ್, ಶರತ್ ಕುಮಾರ್, ಆದಿತ್ಯ ಮೆನನ್ ಇನ್ನೂ ಹಲವು ವಿಲನ್‌ಗಳು ಸಿನಿಮಾದಲ್ಲಿದ್ದಾರೆ. ವಿಲನ್‌ಗಳ ಸಂಖ್ಯೆ ದೊಡ್ಡದಿರುವುದರಿಂದ ಗೊಂದಲ ಸಹ ಮೂಡುತ್ತದೆ. ಅಂದಹಾಗೆ ಸಿನಿಮಾದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸಹ ಇದ್ದಾರೆ.
ಚರಣ್ ರಾಜ್ ಸಂಗೀತ ಚೆನ್ನಾಗಿದೆ. ಕ್ಯಾಮೆರಾ ಕೆಲಸವೂ ಅದ್ಭುತ. ಸಿನಿಮಾದ ಅದ್ಧೂರಿತನ ಕಣ್ಣಿಗೆ ರಾಚುತ್ತದೆ. ಒಟ್ಟಾರೆಯಾಗಿ ಅಪ್ಪು ಅಭಿಮಾನಿಗಳಿಗೆ ನಿರಾಸೆಯಾಗದಂಥಹಾ ಸಿನಿಮಾ.


Click it and Unblock the Notifications











